‘ED ಸೂಪರ್ ಪೊಲೀಸ್ ಅಲ್ಲ, ಕಂಡಿದ್ದನ್ನೆಲ್ಲ ತನಿಖೆ ಮಾಡಲು ಸಾಧ್ಯವಿಲ್ಲ’; ಕರ್ನಾಟಕ ಹೈಕೋರ್ಟ್

0
165

ಸನ್ಮಾರ್ಗ ವಾರ್ತೆ

ಬೆಂಗಳೂರು: ಕೇಂದ್ರ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯದ (ED) ಅಧಿಕಾರ ವ್ಯಾಪ್ತಿಯ ಕುರಿತು ಕರ್ನಾಟಕ ಹೈಕೋರ್ಟ್ ಪ್ರಮುಖ ಆದೇಶವೊಂದನ್ನು ಹೊರಡಿಸಿದೆ. ಇ.ಡಿಯು ತನ್ನ ಗಮನಕ್ಕೆ ಬರುವ ಯಾವುದೇ ವಿಷಯವನ್ನು ತನಿಖೆ ಮಾಡಲು ‘ಸೂಪರ್ ಪೊಲೀಸ್’ ಅಥವಾ ಸಾರ್ವಭೌಮ ಅಧಿಕಾರವಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕಾನೂನು ಚೌಕಟ್ಟನ್ನು ಮೀರಿ ಹಣಕಾಸು ಅಕ್ರಮ ವರ್ಗಾವಣೆ (ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ) ಪ್ರಕರಣಕ್ಕೆ ಸ್ವತಂತ್ರವಾಗಿ ಅಡಿಪಾಯ ಹಾಕುವ ಅಧಿಕಾರ ಇ.ಡಿಗೆ ಇಲ್ಲ ಎಂದೂ ನ್ಯಾಯಾಲಯ ಬೆಟ್ಟು ಮಾಡಿದೆ.

ಪಿಎಮ್‌ಎಲ್‌ಎ (PMLA) ಅಡಿಯಲ್ಲಿ ಇ.ಡಿಯ ಅಧಿಕಾರಗಳು ‘ಪ್ರಾಥಮಿಕ’ ಅಥವಾ ಸ್ವತಂತ್ರವಲ್ಲ, ಬದಲಿಗೆ ಅಸ್ತಿತ್ವದಲ್ಲಿರುವ ಪ್ರಕರಣವನ್ನು ಆಧರಿಸಿವೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಆಧಾರವಾಗಿರುವ ಪ್ರಾಥಮಿಕ ಅಪರಾಧ ಪ್ರಕರಣವು ಮುಕ್ತಾಯಗೊಂಡರೆ ಅಥವಾ ವಜಾಗೊಂಡರೆ, ಪಿಎಮ್‌ಎಲ್‌ಎ ಅಡಿಯಲ್ಲಿ ಇ.ಡಿ ನಡೆಸುವ ತನಿಖೆಯು ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಮೇಲಾಗಿ, ಇತರ ಉಲ್ಲಂಘನೆಗಳು ಗಮನಕ್ಕೆ ಬಂದರೆ ಸಂಬಂಧಿತ ತನಿಖಾ ಸಂಸ್ಥೆಗಳಿಗೆ ಮಾಹಿತಿಯನ್ನು ರವಾನಿಸುವ ಜವಾಬ್ದಾರಿ ಇ.ಡಿಯ ಮೇಲಿರುತ್ತದೆ (ಸೆಕ್ಷನ್ 66(2) ರ ಅಡಿಯಲ್ಲಿ). ಖಾಸಗಿ ದೂರು ಸಲ್ಲಿಸುವ ಮೂಲಕ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವ ಹಕ್ಕು ಇ.ಡಿಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ (ಕೋಮುಲ್) ನೌಕರರ ನೇಮಕಾತಿ ಅಕ್ರಮದ ಕುರಿತು ಇ.ಡಿ ತನಿಖೆ ಆರಂಭಿಸಿತ್ತು. ಆದರೆ, ಈ ತನಿಖೆಗೆ ಆಧಾರವಾಗಿದ್ದ ಮುಖ್ಯ ಪ್ರಕರಣಕ್ಕೆ ವಿಚಾರಣೆಗೆ ಪೂರ್ವಾಪರ ಅನುಮತಿ ಸಿಗದ ಹಿನ್ನೆಲೆಯಲ್ಲಿ ತನಿಖೆಯನ್ನು ಮುಕ್ತಾಯಗೊಳಿಸಲಾಗಿತ್ತು. ಪ್ರಕರಣವು ಕಾನೂನುಬದ್ಧವಾಗಿ ಮುಕ್ತಾಯಗೊಂಡಿದ್ದರೂ ಇ.ಡಿಯು ತನಿಖೆ ಮತ್ತು ನಡಾವಳಿಗಳನ್ನು ಮುಂದುವರಿಸಿದ ನಂತರ ಶಾಸಕ ಕೆ.ವೈ. ನಂಜೇಗೌಡ ಮತ್ತು ಇತರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕಿರಣ್ ಎಸ್. ಜವಳಿ ಮತ್ತು ವಕೀಲ ಮಯಾಂಕ್ ಜೈನ್, ಸಾಂವಿಧಾನಿಕ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ತನಿಖಾ ಸಂಸ್ಥೆಗಳು ಸಾರ್ವಭೌಮರಾಗಲು ಯತ್ನಿಸುವುದು ಕಾನೂನಿನ ಆಡಳಿತಕ್ಕೆ ಸೂಕ್ತವಲ್ಲ ಎಂದು ಎಚ್ಚರಿಸಿದರು.
ನ್ಯಾಯಮೂರ್ತಿ ಎಂ.ಐ. ಅರುಣ್ ನೇತೃತ್ವದ ಪೀಠವು ಕರ್ನಾಟಕ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಮತ್ತು ಇತರರ ವಿರುದ್ಧದ ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಮತ್ತು ಇಸಿಐಆರ್ (ECIR) ಅಡಿಯ ನಡಾವಳಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇಡಿ ಸಲ್ಲಿಸಿದ್ದ ಖಾಸಗಿ ಅರ್ಜಿಯ ಮುಂದಿನ ನಡಾವಳಿಗಳನ್ನು ಹಾಗೂ ವಶಪಡಿಸಿಕೊಂಡ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಣಾಯಕ ಪ್ರಾಧಿಕಾರ ಹೊರಡಿಸಿದ್ದ ಆದೇಶವನ್ನೂ ಹೈಕೋರ್ಟ್ ರದ್ದುಗೊಳಿಸಿದೆ.