ಒಂದುವೇಳೆ, ಹೆಣ್ಣಿನ ಬದಲು ಗಂಡು ಗರ್ಭ ಧರಿಸುವಂತಾಗಿದ್ದರೆ ಹೇಗಿರುತ್ತಿತ್ತು?

0
3285

ಏ ಕೆ ಕುಕ್ಕಿಲ

ಒಂದುವೇಳೆ, ಹೆಣ್ಣಿನ ಬದಲು ಗಂಡು ಗರ್ಭ ಧರಿಸು ವಂತಾಗಿದ್ದರೆ ಹೇಗಿರುತ್ತಿತ್ತು?

ಅರ್ಥಶಾಸ್ತ್ರಜ್ಞರಾದ ರಿತಿಕಾ ಖೇರಾ, ಜೀನ್ ಡ್ರೇಝ ಮತ್ತು ಸಮಾಜ ವಿಜ್ಞಾನಿ ಅನ್ಮೋಲ್ ಸೊಮಾಂಚಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ಸ್ವಯಂ ಸೇವಕರು ಇತ್ತೀಚೆಗೆ ಕೈಗೊಂಡ ತಾಯಿ-ಮಗು ಸಮೀಕ್ಷೆ (ಜಚ್ಚಾ-ಬಚ್ಚಾ ಸರ್ವೇ)ಯ ಫಲಿತಾಂಶವನ್ನು ನೀವು ಗಂಭೀರವಾಗಿ ಪರಿಗಣಿಸಿದರೆ ಈ ಮೇಲಿನ ಪ್ರಶ್ನೆಯನ್ನು ಖಂಡಿತ ಕೇಳಿಯೇ ಕೇಳುತ್ತೀರಿ.

ಈ ದೇಶದ ಪ್ರಮುಖ 6 ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‍ಗಢ, ಒಡಿಸ್ಸಾ, ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್‍ಗಳ ಒಟ್ಟು 706 ಗರ್ಭಿಣಿ ಹಾಗೂ ಎದೆಹಾಲು ಉಣಿಸುವ ತಾಯಂದಿರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ 6 ರಾಜ್ಯಗಳ ಪೈಕಿ ಪ್ರತಿ ರಾಜ್ಯದ 6 ಜಿಲ್ಲೆಗಳನ್ನು ಆಯ್ಕೆ ಮಾಡಿ 60 ಅಂಗನವಾಡಿ ಕೇಂದ್ರಗಳ ಮೂಲಕ 342 ಗರ್ಭಿಣಿ ಯರು ಮತ್ತು 364 ಹಾಲು ಉಣಿಸುವ ತಾಯಂದಿರನ್ನು ಈ ಸಮೀಕ್ಷೆಗಾಗಿ ಮಾತಾಡಿಸಲಾಗಿತ್ತು. ವಿಷಾದ ಏನೆಂದರೆ, ಗರ್ಭ ಧರಿಸಿದ ಮತ್ತು ಗರ್ಭ ಧರಿಸಿಲ್ಲದ ಈ ಎರಡು ಸ್ಥಿತಿಗಳಲ್ಲಿ ಹೆಣ್ಣು ಹೇಗಿರುತ್ತಾಳೆ ಅನ್ನುವ ಬಗ್ಗೆ ಸಾಮಾನ್ಯ ಪುರುಷರಲ್ಲಿ ತಿಳುವಳಿಕೆ ತೀರಾ ಕಡಿಮೆ. ಹಾಗಂತ, ಇವೆರಡೂ ಸ್ಥಿತಿಗಳು ಪರಿಗಣನೆಗೆ ಮತ್ತು ಅಧ್ಯಯನಕ್ಕೆ ಅರ್ಹ ಅನ್ನುವ ಭಾವನೆಯೇ ಇಲ್ಲದ ಪುರುಷರ ಸಂಖ್ಯೆ ಧಾರಾಳ ಇದೆ. ಗರ್ಭ ಧರಿಸುವುದಕ್ಕಿಂತ ಮುಂಚೆ ಪತ್ನಿ ಹೇಗಿದ್ದಳೋ ಮತ್ತು ಏನೆಲ್ಲ ಸೇವೆಯನ್ನು ಮಾಡುತ್ತಿದ್ದಳೋ ಅವೆಲ್ಲವನ್ನೂ ಗರ್ಭ ಧರಿಸಿದ ಬಳಿಕವೂ ಪುರುಷ ಅಪೇಕ್ಷಿಸುತ್ತಾನೆ. ಆಕೆಯ ಮೂಡ್ ಸ್ವಿಂಗ್ ಸ್ಥಿತಿ, ದೇಹದ ಚಟುವಟಿಕೆಯಲ್ಲಿ ಆಗುತ್ತಿರುವ ವ್ಯತ್ಯಾಸ, ವಾಂತಿ, ಸುಸ್ತು, ತಲೆ ಸುತ್ತುವಿಕೆಯಂಥ ಹಲವಾರು ಸ್ಥಿತಿಗತಿಗಳ ಕುರಿತು ಪುರುಷ ಜಗತ್ತು ಓದಿಕೊಳ್ಳುವುದು ಕಡಿಮೆ. ಗರ್ಭದಾರಣೆ ಎಂಬುದನ್ನು ಪರಿಗಣಿಸತಕ್ಕ ವಿಷಯವೇ ಅಲ್ಲವೆಂಬಂತೆ ಬದುಕುವ ಪುರುಷರ ಸಂಖ್ಯೆ ಸಣ್ಣದೇನಲ್ಲ. ಇದಕ್ಕಿರುವ ಕಾರಣಗಳೇನೇ ಇರಲಿ, ಗರ್ಭಿಣಿ ಮತ್ತು ಹಾಲೂಡಿಸುವ ಮಹಿಳೆಯರು ಭಾರತದಲ್ಲಿ ಅನುಭವಿಸುವ ಸಮಸ್ಯೆ ಬಹಳ ದೊಡ್ಡದು ಅನ್ನುವುದನ್ನು ಸಮೀಕ್ಷೆ ಹೇಳುತ್ತದೆ. ನಿಜವಾಗಿ,

