ಐಸಮ್ಮಳ ಗಂಡು ಮಗು- ಕತೆ

0
2636

ಅಕ್ಬರ್ ಅಲಿ. ಬಜ್ಪೆ

ಐಸಮ್ಮಳಿಗೆ ಗಂಡು ಮಗು ಎಂದರೆ ಬಹಳ ಪ್ರೀತಿ.
ಯಾರ ಮಕ್ಕಳನ್ನು ಕಂಡರೂ ಓಡೋಡಿ ಬಂದು ಎತ್ತಿ ಮುದ್ದಿಸುತಿದ್ದಳು.
ಹಾಗೆ ಐಸಮ್ಮಳಿಗೆ ಮಕ್ಕಳು ಇಲ್ಲ ಎಂದೇನೂ ಅಲ್ಲ. ಸುಮಯ್ಯ,ಸುಫೈರ ಎಂಬ ಹೆಸರಿನ ಎರಡು ಮುದ್ದಾದ ಹೆಣ್ಣು ಮಕ್ಕಳು ಇದ್ದವು. ಒಂದಾದರೂ ಗಂಡು ಮಗು ಬೇಕೆಂದು ದೇವರಲ್ಲಿ ಪ್ರಾರ್ಥಿಸುತಿದ್ದಳು.

ಐಸಮ್ಮಳ ಗಂಡ ರಜಾಕ್ ರಿಗೆ ಗಂಡು ಮಕ್ಕಳು ಅಂದರೆ ಅಷ್ಟಕ್ಕಷ್ಟೆ.ಯಾವಾಗಲೂ ತನ್ನ ಹೆಂಡತಿ ಐಸಮ್ಮ ದೇವರಲ್ಲಿ ಪ್ರಾರ್ಥಿಸುವಾಗ ಛೇಡಿಸುತಿದ್ದ. ಯಾಕೆ ನಿನಗೆ ಗಂಡು ಮಕ್ಕಳು, ಗಂಡು ಮಕ್ಕಳು ಈಗ ಮೊದಲಿನ ಹಾಗೆ ಇಲ್ಲ. ಹೆಣ್ಣು ಮಕ್ಕಳು ಮನೆಯ ಸಂಪತ್ತು ನಮಗೆ ಅಲ್ಲಾಹನು ಎರಡು ಮುದ್ದಾದ ಹೆಣ್ಣು ಮಕ್ಕಳನ್ನು ಕರುಣಿಸಿದ್ದಾನೆ. ಇನ್ನು ಕೂಡ ನೀನು ಬಸುರಿಯಾಗಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ನಾನು ಮೊದಲು ಖುಷಿ ಪಡುವೆ ನೀನು ಗಂಡು ಮಗುವೇ ಬೇಕೆಂದು ದೇವರಲ್ಲಿ ಹಠ ಮಾಡಬೇಡ ಈಗಿನ ಕಾಲದಲ್ಲಿ ಗಂಡು ಮಕ್ಕಳು ಮದುವೆಯಾಗಿ ಹೆಂಡತಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವವರೇ ಜಾಸ್ತಿ ಅನ್ನುತಿದ್ದ. ರಜಾಕ್ ಮಾತನಾಡುವುದು ಕೇಳಿ ಅವನ ಇಬ್ಬರೂ ಹೆಣ್ಣುಮಕ್ಕಳು ನಗುತಿದ್ದವು. ಹುಂ ಎಂದು ಅಪ್ಪನ ಮಾತಿಗೆ ತಲೆ ತೂಗುತಿದ್ದವು. ಐಸಮ್ಮ ಮಾತ್ರ ತನ್ನ ಹಠವನ್ನು ಬಿಡುತಿರಲಿಲ್ಲ. ನನಗೆ ದೇವನು ಮುದ್ದಾದ ಗಂಡು ಮಗು ಕರುಣಿಸುತ್ತಾನೆ. ನಾನು ಅವನನ್ನು ಮುದ್ದಾಗಿ ಪಂಜರದಲ್ಲಿ ಇಟ್ಟು ಗಿಣಿಯಂತೆ ಸಾಕುತ್ತೇನೆ ಎನ್ನುತ್ತಿದ್ದಳು.

