ಉಮ್ಮು ಅಬ್ದುಲ್ಲಾ ಎಂಬ ಫೆಲೆಸ್ತೀನಿ ಮಾತೆ

0
1064

✍️ ಅಬ್ದುಲ್ ಹಮೀದ್ ನದ್ವಿ

ಸನ್ಮಾರ್ಗ ವಾರ್ತೆ

ಸಾವಿರ ಇಸ್ರೇಲ್ ಸೈನಿಕರಿಗೆ ಫೆಲೆಸ್ತೀನಿನ ಈ ಓರ್ವ ಧೀರ ಮಹಿಳೆ ಸಾಕು. ವೀರ ಹೋರಾಟಗಾರರನ್ನು ಸೃಷ್ಟಿಸುತ್ತಿರುವ ಧೀರ ಮಾತೆ. ಈ ಧೀರ ಮಾತೆಯನ್ನು ಮುಂದಿನ ತಲೆಮಾರುಗಳ ಸಾಕು ತಾಯಿ ಎಂದೇ ಕರೆಯುತ್ತಾರೆ.

ದಶಕಗಳಿಂದ ಫೆಲೆಸ್ತೀನಿ ಮುಜಾಹಿದ್‌ಗಳನ್ನು  ಬೆಂಬಲಿಸಿ ಖುದ್ಸ್ ನ ವಿಮೋಚನೆಗೆ ಸ್ವಯಂ ಸಮರ್ಪಿಸಿದ ಈ ಮಹಿಳಾ ಜ್ಯೋತಿ ಅಲ್ ಖಸ್ಸಾಮ್ ಬ್ರಿಗೇಡಿಯರ್ ಗ್ರೂಪ್‌ನ  ಕಮಾಂಡರ್ ಆಗಿದ್ದಾರೆ. ವರ್ಷಾಂತರಗಳಿಂದ ಇಸ್ರೇಲ್ ಸೇನೆಯ ಕಪ್ಪು ಪಟ್ಟಿಯಲ್ಲಿ ಈ ಮಹಿಳೆಯ ಹೆಸರಿದೆ. ಈ ಹೋರಾಟಗಾರ್ತಿ  ಇಸ್ರೇಲಿನ ವಸಾಹತುಶಾಹಿ ಸೇನೆಯ ವಿರುದ್ಧದ ಅತ್ಯಂತ ಸಂಧಿಗ್ದ ಮುನ್ನಡೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. 2006ರ ನವೆಂಬರ್ ನಲ್ಲಿ ಖಸ್ಸಾಮ್ ಬ್ರಿಗೇಡ್‌ನಲ್ಲಿ 75 ಹೋರಾಟಗಾರರಿಗೆ ಅಲ್ ನಸ್ರ್ ಮಸೀದಿಯಲ್ಲಿ ಇಸ್ರೇಲ್ ದಿಗ್ಬಂಧನ ಹೇರಿದಾಗ ಈ ಏಕೈಕ ಮಹಿಳೆ  ಆ ಗುಂಪಿನಲ್ಲಿದ್ದರು. ಉಗ್ರ ಹೋರಾಟ ನಡೆಯುವಾಗ ಇಸ್ರೇಲ್ ಸೇನೆಯ ವಿರುದ್ಧ ಹೋರಾಡಿ ರಂಗಕ್ಕಿಳಿದಿದ್ದರು. ಇಸ್ರೇಲ್ ಸೇನೆಯು ಬೈತ್ ಹನೂನ್ ನಗರದ ಮೇಲೆ ದಾಳಿ ಮಾಡಿ ಹೋರಾಟಗಾರರ ಮೇಲೆ  ದಿಗ್ಬಂಧನ ಹೇರಿದಾಗ ಹೊರಗಿದ್ದ ವಸಾಹತುಶಾಹಿ ಸೇನೆಗೆ ಈ ವೀರ ಮಹಿಳೆ ಸಿಂಹ ಸ್ವಪ್ನವಾಗಿದ್ದರು.