ಪ್ರಸವದ ಸಂದರ್ಭದಲ್ಲಿ ಸಾವಿಗೀಡಾದ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ, ನಿಜ. 2007ರಲ್ಲಿ ಭಾರತದಲ್ಲಿ ಪ್ರತಿ ಒಂದು ಲಕ್ಷ ಪ್ರಸವಗಳ ಪೈಕಿ 212 ಮಂದಿಯ ಸಾವು ಸಂಭವಿಸುತ್ತಿದ್ದರೆ ಇದು 2013ಕ್ಕಾಗುವಾಗ 167ಕ್ಕೆ ಕುಸಿದಿದೆ ಎಂಬುದೂ ನಿಜ. ಭಾರತದಲ್ಲಿ ಪ್ರತಿವರ್ಷ 44 ಸಾವಿರ ಮಂದಿ ಪ್ರಸವದ ಬಳಿಕ ಸಾವಿಗೀಡಾಗುತ್ತಾರೆ ಎಂಬ ಅಂಕಿ ಅಂಶವಿದೆ. ಅಂದಹಾಗೆ, ಈ ಸಂಖ್ಯೆ ಸಣ್ಣದೇನಲ್ಲ. ಜಗತ್ತಿನ ಒಟ್ಟು ಸಾವುಗಳ ಪೈಕಿ 20% ಸಾವು ಕೇವಲ ಭಾರತದಲ್ಲೇ ನಡೆಯುತ್ತಿದೆ. ಜಾಗತಿಕವಾಗಿ ಪ್ರತಿದಿನ ಪ್ರಸವದ ಬಳಿಕ 800 ಮಹಿಳೆಯರು ಸಾವಿಗೀಡಾಗುತ್ತಿದ್ದಾರೆ. ವಿಶೇಷ ಏನೆಂದರೆ, ಪ್ರಸವದ ಬಳಿಕದ ಸಾವಿನಲ್ಲಿ ನೈಜೀರಿಯಾ ಮೊದಲ ಸ್ಥಾನದಲ್ಲಿದ್ದರೆ ಭಾರತ ದ್ವಿತೀಯ ಸ್ಥಾನದಲ್ಲಿದೆ. ಈ ಸ್ಥಾನಗಳನ್ನು ಲೆಕ್ಕಿಸದೇ ಈ ಕ್ಷೇತ್ರದ ಬಗ್ಗೆ ನಾವು ಅಧ್ಯಯನ ನಡೆಸುವಾಗ ಮಹಿಳಾ ಜಗತ್ತಿನ ಬಗ್ಗೆ ಗಂಡು ಸಮಾಜದಲ್ಲಿ ಒಟ್ಟು ನಿರ್ಲಕ್ಷ್ಯ ಭಾವವೊಂದು ಸ್ಪಷ್ಟವಾಗಿ ಕಾಣಿಸುತ್ತದೆ. ಗರ್ಭ ಧರಿಸಿದ ಬಳಿಕ ಸುಮಾರು 13ರಿಂದ 18 ಕಿಲೋ ಗ್ರಾಂನಷ್ಟು ತೂಕ ಹೆಚ್ಚಿಸಿಕೊಳ್ಳಬೇಕಾದುದು ಆರೋಗ್ಯಪೂರ್ಣ ಮಗುವನ್ನು ಪ್ರಸವಿಸುವ ದೃಷ್ಟಿಯಿಂದ ಗರ್ಭಿಣಿಯ ಪಾಲಿಗೆ ಅಗತ್ಯ. ಆದರೆ ಇದಕ್ಕೆ ಪೌಷ್ಠಿ ಕಾಂಶಯುಕ್ತ ಆಹಾರ ಬೇಕು. ಇಂಥ ಆಹಾರವನ್ನು ಪಡೆದುಕೊಳ್ಳ ಬೇಕಾದರೆ ಸರಕಾರದ ಸೌಲಭ್ಯಗಳು ತ್ವರಿತವಾಗಿ ಗರ್ಭಿಣಿಯರಿಗೆ ತಲುಪಿಸುವ ವ್ಯವಸ್ಥೆಯಾಗಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ. ಅಂಗನವಾಡಿಯಲ್ಲಿ ಮಹಿಳೆಯರಿದ್ದರೂ ಇವರಿಗೆ ಸೌಲಭ್ಯವನ್ನು ತಲುಪಿಸುವಲ್ಲಿಂದ ಹಿಡಿದು ಸರಕಾರದ ಮತ್ತು ಆಡಳಿತ ವ್ಯವಸ್ಥೆಯ ಆಯಕಟ್ಟಿನ ಜಾಗದ ವರೆಗೆ ಪುರುಷರ ಪ್ರಾಬಲ್ಯ ಇರುವುದರಿಂದಲೋ ಏನೋ ‘ಪ್ರಧಾನಮಂತ್ರಿ ಮಾತೃವಂದನಾ ಯೋಜನೆ’ಯಾಗಲಿ ಇನ್ನಾವುದೇ ಕಾರ್ಯಕ್ರಮಗಳಾಗಲಿ ಗರ್ಭಿಣಿಯರನ್ನು ಸಮರ್ಪಕವಾಗಿ ತಲುಪುತ್ತಿಲ್ಲ. ಅಂದಹಾಗೆ,

ಕೊರತೆ ಇರುವುದು ಯೋಜನೆಗಳಲ್ಲಲ್ಲ, ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದರಲ್ಲಿ. ಗರ್ಭಧಾರಣೆಯ ಕುರಿತಂತೆ ಪುರುಷ ಅತ್ಯಂತ ಸಂವೇದನಾಶೀಲತೆಯನ್ನು ಪ್ರದರ್ಶಿಸಿದರೆ ಒಟ್ಟು ವಾತಾವರಣದಲ್ಲೇ ಬದಲಾವಣೆ ಉಂಟಾಗಬಹುದು. ಪ್ರಸವದ ದಿನದ ವರೆಗೆ ಕೂಲಿ ಕೆಲಸ ಮಾಡಿರುವುದಾಗಿ ಓರ್ವಳು ಸಮೀಕ್ಷೆ ಯಲ್ಲಿ ಹೇಳಿಕೊಂಡಿರುವುದು ಇಲ್ಲಿ ಉಲ್ಲೇಖನೀಯ. ಸಾಮಾನ್ಯವಾಗಿ,

ಮನೆಯ ಕೆಲಸ ಕಾರ್ಯಗಳನ್ನು ಮಹಿಳೆಯೇ ಮಾಡುವುದಿದೆ. ಪುರುಷ ಹೊರಗೆ ಹೋಗಿ ದುಡಿಯುವಾಗ ಮನೆಯೊಳಗಿನ ಕೆಲಸಗಳನ್ನು ಸಂಭಾಳಿಸುವುದನ್ನು ಮಹಿಳೆ ವಹಿಸಿಕೊಳ್ಳುತ್ತಾಳೆ. ಶೌಚಾಲಯ ಸ್ನಾನಗೃಹಗಳನ್ನು ಶುಚೀಕರಿಸುವುದು, ಮನೆ ಗುಡಿಸುವುದು, ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಮಕ್ಕಳನ್ನು ಶಾಲೆಗೆ ಸಿದ್ಧಗೊಳಿಸುವುದು ಇತ್ಯಾದಿಗಳನ್ನು ಕರ್ತವ್ಯವೆಂಬಂತೆ ಮಾಡುವ ಆಕೆ, ಗರ್ಭ ಧರಿಸಿದ ಬಳಿಕವೂ ಈ ಕೆಲಸಗಳಿಗೆ ವಿನಾಯಿತಿ ಸಿಗದ ಸ್ಥಿತಿಯಲ್ಲಿದ್ದಾಳೆ ಅನ್ನುವುದಕ್ಕೆ ಏನು ಕಾರಣ? ಇದು ಬರೇ ಅನಿವಾರ್ಯತೆಯೋ ಅಥವಾ ಗರ್ಭದ ಬಗ್ಗೆ ಪುರುಷರಲ್ಲಿ ಇರುವ ತಿಳುವಳಿಕೆಯ ಕೊರತೆ ಮತ್ತು ಆ ಕಾರಣವಾಗಿ ಸೃಷ್ಟಿಯಾಗಿರುವ ಅಸಡ್ಡೆಭಾವವೋ? ನಿಜವಾಗಿ,

ಮನೆಯಲ್ಲಿ ಬಾಲಪಾಠವಾಗಿ ಇಂಥವುಗಳನ್ನು ಮಕ್ಕಳಿಗೆ ಕಲಿಸುವ ಸ್ಥಿತಿ ಇರಬೇಕು. ಗರ್ಭ, ಪ್ರಸವ, ಮಕ್ಕಳ ಪರಿಪಾಲನೆ ಮತ್ತು ಈ ಎಲ್ಲ ಸಂದರ್ಭಗಳಲ್ಲಿ ಹೆಣ್ಣು ಅನುಭವಿಸುವ ವೇದನೆ-ಸಂಕಟ- ತೊಳಲಾಟಗಳನ್ನು ಬಾಲ್ಯದಲ್ಲಿಯೇ ಮಕ್ಕಳು ಅರಿತುಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಬೇಕು. ಹಾಗಂತ, ಇಂಥವು ಮಕ್ಕಳಿಗೆ ಎಷ್ಟು ಅರ್ಥವಾಗುತ್ತವೆ ಎಂಬುದು ಮುಖ್ಯ ಅಲ್ಲ. ಅಲ್ಲೊಂದು ಕುತೂಹಲದ ಹುಳವನ್ನು ಮಕ್ಕಳ ಮೆದುಳಿಗೆ ಕಳುಹಿಸುವ ಕೆಲಸ ನಡೆದರೂ ಸಾಕು, ಮುಂದೆ ಆ ಮಕ್ಕಳು ಬೆಳೆದಂತೆಲ್ಲ ಈ ಇಡೀ ಪ್ರಕ್ರಿಯೆಯ ಬಗ್ಗೆ ಕುತೂಹಲ ತಾಳುತ್ತಾರೆ. ಅಧ್ಯಯನ ನಡೆಸುತ್ತಾರೆ. ಗರ್ಭ ಮತ್ತು ಪ್ರಸವ ಇವೆರಡನ್ನೂ ಆಧರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾರೆ. ಬಹುಶಃ, ಪವಿತ್ರ ಕುರ್‍ಆನ್ ಈ ಬಗ್ಗೆ ಪರಾಮರ್ಶೆ ನಡೆಸಿರುವುದಕ್ಕೆ ಇವೂ ಕಾರಣ ಇರಬಹುದೇನೋ-

