ಬಂಗಾಳ ವಿಧಾನಸಭಾ ಚುನಾವಣೆ ಕಾನೂನುಬದ್ಧವಾಗಿರುವುದಿಲ್ಲ: ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ

0
118

ಸನ್ಮಾರ್ಗ ವಾರ್ತೆ

ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳು ಕಾನೂನುಬದ್ಧವಾಗಿ ಸಿಂಧುವಾಗುವುದಿಲ್ಲ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಹೇಳಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ನಿರ್ಧಾರಗಳು ಬಹುಮತದ ಅಭಿಪ್ರಾಯವನ್ನು ಆಧರಿಸಿರಬೇಕು ಎಂದೂ ಅವರು ಹೇಳಿದ್ದಾರೆ.

“ಪಶ್ಚಿಮ ಬಂಗಾಳದ ಚುನಾವಣೆಗಳು ಕಾನೂನುಬದ್ಧವಾಗಿ ಸಿಂಧುವೇ? ನನ್ನ ಪ್ರಕಾರ ಅವು ಸಿಂಧುವಾಗುವುದಿಲ್ಲ. ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ. ನಾನು ಅದನ್ನು ಮತ್ತೆ ಹೇಳುತ್ತೇನೆ. ವಿಷಯವು ಈಗ ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯವು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂದು ಖುರೇಷಿ ಹೇಳಿದ್ದಾರೆ. ಮುಸ್ಲಿಂ ಮತಗಳ ಬೃಹತ್ ಪ್ರಮಾಣದ ಸೋರಿಕೆಯ ಅನುಮಾನವಿರುವಲ್ಲಿ ಮರುಪರಿಶೀಲನೆ ನಡೆಸಬೇಕು ಮತ್ತು ಅಗತ್ಯವಿದ್ದರೆ ಮರುಚುನಾವಣೆ ನಡೆಸಬೇಕು ಎಂದು ಅವರು ಹೇಳಿದರು.

ಚುನಾವಣಾ ಆಯೋಗ ಎಂದರೆ ಕೇವಲ ಮುಖ್ಯ ಚುನಾವಣಾ ಆಯುಕ್ತರು ಮಾತ್ರವಲ್ಲ ಎಂದು ಅವರು ಹೇಳಿದರು. ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಬೇಕು ಎಂದು ಕಾನೂನು ಹೇಳುತ್ತದೆ. ಅದು ಸಾಧ್ಯವಾಗದಿದ್ದರೆ, ಮೂವರು ಆಯುಕ್ತರ ಬಹುಮತದ ಅಭಿಪ್ರಾಯವನ್ನು ನೋಡಬೇಕು. ಮೇಲಾಗಿ, ಕೇವಲ ಮುಖ್ಯ ಚುನಾವಣಾ ಆಯುಕ್ತರ ನಿರ್ಧಾರವೇ ಚುನಾವಣಾ ಆಯೋಗದ ನಿರ್ಧಾರವಾಗುವುದಿಲ್ಲ ಎಂದು ಖುರೇಷಿ ಹೇಳಿದರು.

ಈ ಮಧ್ಯೆ, ಖುರೇಷಿ ಅವರ ಹೇಳಿಕೆಯ ವಿರುದ್ಧ ಬಂಗಾಳದ ಸಚಿವ ದಿಲೀಪ್ ಘೋಷ್ ರಂಗಕ್ಕಿಳಿದಿದ್ದಾರೆ. “ಈ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಏಳು ತಿಂಗಳು ಕಳೆದಿವೆ. ಜನರು ಸಂತೋಷವಾಗಿದ್ದಾರೆ. ಆದರೆ ಕೆಲವರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಏಕೆಂದರೆ ಅವರಿಗೆ ಬೇಕಾದ ಫಲಿತಾಂಶ ಬಂದಿಲ್ಲ. ಜನರ ತೀರ್ಪನ್ನು ಸ್ವೀಕರಿಸುವುದೇ ಸರಿಯಾದ ನಿರ್ಧಾರ. ಇಲ್ಲದಿದ್ದರೆ, ಜನರೇ ಅವರನ್ನು ವಿರೋಧಿಸುತ್ತಾರೆ,” ಎಂದು ದಿಲೀಪ್ ಘೋಷ್ ಹೇಳಿದರು.