ಸನ್ಮಾರ್ಗ ವಾರ್ತೆ
ನವದೆಹಲಿ: ಅಗ್ನಿಪಥ್ ನೇಮಕಾತಿ ಯೋಜನೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ತರಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದು ಮಾಧ್ಯಮ ವರದಿಗಳು ಮತ್ತು ಲಭ್ಯವಿರುವ ಮಾಹಿತಿಯ ಪ್ರಕಾರ, 4 ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವ ಅಗ್ನಿವೀರರಿಗೆ 2 ವರ್ಷಗಳ ಹೆಚ್ಚುವರಿ ಸೇವಾ ವಿಸ್ತರಣೆ (ಎಕ್ಸ್ಟೆನ್ಶನ್) ನೀಡಲು ಕೇಂದ್ರ ಸರ್ಕಾರ ಯೋಜಿಸಿದೆ.
4 ವರ್ಷಗಳು ಪೂರ್ಣಗೊಂಡ ನಂತರ ಕಾಯಂಗೊಳ್ಳದ (ಪರ್ಮನೆಂಟ್ ಆಗದ) ಶೇ. 75 ರಷ್ಟು ಅಗ್ನಿವೀರರಿಗೆ ಈ 2 ವರ್ಷಗಳ ಸೇವಾ ವಿಸ್ತರಣೆ ಸಿಗಲಿದೆ.
ಇದಲ್ಲದೆ, ಈ ಶೇ. 75 ರಷ್ಟು ಅಗ್ನಿವೀರರಿಗೆ ಒಟ್ಟು 6 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಕಾಯಂ ಕೇಡರ್ಗೆ ಸೇರಲು ಮತ್ತೊಂದು ಅವಕಾಶ ಸಿಗಲಿದೆ. ಈ ಸಂಪೂರ್ಣ ಹೊಸ ಚೌಕಟ್ಟಿಗೆ ‘ಅಗ್ನಿಪಥ್ ಯೋಜನೆ 2.0’ ಎಂದು ಹೆಸರಿಸಲಾಗುತ್ತಿದೆ. ಈಗ ಮದುವೆ, ವಸತಿಗೆ ಅವಕಾಶ ಇದೆ.
ಪ್ರಸ್ತುತ ನಿಯಮಗಳ ಅಡಿಯಲ್ಲಿ, ಅಗ್ನಿಪಥ್ ಯೋಜನೆಗೆ ಸೇರುವ ಯೋಧರು ತಮ್ಮ ಆರಂಭಿಕ 4 ವರ್ಷಗಳ ಉದ್ಯೋಗದ ಅವಧಿಯಲ್ಲಿ ಅವಿವಾಹಿತರಾಗಿರುವುದು ಕಡ್ಡಾಯವಾಗಿದೆ. ಆದರೆ 4 ವರ್ಷಗಳ ಸೇವೆ ಪೂರ್ಣಗೊಂಡ ನಂತರ ಸಿಗುವ 2 ವರ್ಷಗಳ ಸೇವಾ ವಿಸ್ತರಣೆಯ ಅವಧಿಯಲ್ಲಿ ಅಗ್ನಿವೀರರು ಮದುವೆಯಾಗಬಹುದು ಎನ್ನಲಾಗಿದೆ. ‘ಫ್ಯಾಮಿಲಿ ಕ್ವಾರ್ಟರ್ಸ್’ ಒದಗಿಸುವ ಯೋಜನೆಯನ್ನೂ ಸಿದ್ಧಪಡಿಸಲಾಗುತ್ತಿದೆ. ಸದ್ಯಕ್ಕೆ ಈ ವಿಷಯದ ಕುರಿತು ಸರ್ಕಾರದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.












