ಕೃತಜ್ಞ ಹೃದಯ: ಸತ್ಯವಿಶ್ವಾಸದ ಲಕ್ಷಣ

0
117

ಖದೀಜ ನುಸ್ರತ್ ಅಬುಧಾಬಿ

ಇಹಲೋಕದಲ್ಲಿ ಅಲ್ಲಾಹನು ಮನುಷ್ಯನಿಗೆ ನೀಡಿದ ಅನುಗ್ರಹಗಳನ್ನು ಎಣಿಸಲು ಅಸಾಧ್ಯ. ಅದರಲ್ಲಿ ನಮಗೆ ಅರಿತಿರುವ, ಅರಿಯದೆ ಇರುವ ಅದೇಷ್ಟೋ ಅನುಗ್ರಹಗಳಿವೆ. ನಾವು ಪ್ರಾರ್ಥಿಸಿಯೂ, ಪ್ರಾರ್ಥಿಸದೆಯೇ ಲಭಿಸಿದ ಎಷ್ಟೋ ಅನುಗ್ರಹಗಳಿವೆ. ಅವುಗಳನ್ನು ನೀವು ಎಂದಾದರೊಮ್ಮೆ ಶಾಂತವಾದ ಮನಸ್ಸಿನಿಂದ ಚಿಂತಿಸಿ ನೋಡಿದ್ದಿರಾ?

ಉತ್ತಮ ಕುಟುಂಬ, ಶರೀರದ ಅಂಗಾಂಗಗಳು, ದೃಷ್ಟಿ, ಶ್ರವಣ, ಮೆದುಳು, ಮನಸ್ಸು , ಮಾತನಾಡುವ, ಆಲೋಚನೆ ಮಾಡುವ ಸಾಮರ್ಥ್ಯ, ಸಂಪತ್ತು, ಉತ್ತಮ ಆಹಾರ, ನೀರು, ಗಾಳಿ, ಮಣ್ಣು, ಬೆಂಕಿ, ಸಸ್ಯಗಳು, ಖನಿಜ ವಸ್ತುಗಳು, ಜಾನುವಾರುಗಳು , ಸೂರ್ಯ, ಚಂದ್ರ, ರಾತ್ರಿ, ಹಗಲು, ವಾಸಿಸಲು ಸೌಕರ್ಯವಿರುವ ಮನೆ, ಉತ್ತಮ ವಸ್ತ್ರ, ನಿದ್ರೆ, ರೋಗವಿಲ್ಲದ ಜೀವನ, ಯುದ್ಧವಿಲ್ಲದ ಶಾಂತಿಪೂರ್ಣ ನಗರ, ಉಚಿತ ಸಮಯ, ವಿದ್ಯಾಭ್ಯಾಸ, ಜ್ಞಾನ, ತಂತ್ರಜ್ಞಾನ, ಸಾರಿಗೆ ವ್ಯವಸ್ಥೆ, ಮನೆಯಲ್ಲೇ ಕುಳಿತು ಜಗತ್ತಿನ ಎಲ್ಲಾ ವಿಷಯಗಳನ್ನು ಅರಿಯುವ, ವ್ಯವಹಾರ ಮಾಡುವ, ದೂರದೂರದಲ್ಲಿರುವವರೊಂದಿಗೆ ಸಂಪರ್ಕದಲ್ಲಿರುವ ವ್ಯವಸ್ಥೆ ಹೀಗೆ ನಮ್ಮ ದೈನಂದಿನ ಜೀವನದಲ್ಲಿ ನಾವು ಅನುಭವಿಸುತ್ತಿರುವ ಅನುಕೂಲತೆಗಳನ್ನು ಪಟ್ಟಿ ಮಾಡಿದರೆ ಊಹಿಸಲು ಅಸಾಧ್ಯವಾದ ಅದೆಷ್ಟೋ ಅನುಗ್ರಹಗಳಿವೆ.

