ಸನ್ಮಾರ್ಗ ವಾರ್ತೆ
ಫೆಲಸ್ತೀನಿ ಜನರ ಮೇಲಿನ ದೌರ್ಜನ್ಯ ಮತ್ತು ಅಪರಾಧವನ್ನು ತಕ್ಷಣವೇ ಕೊನೆಗೊಳಿಸುವಂತೆ ಇಸ್ರೇಲ್ ಮೇಲೆ ಒತ್ತಡ ಹೇರಲು ಬ್ರಿಟನ್ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಅರಬ್ ಲೀಗ್ ಕರೆ ನೀಡಿದೆ.
ಕುಖ್ಯಾತ ಬಾಲ್ ಫೋರ್ ಘೋಷಣೆಯ 109ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ವಿಶೇಷ ಹೇಳಿಕೆಯಲ್ಲಿ ಈ ಕರೆ ನೀಡಲಾಗಿದೆ.
ಫೆಲೆಸ್ತೀನಿಯರ ಸ್ವ ನಿರ್ಣಯದ ಹಕ್ಕನ್ನು ಗುರುತಿಸಬೇಕು ಮತ್ತು ಅಕ್ರಮ ಇಸ್ರೇಲಿ ವಸಾಹತನ್ನು ಕೊನೆಗೊಳಿಸಬೇಕು ಎಂದು ಆಗ್ರಹ ಪಡಿಸಲಾಗಿದೆ. ಈ ಪ್ರದೇಶದಲ್ಲಿ ಶಾಶ್ವತ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಪೂರ್ವ ಜರುಸಲೇಮನ್ನು ರಾಜಧಾನಿಯಾಗಿ ಹೊಂದಿರುವ ದ್ವಿರಾಷ್ಟ್ರ ಪರಿಹಾರವನ್ನು ಜಾರಿಗೆ ತರಲು ಅಂತಾರಾಷ್ಟ್ರೀಯ ಸಮುದಾಯ ಕ್ರಮಗಳನ್ನು ಚುರುಕುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಇದೇ ವೇಳೆ ಫೆಲೆಸ್ತೀನಿ ರಾಷ್ಟ್ರವನ್ನು ಗುರುತಿಸಲು ಫೆಲೆಸ್ತೀನಿಯರ ವಿರುದ್ಧ ಹಿಂಸಾಚಾರ ಪ್ರಚೋದಿಸುವ ಇಸ್ರೇಲಿ ಅಧಿಕಾರಿಗಳ ಮೇಲೆ ನಿರ್ಬಂಧವನ್ನು ವಿಧಿಸಲು ಮತ್ತು ಆಕ್ರಮಿತ ಫೆಲಸ್ತೀನಿ ಪ್ರದೇಶದಲ್ಲಿರುವ ಅಕ್ರಮ ವಸಾಹತುಗಳಿಂದ ತಯಾರಾದ ಉತ್ಪನ್ನಗಳ ಆಮದನ್ನು ನಿಷೇಧಿಸಲು ಬ್ರಿಟಿಷ್ ಸರ್ಕಾರ ಇತ್ತೀಚಿಗೆ ಕೈಗೊಂಡ ಕ್ರಮವನ್ನು ಅರಬ್ ಲೀಗ್ ಸ್ವಾಗತಿಸಿದೆ.












