ಶ್ರೀನಗರ, ಆ. 5: ಕಾಶ್ಮೀರದಲ್ಲಿ ಕೇಂದ್ರ ಸರಕಾರ ಭಾರೀ ಕಾರ್ಯಾಚರನೆ ನಡೆಸಲಿದೆ ಎನ್ನುವ ಊಹಾಪೋಹಗಳ ನಡುವೆ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಉಮರ್ ಅಬ್ದುಲ್ಲ ಹಾಗೂ ಇನ್ನೋರ್ವ ನಾಯಕ ಸಜ್ಜಾದ್ ಲೋನ್ರನ್ನು ಗೃಹಬಂಧನದಲ್ಲಿರಿಸಲಾಗಿದೆ. ತನ್ನನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಭಾವಿಸಿದ್ದೇನೆ ಎಂದು ನ್ಯಾಶನಲ್ ಕಾನ್ಫೆರೆನ್ಸ್ ನಾಯಕ ಉಮರ್ ಅಬ್ದುಲ್ಲ ಟ್ವೀಟ್ ಮಾಡಿದ್ದಾರೆ. ಉಮರ್ ಟ್ವೀಟ್ಗೆ ಮೆಹಬೂಬ ರಿಟ್ವೀಟ್ ಮಾಡಿದ್ದಾರೆ.
“ರವಿವಾರ ಮಧ್ಯರಾತ್ರೆಯಿಂದ ನಾನು ಗೃಹಬಂಧನದಲ್ಲಿದ್ದೇನೆ ಎಂದು ಭಾವಿಸಿದ್ದೇನೆ. ಇತರ ನಾಯಕರ ವಿರುದ್ಧ ಕೂಡ ಕ್ರಮ ನಡೆಯಬಹುದು. ಇದು ಸತ್ಯವೇ ಎಂದು ತಿಳಿಯಲು ಈಗ ದಾರಿಯೇ ಇಲ್ಲ” ಎಂದು ಉಮರ್ ಬರೆದಿದ್ದಾರೆ. ರಾಜ್ಯದಲ್ಲಿ ಮೊಬೈಲ್ -ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಸೋಮವಾರ ಬೆಳಗ್ಗೆಶ್ರೀನಗರ ಜಿಲ್ಲೆಯಲ್ಲಿ 144ನೇ ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಹೇರಲಾಗಿದೆ. ರಜೌರಿ, ಉಧಂಪುರ ಜಿಲ್ಲೆಯಲ್ಲಿಯೂ ನಿಷೇಧಾಜ್ಞೆ ಘೋಷಿಸಲಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಸರಕಾರ ಸೂಚನೆ ನೀಡಿದೆ. ಉಮ್ಮು ವಿಶ್ವವಿದ್ಯಾನಿಯಲಯ ಸಹಿತ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಇದರೊಂದಿಗೆ ಸೋಮವಾರ ಬೆಳಗ್ಗೆ 9: 30ಕ್ಕೆ ಪ್ರಧಾನಿ ನರೇಂದ್ರ ಮೋದಿಯ ಅಧಿಕೃತ ವಸತಿಯಲ್ಲಿ ಸಚಿವ ಸಂಪುಟ ಸಭೆಯೂ ನಡೆಯುತ್ತಿದೆ. ಭಯೋತ್ಪಾದನಾ ದಾಳಿ ಆತಂಕ ಮತ್ತು ಪಾಕಿಸ್ತಾನದ ಗಡಿಯ ಮೂಲಕ ಭಯೋತ್ಪಾದಕರು ನುಸುಳುವ ಸಾಧ್ಯತೆಯನ್ನು ಎತ್ತಿಹಿಡಿದು ಕಾಶ್ಮೀರದಲ್ಲಿ ಭಾರೀ ಸುರಕ್ಷೆ ಏರ್ಪಡಿಸಲಾಗಿದೆ. ಭಾರತ ಗಡಿಯಲ್ಲಿ ದಿಢೀರ್ ಗಲಭೆ ಸೃಷ್ಟಿಯಾಗವ ಸಾಧ್ಯತೆಯಿರುವಲ್ಲೆಲ್ಲ ಸೇನೆಯನ್ನು ನಿಯೋಜಿಸಲಾಗಿದೆ. ಅಮರನಾಥ್ ಯಾತ್ರೆಗೆ ಬಂದ ಯಾತ್ರಿಕರನ್ನು ಮತ್ತು ಪ್ರವಾಸಿಗರನ್ನು ಕೂಡಲೇ ರಾಜ್ಯ ತೊರೆಯಬೇಕೆಂದು ರಾಜ್ಯ ಆಡಳಿತ ಶುಕ್ರವಾರ ಸೂಚಿಸಿತ್ತು. ನಂತರ ಪ್ರಬಲ ಸೇನಾವಿನ್ಯಾಸವನ್ನು ರವಿವಾರಂದು ಕಾಶ್ಮೀರದಲ್ಲಿ ಮಾಡಲಾಗಿದೆ.
ಮುಂಬರುವ ದಿವಸಗಳ ಪರಿಸ್ಥಿತಿ ಹೇಗಿರುತ್ತದೆ ಎಂಬ ಗೊಂದಲದಲ್ಲಿರುವ ಕಾಶ್ಮೀರಿಗರು ಪೆಟ್ರೋಲ್ ಖರೀದಿಸುವ ಗಡಿಬಿಡಿಯಲ್ಲಿ ಓಡಾಡುತ್ತಿರುವುದು ಕಾಶ್ಮೀರದ ಸಣ್ಣಸಣ್ಣ ನಗರಗಳಲ್ಲೂ ಕೂಡ ಕಂಡು ಬಂದಿದೆ. ಅಂಗಡಿಗಳ ಮುಂದೆ ಸಾಮಾನು ಖರೀದಿಗೆ ಜನರ ಸಾಲು ಇದೆ. ಅನಿಶ್ಚಿತತೆ ಮತ್ತು ಭಯ ಕಾಶ್ಮೀರದ ಜನರನ್ನು ಕಾಡುತ್ತಿದೆ.
ಕಾಶ್ಮೀರದಲ್ಲಿ ಗಂಭೀರವಾಗಿ ಪ್ರಭಾವ ಬೀರುವ ರಾಜಕೀಯ ತೀರ್ಮಾನವನ್ನು ಕೇಂದ್ರ ಸರಕಾರ ಮಾಡಲಿದೆ ಎನ್ನುವ ನಿರೀಕ್ಷೆ ಎಲ್ಲರಲ್ಲಿಯೂ ಇದೆ. ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಸಹಿತ ನೂರಾರು ಕ್ರಿಕೆಟ್ ಆಟಗಾರರೊಂದಿಗೆ ರಾಜ್ಯದಿಂದ ಹೊರಹೋಗಲು ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್ ಸೂಚಿಸಿದೆ. ವಿದ್ಯಾರ್ಥಿಗಳನ್ನು ಹಾಸ್ಟೆಲ್ನಿಂದ ತೆರವುಗೊಳಿಸಲು ವಿದ್ಯಾಸಂಸ್ಥೆಗಳಿಗೂ ಸೂಚನೆ ನೀಡಲಾಗಿದೆ.