“ಅಲ್ಲಾಹನು ಆಕಾಶಗಳಲ್ಲೂ, ಭೂಮಿಯಲ್ಲೂ ಇರುವ ಸಕಲ ವಸ್ತುಗಳನ್ನು ನಿಮಗೆ ಅಧೀನಗೊಳಿಸಿ ರುವುದನ್ನೂ ತನ್ನ ಪ್ರತ್ಯಕ್ಷ ಹಾಗೂ ರಹಸ್ಯ ಅನುಗ್ರಹಗಳನ್ನು ನಿಮಗೆ ಪೂರ್ತಿಗೊಳಿಸಿ ಕೊಟ್ಟಿರುವುದನ್ನೂ ನೀವು ನೋಡುತ್ತಿಲ್ಲವೇ?”(ಸೂರಃ ಲುಕ್ಮಾನ್:20)

ಪವಿತ್ರ ಕುರ್ ಆನ್ ನ ಪ್ರಥಮ ಅಧ್ಯಾಯದ ಸೂಕ್ತ “ಅಲ್ಲಾಹನಿಗೆ ಸರ್ವಸ್ತುತಿ ಅವನು ಸಕಲ ವಿಶ್ವದ ಪ್ರಭು”. ನಾವು ದಿನಂಪ್ರತಿ ನಮಾಝ್ ಮಾಡುವಾಗ ಪ್ರತಿಯೊಂದು ರಕಆತ್ ಗಳಲ್ಲೂ ಪುನರಾವರ್ತಿಸುತ್ತೇವೆ. ನಿದ್ದೆಯಿಂದ ಎದ್ದಾಗಲೂ, ಅನ್ನ ಪಾನೀಯ ಸೇವಿಸಿದಾಗಲೂ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಬೇಕು. ಅಲ್ಲಾಹನು ನಮಗೆ ನೀಡಿದ ಅನುಗ್ರಹಗಳಿಗೆ ನಮ್ಮ ಹೃದಯ, ನಾಲಗೆ, ಶರೀರವು ಅಲ್ಲಾಹನ ಕಾನೂನುಗಳಿಗೆ ಅಧೀನರಾಗಬೇಕು. ಹೃದಯವು ಅವುಗಳನ್ನು ಗುರುತಿಸಬೇಕು, ವಿನಯಶೀಲರಾಗಬೇಕು. ನಾಲಗೆಯು ಪ್ರಶಂಸಿಸಬೇಕು, ಶರೀರವು ಆರಾಧನೆ, ಆಜ್ಞಾಪಾಲನೆ ಮಾಡುವುದರ ಮೂಲಕ ವಿಧೇಯತೆ ತೋರಬೇಕು. ಅಲ್ಲಾಹನು ನಿಮಗೆ ನೀಡಿದ ಅನುಗ್ರಹಗಳನ್ನು ಅರಿಯಿರಿ, ಪ್ರಶಂಸಿಸಿರಿ, ಸಂತೃಪ್ತರಾಗಿರಿ.

ಮನುಷ್ಯನು ತನ್ನ ನಿತ್ಯಜೀವನದಲ್ಲಿ ಎಲ್ಲಾ ಕೆಲಸ, ವ್ಯವಹಾರಗಳನ್ನು ನಿರ್ವಹಿಸಲು ಇನ್ನೊಬ್ಬರ ಸಹಾಯ ಪಡೆಯಬೇಕಾಗುತ್ತದೆ. ಹೀಗೆ ನಿಮಗೆ ಮಾತಾಪಿತರು, ಮಕ್ಕಳು, ಪತಿ ಪತ್ನಿ, ಉಪದೇಶ ನೀಡಿದವರು, ಸ್ನೇಹಿತರು, ಸಂಬಂಧಿಕರು, ಶಿಕ್ಷಕರು, ಸಹಜೀವಿಗಳು ಅಥವಾ ಇನ್ನಾರಾದರೂ ಉಪಕಾರ ಮಾಡಿದರೆ ಧನ್ಯವಾದಗಳು, ಥ್ಯಾಂಕ್ ಯೂ ಅಥವಾ ಅದಕ್ಕಿಂತ ಉತ್ತಮವಾಗಿ ಜಝಾಕುಮುಲ್ಲಾಹು ಖೈರ್ (ಅಲ್ಲಾಹನು ನಿಮಗೆ ಉತ್ತಮ ಪ್ರತಿಫಲ ನೀಡಲಿ) ಎಂದು ಕೃತಜ್ಞತೆ ಸಲ್ಲಿಸಿರಿ.

ಪ್ರವಾದಿ ಮುಹಮ್ಮದ್(ಸ) ಹೇಳಿರುವರು:
“ಮನುಷ್ಯರಿಗೆ ಕೃತಜ್ಞನಾಗಿ ಇರದವನು ಅಲ್ಲಾಹನಿಗೆ ಕೃತಜ್ಞನಾಗಿರುವುದಿಲ್ಲ.”

