✍️ ಚಂದ್ರನ್ ಕುಮಾರ್ ಮೈತಿ
ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ, ಪಂಜಾಬ್
ಭಾರತೀಯರು ವರ್ಷವಿಡೀ ಹಲವು ಹಬ್ಬಗಳನ್ನು ಪ್ರದೇಶ, ಧರ್ಮ, ಜಾತಿಗಳ ಭೇದವಿಲ್ಲದೆ ಸಂತೋಷ ಮತ್ತು ಸಮೃದ್ಧಿಯಿಂದ ಆಚರಿಸುತ್ತಾರೆ. ಏಕರೂಪದ ಜೀವನದಿಂದ ಬೇಸತ್ತ ಜನರು ಮತ್ತು ಅವರ ಕುಟುಂಬದ ಸದಸ್ಯರು ಒಟ್ಟಿಗೆ ಸೇರಲು ಹಬ್ಬಗಳು ಸಹಾಯ ಮಾಡುತ್ತವೆ. ಹಬ್ಬಗಳಿಂದ ಒಳ್ಳೆಯ ಪರಿಣಾಮಗಳಿದ್ದರೂ, ಇತ್ತೀಚೆಗೆ ನೈಸರ್ಗಿಕ ಸಂಪನ್ಮೂಲಗಳ ವಿಪರೀತ ಮತ್ತು ನಿಯಂತ್ರಣವಿಲ್ಲದ ಬಳಕೆಯಿಂದ ಗಾಳಿ, ನೀರು, ಮಣ್ಣು ಮತ್ತು ಶಬ್ದ ಮಾಲಿನ್ಯಗಳು ಹೆಚ್ಚಾಗುತ್ತಿದೆ. ಪರಿಸರದ ಸಮತೋಲನ ಕೂಡ ಇದರಿಂದ ಹಾಳಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮತ್ತು ನಿಯಮ ಹಾಗೂ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಈ ಪರಿಸ್ಥಿತಿಯನ್ನು ಸರಿಪಡಿಸಬೇಕಿದೆ.
ಭಾರತವು ತನ್ನ ಆಚರಣೆಗಳು ಮತ್ತು ಹಬ್ಬಗಳ ಮೂಲಕ ಧರ್ಮಗಳ ಸಾಮಾಜಿಕ ಸಮನ್ವಯವನ್ನು ಪ್ರದರ್ಶಿಸುತ್ತದೆ. ಜನಸಂಖ್ಯೆ ಮತ್ತು ಧರ್ಮದಲ್ಲಿನ ವೈವಿಧ್ಯತೆಯಿಂದಾಗಿ ಈ ದೇಶವು ಅತ್ಯಂತ ವಿಸ್ತಾರವಾಗಿದೆ. ವರ್ಷದ ಬಹುತೇಕ ಪ್ರತಿದಿನವೂ ಭಾರತದಲ್ಲಿ ಅಪಾರ ಸಂತೋಷ ಮತ್ತು ಹರ್ಷದಿಂದ ಆಚರಿಸಲಾಗುತ್ತದೆ. ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ವಿಶೇಷವಾಗಿ ಆಚರಿಸಲ್ಪಡುವ ಹಲವು ಪ್ರಾದೇಶಿಕ ಹಬ್ಬಗಳಿವೆ. ಭಾರತದ ವಿವಿಧ ಸಮುದಾಯಗಳ ವಿವಿಧ ಜನರು ಮತ್ತು ಗುಂಪುಗಳ ಜೀವನದಲ್ಲಿ ಪ್ರತಿಯೊಂದು ಹಬ್ಬವೂ ಮಹತ್ವದ ಪಾತ್ರ ವಹಿಸುತ್ತದೆ. ಹಬ್ಬಗಳಿಗೆ ಹಲವಾರು ಕಾರಣಗಳಿವೆ. ಋತುಗಳ ಬದಲಾವಣೆ, ಸುಗ್ಗಿ, ಸಾಮರಸ್ಯ ಅಥವಾ ಸಂತರು, ಗುರುಗಳು ಮತ್ತು ಪ್ರವಾದಿಗಳ ಜನ್ಮದಿನಾಚರಣೆ ಹಾಗೂ ದೇವರು ಮತ್ತು ದೇವತೆಗಳಿಗೆ ಗೌರವ ಸಲ್ಲಿಸುವ ಕಾರಣದಿಂದ ಇವು ಆಚರಿಸಲ್ಪಡಬಹುದು. ಭಾರತದ ಪ್ರತಿಯೊಂದು ಹಬ್ಬವೂ ವಿಶಿಷ್ಟ ಬಣ್ಣ, ಆಕರ್ಷಣೆ, ಸಿಹಿತಿಂಡಿಗಳು ಮತ್ತು ಪುರಾತನ ಗಮನಾರ್ಹ ಆಚರಣೆಗಳನ್ನು ಹೊಂದಿವೆ. ಹಬ್ಬಗಳ ಆಚರಣೆಯನ್ನು ರಾಷ್ಟ್ರೀಯ, ಧಾರ್ಮಿಕ ಅಥವಾ ಸಾಂದರ್ಭಿಕ ಆಚರಣೆಗಳಾಗಿಯೂ ವಿಂಗಡಿಸಬಹುದು. ದೇಶದ ಜನರ ಜೀವನವೂ ಹಬ್ಬಗಳ ಆಚರಣೆಯನ್ನು ಅವಲಂಬಿಸಿದೆ. ಹಬ್ಬದ ಆಚರಣೆಯ ಸಂದರ್ಭದಲ್ಲಿ ಸುತ್ತಮುತ್ತಲಿನ ಜನಸಮುದಾಯದೊಂದಿಗೆ ಸಾಮಾಜಿಕ ಮತ್ತು ಧಾರ್ಮಿಕ ಸಮಾಗಮವೂ ನಡೆಯುತ್ತದೆ. ಅದ್ದೂರಿ ಊಟೋಪಚಾರ ಇಲ್ಲದೇ ಭಾರತದಲ್ಲಿ ಯಾವುದೇ ಹಬ್ಬ ಪೂರ್ಣಗೊಳ್ಳುವುದಿಲ್ಲ. ಮೇಳಗಳು ಅಥವಾ ಜಾತ್ರೆಗಳು ಭಾರತದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ಅತ್ಯಂತ ಜನಪ್ರಿಯವಾಗಿವೆ. ಹೆಚ್ಚಿನ ಹಬ್ಬಗಳನ್ನು ವೈಯಕ್ತಿಕ ಮನೆಗಳಲ್ಲಿ ಆಚರಿಸುವುದರಿಂದ ಜಾತ್ರೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಮುದಾಯವನ್ನು ಒಂದುಗೂಡಿಸಲು ಮತ್ತು ಸ್ವಾಗತ ಕೋರಲು ಇವುಗಳನ್ನು ಸಾಮಾನ್ಯವಾಗಿ ಏಳು ದಿನಗಳಿಂದ ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಯವರೆಗೆ ಆಚರಿಸಲಾಗುತ್ತದೆ.
ಧರ್ಮ ಮತ್ತು ಪ್ರದೇಶಗಳನ್ನು ಮೀರಿ ಇಡೀ ದೇಶಾದ್ಯಂತ ಆಚರಿಸಲಾಗುವ ಹಲವಾರು ರಾಷ್ಟ್ರೀಯ ಹಬ್ಬಗಳಿವೆ. ಆಗಸ್ಟ್ 15ರಂದು ಆಚರಿಸಲಾಗುವ ಸ್ವಾತಂತ್ರ್ಯ ದಿನವು ಅವುಗಳಲ್ಲಿ ಒಂದಾಗಿದ್ದು, 1947ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಭಾರತವು ವಿಶ್ವದ ಅತಿದೊಡ್ಡ ಪ್ರಜಾಸತ್ತಾತ್ಮಕ ಸರ್ಕಾರವಾಗಿ ಅಸ್ತಿತ್ವಕ್ಕೆ ಬಂದ ದಿನದ ಸ್ಮರಣೆಯಾಗಿ ಇದನ್ನು ಆಚರಿಸಲಾಗುತ್ತದೆ. ಪ್ರಾದೇಶಿಕ ಹಂತದಲ್ಲಿ ಆಚರಿಸಲಾಗುವ ಅನೇಕ ಹಬ್ಬಗಳಿವೆ ಹಾಗೂ ಕೆಲವನ್ನು ನಿರ್ದಿಷ್ಟ ಸಮುದಾಯಗಳು ಆಚರಿಸುತ್ತವೆ.