ಹೀಗೆ ಕಾಲ ಕಳೆದು ಒಂದು ದಿವಸ ಐಸಮ್ಮ ಬಸುರಿಯಾಗುತ್ತಾಳೆ. ಐಸಮ್ಮಳ ಹೊಟ್ಟೆಯನ್ನು ನೋಡಿ ನೆರೆಕರೆಯ ಹೆಂಗಸರು ಹೊಟ್ಟೆ ತುಂಬಾ ಕೆಳಗೆ ಇದೆ ನಿನಗೆ ಗಂಡು ಮಗುವೇ ಹುಟ್ಟುವುದು ಮಗು ಕೆಳಗೆ ಮೇಲೆ ಮಾಡುತಿದೆಯಾ? ಕಾಲಲ್ಲಿ ಒದೆಯುತಿದೆಯಾ ಸಂಶಯವೇ ಇಲ್ಲ ನಿನಗೆ ಗಂಡು ಮಗು ಎನ್ನುತ್ತಿದ್ದರು. ಐಸಮ್ಮಳಿಗೆ ನೆರೆಕರೆಯವರು ಮಾತಾಡುವಾಗ ಮನಸಿನಲ್ಲಿ ಏನೋ ಖುಷಿ ಹೌದಲ್ಲ ನನ್ನ ಇಬ್ಬರ ಹೆಣ್ಣು ಮಕ್ಕಳ ಗರ್ಭ ದರಿಸಿದ ಸಮಯದಲ್ಲಿ ಹೀಗೆ ಇರಲಿಲ್ಲ ಈ ಮಗು ಮಾತ್ರ ನನ್ನ ಹೊಟ್ಟೆಯ ಒಳಗೆ ಆಚೆ ಈಚೆ ಹೋಗುತಿದೆ ಒದೆಯುತಿದೆ. ಸಂಶಯವೇ ಇಲ್ಲ ಇದು ಗಂಡು ಮಗು ಎಂದು ಮನಸ್ಸಿನಲ್ಲಿ ಖುಷಿ ಪಡುತಿದ್ದಳು.

ಕೆಲವು ಸಮಯದ ನಂತರ ಐಸಮ್ಮಳಿಗೆ ಹೆರಿಗೆ ನೋವು ಶುರುವಾಯಿತು ರಜಾಕ್ ಹತ್ತಿರದ ನರ್ಸಿಂಗ್ ಹೊಮ್ಗೆ ಸೇರಿಸಿದ. ರಜಾಕ್ ನಿಗೂ ಮನದಲ್ಲಿ ಭಯ ಶುರುವಾಯಿತು. ನನ್ನ ಹೆಂಡತಿ ನಿಜಕ್ಕೂ ತುಂಬಾ ಒಳ್ಳೆಯವಳು. ಅವಳು ಬಂದ ಕಷ್ಟಕ್ಕೆ ಲೆಕ್ಕವಿಲ್ಲ ನನ್ನ ಮದುವೆಯಾದ ನಂತರವೂ ತುಂಬಾ ಕಷ್ಟ ಬಂದಿದ್ದಾಳೆ. ದೇವರು ಈ ಸರಿ ಆದರೂ ಅವಳ ಬಯಕೆಯನ್ನು ಈಡೇರಿಸುವಂತಾಲು ಮನದಲ್ಲಿಯೇ ಪ್ರಾರ್ಥಿಸಿದ. ಸ್ವಲ್ಪ ಸಮಯ ಕಳೆದು ನರ್ಸ್ ಬಂದು ರಜಾಕ್ ನ ಕೈಯಲ್ಲಿ ಒಂದು ಚೀಟಿಯನ್ನು ಕೊಟ್ಟು ಈ ಮದ್ದನ್ನು ಕೂಡಲೇ ತರಲು ಹೇಳಿದಳು. ರಜಾಕ್ ಚೀಟಿಯನ್ನು ಪಡೆದವನೇ ಮದ್ದು ಗ್ಲೂಕೋಸ್ ಇನ್ನಿತರ ಹೆರಿಗೆಯ ಸಾಮಾನುಗಳನ್ನು ತಂದು ಸಿಸ್ಟರ್ ಕೈಯಲ್ಲಿ ಕೊಟ್ಟ. ಸಿಸ್ಟರ್ ಮದ್ದನ್ನು ಪಡೆದು ಎಲ್ಲಿಗೂ ಹೋಗಬೇಡಿ ಹೆರಿಗೆ ನೋವು ತುಂಬಾ ಜಾಸ್ತಿ ಇದೆ ಯಾರನ್ನಾದರೂ ಹೆಂಗಸರನ್ನು ಮನೆಯಿಂದ ಬರಲಿಕ್ಕೆ ಫೋನ್ ಮಾಡಿ ಹೇಳಿ ಎಂದು ಒಳಗೆ ಹೆರಿಗೆ ಕೋಣೆಗೆ ಓಡಿದಳು.