“ಅವನ/ಳ ತಾಯಿಯು ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ಅವನನ್ನು/ಳನ್ನು ತನ್ನ ಗರ್ಭದಲ್ಲಿರಿಸಿದಳು ಮತ್ತು ಅವನ/ಳ ಸ್ತನಪಾನ ಬಿಡುವುದರಲ್ಲಿ ಎರಡು ವರ್ಷಗಳು ತಗುಲಿದುವು. ಆದುದರಿಂದ ನಿನ್ನ ಮಾತಾಪಿತರಿಗೆ ಕೃತಜ್ಞತೆ ಸಲ್ಲಿಸು.”

“ಅವನ/ಳ ತಾಯಿಯು ಬಹಳ ಕಷ್ಟಪಟ್ಟು ಅವನನ್ನು ಗರ್ಭ ದಲ್ಲಿರಿಸಿದಳು ಮತ್ತು ಕಷ್ಟಪಟ್ಟೇ ಅವನನ್ನು ಹೆತ್ತಳು. ಅವನ ಗರ್ಭಾವಧಿಯಲ್ಲಿ ಮತ್ತು ಎದೆಹಾಲು ಬಿಡಿಸುವುದರಲ್ಲಿ 30 ತಿಂಗಳುಗಳು ತಗುಲಿದುವು.”

ಪವಿತ್ರ ಕುರ್‍ಆನ್ ನ ಲುಕ್ಮಾನ್ (34) ಮತ್ತು ಅಅïಕಾಫ್ (15) ಎಂಬೆರಡು ಅಧ್ಯಾಯಗಳ ವಚನಗಳಿವು. ಪವಿತ್ರ ಕುರ್‍ಆನನ್ನು ಸಣ್ಣ ಪ್ರಾಯ ದಲ್ಲೇ ಮಕ್ಕಳಿಗೆ ಕಲಿಸಲಾಗುತ್ತದೆ. ಮಕ್ಕಳ ಮದ್ರಸ ಶಿಕ್ಷಣ ಆರಂಭವಾಗುವುದೇ ಪವಿತ್ರ ಕುರ್‍ಆನನ್ನು ಅಧ್ಯಯನ ನಡೆಸುವ ಮೂಲಕ. ಹಾಗಂತ, ಪವಿತ್ರ ಕುರ್‍ಆನ್‍ನಲ್ಲಿರುವ ಎಲ್ಲವೂ ಆ ಸಣ್ಣ ಪ್ರಾಯದಲ್ಲೇ ಮಕ್ಕಳಿಗೆ ಜೀರ್ಣವಾಗುತ್ತದೆ ಎಂದಲ್ಲ. ಅದು ಸಾಧ್ಯವೂ ಇಲ್ಲ. ಆದರೆ, ಮಕ್ಕಳ ಮನಸ್ಸಿಗೆ ಒಮ್ಮೆ ಒಂದು ವಿಷಯ ತಾಕಿಬಿಟ್ಟರೆ ಅವರು ಬೆಳೆಯುತ್ತಲೇ ಆ ವಿಷಯ ಅವರೊಳಗೂ ಬೆಳೆಯುತ್ತದೆ. ಬಳಿಕ ಅದು ಕುತೂಹಲವಾಗಿ ಮಾರ್ಪಡುತ್ತದೆ ಮತ್ತು ಅಧ್ಯಯನಕ್ಕೆ ಒಳಪಡುತ್ತದೆ. ಇಂಥದ್ದೊಂದು ಪ್ರಕ್ರಿಯೆಗೆ ಮಕ್ಕಳ ಬಾಲ್ಯದಲ್ಲೇ ಆರಂಭವನ್ನು ಕೊಡುವ ಪ್ರಯತ್ನ ನಡೆದರೆ, ಗರ್ಭ ಮತ್ತು ಪ್ರಸವಗಳೆರಡೂ ಪುರುಷ ಜಗತ್ತಿನ ಅಸಡ್ಡೆಯ ಪಟ್ಟಿಯಲ್ಲಿ ಸ್ಥಾನ ಗಳಿಸುವುದು ಸುಲಭ ಅಲ್ಲ. ಅಷ್ಟಕ್ಕೂ,