ಇಡೀ ದೇಶದಾದ್ಯಂತ ಆಚರಿಸಲಾಗುವ ಹಲವಾರು ಹಬ್ಬಗಳಲ್ಲಿ, ಪ್ರಾದೇಶಿಕ ಹಬ್ಬಗಳ ಕೆಲವು ಉದಾಹರಣೆಗಳನ್ನು ಮಾತ್ರ ಕೆಳಗೆ ವಿವರಿಸಲಾಗಿದೆ. ಬೈಸಾಖಿಯು ದೇಶದ ಕೆಲವು ಸಮುದಾಯಗಳಲ್ಲಿ ಹಿಂದೂ ವರ್ಷದ ಮೊದಲ ದಿನವನ್ನು ಸೂಚಿಸುತ್ತದೆ. ಈ ದಿನ ಸೂರ್ಯನು ರಾಶಿಚಕ್ರದ ಪ್ರಮುಖ ಸಂಕೇತವಾದ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ನೂತನ ವರ್ಷದ ಆರಂಭವನ್ನು ಸೂಚಿಸುತ್ತದೆ. ಭಾರತದ ಉತ್ತರ ಭಾಗದಲ್ಲಿ, ಕೃಷಿಕರು ತಮ್ಮದೇ ಆದ ಪ್ರಾರ್ಥನೆಗಳನ್ನು ಸಲ್ಲಿಸಿ ಆಚರಿಸುತ್ತಾರೆ. ಹೊಲಗಳು ಪ್ರಕೃತಿಯ ಸಮೃದ್ಧಿಯಿಂದ ತುಂಬಿರುವುದನ್ನು ಕಾಣಬಹುದು. ಸಿಹಿತಿಂಡಿಗಳನ್ನು ವಿತರಿಸಲಾಗುತ್ತದೆ, ಹಳೆಯ ದ್ವೇಷಗಳನ್ನು ಮನ್ನಿಸಲಾಗುತ್ತದೆ ಮತ್ತು ಜೀವನವು ಸಂತೋಷ, ಉಲ್ಲಾಸದಿಂದ ತುಂಬಿರುತ್ತದೆ ಹಾಗೂ ಪ್ರತಿಯೊಬ್ಬರೂ ತಾವು ಸೇರಿದವರಾಗಿದ್ದಾರೆ ಎಂಬ ಭಾವನೆ ಮೂಡುತ್ತದೆ. ಬೈಸಾಖಿ ಆಚರಣೆಯ ಹಿಂದಿರುವ ಎರಡು ಪ್ರಮುಖ ತತ್ವದ ಉದ್ದೇಶಗಳು ಇವಾಗಿವೆ. ಸುಗ್ಗಿಯ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಪೊಂಗಲ್ ಎಂದು ಆಚರಿಸಲಾಗುತ್ತದೆ. ಜನವರಿಯಲ್ಲಿ ಮೂರು ದಿನಗಳ ಕಾಲ ಇದನ್ನು ಆಚರಿಸಲಾಗುತ್ತದೆ. ವಿವಿಧ ದೇವತೆಗಳಿಗೆ ಸಮರ್ಪಿತವಾದ ಹಲವು ಪೂಜಾ ವಿಧಿಗಳೊಂದಿಗೆ ಇದು ಪ್ರಕಾಶಮಾನ ಮತ್ತು ಸಾಂಪ್ರದಾಯಿಕ ಆಚರಣೆಯಾಗಿದೆ. ಸೂರ್ಯನು ಮಹತ್ವದ ಪಾತ್ರ ವಹಿಸುತ್ತಾನೆ ಮತ್ತು ಭತ್ತ ಹಾಗೂ ಇತರ ಹೊಲಗಳ ಬೆಳವಣಿಗೆಗೆ ಸಹಕರಿಸುತ್ತಾನೆ. ದಿನದ ಆರಂಭದಲ್ಲೇ ಬೇಗನೆ ಮನೆಗಳ ಮುಂಭಾಗದಲ್ಲಿ ರಂಗೋಲಿಯ ವಿಭಿನ್ನ ಪ್ರಕಾರಗಳನ್ನು ಬಿಡಿಸಲಾಗುತ್ತದೆ. ಬಣ್ಣಗಳ ಹಬ್ಬವನ್ನು ಹೋಳಿ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ವಸಂತ ಋತುವಿನ ಆಗಮನದ ಸಮಯದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಪ್ರೀತಿಯ ಬೆಳವಣಿಗೆ, ಹಬ್ಬದ ದಿನದಂದು ಇತರರನ್ನು ಭೇಟಿಯಾಗಿ ಶುಭಾಶಯ ಕೋರುವುದು, ಕ್ಷಮಿಸುವುದು ಮತ್ತು ಹಾಳಾದ ಸಂಬಂಧಗಳನ್ನು ಸರಿಪಡಿಸುವುದನ್ನು ಸೂಚಿಸುತ್ತದೆ. ಉತ್ತಮ ವಸಂತ ಸುಗ್ಗಿ ಋತುವಿನ ಆರಂಭವನ್ನೂ ಈ ಹಬ್ಬ ಆಚರಿಸುತ್ತದೆ. ದೀಪಾವಳಿಯು ದೇಶದಾದ್ಯಂತ ಆಚರಿಸಲಾಗುವ ಮತ್ತೊಂದು ಹಬ್ಬವಾಗಿದೆ. ಇದು ಕತ್ತಲೆಯ ಮೇಲೆ ಬೆಳಕಿನ, ಕೆಡುಕಿನ ಮೇಲೆ ಒಳ್ಳೆಯದರ, ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಪ್ರತಿನಿಧಿಸುತ್ತದೆ. ದೀಪಾವಳಿ ಆಚರಣೆಗಾಗಿ, ಜನರು ತಮ್ಮ ಮನೆ ಅಥವಾ ಕಾರ್ಯಸ್ಥಳವನ್ನು ಸ್ವಚ್ಛಗೊಳಿಸುವುದು, ನವೀಕರಿಸುವುದು ಮತ್ತು ದೀಪಗಳಿಂದ ಅಲಂಕರಿಸುವ ಮೂಲಕ ಸಿದ್ಧಪಡಿಸುತ್ತಾರೆ. ಈ ಹಬ್ಬದಲ್ಲಿ ಸಮೃದ್ಧಿ ಮತ್ತು ಸಂಪತ್ತಿನ ದೇವತೆಯನ್ನೂ ಪೂಜಿಸಲಾಗುತ್ತದೆ. ಪಟಾಕಿಗಳು, ಹೇರಳವಾದ ಆಹಾರದೊಂದಿಗೆ ಕೌಟುಂಬಿಕ ಔತಣಕೂಟಗಳ ಮೂಲಕ ಆಚರಣೆಯನ್ನು ನಡೆಸಲಾಗುತ್ತದೆ.
ದೇಶದಾದ್ಯಂತ ವರ್ಷವಿಡೀ ದೊಡ್ಡ ಸಂಖ್ಯೆಯ ಹಬ್ಬಗಳಿವೆ ಮತ್ತು ಜನರು ಪೂರ್ಣ ಉತ್ಸಾಹದಿಂದ ಆಚರಿಸುತ್ತಾರೆ. ವಾಣಿಜ್ಯೀಕರಣವು ಪ್ರತಿಯೊಂದು ಹಬ್ಬವನ್ನೂ ಭವ್ಯ ಕಾರ್ಯಕ್ರಮವಾಗಿ ಪರಿವರ್ತಿಸುತ್ತಿದೆ. ಎಲ್ಲಾ ರೋಮಾಂಚನಗಳು, ಮೋಜುಗಳ ಹೊರತಾಗಿ; ಪರಿಸರದ ದೃಷ್ಟಿಕೋನದಿಂದ ಪ್ರಶ್ನೆಯೊಂದು ಉದ್ಭವಿಸುತ್ತದೆ: ಈ ಆಚರಣೆಗಳು ಗಾಳಿ, ನೀರು, ಮಣ್ಣು, ಶಬ್ದ ಮುಂತಾದ ಪರಿಸರ ಸಂಪನ್ಮೂಲಗಳಿಗೆ ಸುರಕ್ಷಿತವಾಗಿವೆಯೇ? ನಮ್ಮ ಈ ಆಚರಣೆಗಳು ಪರಿಸರ ಸಂಪನ್ಮೂಲಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಅವಲೋಕಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಪರಿಸರದ ಮೇಲೆ ಹಬ್ಬಗಳ ಪರಿಣಾಮ
ಪರಿಸರ ಸಂಪನ್ಮೂಲಗಳ ಅತಿಯಾದ ಬಳಕೆ ಮತ್ತು ಕಲುಷಿತಗೊಳಿಸುವಿಕೆಯು ಸಂಪನ್ಮೂಲಗಳ ಅನಾರೋಗ್ಯಕರ ಸ್ಥಿತಿಗೆ ಕಾರಣವಾಗುತ್ತದೆ. ಆದ್ದರಿಂದ, ವಾಯು, ಜಲ, ಮಣ್ಣು ಅಥವಾ ಶಬ್ದ ಮಾಲಿನ್ಯದ ಮಟ್ಟವು ಕ್ರಮೇಣ ಹೆಚ್ಚಾಗುತ್ತಿದ್ದು, ಇದರ ಫಲವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಲವಾರು ಗಂಭೀರ ಸಮಸ್ಯೆಗಳು ಸಂಭವಿಸುತ್ತಿವೆ.
