ಸನ್ಮಾರ್ಗ ವಾರ್ತೆ
ಕೊಲ್ಕತಾ: ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ವಿವಾದಾಸ್ಪದ ಸಿಎಎ ಕಾನೂನು ಅನ್ವಯ ಅರ್ಹ ಅರ್ಜಿದಾರರಿಗೆ ಡಿಸೆಂಬರ್ 31 ರೊಳಗೆ ಪೌರತ್ವ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ ತಿಳಿಸಿದ್ದಾರೆ. ಅರ್ಜಿದಾರರ ಕುರಿತಂತೆ ತೀರ್ಮಾನ ಕೈಗೊಳ್ಳುವುದು ತ್ವರಿತವಾಗಿ ನಡೆಯುವುದು ಮತ್ತು ಅರ್ಹರನ್ನು ಕೈಬಿಡುವುದಿಲ್ಲ ಎಂದು ಅವರು ತಿಳಿಸಿದರು.
ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಅರಂಗ್ಘಟ್ನಲ್ಲಿ ಕಾಳಿಪೂಜೆ ಚಪ್ಪರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಾದಿಯಾ, ಉತ್ತರ 24 ಪರಗಣ ಜಿಲ್ಲೆಗಳಲ್ಲಿ ಸುಮಾರು 2.5 ಲಕ್ಷ ಸಿಎಎ ಅರ್ಜಿದಾರರ ವಿಲೇವಾರಿ ನಡೆಯುತ್ತಿದೆ ಎಂದು ಅವರು ವಿವರಿಸಿದರು. ಬಾಂಗ್ಲಾದೇಶದಿಂದ ಬಂದವರು ಹೆಚ್ಚಾಗಿ ವಾಸಿಸುವ ಗಡಿ ಜಿಲ್ಲೆ ಇದಾಗಿದೆ.
ಅರ್ಜಿಯನ್ನು ತ್ವರಿತ ಪರಿಶೀಲನೆಗೊಳಪಡಿಸಿ ನಿರ್ಧರಿಸುವುದಕ್ಕೆ ಬೇರೆಯೇ ವ್ಯವಸ್ಥೆ ಮಾಡಿದ್ದೇವೆ ಎಂದು ಸುವೇಂದು ಅಧಿಕಾರಿ ಹೇಳಿದರು. ಇದರ ಭಾಗವಾಗಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ಗಳಿಗೆ ತರಬೇತಿ ನೀಡಲಾಗಿದ್ದು ಮಾತ್ರವಲ್ಲ ಸಬ್ ಡಿವಿಷನಲ್ ಅಧಿಕಾರಿಗಳು ಅರ್ಜಿದಾರರ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಅಗತ್ಯವಿದ್ದರೆ ವಿಚಾರಣೆ ನಡೆಸುತ್ತಾರೆ. ಈ ರೀತಿ ಸಮಯಕ್ಕೆ ಸರಿಯಾಗಿ ಪ್ರಕ್ರಿಯೆ ನಡೆಸುವುದು ಸರಕಾರದ ಗುರಿಯಾಗಿದೆ ಎಂದು ಸುವೇಂದು ಅಧಿಕಾರಿ ತಿಳಿಸಿದರು.












