ಸೌದಿ ಕೃಷಿ ಮೇಳದಲ್ಲಿ; ಅಚ್ಚರಿ ಸೃಷ್ಟಿಸಿದ ಮಾತಾಡುವ ರೊಬೊಟ್‌ಗಳು

0
271

ಸನ್ಮಾರ್ಗ ವಾರ್ತೆ

ರಿಯಾದ್: ಸೌದಿ ಅಗ್ರಿಕಲ್ಚರಲ್ ಎಕ್ಸಿಬಿಷನ್‌ನಲ್ಲಿ 96 ಭಾಷೆ ಮಾತಾಡುವ ಸ್ಮಾರ್ಟ್ ರೊಬೊಟ್‌ಗಳು ಸಂದರ್ಶಕರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಕೇಳುವ ಪ್ರಶ್ನೆಗಳಿಗೆ ಅದು ತಟ್ಟನೆ ಉತ್ತರವನ್ನು ನೀಡುವುದು ಮತ್ತಷ್ಟು ಅಚ್ಚರಿ ಮೂಡಿಸಿತು. ಸಂದರ್ಶಕರನ್ನು ಸ್ವಾಗತಿಸುವುದರ ಜೊತೆಗೆ ಬಹುಭಾಷೆಯಲ್ಲಿ ಅದು ಮಾಹಿತಿಯನ್ನು ನೀಡುತ್ತಿತ್ತು. ದೇಶದಲ್ಲಿಯೇ ಅಭಿವೃದ್ಧಿ ಪಡಿಸಿದ ಸ್ಮಾರ್ಟ್ ಸಿಸ್ಟಂಗಳಲ್ಲಿ ಈ ರೊಬೊಟ್ ತಯಾರಾಗಿದೆ ಎಂದು ಮೇಳದಲ್ಲಿ ಭಾಗವಹಿಸಿದ ಟೆಕ್ನಾಲಜಿ ಕಂಪೆನಿಯ ಪ್ರತಿನಿಧಿ ಅಹ್ಮದ್ ಖಫಾಝ ತಿಳಿಸಿದ್ದಾರೆ. ಸೌದಿ ಅಗ್ರಿಕಲ್ಚರಲ್ ಎಕ್ಸಿಬಿಷನ್ ಮಧ್ಯಪ್ರಾಚ್ಯದ ಅತಿ ದೊಡ್ಡ ಕೃಷಿ ಪ್ರದರ್ಶನಗವಾಗಿದೆ.

ಸ್ಮಾರ್ಟ್ ರೋಬೋಟ್‌ಗಳ ಪ್ರದರ್ಶನದಲ್ಲಿ ಪ್ರದರ್ಶಿಸಲ್ಪಟ್ಟ 96 ಭಾಷೆಗಳಲ್ಲಿ ಮಾತನಾಡಬಲ್ಲ ರೋಬೋಟ್‌ಗಳು ಸಂದರ್ಶಕರ ಪ್ರಶ್ನೆಗಳಿಗೆ ತಕ್ಷಣವೇ ಉತ್ತರಿಸಿದ್ದು ಮಾತ್ರವಲ್ಲ ಕೃಷಿ ಕ್ಷೇತ್ರದ ತಂತ್ರಜ್ಞಾನಗಳ ಕುರಿತು ವಿವರಣೆ ನೀಡಿದವು. ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಗಿದೆ ಎನ್ನಲಾಗಿದೆ.

ಸೌದಿ ಅರೇಬಿಯಾದ ‘ವಿಷನ್ 2030’ ಯೋಜನೆಯ ಭಾಗವಾಗಿ ದೇಶದಲ್ಲಿ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ನೂತನ ಯೋಜನೆಗಳನ್ನು ಕೂಡಾ ಈ ಮೇಳದಲ್ಲಿ ಪ್ರಸ್ತುತಪಡಿಸಲಾಯಿತು.

ಒಣ ಹವೆಯಲ್ಲೂ ಕೃಷಿ ಸಾಧ್ಯವಾಗಿಸುವ ಹನಿ ನೀರಾವರಿ ವ್ಯವಸ್ಥೆಗಳು, ಮಣ್ಣಿಲ್ಲದೆ ಕೃಷಿ ಮಾಡುವ ಹೈಡ್ರೋಪೋನಿಕ್ಸ್ , ಗ್ರೀನ್‌ಹೌಸ್ ತಂತ್ರಜ್ಞಾನಗಳು ಮತ್ತು ಕೃಷಿ ಭೂಮಿಯನ್ನು ಮೇಲ್ವಿಚಾರಣೆ ಮಾಡುವ ಡ್ರೋನ್‌ಗಳು ಪ್ರದರ್ಶನದ ಮುಖ್ಯ ಆಕರ್ಷಣೆಯಾಗಿದ್ದವು. ಪ್ರಪಂಚದ ವಿವಿಧ ಮೂಲೆಗಳಿಂದ ಬಂದ ನೂರಾರು ಕೃಷಿ ಕಂಪನಿಗಳು, ತಜ್ಞರು ಮತ್ತು ಸ್ಟಾರ್ಟ್ಅಪ್‌ಗಳು ಮೇಳದಲ್ಲಿ ಭಾಗವಹಿಸಿ ಹೊಸ ಆಲೋಚನೆಗಳು ಹಾಗೂ ಉತ್ಪನ್ನಗಳನ್ನು ಪರಿಚಯಿಸಿದವು.ಕೃಷಿ ಕ್ಷೇತ್ರದಲ್ಲಿನ ಈ ತಾಂತ್ರಿಕ ಕ್ರಾಂತಿಯು ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ನೀರಿನ ಕೊರತೆಯಂತಹ ಸವಾಲುಗಳನ್ನು ಎದುರಿಸಲು ದೊಡ್ಡ ಕೊಡುಗೆಯನ್ನು ನೀಡುತ್ತಿದೆ ಎನ್ನಲಾಗಿದೆ.