ವಿವಿಧ ನಗರ ಪ್ರದೇಶಗಳಲ್ಲಿ ಆಚರಣೆಯ ನಂತರ ವಿಗ್ರಹಗಳನ್ನು ವಿಸರ್ಜಿಸುವ ಪ್ರಕ್ರಿಯೆಯು ಗಂಭೀರ ಜಲಮಾಲಿನ್ಯವನ್ನು ಉಂಟುಮಾಡುತ್ತಿದ್ದು, ಇದು ಬೃಹತ್ ಪ್ರಮಾಣದ ಮೀನುಗಳು ಮತ್ತು ಅನೇಕ ಉಭಯಚರ ಪ್ರಾಣಿಗಳ ಸಾವಿಗೆ ದಾರಿ ಮಾಡಿಕೊಡುತ್ತದೆ. ಮಣ್ಣಿನಿಂದ ವಿಗ್ರಹಗಳನ್ನು ತಯಾರಿಸುತ್ತಿದ್ದ ದಿನಗಳು ಕಳೆದುಹೋಗಿವೆ. ಪ್ರಸ್ತುತ ದಿನಗಳಲ್ಲಿ, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣದ ಮಿಶ್ರಣಗಳಿಂದ ವಿಗ್ರಹಗಳನ್ನು ತಯಾರಿಸಲಾಗುತ್ತದೆ. ಜೀವಶಾಸ್ತ್ರಜ್ಞರು ಮತ್ತು ಪರಿಸರ ಸಂಶೋಧಕರು ಉಲ್ಲೇಖಿಸಿರುವಂತೆ, ಪ್ಲಾಸ್ಟರ್ ಆಫ್ ಪ್ಯಾರಿಸ್ ಸುಲಭವಾಗಿ ವಿಘಟನೆಗೊಳ್ಳುವುದಿಲ್ಲ ಅಥವಾ ನಶಿಸುವುದಿಲ್ಲ. ಇದಲ್ಲದೆ, ವಿಗ್ರಹಗಳಿಗೆ ಹಚ್ಚಲು ಬಳಸಲಾಗುವ ಬಣ್ಣಗಳು ಮತ್ತು ಕೃತಕ ಆಭರಣಗಳು ವಿಷಕಾರಿ ರಾಸಾಯನಿಕ ಅಂಶಗಳನ್ನು ಹೊಂದಿರುತ್ತವೆ. ವಿವಿಧ ಬಣ್ಣಗಳಲ್ಲಿ ಪಾದರಸ, ಸತು, ಕ್ರೋಮಿಯಂ, ಸೀಸದಂತಹ ಹಲವಾರು ಭಾರಲೋಹಗಳಿದ್ದು, ಅವು ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಈ ರಾಸಾಯನಿಕ ಬಣ್ಣಗಳು, ಸೀಸ ಮತ್ತು ಕ್ರೋಮಿಯಂನಂತಹ ಅಧಿಕ ಭಾರಲೋಹಗಳ ಅತಿಯಾದ ಬಳಕೆಯು ಜಲಚರ ಪ್ರಾಣಿಗಳ ಮೇಲೆ ಮಾತ್ರವಲ್ಲದೆ, ಜಲಮಾರ್ಗದ ವ್ಯಾಪಕ ಸಸ್ಯವರ್ಗದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ತದನಂತರ, ಆ ಕಲುಷಿತ ನೀರನ್ನು ಗೃಹೋಪಯೋಗಿ ಕೆಲಸಗಳಿಗೆ ಬಳಸುವುದೂ ಸಹ ಹಲವಾರು ರೋಗಗಳಿಗೆ ಕಾರಣವಾಗುತ್ತದೆ.