ಹೆಣ್ಣಿನ ಬದಲು ಗಂಡು ಗರ್ಭ ಧರಿಸುವಂತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಅನ್ನುವ ಪ್ರಶ್ನೆಯನ್ನು ಪುರುಷ ಸಮಾಜ ಒಮ್ಮೆ ಕಲ್ಪಿಸಿಕೊಂಡರೆ ಸಿಗುವ ಉತ್ತರ ಏನಿದ್ದೀತು? ಗರ್ಭ ಮತ್ತು ತಂದೆತನದ (ತಾಯ್ತನ) ಸುತ್ತ ಆತ ಏನೆಲ್ಲ ಅಭೂತಪೂರ್ವ ಕತೆಗಳನ್ನು ಕಟ್ಟಬಹುದು? ಮಾನವ ಸೃಷ್ಟಿಯ ಈ ಅತಿವಿಶಿಷ್ಟ ಪ್ರಕ್ರಿಯೆಗೆ ಆತ ಏನೆಲ್ಲ ತಯಾರಿಗಳನ್ನು ನಡೆಸುತ್ತಿದ್ದ? ಸುತ್ತಲಿನ ಸಮಾಜವನ್ನು ಹೇಗೆ ಅದಕ್ಕೆ ಸಜ್ಜುಗೊಳಿಸುತ್ತಿದ್ದ? ಬಹುಶಃ ಉತ್ತರಗಳು ಸ್ವಾರಸ್ಯಕರವಿದ್ದೀತು. ಆಸ್ಪತ್ರೆಯ ಪ್ರಸವ ಕೋಣೆಗಳಲ್ಲಿ ವಿವಿಧ ವೈದ್ಯಕೀಯ ಉಪಕರಣಗಳು ತುಂಬಿ ತುಳುಕಿರುತ್ತಿತ್ತು. ಕಾಲಿಗೊಂದು, ಕೈಗೊಂದು ಆಳುಗಳು ಬೇಕಿರುತ್ತಿತ್ತು. ವೈದ್ಯರು 24 ಗಂಟೆ ಆತನ ಪಕ್ಕವೇ ಇರಬೇಕಿತ್ತು. ಪ್ರಸವದ ವಾರಕ್ಕಿಂತ ಮೊದಲೇ ಆಸ್ಪತ್ರೆಯಲ್ಲಿ ದಾಖಲಾಗುವುದು ಅನಿವಾರ್ಯವೆಂಬ ವಾತಾವರಣ ಸೃಷ್ಟಿಯಾಗಿರುತ್ತಿತ್ತು. ಗರ್ಭಸ್ಥನನ್ನು ಆಸ್ಪತ್ರೆಗೆ ಕೊಂಡೊಯ್ಯುವ ವಾಹನಗಳಿಗೆ ಸೈರನ್ ಅಳವಡಿಸುವುದಕ್ಕೆ ಪರ ವಾನಿಗೆ ಸಿಗುತ್ತಿತ್ತು. ಅಗತ್ಯ ಬಿದ್ದರೆ ಝೀರೋ ಟ್ರಾಫಿಕ್‍ನ ವ್ಯವಸ್ಥೆಯೂ ಆಗುತ್ತಿತ್ತು. ಪ್ರಸವವನ್ನು ಅತೀ ತುರ್ತು ಸ್ಥಿತಿಯೆಂದು ಸರಕಾರ ಘೋಷಿಸಿ ಬಿಡುತ್ತಿತ್ತಲ್ಲದೇ, ಆಸ್ಪತ್ರೆಯ ವೈದ್ಯರು ಉಳಿ ದೆಲ್ಲ ಚಿಕಿತ್ಸೆಗಳನ್ನು ಬದಿಗೊತ್ತಿ ಪ್ರಸವ ಚಿಕಿತ್ಸೆಗೆ ಮುಂದಾಗಬೇಕೆಂದು ಫರ್ಮಾನು ಹೊರಡಿಸುತ್ತಿತ್ತು. ಗರ್ಭದಾರಣೆಯ ಸಮಯದಿಂದ ಹಿಡಿದು ಮಗುವಿಗೆ ಹಾಲೂಡಿಸುವ ತನಕ ಸುಮಾರು ಎರಡು ವರ್ಷಗಳವರೆಗಾದರೂ ಸರಕಾರ ಸಂಬಳ ಸಹಿತ ರಜೆಯನ್ನು ಮಂಜೂರು