ಮೂರು ದಿವಸದ ದಿಗ್ಬಂಧನದಲ್ಲಿ ಬೈತ್ ಹನೂನ್ ನಗರವನ್ನು ಇಸ್ರೇಲ್ ಸೇನೆ ಸುತ್ತುವರಿದಿತ್ತು. ಆಗ ಅಲ್ ಖಸ್ಸಾಮ್  ಹೋರಾಟಗಾರರನ್ನು ರಕ್ಷಿಸಲು ಇವರು ತನ್ನ ಸಹ ಯೋಧೆಯರೊಂದಿಗೆ ಸೇರಿಕೊಂಡು ಪ್ರತೀಕಾರ ತೀರಿಸುತ್ತಿದ್ದರು. ಹತ್ತಿರದಲ್ಲೇ ಇದ್ದ ಉತ್ತರ ಗಾಝಾದ ಗಡಿಯಲ್ಲಿ ನಿಂತು ಯೋಧೆಯರ ತಂಡದೊಂದಿಗೆ 2006ರ ನವೆಂಬರ್ ಎರಡರಂದು ಮುಂಜಾನೆ ಸಾವನ್ನೇ  ಎದುರು ಹಾಕಿದ್ದರು.

ಕುರ್‌ಆನಿನ ಪ್ರತಿಗಳು ಹಾಗೂ ಫೆಲೆಸ್ತೀನಿನ ಪತಾಕೆಗಳೊಂದಿಗೆ ರ‍್ಯಾಲಿ ಹೊರಟರು. ಅವರು ಇಸ್ರೇಲ್ ಸೇನೆಯ ತಪಾಸಣಾ ಠಾಣೆಯನ್ನು ಧೈರ್ಯದಿಂದ ಬೇಧಿಸಿ ಮುಂದುವರಿದರು. ಈ ಮುನ್ನಡೆಯನ್ನು ದಮನಿಸುವ ಇಸ್ರೇಲಿನ ಪ್ರಯತ್ನವನ್ನು ಲೆಕ್ಕಿಸದೆ ಅವರು ಬೈತ್ ಹನೂನ್ ಮಸೀದಿಯ ಸಮೀಪ ತಲುಪಿದರು. ಆಗ ಈ ಮಹಿಳಾ ತಂಡವನ್ನು ಬೆದರಿಸಲು ಶಕ್ತಿ ಶಾಲಿಯಾದ ಹೊಗೆ ಬಾಂಬ್‌ಗಳನ್ನು ಪ್ರಯೋಗಿಸಿ ಅವರನ್ನು ಹೊಡೆದೋಡಿಸಲು ಸೇನೆ ಶ್ರಮಿಸಿತು. ಆ ಮಹಿಳೆಯ ಮುಂದೆ ಇವರ ಆಟ ನಡೆಯಲಿಲ್ಲ.  ಇವರು ಮಸೀದಿಯನ್ನು ಪ್ರವೇಶಿಸಿ ಅಲ್ಲಿ ದಿಗ್ಬಂಧನದಲ್ಲಿದ್ದ ಹೋರಾಟಗಾರರನ್ನು ಆ ವಸಾಹತುಶಾಹಿ ಶಕ್ತಿಗಳಿಂದ ಕಾಪಾಡಿದ್ದರು. ಪ್ರತೀಕಾರವಾಗಿ ಇಸ್ರೇಲ್ ಸೇನೆಯು ಅವರ ಮನೆಯ ಮೇಲೆ ಹಲವು ಬಾರಿ ದಾಳಿ ಮಾಡಲು ಪ್ರಯತ್ನಿಸಿ ಬಾಂಬ್ ಹಾಕಿತ್ತು. ಅದರಲ್ಲಿ ಆ ಮಹಿಳೆಯ ಸಹೋದರನ ಪತ್ನಿ ಶಹೀದ್ ಆಗಿದ್ದರು.