ಹೋಳಿ ಹಬ್ಬದ ಸಂದರ್ಭದಲ್ಲಿ ಬಳಸಲಾಗುವ ಬಣ್ಣದ ಪುಡಿಯನ್ನು ತಯಾರಿಸಲು ಭಾರಲೋಹಗಳು ಮತ್ತು ಇತರ ಅಪಾಯಕಾರಿ ವಸ್ತುಗಳನ್ನು ಸಹ ಬಳಸಲಾಗುತ್ತಿದೆ. ವಿವಿಧ ಬಣ್ಣಗಳು ಜನರ ನಡುವಿನ ಅಂತರವನ್ನು ನಿವಾರಿಸುವ ಸಂಕೇತವನ್ನು ಹೊಂದಿರುವುದರಿಂದ ಹೋಳಿ ಆಚರಣೆಯಲ್ಲಿ ಬಣ್ಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಿಂದಿನ ಕಾಲದಲ್ಲಿ, ಜನರು ನೈಸರ್ಗಿಕ ಮೂಲಗಳಿಂದ ತಮ್ಮದೇ ಆದ ಬಣ್ಣಗಳನ್ನು ತಯಾರಿಸುತ್ತಿದ್ದರು, ಅವು ಸುರಕ್ಷಿತ ಮತ್ತು ಅಪಾಯಕಾರಿ ಅಲ್ಲದವುಗಳಾಗಿವೆ. ಇತ್ತೀಚಿನ ದಿನಗಳಲ್ಲಿ, ಮೈಕಾ, ಆಮ್ಲಗಳು, ಕರಗುವ ಪ್ರತ್ಯಾಮ್ಲಗಳು, ಗಾಜಿನ ಪುಡಿಯಂತಹ ಅಗ್ಗದ ರಾಸಾಯನಿಕ ಆಧಾರಿತ ಪದಾರ್ಥಗಳಿಂದ ಬಣ್ಣಗಳನ್ನು ಸಿದ್ಧ ಮಾಡಲಾಗುತ್ತಿದೆ. ಈ ವಸ್ತುಗಳು ಅಪಾಯಕಾರಿಯಾಗಿದ್ದು, ತರಚಿದ ಕಲೆ, ಕಿರಿಕಿರಿ, ಜುಮ್ಮೆನಿಸುವಿಕೆಯಂತಹ ಚರ್ಮ ಸಂಬಂಧಿತ ಸಮಸ್ಯೆಗಳನ್ನು ಹೆಚ್ಚಾಗಿ ಉಂಟುಮಾಡುತ್ತವೆ. ಆದಾಗ್ಯೂ, ಆರೋಗ್ಯಕ್ಕೆ ಅಪಾಯಕಾರಿಯಾದ ಈ ರಾಸಾಯನಿಕಗಳು ದೃಷ್ಟಿ ದೋಷ, ಉಸಿರಾಟದ ಸಮಸ್ಯೆಗಳು ಮತ್ತು ಬೆಳವಣಿಗೆಯ ಕುಂಠಿತದ ಬಗ್ಗೆಯೂ ಆತಂಕ ಮೂಡಿಸುತ್ತವೆ. ನಂತರದಲ್ಲಿ ಈ ವಸ್ತುಗಳು ನೀರು, ಮಣ್ಣಿನೊಂದಿಗೆ ಸೇರಿ ಜಲ ಮತ್ತು ಮಣ್ಣಿನ ಮಾಲಿನ್ಯಕ್ಕೆ ಕಾರಣವಾಗುತ್ತವೆ.
ಜನರು ಅತಿಯಾಗಿ ಪಟಾಕಿಗಳನ್ನು ಬಳಸುವುದರಿಂದ ದೀಪಾವಳಿ ಆಚರಣೆಯ ಅವಧಿಯಲ್ಲೂ ಮಾಲಿನ್ಯ ಉಂಟಾಗುತ್ತಿದೆ. ಪಟಾಕಿಗಳಿಂದ ಬರುವ ಹೆಚ್ಚಿನ ಮಟ್ಟದ ಶಬ್ದ ಮತ್ತು ವಿಷಕಾರಿ ಅನಿಲದ ದೃಷ್ಟಿಯಿಂದ ಇದು ಶಿಶುಗಳು ಮತ್ತು ವಯಸ್ಸಾದ ವ್ಯಕ್ತಿಗಳಿಗೆ ದುಃಸ್ವಪ್ನದಂತಹ ಸಂಕಷ್ಟದ ಅನುಭವವನ್ನು ತರುತ್ತದೆ. ದೀಪಾವಳಿಯಂದು ಶಬ್ದ ಮಾಲಿನ್ಯವು ಶಿಫಾರಸು ಮಾಡಲಾದ ಮಟ್ಟಕ್ಕಿಂತ ಸಾಕಷ್ಟು ಹೆಚ್ಚಾಗಿರುತ್ತದೆ. ಇದಲ್ಲದೆ, ಬೇರಿಯಂ ಸಲ್ಫೇಟ್, ಸೋಡಿಯಂ ನೈಟ್ರೇಟ್, ಗಂಧಕ, ಪೊಟ್ಯಾಸಿಯಮ್ ಕ್ಲೋರೇಟ್ ಬಳಸಿ ಪಟಾಕಿಗಳನ್ನು ತಯಾರಿಸಲಾಗುತ್ತದೆ ಮತ್ತು ಆದ್ದರಿಂದ, ಪಟಾಕಿಗಳನ್ನು