ಮಾಡಿರುತ್ತಿತ್ತು. ಸರಕಾರದ ವತಿಯಿಂದಲೇ ಬಾಣಂತನನ್ನು ಉಪಚರಿಸುವುದಕ್ಕೆ ಸೇವಕರ ವ್ಯವಸ್ಥೆ ಆಗುತ್ತಿತ್ತು. ಕಾಲಕಾಲಕ್ಕೆ ಪೌಷ್ಠಿಕ ಆಹಾರಗಳನ್ನು ಮನೆ ಮನೆಗೇ ವಿತರಿಸುವ ಮತ್ತು ಇದರಲ್ಲಿ ನಿರ್ಲಕ್ಷ್ಯ ತೋರುವವರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸುವ ಕಾನೂ ನನ್ನು ಸರಕಾರ ಜಾರಿಗೆ ತರುತ್ತಿತ್ತು. ಸರಕಾರ ಬಾಣಂತನವನ್ನು ಗೌರವಿಸುವ ದೃಷ್ಟಿಯಿಂದ ವರ್ಷದಲ್ಲೊಂದು ದಿನವನ್ನು ‘ಬಾಣಂತನ ದಿನ’ ಎಂದು ಘೋಷಿಸಿ ಸರಕಾರಿ ರಜೆ ಸಾರುತ್ತಿತ್ತು. ಗರ್ಭಧಾರಣೆಯಿಂದ ತೊಡಗಿ ಪ್ರಸವದ ವರೆಗೆ ಎಲ್ಲ ಚಿಕಿತ್ಸಾ ವೆಚ್ಚಗಳನ್ನು ಸರಕಾರಿ-ಖಾಸಗಿ ಎನ್ನದೇ ಎಲ್ಲ ಆಸ್ಪತ್ರೆಗಳೂ ಉಚಿತವಾಗಿ ನಿರ್ವಹಿಸಬೇಕೆಂದು ಸರಕಾರಿ ಆದೇಶ ಹೊರಬೀಳುತ್ತಿತ್ತು. ಇನ್ನು, ಮನೆಯ ಅಲೆಮಾರಿನ ತುಂಬಾ ವಿಶೇಷ ಅಡುಗೆ ವಸ್ತುಗಳು ಮತ್ತು ಹಣ್ಣು-ಹಂಪಲುಗಳು ತುಂಬಿರುತ್ತಿತ್ತು. ಯಾವ ಹಣ್ಣಿನ ರಸ ಯಾವಾಗ ತೆಗೆದುಕೊಳ್ಳಬೇಕು ಮತ್ತು ಯಾವ ಸಂದರ್ಭದಲ್ಲಿ ವಿಶ್ರಾಂತಿ, ಯಾವ ಸಂದರ್ಭದಲ್ಲಿ ಊಟ, ಯಾವ ಸಂದರ್ಭದಲ್ಲಿ ಜನರನ್ನು ಭೇಟಿಯಾಗಬಹುದು ಇತ್ಯಾದಿಗಳನ್ನು ವಿವರಿಸುವ ಪಟ್ಟಿ ಬಾಣಂತನ ಕೋಣೆಯಲ್ಲಿ ತೂಗಾಡುತ್ತಿರುತ್ತಿತ್ತು. ಗರ್ಭಸ್ಥ ಗಂಡಿನ ಬದುಕನ್ನು ಸುಲಭಗೊಳಿಸುವುದಕ್ಕಾಗಿ ಸರಕಾರವು ಹೊಸ ತಂತ್ರಜ್ಞಾನಗಳ ಉತ್ಪಾದನೆ ಮತ್ತು ಸಂಶೋಧನೆಗೆ ಬಜೆಟ್‍ನಲ್ಲಿ ಇಂತಿಷ್ಟು ಮೊತ್ತವನ್ನು ಘೋಷಿಸಿ ಬಿಡುತ್ತಿತ್ತು. ಗರ್ಭಸ್ಥನಿಗಾಗಿ ಉಚಿತ ಬಸ್‍ಪಾಸ್ ಕೊಡುವುದು ಮತ್ತು ಆಸ್ಪತ್ರೆ, ಸರಕಾರಿ ಕಚೇರಿ, ರೇಶನ್ ಅಂಗಡಿ ಸಹಿತ ಎಲ್ಲೆಡೆಯೂ ಪ್ರತ್ಯೇಕ ಸರತಿ ಸಾಲು ಇರುತ್ತಿದ್ದುವು…