ಒಂದು ಅರ್ದ ಘಂಟೆಯ ನಂತರ ಸಿಸ್ಟರ್ ತುಂಬಾ ಸಂತೋಷದಿಂದ ಬಂದು ರಜಾಕ್ ನಿಗೆ ಸುದ್ದಿಯನ್ನು ಮುಟ್ಟಿಸುತ್ತಾಳೆ. ನಿಮಗೆ ಗಂಡು ಮಗು ಆಗಿದೆ ತಾಯಿ ಮಗು ಕ್ಷೇಮವಾಗಿ ಇದ್ದಾರೆ. ಡಾಕ್ಟರ್ ಬಂದು ನಿಮ್ಮ ಹತ್ತಿರ ಮಾತನಾಡುತ್ತಾರೆ. ಜನರಲ್ ವಾರ್ಡ್ ಮತ್ತು ರೂಮು ಬೇಕಾದರೆ ಬುಕ್ ಮಾಡಿ ಬನ್ನಿ ಎಂದು ಹೊರಟು ಹೋಗುತ್ತಾಳೆ. ರಜಾಕ್ ನಿಗೆ ತುಂಬಾ ಸಂತೋಷವಾಯಿತು. ತೀರ ಬಡವನಾದ ರಜಾಕ್ ತನ್ನ ಹೆಂಡತಿ ಮತ್ತು ಮಗುವನ್ನು ಜನರಲ್ ವಾರ್ಡಿಗೆ ಸಿಪ್ಟ್ ಮಾಡುತ್ತಾನೆ. ಮೂರು ದಿವಸ ದಲ್ಲಿ ಡಿಸ್ಚಾರ್ಜ್ ಮಾಡಿ ಮನೆಗೆ ಹೆಂಡತಿ ಮಗುವನ್ನು ಕರೆದು ಕೊಂಡು ಬರುತ್ತಾನೆ.

ಇತ್ತ ಐಸಮ್ಮಳಿಗೆ ಗಂಡು ಮಗು ಆದ ಖುಷಿಯಲ್ಲಿ ಸಂತಸಕ್ಕೆ ಪಾರವೇ ಇರಲಿಲ್ಲ ಹೆರಿಗೆಯಾಗಿ ಮೂರು ದಿವಸಕ್ಕೆ ಮಗುವಿನ ಮುಂಜಿಮಾಡಿಸಿಯೇ ಮನೆಗೆ ಕರೆದು ಕೊಂಡು ಬಂದಿದ್ದಳು. ಅತ್ತೆಯ ಕೈಯಿಂದ ಬೈಗುಳವನ್ನೂ ತಿಂದಿದ್ದಳು ಇಷ್ಟು ಚಿಕ್ಕ ಮಗು ಇಷ್ಟು ಬೇಗ ಮುಂಜಿ ಮಾಡ ಬೇಕಿತ್ತಾ ನಿನಗೆ ಎಂದು ಅತ್ತೆ ಬೈದಿದ್ದರು. ಐಸಮ್ಮ ಹೇಗೂ ಅತ್ತೆಯನ್ನು ಸಮಾದಾನ ಪಡಿಸಿದಳು. ಹೆರಿಗೆಯಾಗಿ ಏಳನೇ ದಿವಸಕ್ಕೆ ಮಗುವಿನ ತಲೆಗೂದಲು ಬೋಳಿಸಿ ಮಗುವಿಗೆ ಸಮೀರ್ ಎಂದು ನಾಮಕರಣ ಮಾಡಲಾಯಿತು.