ಸುಡುವುದರಿಂದ ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್ಗಳು ಮತ್ತು ಲೋಹದ ಆಕ್ಸೈಡ್ಗಳಂತಹ ವಿಷಕಾರಿ ಅನಿಲಗಳು ಬಿಡುಗಡೆಯಾಗುತ್ತವೆ. ಇವು ಶ್ವಾಸಕೋಶಕ್ಕೆ ಹಾನಿ ಉಂಟುಮಾಡಬಹುದು ಮತ್ತು ಮಕ್ಕಳು ಹಾಗೂ ವಯಸ್ಸಾದವರಿಗೆ ಉಬ್ಬಸ ಮತ್ತು ಉಸಿರಾಟದ ತೊಂದರೆಯಂತಹ ಶ್ವಾಸಕೋಶದ ಸಮಸ್ಯೆಗೆ ಕಾರಣವಾಗಬಹುದು. ಪಟಾಕಿಗಳಲ್ಲಿ ಬಳಸಲಾಗುವ ಸೀಸ, ಮೆಗ್ನೀಸಿಯಮ್, ಕ್ಯಾಡ್ಮಿಯಮ್ ಮತ್ತು ಇತರ ಭಾರಲೋಹಗಳು ಕೊನೆಯಲ್ಲಿ ನೀರು ಮತ್ತು ಮಣ್ಣನ್ನು ಕಲುಷಿತಗೊಳಿಸುವುದರಿಂದ ವಿವಿಧ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು.
ಹಬ್ಬಗಳು ಮತ್ತು ಪರಿಸರ ಸುಸ್ಥಿರತೆ
ಜನರು ಹಬ್ಬಗಳನ್ನು ಆಚರಿಸುತ್ತಿದ್ದಾರೆ, ಇದು ಸಾಮಾಜಿಕ ಅಂಶಗಳು, ಸಾಂಸ್ಕೃತಿಕ ಪ್ರಭಾವಗಳಿಗೆ ಸಂಬಂಧಿಸಿದ್ದು, ನಗರವಾಸಿಗಳು ಈ ಆಚರಣೆಗಳ ಮೇಲೆ ಹೆಚ್ಚಿನ ವೆಚ್ಚ ಮಾಡುವುದರಿಂದ ಆರ್ಥಿಕತೆಯೊಂದಿಗೂ ಸಂಬಂಧ ಹೊಂದಿದೆ. ಪ್ರಸ್ತುತ ದಿನಗಳಲ್ಲಿ ಈ ಆಚರಣೆಗಳಿಗೆ ವಾಯು, ಜಲ, ಮಣ್ಣು, ಶಬ್ದ ಮತ್ತು ಮುಂತಾದವುಗಳ ರೂಪದಲ್ಲಿನ ಮಾಲಿನ್ಯವೇ ಪ್ರಮುಖ ಸಮಸ್ಯೆಯಾಗಿದೆ. ಜಲಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಕೆಯಿಂದಾಗಿ ವಿಗ್ರಹ ವಿಸರ್ಜನೆಯು ಪರಿಸರ ಶೋಷಣೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಹಬ್ಬದ ತ್ಯಾಜ್ಯಗಳ ವಿಲೇವಾರಿಯು ಪುರಸಭೆಗಳು ಮತ್ತು ಮಹಾನಗರ ಪಾಲಿಕೆಗಳಿಗೆ ಮಹತ್ವದ ಕಾರ್ಯವಾಗಿದೆ. ಪರಿಸರ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತು ಜನರಲ್ಲಿ ಜಾಗೃತಿಯ ಕೊರತೆಯೇ ಈ ಸಮಸ್ಯೆಯ ಪ್ರಮುಖ ಕಾರಣವಾಗಿದೆ. ಹಬ್ಬದ ಮೇಲೆ ಸಂಪೂರ್ಣ ನಿಷೇಧವು ಪರಿಹಾರವಲ್ಲ, ಆದರೆ ಹಬ್ಬದ ಚಟುವಟಿಕೆಗಳ ಮೇಲೆ ನಿಯಮಗಳು ಮತ್ತು ಕಾನೂನುಗಳನ್ನು ವಿಧಿಸಬೇಕಿದೆ. ಆದ್ದರಿಂದ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದೆಂಬ ಆತಂಕವನ್ನು ಬದಿಗಿಟ್ಟು, ಹಬ್ಬದ ಸಂದರ್ಭಗಳಲ್ಲಿ ನಿರ್ದಿಷ್ಟ ನಿಯಮಗಳನ್ನು ಜಾರಿಗೊಳಿಸುವುದು ನೀತಿ ನಿರೂಪಕರ ಜವಾಬ್ದಾರಿಯಾಗಿದೆ. ಇಲ್ಲದಿದ್ದರೆ, ದೇಶವು ತನ್ನ ಪರಿಸರ ಸಮತೋಲನವನ್ನು ಕಳೆದುಕೊಳ್ಳುತ್ತದೆ ಮತ್ತು ಅದರಿಂದ ಉಂಟಾಗುವ ಪರಿಣಾಮಗಳು ತಪ್ಪಿಸಲು ಸಾಧ್ಯವಾಗದಾಗುತ್ತವೆ. ಎಲ್ಲಾ ಹಂತಗಳಲ್ಲೂ ತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯ ವಿಂಗಡಣೆಯ ಆರಂಭವು ಅತ್ಯಗತ್ಯವಾಗಿದ್ದು, ಸಾರ್ವಜನಿಕ ಜಾಗೃತಿ ಅನಿವಾರ್ಯವಾಗಿದೆ. ಈ ಕ್ರಮಗಳು ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಬಹುದು.
ಉಪಸಂಹಾರ:
ಭಾರತೀಯ ಹಬ್ಬಗಳು ಸಂಸ್ಕೃತಿ, ಧರ್ಮ ಮತ್ತು ಸಾಮಾಜಿಕ ಸಾಮರಸ್ಯದ ಪ್ರತಿಬಿಂಬವಾಗಿವೆ. ಒಂದು ಹಬ್ಬದಿಂದ ಮತ್ತೊಂದು ಹಬ್ಬಕ್ಕಿರುವ ವೈವಿಧ್ಯತೆಯು ದೇಶದ ವ್ಯಾಪಕ ಸಾಂಸ್ಕೃತಿಕತೆಯನ್ನೂ ಪ್ರತಿಬಿಂಬಿಸುತ್ತದೆ. ಇತ್ತೀಚಿನ ದಿನಗಳಲ್ಲಿ, ಹಬ್ಬ ಮತ್ತು ಮನರಂಜನೆಯ ಹೆಸರಿನಲ್ಲಿ ಜನರು ವಾಯು ಮಾಲಿನ್ಯ, ಜಲ ಮಾಲಿನ್ಯ, ಮಣ್ಣಿನ ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಮುಂತಾದ ನೈಸರ್ಗಿಕ ಸಂಪನ್ಮೂಲಗಳನ್ನು ಕಲುಷಿತಗೊಳಿಸುತ್ತಿದ್ದಾರೆ. ಆದ್ದರಿಂದ, ಪರಿಸರ ಶೋಷಣೆಯು ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್ ವಿಲೇವಾರಿ, ಕಸ ಸುರಿಯುವುದು, ಸಂಚಾರ ಸಮಸ್ಯೆ ಮತ್ತು ಮುಂತಾದವುಗಳ ಮೂಲಕ ಹಬ್ಬಗಳ ಹೆಸರಿನಲ್ಲಿ ಮಾನವ ನಿರ್ಮಿತ ವಿಪತ್ತುಗಳು ಸಂಭವಿಸುತ್ತಿವೆ. ಆದಾಗ್ಯೂ, ಈ ಸಮಸ್ಯೆಯನ್ನು ನಿಭಾಯಿಸಲು ಸಾಮಾಜಿಕ ಜಾಗೃತಿ ಮತ್ತು ಕಟ್ಟುನಿಟ್ಟಿನ ಕಾನೂನು ಹಾಗೂ ನಿಯಮಗಳು ಅಗತ್ಯವಾಗಿವೆ. ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಪರಿಸರ ಸ್ನೇಹಿ ಹಬ್ಬದ ಆಚರಣೆಗಾಗಿ ಸಮಾಜ ಸೇವಕರು ಮತ್ತು ಕಾನೂನು ರೂಪಿಸುವವರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ.
ಕೃಪೆ: ಥಿಂಕ್ ಇಂಡಿಯಾ ಜರ್ನಲ್












