ಜಮಾಅತೆ ಇಸ್ಲಾಮಿ ಹಿಂದ್ ಅಂಡಮಾನ್‌ ವತಿಯಿಂದ ಸರ್ವಧರ್ಮ ಸಮ್ಮಿಲನ: ಮೌಲ್ಯಗಳು ಮತ್ತು ಕರುಣೆಯಲ್ಲಿ ಬೇರೂರಿದ ಸಮಾಜದ ಪೋಷಣೆಗೆ ಕರೆ

0
277

ಸನ್ಮಾರ್ಗ ವಾರ್ತೆ

ಶ್ರೀ ವಿಜಯಪುರ: ಜಮಾಅತೆ ಇಸ್ಲಾಮಿ ಹಿಂದ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು “ಮಾನವೀಯತೆಗಾಗಿ ವಿಶ್ವಾಸ: ಮೌಲ್ಯಗಳು ಮತ್ತು ಕರುಣೆಯಲ್ಲಿ ಬೇರೂರಿದ ಸಮಾಜದ ಪೋಷಣೆ” ಎಂಬ ಶೀರ್ಷಿಕೆಯಡಿಯಲ್ಲಿ ಸರ್ವಧರ್ಮ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಗೋಲ್ಘರ್‌ನ ಇಸ್ಲಾಮಿಕ್ ಗೈಡೆನ್ಸ್ ಸೆಂಟರ್‌ನಲ್ಲಿ ನಡೆಯಿತು. ವಿವಿಧ ಧರ್ಮಗಳ ವಕ್ತಾರರು ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಮೀರಿ ಒಗ್ಗಟ್ಟು ಮೂಡಬೇಕು ಎಂಬ ಸಂದೇಶವನ್ನು ಹಂಚಿಕೊಂಡರು.

ಕೆ. ಹುಸೇನ್ ಅವರು ಪವಿತ್ರ ಕುರ್‌ಆನಿನ ವಚನಗಳೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಜಮಾಅತೆ ಇಸ್ಲಾಮಿ ಹಿಂದ್, ಅಂಡಮಾನ್ ವಲಯದ ಅಧ್ಯಕ್ಷ ಎಂ.ಕೆ. ಮೊಹಮ್ಮದ್ ಅವರು ಸಭಿಕರನ್ನು ಸ್ವಾಗತಿಸಿ ಅಧ್ಯಕ್ಷೀಯ ಭಾಷಣ ಮಾಡಿದರು.

ಶ್ರೀ ವಿಜಯ ಪುರದ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ಓಂಕಾರಾತ್ಮಾನಂದ ಅವರು ಸ್ವಾಮಿ ವಿವೇಕಾನಂದರ ಜೀವನ ಮತ್ತು ಬೋಧನೆಗಳ ಕುರಿತು ಮಾತನಾಡಿದರು. ಮಾನವಕುಲದ ಸೇವೆಗೆ ವಿವೇಕಾನಂದರು ನೀಡಿದ ಕೊಡುಗೆಯನ್ನು ಅವರು ಸ್ಮರಿಸಿದರು. ಇತರರಿಗೆ ಸೇವೆ ಸಲ್ಲಿಸುವುದರ ಮಹತ್ವವನ್ನು ಅವರು ಒತ್ತಿ ಹೇಳಿದರು.

ಶ್ರೀ ವಿಜಯ ಪುರದ ಕ್ಯಾಥೋಲಿಕ್ ಚರ್ಚ್‌ನ ಫಾದರ್ ಲಾರೆನ್ಸ್ ಎಕ್ಕಾ ಅವರು ಸೌಹಾರ್ದತೆಯಿಂದ ಒಟ್ಟಾಗಿ ಬಾಳುವ ವಿಷಯದ ಕುರಿತು ಮಾತನಾಡಿದರು. ಯೇಸು ಕ್ರಿಸ್ತರ ಜೀವನ ಮತ್ತು ಬೈಬಲ್‌ನ ಬೋಧನೆಗಳನ್ನು ಉಲ್ಲೇಖಿಸಿದರು. ಪ್ರೀತಿ ಮತ್ತು ಕರುಣೆಯನ್ನು ಶಾಂತಿಯುತ ಸಹಜೀವನದ ಅತ್ಯಗತ್ಯ ಅಡಿಪಾಯ ಎಂದು ಅವರು ಬಣ್ಣಿಸಿದರು. ಅಲ್ಲದೆ, ಪರಸ್ಪರ ಗೌರವಿಸುವಂತೆ ಜನರಿಗೆ ಕರೆ ನೀಡಿದರು.

ಜಮಾಅತೆ ಇಸ್ಲಾಮಿ ಹಿಂದ್‌ನ ಉಪಾಧ್ಯಕ್ಷ ಎಂಜಿನಿಯರ್ ಮೊಹಮ್ಮದ್ ಸಲೀಂ ಮಾತನಾಡಿ, ಧರ್ಮ ಮತ್ತು ನಂಬಿಕೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಮಾನವೀಯತೆಯನ್ನು ಪೋಷಿಸಬೇಕು ಎಂದು ಹೇಳಿದರು. ಎಲ್ಲಾ ಮಾನವರೂ ದೇವರಿಂದ ಸೃಷ್ಟಿಸಲ್ಪಟ್ಟ ಮೊದಲ ದಂಪತಿಗಳ ವಂಶಸ್ಥರು ಎಂಬ ನಂಬಿಕೆಯನ್ನು ಅವರು ಸ್ಮರಿಸಿದರು. ಮಾನವೀಯತೆಯನ್ನು ಒಂದೇ ಮೂಲವನ್ನು ಹೊಂದಿರುವ ಒಂದು ಕುಟುಂಬ ಎಂದು ಬಣ್ಣಿಸಿದರು. ಪ್ರತಿಯೊಬ್ಬರೂ ಈ ಬಾಂಧವ್ಯವನ್ನು ಗುರುತಿಸಬೇಕು ಎಂದು ಅವರು ಮನವಿ ಮಾಡಿದರು. ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಲೆಕ್ಕಿಸದೆ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವಂತೆಯೂ ವಿನಂತಿಸಿದರು.

ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಾಗರಿಕ ಸಮಾಜದ ಮುಖಂಡರು, ಪ್ರಮುಖ ನಾಗರಿಕರು ಮತ್ತು ವಿವಿಧ ಧಾರ್ಮಿಕ ಸಮುದಾಯಗಳ ಸದಸ್ಯರೂ ಸಹ ಸೇರಿದ್ದರು. ಸಭೀಕರು ಮತ್ತು ವಕ್ತಾರರ ಈ ಸಮಾಗಮವು ದ್ವೀಪಗಳಾದ್ಯಂತ ಸಾಮಾಜಿಕ ಸೌಹಾರ್ದತೆಯ ಮೇಲಿರುವ ಜಂಟಿ ಆಸಕ್ತಿಯನ್ನು ತೋರಿಸಿತು.

ಪಿ. ಅಬ್ದುಲ್ ರಶೀದ್ ಅವರು ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು. ಪಿ.ಕೆ. ಉಮರ್ ಫಾರೂಕ್ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.