ಅಲ್ಲಾಹನು ಮನುಷ್ಯನಿಗೆ ಇಹಲೋಕದಲ್ಲಿ ಅವನು ಆಗ್ರಹಿಸುವ ಎಲ್ಲ ವಸ್ತುಗಳನ್ನು ನೀಡುವುದಿಲ್ಲ. ಎಲ್ಲವನ್ನೂ ಪಡೆದ ಮನುಷ್ಯ ಅಹಂಕಾರಿಯಾಗುತ್ತಾನೆ ಮತ್ತು ನಿಯಂತ್ರಣದಲ್ಲಿರುವುದಿಲ್ಲ. ಏನಾದರೊಂದು ಕೊರತೆಯಿದ್ದಾಗ ಮಾತ್ರ ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತಾನೆ. ಅಲ್ಲಾಹನು ನಮಗೆ ವಿಧಿಸಿದ್ದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅಲ್ಲಾಹನು ತಡೆದುದ್ದನ್ನು ಯಾರಿಗೂ ನೀಡಲು ಸಾಧ್ಯವಿಲ್ಲ. ನಮಗೆ ಸಿಗದ ಯಾವುದೇ ವಸ್ತುಗಳಿಗೆ ಮಾತಾಪಿತರು, ಪತಿ, ಮಕ್ಕಳು, ಮೇಲಧಿಕಾರಿ ಅಥವಾ ಇತರ ಯಾರೊಂದಿಗೂ ಜಗಳವಾಡಿ, ಕೂಗಿ, ಗೊಣಗಿ, ಸಂತಾಪ ವ್ಯಕ್ತ ಪಡಿಸಿ ಪ್ರಯೋಜನವಿಲ್ಲ. ನಮಗೆ ಅಗತ್ಯವಿರುವ ಎಲ್ಲ ವಸ್ತು ಸಿಗದಿರುವಾಗಲೂ, ನಮ್ಮ ಎಲ್ಲ ಆಸೆಗಳು ಪೂರೈಕೆಯಾಗದಿರುವಾಗಲೂ, ಅನಾರೋಗ್ಯದಲ್ಲಿರುವಾಗಲೂ, ನೋವು, ದುಃಖ, ಕಷ್ಟದಲ್ಲಿರುವಾಗಲೂ ನಮ್ಮ ಮನಸ್ಸಿನಲ್ಲಿ ಕೃತಜ್ಞತಾಭಾವವಿದ್ದರೆ ಅದು ಸತ್ಯ ವಿಶ್ವಾಸದ ಉನ್ನತ ಶ್ರೇಣಿಯಾಗಿರುತ್ತದೆ.

ಒಬ್ಬ ವ್ಯಕ್ತಿಯ ಹೃದಯದಲ್ಲಿ ಸತ್ಯ ವಿಶ್ವಾಸವು ದೃಢವಾದಂತೆ ಇಹಲೋಕದ ಎಲ್ಲಾ ವಸ್ತುಗಳು ತುಚ್ಛವಾಗುವುದು. ನಮಗೆ ಸಿಗದಿರುವ ವಸ್ತುಗಳಿಗಾಗಿ ಸಹನೆಯಿಂದ ವರ್ತಿಸಬೇಕು, ಕಾಯಬೇಕು ಮತ್ತು ಅದನ್ನು ಒಂದು ದಿನ ಪಡೆಯುವೆನೆಂಬ ಸಕಾರಾತ್ಮಕ ಭರವಸೆಯೊ೦ದಿಗೆ ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತಿರಬೇಕು. ಸಹನೆ ಮತ್ತು ಕೃತಜ್ಞತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮಲ್ಲಿ ಇರುವ ಅನುಗ್ರಹಗಳಿಗೆ ಕೃತಜ್ಞತೆ ಸಲ್ಲಿಸಲು ಮನಸ್ಸನ್ನು ಕೇಂದ್ರೀಕಣಗೊಳಿಸಬೇಕು. ಒಬ್ಬ ವ್ಯಕ್ತಿಯ ಹೃದಯದಲ್ಲಿ ಕೃತಜ್ಞತೆ ಮತ್ತು ಅಹಂಕಾರ, ದುರಾಸೆ ಒಂದುಗೂಡಲು ಸಾಧ್ಯವಿಲ್ಲ. ಮನಸ್ಸಿನಲ್ಲಿ ಲೌಖಿಕ ಜೀವನದ ಸಂಪತ್ತಿನ ಮೇಲೆ ಅತ್ಯಾಸೆಯನ್ನಿಡಬೇಡಿರಿ. ಅತ್ಯಾಸೆಯಿರುವ ಮನಸ್ಸಿನಲ್ಲಿ ಕೃತಜ್ಞತಾಭಾವವುಂಟಾಗುವುದಿಲ್ಲ. ನಮ್ಮ ಹೃದಯದಲ್ಲಿ ಕೃತಜ್ಞತಾಭಾವವು ಹಲವಾರು ನಕಾರಾತ್ಮಕ ಭಾವನೆ, ಚಿಂತನೆಗಳನ್ನು ನಿಷ್ಕ್ರಿಯಗೊಳಿಸುವ ಮಾರ್ಗವಾಗಿದೆ. ಅಸೂಯೆ, ದುರಾಶೆ, ದ್ವೇಷ, ಅಹಂಕಾರ ಇತ್ಯಾದಿ ನಕಾರಾತ್ಮಕ ಭಾವನೆಗಳು ಕೃತಘ್ನತೆಯ ಲಕ್ಷಣಗಳಾಗಿದೆ.