ಹೀಗೆ ಕಾಲ ಕಳೆದು ಮಗುವನ್ನು ಶಾಲೆಗೆ ಸೇರಿಸುವ ಸಮಯ ಬಂತು ಐಸಮ್ಮ ತಾನು ಹೇಳಿದ ಹಾಗೆ ತನ್ನ ಮಗನನ್ನು ಪಂಜರದ ಗಿಳಿಯಂತೆ ಸಾಕಿದಳು. ಎಲ್ಲಿ ಕೆಳಗೆ ಇಟ್ಟರೆ ಇರುವೆ ಕೊಂಡು ಹೋಗ ಬಹುದೇ ತಲೆಯಲ್ಲಿ ಇಟ್ಟರೆ ಗಿಡುಗ ಕುಟ್ಟ ಬಹುದೇ ಎಂದು ಅಂಗೈಯಲ್ಲಿ ಇಟ್ಟು ತನ್ನ
ಮಗನನ್ನು ನೋಡಿದಳು. ನೋಡುವವರು ಐಸಮ್ಮಳನ್ನು ತಮಾಷೆ ಮಾಡುತಿದ್ದರು. ನೋಡು ನೀನು ಮುದ್ದಾಗಿ ಸಾಕಿದ ಗಿಣಿಯನ್ನು ಯಾರಾದರೂ ಬಂದು ಹಾರಿಸಿ ಕೊಂಡು ಹೋಗುತ್ತಾರೆ‌ ಎನ್ನುತ್ತಿದ್ದರು. ಐಸಮ್ಮ ಅವರಿಗೆ ಎಲ್ಲರಿಗೂ ಧೈರ್ಯದಿಂದ ಉತ್ತರ ಕೊಡುತ್ತಿದ್ದಳು ನನ್ನ ಮಗ ದೊಡ್ಡವನಾದರೆ ನಾನು ಹೇಳಿದಂತೆ ಕೇಳುತ್ತಾನೆ ಯಾರು ಬಂದರೂ ನನ್ನ ಗಿಣಿಯನ್ನು ಹಾರಿಸಿ ಕೊಂಡು ಹೋಗಲು ಸಾದ್ಯವಿಲ್ಲ ಎಂದು ಬೀಗುತಿದ್ದಳು.

ಹೀಗೆ ಸಮಯ ಕ್ಷಣದಲ್ಲಿ ನಿಮಿಷಗಳಲ್ಲಿ ನಿಮಿಷಗಳು ಗಂಟೆಯಲ್ಲಿ ಗಂಟೆಗಳು ದಿನಗಳಲ್ಲಿ ಓಡುತಿದ್ದವು. ಐಸಮ್ಮಳ ಮಗನೂ ದೊಡ್ಡವನಾಗುತಿದ್ದ. ತುಂಬಾ ಚರುಕಾಗಿದ್ದ ಕಲಿಯುವುದರಲ್ಲಿ ಎಲ್ಲದರಲ್ಲೂ ಮೊದಲು ಇರುತಿದ್ದ‌. ಆತನ ಗೆಳೆಯರು ತನ್ನ ಅಮ್ಮನ ಮುದ್ದಿನ ಗಿಣಿ ಎಂದು ತಮಾಷೆ ಮಾಡುತ್ತಿದ್ದರು. ಯಾವುದನ್ನೂ ತಲೆಗೆ ಹಾಕುತಿರಲಿಲ್ಲ. ಎಲ್ಲರಲ್ಲಿಯೂ ಅನ್ಯೋನ್ಯವಾಗಿ ಇರುತಿದ್ದ. ಶಾಲೆಯಲ್ಲಿ ಶಿಕ್ಷಕರ ಮುದ್ದಿನ ವಿದ್ಯಾರ್ಥಿ ಆಗಿದ್ದರೆ ಧಾರ್ಮಿಕ ಶಿಕ್ಷಣವನ್ನು ಕಲಿಸುವ ಮದ್ರಸದ ಅಧ್ಯಾಪಕರ ಪ್ರೀತಿಯ ವಿದ್ಯಾರ್ಥಿಯೂ ಆಗಿದ್ದ.

ಈ ನಡುವೆ ಐಸಮ್ಮಳ ಇಬ್ಬರು ಹೆಣ್ಣುಮಕ್ಕಳ ಮದುವೆಯೂ ಆಗಿ ಹೋಯಿತು. ಉತ್ತಮ ಗುಣನಡತೆಯ ಹೆಣ್ಣುಮಕ್ಕಳನ್ನು ಊರಿನ ಸಂಪ್ರದಾಯಸ್ಥ ಕುಟುಂಬವರು ಕೇಳಿ ಪಡೆದಿದ್ದರು. ಐಸಮ್ಮಳ ಮಗ ಸಮೀರ್ ದೊಡ್ಡವನಾಗಿದ್ದ ಹೈಸ್ಕೂಲ್ ಕಾಲೇಜು ಮುಗಿಸಿದ್ದ. ಐಸಮ್ಮಳ ಕುಟುಂಬದಲ್ಲಿ ಹೆಚ್ಚಿನವರು ಗಲ್ಫಿನಲ್ಲಿ ಇದ್ದರು. ಆದರೂ ಯಾರ ಹತ್ತಿರವೂ ಒಂದು ಪೈಸೆ ಸಹಾಯವನ್ನು ಐಸಮ್ಮಳು ಕೇಳುತಿರಲಿಲ್ಲ. ತುಂಬಾ ಸ್ವಾಭಿಮಾನಿ ಆಗಿದ್ದ ಐಸಮ್ಮ ತನ್ನ ಮಕ್ಕಳನ್ನು ಅದೇ ರೀತಿ ಬೆಳೆಸಿದ್ದಳು. ತನ್ನ ಸಂಬಂದಿಕರನ್ನು ನೋಡುವಾಗ ಐಸಮ್ಮಳಿಗೂ ತನ್ನ ಮಗನ ಬಗ್ಗೆ ಯೋಚನೆ ಆಗುತಿತ್ತು. ತನ್ನ ಮಗನೂ ಗಲ್ಫಿಗೆ ಹೋದರೆ ಅವನೂ ತನ್ನ ಸಂಬಂದಿಕರಂತೆ ಒಳ್ಳೆಯ ಹಣವನ್ನು ಸಂಪಾದಿಸುತ್ತಾನೆ. ಇಲ್ಲಿ ಎಷ್ಟು ಕಲಿತರೂ ಒಳ್ಳೆಯ ಉದ್ಯೋಗ ದೊರೆಯುತಿಲ್ಲ. ಹೀಗೆ ಯೋಚಿಸಿ ತನ್ನ ಗಂಡನಲ್ಲಿ ಅಭಿಪ್ರಾಯ ಕೇಳುತ್ತಾಳೆ.

