ಇಮ್ರಾನ್ ಖಾನ್ ಸಹೋದರಿಯರ ಜೈಲಿನಿಂದ ಬಿಡುಗಡೆ

0
11

ಸನ್ಮಾರ್ಗ ವಾರ್ತೆ

ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹೋದರಿಯರಿಗೆ 53 ದಿನಗಳ ಜೈಲು ವಾಸದ ಬಳಿಕ ಬಿಡುಗಡೆಗೊಳಿಸಲಾಗಿದೆ. ಸಾರ್ವಜನಿಕ ಶಾಂತಿ ಭಂಗ ಆರೋಪದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಅವರನ್ನು ಬಂಧಿಸಲಾಗಿತ್ತು. ಡಾ. ಉಝ್ಮಾ ಖಾನಂ, ನೌರಿನ್ ನಿಯಾಝಿಯವರ ಬಂಧನ ಆದೇಶವನ್ನು ಪಂಜಾಬ್ ಸರ್ಕಾರ ಹಿಂಪಡೆದ ಕಾರಣ ಅವರ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ಇವರ ಜೊತೆ ಬಂಧಿಸಲಾಗಿದ್ದ ಇನ್ನೋರ್ವ ಸಹೋದರಿ ಅಲಿಖಾನಂ, ಅವರಿಗಿಂತ ಮೊದಲು ಬಂಧಿಸಲಾಗಿದ್ದ ಇಮ್ರಾನ್‌ರ ಪತ್ನಿ ಬುಶ್ರಾ ಬಿಬಿಯವರು ಜೈಲಿನಲ್ಲಿಯೇ ಇದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕ ಶಾಂತಿ ಭಂಗ ಮಾಡಿದರೆಂದು ಆರೋಪಿಸಿ ಇಮ್ರಾನ್ ಖಾನ್‌ರ ಮೂವರು ಸಹೋದರಿಯರನ್ನು ಬಂಧಿಸುವಂತೆ ಪಂಜಾಬ್ ಸರ್ಕಾರ ಆದೇಶ ಹೊರಡಿಸಿತ್ತು. ಜೈಲುಪಾಲಾಗಿರುವ ಇಮ್ರಾನ್ ಖಾನ್‌ರ ಬಿಡುಗಡೆಗೆ ಪಾಕಿಸ್ತಾನಾದ್ಯಂತ ಪ್ರತಿಭಟನೆಗಳು ಮುಂದುವರಿಯುತ್ತಿದ್ದು. ಅದನ್ನು ತಡೆಯುವ ನಿಟ್ಟಿನಲ್ಲಿ ಇಮ್ರಾನ್ ಸಹೋದರಿಯರನ್ನು ಸರ್ಕಾರ ಬಂಧಿಸಿ ಜೈಲಿಗೆ ಕಳುಹಿಸಿತ್ತು. ಆದರೆ ಇವರ ಬಂಧನವನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿವೆ.

ಈ ನಡುವೆ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಾರ್ಟಿಯ ವಕೀಲರು ಬುಧವಾರ ಇಮ್ರಾನ್ ಖಾನ್‌ರನ್ನು ಜೈಲಿನಲ್ಲಿ ಭೇಟಿಯಾಗಿದ್ದಾರೆ. ಇಸ್ಲಾಮಾಬಾದ್ ಹೈಕೋರ್ಟ್ ಇಮ್ರಾನ್ ಖಾನ್‌ರನ್ನು ಭೇಟಿಯಾಗುವಂತೆ ವಕೀಲರಿಗೆ ನಿರ್ದೇಶಿಸಿತ್ತು. ಇಮ್ರಾನ್‌ರ ಆರೋಗ್ಯ ಬಿಗಡಾಯಿಸಿದ್ದು ರಕ್ತದೊತ್ತಡ ಅಪಾಯಕಾರಿ ರೀತಿ ತೀವ್ರಗೊಂಡಿದೆ ಎಂದು ಅವರ ವಕೀಲರು ಭೇಟಿಯ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ದಿವಸ ಇಸ್ಲಾಮಾಬಾದಿನ ಆಸ್ಪತ್ರೆಯಲ್ಲಿ ಕೆಲವು ಗಂಟೆಗಳ ಚಿಕಿತ್ಸೆ ಕೊಟ್ಟು ಇಮ್ರಾನ್ ಖಾನ್‌ರನ್ನು ಪುನಃ ಜೈಲಿಗೆ ಕರೆದುಕೊಂಡು ಹೋಗಲಾಗಿತ್ತು. ಇಮ್ರಾನ್ ಖಾನ್‌ರಿಗೆ 74 ವರ್ಷ ವಯಸ್ಸಾಗಿದೆ.