ನಮ್ಮ ದೈನಂದಿನ ಜೀವನದಲ್ಲಿ ನಾವು ಅನುಭವಿಸುವ ಅನುಗ್ರಹಗಳನ್ನು ಆಲೋಚಿಸುತ್ತಾ ಕೃತಜ್ಞರಾಗಬೇಕು. ಆಹಾರ, ನೀರು, ಆರೋಗ್ಯ ಅತಿ ದೊಡ್ಡ ಅನುಗ್ರಹಗಳಾಗಿದೆ. ದೊಡ್ಡ ದೊಡ್ಡ ಹಡಗುಗಳು ನೀರಿನ ಮೇಲೆ ಲಕ್ಷಗಟ್ಟಲೆ ತೂಕದ ವಸ್ತುಗಳನ್ನು ಹೊತ್ತು ಸಾವಿರಾರು ಕಿಲೋಮೀಟರ್ ದೂರ ಚಲಿಸುತ್ತದೆ. ಯಾವುದೋ ಪ್ರದೇಶದಲ್ಲಿ ಬೆಳೆದ, ಉತ್ಪಾದಿಸಲ್ಪಟ್ಟ ವಸ್ತುಗಳು ನಮಗೆ ಸುಲಭವಾಗಿ ಲಭ್ಯವಾಗುತ್ತದೆ. ಔಷಧಿ ಸೇವಿಸದೆ ನೀವು ಒಂದು ದಿನ ಕಳೆದರೆ ಅದಕ್ಕಿಂತ ದೊಡ್ಡ ಅನುಗ್ರಹ ಯಾವುದೂ ಇಲ್ಲ. ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿಗಳಿದ್ದರೂ ಅನಾರೋಗ್ಯದ ಕಾರಣದಿಂದ ಸರಿಯಾದ ಆಹಾರ ಸೇವಿಸಲು ಸಾಧ್ಯವಾಗದ ಎಷ್ಟೋ ಜನರಿದ್ದಾರೆ. ನೀವು ಮಾರಕ ರೋಗದಿಂದ ನರಳುವಾಗ ಉತ್ತಮ ಚಿಕಿತ್ಸೆ ಲಭಿಸುತ್ತಿದ್ದರೆ ಅದಕ್ಕೂ ಕೃತಜ್ಞತೆ ಸಲ್ಲಿಸಿರಿ. ಏಕೆಂದರೆ ಹಣವಿಲ್ಲದೆ ತಮ್ಮ ರೋಗಗಳಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗದವರೂ ಇದ್ದಾರೆ. ಯಾವುದೇ ಆಹಾರ ಮತ್ತು ಶುದ್ಧವಾದ ಕುಡಿಯುವ ನೀರಿಗಾಗಿ ಜಗತ್ತಿನಲ್ಲಿ ಕಷ್ಟ ಪಡುವವರೆಷ್ಟು ಜನರಿದ್ದಾರೆ.

