ಸನ್ಮಾರ್ಗ ವಾರ್ತೆ
ಪ್ರಯಾಗ್ರಾಜ್: ನಕಲಿ ಪಾಸ್ಪೋರ್ಟ್ ಮತ್ತು ಎರಡು ಪಾನ್ ಕಾರ್ಡ್ಗಳನ್ನು ಹೊಂದಿದ್ದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಹಿರಿಯ ನಾಯಕ ಆಝಂ ಖಾನ್ಗೆ ಅಲಹಾಬಾದ್ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ. ರಾಮ್ಪುರ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಮಿತ್ ಗೋಪಾಲ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಆದಾಗ್ಯೂ, ಜಾಮೀನು ನೀಡುವಾಗ ನ್ಯಾಯಾಲಯವು ಈ ಪ್ರಕರಣದಲ್ಲಿ ಅವರ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದೆ.
ಶಿಕ್ಷೆಗೆ ತಡೆ ನೀಡುವಂತೆ ಕೋರಿದ್ದ ಅರ್ಜಿಯನ್ನು ಮತ್ತು ಅವರ ದೋಷಾರೋಪಣೆಗೆ ತಡೆ ನೀಡಬೇಕೆಂಬ ಅರ್ಜಿಯನ್ನು ಜಸ್ಟಿಸ್ ಸಮಿತ್ ಗೋಪಾಲ್ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ. ವಿಚಾರಣಾ ನ್ಯಾಯಾಲಯದ ದೋಷಾರೋಪಣೆ ಆದೇಶವನ್ನು ಪ್ರಶ್ನಿಸಿ ಆಝಂ ಖಾನ್ ಮತ್ತು ಅವರ ಪುತ್ರ ಹೈಕೋರ್ಟ್ನಲ್ಲಿ ಕ್ರಿಮಿನಲ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ ದೋಷಾರೋಪಣೆಗೆ ತಡೆ, ಶಿಕ್ಷೆಯ ಅಮಾನತು ಮತ್ತು ಜಾಮೀನಿನ ಮೇಲೆ ಬಿಡುಗಡೆಗೆ ಕೋರಿದ್ದರು. ಎರಡೂ ಕಡೆಯ ಸುದೀರ್ಘ ವಾದ ಮಂಡನೆ ಪೂರ್ಣಗೊಂಡ ನಂತರ, ಕೋರ್ಟ್ ಅಕ್ಟೋಬರ್ 15 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಜಾಮೀನು ಸಿಕ್ಕಿರುವುದು ಎಸ್ಪಿ ನಾಯಕರಿಗೆ ಸಾಕಷ್ಟು ಮಧ್ಯಂತರ ರಿಲೀಫ್ ನೀಡಿದೆಯಾದರೂ, ದೋಷಾರೋಪಣೆಗೆ ತಡೆ ಸಿಗದ ಕಾರಣ ಸಂಬಂಧಿತ ಕಾನೂನು ನಿಯಮಗಳ ಅಡಿಯಲ್ಲಿ ಅವರ ಚುನಾವಣಾ ಅನರ್ಹತೆ ಮುಂದುವರಿಯುತ್ತದೆ.
ಬೇರೆ ಬೇರೆ ಜನ್ಮ ದಿನಾಂಕಗಳ ಪ್ರಕರಣದಲ್ಲಿ ಆಝಂ ಖಾನ್ ಅವರ ಪುತ್ರ ಅಬ್ದುಲ್ಲಾ ಆಝಂ ಖಾನ್ ಜೈಲಿನಲ್ಲಿದ್ದು ಅವರು ವಿಭಿನ್ನ ಜನ್ಮ ದಿನಾಂಕಗಳನ್ನು ಹೊಂದಿರುವ ಎರಡು ವಿಭಿನ್ನ ಪರ್ಮನಂಟ್ ಅಕೌಂಟ್ ನಂಬರ್ ಕಾರ್ಡ್ಗಳನ್ನು ಪಡೆದುಕೊಂಡಿದ್ದಾರೆ ಮತ್ತು ಹೊಂದಿದ್ದಾರೆ ಎಂಬ ಆರೋಪಗಳಿಗೆ ಈ ಪ್ರಕರಣ ಸಂಬಂಧಿಸಿದೆ, ಇದರಿಂದಾಗಿ ಅವರ ಮತ್ತು ಅವರ ತಂದೆಯ ವಿರುದ್ಧ ಕ್ರಿಮಿನಲ್ ಈ ಪ್ರಕರಣದಲ್ಲಿ ರಾಮ್ಪುರದ ಜಿಲ್ಲಾ ನ್ಯಾಯಾಲಯವು ಆಝಂ ಖಾನ್ಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿತ್ತು.
ಜೌಹರ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಆಝಂ ವಿರುದ್ಧ ಇಡಿ ಪ್ರಕರಣ ದಾಖಲು ಮಾಡಿದ್ದು ಅಕ್ಟೋಬರ್ 28 ರಂದು ಜಾರಿ ನಿರ್ದೇಶನಾಲಯವು ಆಝಂ ಖಾನ್ ಅವರ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ಜಮೀನು ಮತ್ತು ಕಟ್ಟಡಗಳನ್ನು ಜಪ್ತಿ ಮಾಡಿದೆ. ಇದರ ಮೌಲ್ಯ 426 ಕೋಟಿ ರೂಪಾಯಿಗಳಾಗಿದ್ದು, ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 1,170 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇ.ಡಿಯ ಲಖನೌ ವಲಯ ಕಚೇರಿಯು ಉತ್ತರ ಪ್ರದೇಶದ ರಾಮ್ಪುರದಲ್ಲಿರುವ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ಜಮೀನು ಮತ್ತು ಕಟ್ಟಡಗಳನ್ನು ಜಪ್ತಿ ಮಾಡಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ, 2002 ಅಡಿಯಲ್ಲಿ, ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್, ಆಝಂ ಖಾನ್ (ಉತ್ತರ ಪ್ರದೇಶ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವ) ಮತ್ತು ಇತರರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಯುತ್ತಿದೆ. ರಾಮ್ಪುರ ಜಿಲ್ಲೆಯ ಸಿಂಘಾನ್ಖೇಡಾ ಗ್ರಾಮದ ಜೌಹರ್ ನಗರದಲ್ಲಿರುವ ವಿಶ್ವವಿದ್ಯಾಲಯದ ಕ್ಯಾಂಪಸ್, ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್ ಅಡಿಯಲ್ಲಿದೆ. ಈ ಟ್ರಸ್ಟ್ ಅನ್ನು ಆಝಂ ಖಾನ್ ಸ್ಥಾಪಿಸಿದ್ದು, ಅವರೇ ಇದನ್ನು ನಿಯಂತ್ರಿಸುತ್ತಾರೆ. ಅವರು ಈ ವಿಶ್ವವಿದ್ಯಾಲಯದ ಗೌರವ ಕುಲಪತಿ (ಚಾನ್ಸಲರ್) ಕೂಡ ಆಗಿದ್ದಾರೆ.
ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಂಡ ಆರೋಪ ಸೇರಿದಂತೆ 26 ಎಫ್ಐಆರ್ ದಾಖಲಿಸಿ ಆಝಂ ಖಾನ್ ವಿರುದ್ಧ ಇಡಿ ತನಿಖೆ ಪ್ರಾರಂಭಿಸಿದೆ. ರಾಮ್ಪುರದ ಅಝೀಮ್ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಾಯ್ದೆ 384 ಮತ್ತು ಇತರ ವಿಭಾಗಗಳ ಅಡಿಯಲ್ಲಿ ದಾಖಲಾಗಿರುವ 26 ಎಫ್ಐಆರ್ಗಳ ಆಧಾರದ ಮೇಲೆ ಈ ತನಿಖೆ ನಡೆಸಲಾಗುತ್ತಿದ್ದು ವಿಶ್ವವಿದ್ಯಾಲಯಕ್ಕಾಗಿ ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಈ ಎಫ್ಐಆರ್ಗಳಲ್ಲಿ ಆರೋಪಿಸಲಾಗಿದೆ. ರಾಮ್ಪುರ ಜಿಲ್ಲಾಡಳಿತದ ತನಿಖಾ ವರದಿಯನ್ನು ಉಲ್ಲೇಖಿಸಿದ ಇ.ಡಿ, ಸಿಂಘಾನ್ಖೇಡಾ ಗ್ರಾಮದ ‘ಶತ್ರು ಆಸ್ತಿ’ಯ 45 ಪ್ಲಾಟ್ಗಳು (ಸುಮಾರು 34 ಎಕರೆ) ಕೂಡ ವಿಶ್ವವಿದ್ಯಾಲಯಕ್ಕಾಗಿ ಆಝಂ ಖಾನ್ ಅವರಿಂದ ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ ಎಂಬ ಆರೋಪದಡಿಯಲ್ಲಿ ತನಿಖೆ ಮುಂದುವರಿದಿದೆ.