ಪಟ್ಟಿ ತುಂಬಾ ಉದ್ದ ಇದೆ..

ನಿಜವಾಗಿ, ಇದು ಊಹೆಯಂತೆ ಕಂಡರೂ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ರಂಗದ ಮುಖ್ಯ ನೀತಿ ನಿರೂಪಣೆಯ ಸ್ಥಾನಗಳಲ್ಲಿ ಪುರುಷರೇ ಅಧಿಕವಾಗಿರುವ ಇಂದಿನ ಸ್ಥಿತಿಯಲ್ಲಿ ಈ ಸಾಧ್ಯತೆಯನ್ನು ನಿರಾಕರಿಸುವ ಹಾಗಿಲ್ಲ. ಗರ್ಭಧಾರಣೆ ಮತ್ತು ಪ್ರಸವ ಇವೆರಡನ್ನೂ ಮತ್ತು ಇವೆರಡರ ನಡುವಿನ ಸಂಕಟಗಳನ್ನೂ ಅನುಭವಿಸದ ಗಂಡು ಮತ್ತು ಅನುಭವಿಸಿದ ಗಂಡು ಇಬ್ಬರೂ ಏಕಪ್ರಕಾರ ಇರಲಾರರು. ಅಂದಹಾಗೆ,

ಪ್ರಸವದ ವೇಳೆ ರಕ್ತಸ್ರಾವವಾಗಿ ಸಾವಿಗೀಡಾದ ಮಹಿಳೆಯ ಸುದ್ದಿಯನ್ನು ಓದುತ್ತಾ ಇವೆಲ್ಲ ನೆನಪಾಯಿತು.