‘ನನ್ನ ಎದೆಯ ಮೇಲೆ ಬುಲ್ಡೋಜರ್ ಚಲಾಯಿಸಿ’; ಬಿಜೆಪಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ ಮಮತಾ ಬ್ಯಾನರ್ಜಿ

0
201

ಸನ್ಮಾರ್ಗ ವಾರ್ತೆ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಸಂಸದ ಮತ್ತು ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮನೆಯ ಮೇಲಿನ ದಾಳಿಯ ಕುರಿತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ತರಾಟಗೆ ತೆಗೆದುಕೊಂಡಿದ್ದಾರೆ. ಅವರ ಬಳಿ ಹಲವು ಬುಲ್ಡೋಜರ್‌ಗಳಿವೆ, ಧೈರ್ಯವಿದ್ದರೆ ನನ್ನ ಎದೆಯ ಮೇಲೆ ಬುಲ್ಡೋಜರ್‌ ಚಲಾಯಿಸಲಿ ಎಂದು ಅವರು ಹೇಳಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ಅವರ ಮನೆಯ ಮೇಲಿನ ದಾಳಿಯು ಗೂಂಡಾಗಿರಿಯಾಗಿದ್ದು, ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವುದಕ್ಕಾಗಿ ರಾಜಕೀಯ ದ್ವೇಷದಿಂದ ನಡೆದಿದೆ ಎಂದು ಅವರು ಹೇಳಿದರು. ಅಭಿಷೇಕ್ ಅವರನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡುವಾಗ ಮಮತಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

“ನಿಮ್ಮ ಬಳಿ ಎಷ್ಟು ಬುಲ್ಡೋಜರ್‌ಗಳಿವೆ? ಬನ್ನಿ, ನಾನು ನಿಮ್ಮ ಮುಂದೆ ನಿಂತಿದ್ದೇನೆ. ನನ್ನ ದೇಹದ ಮೇಲೆ, ನನ್ನ ಎದೆಯ ಮೇಲೆ ಬುಲ್ಡೋಜರ್ ಚಲಾಯಿಸಿ. ನೀವು ಎಷ್ಟು ಧೈರ್ಯಶಾಲಿಗಳು ಎಂದು ನಾನು ನೋಡುತ್ತೇನೆ,” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತ್ತಾದ ಕಾಳೀಘಾಟ್‌ನಲ್ಲಿರುವ ತಮ್ಮ ಮನೆಯ ಮೇಲೆ ದಾಳಿ ನಡೆದಿದೆ ಎಂದು ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ ಕೆಲವೇ ಗಂಟೆಗಳ ನಂತರ ಮಮತಾ ಅವರ ಈ ಪ್ರತಿಕ್ರಿಯೆ ಬಂದಿದೆ. ತಮ್ಮ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ತಮ್ಮ ಜೀವದ ಮೇಲೆ ನಡೆದ ಏಳನೇ ಯತ್ನ ಇದಾಗಿದೆ ಎಂದೂ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ. ಶನಿವಾರ ಮುಂಜಾನೆ ಸುಮಾರು 2 ಗಂಟೆಗೆ ಈ ಘಟನೆ ನಡೆದಿದೆ.

ಅಭಿಷೇಕ್ ಬ್ಯಾನರ್ಜಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಘಟನೆಯ ದೃಶ್ಯಾವಳಿಗಳನ್ನು ಹಂಚಿಕೊಂಡಿದ್ದಾರೆ. ಘಟನೆ ನಡೆದಾಗ ಪೊಲೀಸರು ಸ್ಥಳದಲ್ಲಿದ್ದರು, ಆದರೆ ಅವರು ಕೇವಲ ಪ್ರೇಕ್ಷಕರಾಗಿದ್ದರು ಎಂದು ಅವರು ಆರೋಪಿಸಿದ್ದಾರೆ. ದಾಳಿಕೋರರು ಶಸ್ತ್ರಾಸ್ತ್ರಗಳೊಂದಿಗೆ ಬಂದು ತಮ್ಮನ್ನು ಕೊಲ್ಲುವ ಉದ್ದೇಶದಿಂದ ದಾಳಿ ಮಾಡಿದ್ದಾರೆ ಎಂದು ಅವರು ಹೇಳಿದರು.

“ಎರಡು ದಿನಗಳ ನಿರಂತರ ಕಣ್ಗಾವಲಿನ ನಂತರ, ಬಿಜೆಪಿ ಗೂಂಡಾಗಳು ಇಂದು ಮುಂಜಾನೆ 2 ಗಂಟೆಗೆ ನನ್ನ ಮನೆಯ ಮೇಲೆ ಈ ರೀತಿ ದಾಳಿ ಮಾಡಿದ್ದಾರೆ. ಈ ದೃಶ್ಯಾವಳಿಗಳನ್ನು ವೀಕ್ಷಿಸಿ ನೀವೇ ನ್ಯಾಯ ತೀರ್ಮಾನಿಸಿ. ಆಯ್ಕೆಯಾದ ಸಂಸದರಿಗೇ ಹೀಗಾದರೆ, ಬಂಗಾಳದಲ್ಲಿ ಸಾಮಾನ್ಯ ಜನರ ಪರಿಸ್ಥಿತಿ ಹೇಗಿರಬಹುದು ಎಂದು ಯೋಚಿಸಿ. ಕಳೆದ ಆರು ತಿಂಗಳಲ್ಲಿ ನನ್ನ ಜೀವದ ಮೇಲೆ ನಡೆದ ಏಳನೇ ದಾಳಿ ಇದಾಗಿದೆ. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ,” ಎಂದು ಅಭಿಷೇಕ್ ಹೇಳಿದರು.

ಈ ಮಧ್ಯೆ, ಅಭಿಷೇಕ್ ಬ್ಯಾನರ್ಜಿ ಅವರ ಆರೋಪಗಳನ್ನು ಬಿಜೆಪಿ ಸಂಪೂರ್ಣವಾಗಿ ತಳ್ಳಿಹಾಕಿದೆ. ಬಿಜೆಪಿ ನಾಯಕ ಮತ್ತು ಸಚಿವ ದಿಲೀಪ್ ಘೋಷ್ ಈ ಘಟನೆಯನ್ನು ಕೇವಲ ‘ಡ್ರಾಮಾ’ ಎಂದು ಬಣ್ಣಿಸಿದ್ದಾರೆ.

“ನಾಯಕರೊಬ್ಬರ ಹುಟ್ಟುಹಬ್ಬವನ್ನು ಫುಟ್‌ಪಾತ್‌ನಲ್ಲಿ ಆಚರಿಸುತ್ತಿರುವುದನ್ನು ನಾವು ನೋಡುತ್ತಿರುವುದು ಇದೇ ಮೊದಲು. ಮಧ್ಯರಾತ್ರಿಯಲ್ಲಿ ಯಾರಾದರೂ ತೊಂದರೆ ಉಂಟುಮಾಡಿದರೆ ಜನರು ಪ್ರತಿಭಟಿಸುವುದು ಸಹಜ. ಅಭಿಷೇಕ್ ಬ್ಯಾನರ್ಜಿಯವರನ್ನು ಕೊಲ್ಲಲು ಯಾರಿಗೆ ಸಮಯವಿದೆ? ಇದು ಜನರನ್ನು ಭಾವನಾತ್ಮಕವಾಗಿ ಹಾದಿತಪ್ಪಿಸುವ ಪ್ರಯತ್ನವಷ್ಟೇ,” ಎಂದು ದಿಲೀಪ್ ಘೋಷ್ ಹೇಳಿದ್ದಾರೆ.