ಅಲ್ಲಾಹನು ನಿಮಗೆ ನೀಡಿದ ಅನುಗ್ರಹಗಳಾದ ಮಕ್ಕಳು, ಉತ್ತಮ ಮನೆ, ಆಹಾರ, ವಾಹನ, ವಸ್ತ್ರಾಭರಣ, ವಿನೋಧ ಯಾತ್ರೆ, ಜ್ಞಾನ ಅಥವಾ ಇನ್ನಾವುದರ ಬಗ್ಗೆ ಜನರ ಮಧ್ಯೆ ಹೊಗಳುತ್ತಾ ಹೆಮ್ಮೆ ಪಡಬೇಡಿರಿ. ಬದಲಾಗಿ ಅವುಗಳನ್ನು ನೀಡಿದ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿರಿ. ಅದು ಇಲ್ಲದವರ ಮನಸ್ಸಿನಲ್ಲಿ ಅಸೆ, ಅಸೂಯೆ ಉಂಟಾಗಲು ಅವಕಾಶ ಮಾಡಿಕೊಡಬೇಡಿ. ನಿಮ್ಮ ಎಲ್ಲಾ ಅನುಗ್ರಹಗಳನ್ನು , ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಬೇಡಿರಿ. ನಿಮ್ಮ ಒಳಿತು, ವಿಜಯ, ಸಂತೋಷಗಳನ್ನು ನಿಮ್ಮ ಹತ್ತಿರದ ಬಂಧುಮಿತ್ರರೊಂದಿಗೆ ಮಾತ್ರ ಹಂಚಿಕೊಳ್ಳಿರಿ. ನಿಮ್ಮ ಅಥವಾ ಇತರರ ಯಾವುದೇ ಅನುಗ್ರಹಗಳ ಕುಂದುಕೊರತೆಗಳನ್ನು ಹುಡುಕಬೇಡಿರಿ, ಅವುಗಳನ್ನು ತುಚ್ಚವಾಗಿ ಕಾಣಬೇಡಿರಿ. ಅಲ್ಲಾಹನು ಒಂದು ಅನುಗ್ರಹವನ್ನು ಕಡಿಮೆ ನೀಡಿದ್ದರೆ ಖಂಡಿತವಾಗಿಯೂ ಇನ್ನೊಂದು ಅನುಗ್ರಹವನ್ನು ಹೆಚ್ಚಾಗಿ ನೀಡಿರುತ್ತಾನೆ.

ಪವಿತ್ರ ಕುರ್ ಆನ್ ನ ಹಲವಾರು ಸೂಕ್ತಗಳಲ್ಲಿ ಕೃತಜ್ಞತೆ (ಶುಕ್ರ್) ಮತ್ತು ಕೃತಘ್ನತೆ (ಕುಫ್ರ್) ಬಗ್ಗೆ ವಿವರಿಸಲಾಗಿದೆ. ಕೆಲವು ಸೂಕ್ತಗಳಲ್ಲಿ ಈ ಎರಡು ವಿಷಯಗಳನ್ನು ಜೊತೆಯಾಗಿ ಪ್ರಸ್ತಾಪಿಸಲಾಗಿದೆ. ಕೃತಜ್ಞತೆಯು ಸತ್ಯ ವಿಶ್ವಾ ಸದ ಲಕ್ಷಣವಾಗಿದೆ. ಸತ್ಯ ವಿಶ್ವಾಸವು ಮನುಷ್ಯನ ಭಾವನೆಗಳೊಂದಿಗೆ ಆಳವಾದ ನಂಟುಳ್ಳಂತಹ ಪ್ರಕ್ರಿಯೆಯಾಗಿದೆ. ಯಾವುದೇ ಭಾವನೆಗಳಿಲ್ಲದ ಮನುಷ್ಯನು ಯಥಾರ್ಥದಲ್ಲಿ ಮನುಷ್ಯನೇ ಅಲ್ಲ. ನಮ್ಮ ಸ್ವಂತ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕೆ ಹೃದಯದಲ್ಲಿ ಕೃತಜ್ಞತಾಭಾವ ಅತ್ಯಗತ್ಯ. ಅದು ಜೀವನದ ಸಂತೋಷದ ಅಡಿಪಾಯವೂ ಯಶಸ್ಸೂ ಆಗಿದೆ.