ಜಮೀಲಾ ಅಬ್ದುಲ್ಲಾ ತಾಹಾ ಅಶ್ಶಂತ್ವಿ(ಮಾರ್ಚ್ 15 1957- ಅಕ್ಟೋಬರ್ 19 2023) ಎಂದು ಈ ಉಕ್ಕಿನ ಮಹಿಳೆಯ ಹೆಸರು.  ಉಮ್ಮು ಅಬ್ದುಲ್ಲಾ ಎಂದು ಹೆಸರು ವಾಸಿಯಾಗಿದ್ದ ಅವರು ಫೆಲೆಸ್ತೀನೀ ಶಿಕ್ಷಕಿ, ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದವರಾಗಿದ್ದರು. 1948ರ ನಕ್ಬಾದ ಬಳಿಕ ನಾಶವಾದ ಜಿಯಾ ಗ್ರಾಮದ ಶಾಂತ್ವಿ ಕುಟುಂಬದಲ್ಲಿ 1957ರಲ್ಲಿ ಜನಿಸಿದ್ದರು. ಜಿಯಾ ಎಂಬುದು ವಿದ್ವಾಂಸರ ಕೇಂದ್ರವಾಗಿದ್ದ ಅಸ್ಕಲಾನಿನ ಸಮೀಪದ ಗ್ರಾಮವಾಗಿತ್ತು. ಹಮಾಸ್‌ನ ಪ್ರಮುಖ ಯೋಧೆಯಾಗಿದ್ದ ಅವರು ರಬಿವುಲ್ ಆಖಿರ್ 5ರಂದು ಅಂದರೆ ಇದೇ ಕಳೆದ ಅಕ್ಟೋಬರ್ ಹತ್ತೊಂಬತ್ತರಂದು ಹುತಾತ್ಮರಾದರು. ಹಮಾಸ್‌ನ ಮಹಿಳಾ ಘಟಕದ ಸ್ಥಾಪಕಿಯಾಗಿದ್ದ ಅವರು 2006ರಲ್ಲಿ ಚುನಾಯಿತರಾದ ಹಮಾಸ್‌ನ ಪ್ರಥಮ ಸಂಸದೆಯಾಗಿದ್ದರು. ಒಟ್ಟು ಸಂಸತ್ಸದಸ್ಯರ ಪಟ್ಟಿಯಲ್ಲಿ ಅವರು ಮೂರನೇಯವರಾಗಿದ್ದರು.

2004ರಲ್ಲಿ ಇಸ್ರೇಲ್ ಸೇನೆಯಿಂದ ಹತರಾದ ಹಮಾಸ್‌ನ ಸಂಸ್ಥಾಪಕ ಅಬ್ದುಲ್ ಅಝೀಝ್ ರಂತೀಸಿಯವರ ಪತ್ನಿ ಇವರು. ಹಮಾಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೊದಲು ಪಿ.ಹೆಚ್.ಡಿ. ಪದವಿ ಪಡೆದು ಗಾಝಾದ ಇಸ್ಲಾಮೀ ಯುನಿವರ್ಸಿಟಿಯಲ್ಲಿ  ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರಂತೀಸಿಯವರ ನಿಧನದ ಬಳಿಕ ಇಸ್ರೇಲಿನ ಕಣ್ಣು ಅವರ ಮೇಲಿತ್ತು. ಅವರು ಬಯಸಿದ್ದ  ಹುತಾತ್ಮತೆಯ ಪಟ್ಟ ಕೊನೆಗೂ ಅವರಿಗೆ ಲಭಿಸಿತು.
“ಅಲ್ಲಾಹನ ಮಾರ್ಗದಲ್ಲಿ ವಧಿಸಲ್ಪಟ್ಟವರನ್ನು ಮೃತರೆನ್ನಬೇಡಿರಿ. ಅವರು ಯಾಥಾರ್ಥವಾಗಿ ಜೀವಂತವಿದ್ದಾರೆ, ತಮ್ಮ ಪ್ರಭುವಿನ ಬಳಿ ಅನ್ನಾಹಾರ ಪಡೆಯುತ್ತಿದ್ದಾರೆ.” (ಆಲೆ ಇಮ್ರಾನ್: 169)