ಗಂಡನು ತನ್ನ ಹೆಂಡತಿಯ ಮುಖ ನೋಡಿ ನಗುತ್ತಾನೆ. ನೀನು ಎನಿಸಿದ ಹಾಗೆ ಗಲ್ಫ್ ಇಲ್ಲ ಅಲ್ಲಿ ಹಣೆ ಬರಹ ಸರಿ ಇದ್ದವರು ಮಾತ್ರ ಹಣ ಮಾಡುತ್ತಾರೆ. ಇನ್ನು ನೀನು ಸಾಕಿದ ಮುದ್ದಿನ‌ ಗಿನಿಗೆ ಇಲ್ಲಿ ಒಂದು ಚೆಡ್ಡಿಯನ್ನು ತೊಳೆದೂ ಗೊತ್ತಿಲ್ಲ ಎಲ್ಲದಕ್ಕೂ ಉಮ್ಮನನ್ನು ಕರೆಯುವ ಆತ ಅಲ್ಲಿಗೆ ಹೋದರೆ ಮೂರು ದಿನದಲ್ಲಿ ಊರಿಗೆ ಬರುತ್ತಾನೆ. ನೋಡು ಎಂದು ನಗುತಿದ್ದರು.
ತನ್ನ ಗಂಡನ ಹಾಸ್ಯ ಪ್ರಜ್ಞೆಯನ್ನು ನೋಡಿದ್ದ ಐಸಮ್ಮಳಿಗೆ ಇದು ಏನೂ ದೊಡ್ಡದು ಅಲ್ಲ ಎಂದು ಭಾವಿಸುತ್ತಾಳೆ. ಡಿಗ್ರಿ ಮುಗಿಸಿದ ತನ್ನ ಮಗ ಸಮೀರ್ ನಲ್ಲಿ ತನ್ನ ಆಸೆಯನ್ನು ಹೇಳುತ್ತಾಳೆ. ನೋಡು ನಿನ್ನ ಸಂಬಂದಿಕರು ಗಲ್ಫಿಗೆ ಹೋಗಿ ಎಷ್ಟು ಸಂಪಾದಿಸಿದ್ದಾರೆ. ನೀನು ಇಲ್ಲಿ ಕಲಿತು ಕೈ ತುಂಬಾ ಸಂಪಾದನೆ ಮಾಡಲು ಸಾಧ್ಯವಿಲ್ಲ. ನಿನ್ನ ಅಪ್ಪ ದುಡಿದದ್ದು ನಮ್ಮ ಸಂಸಾರ ಸಾಗಿಸಲು ಸಾಧ್ಯವಾಗುತ್ತದೆ.

ನೀನು ಸಂಪಾದಿಸಿ ನಮ್ಮನ್ನು ನೋಡಬೇಕು ಎಂಬ ಆಸೆ ನನಗಿಲ್ಲ ಇದ್ದುದರಲ್ಲಿ ತೃಪ್ತಿಯನ್ನು ಪಡೆಯುವವರು ನಾವು. ಆದರೆ ನೀನು ನಮ್ಮಂತೆ ಆಗಬಾರದು ದೊಡ್ಡ ಮನುಷ್ಯನಾಗಬೇಕು ಬಡವರಿಗೆ ಉಪಕಾರ ಮಾಡಬೇಕು ಎಂದು ನನ್ನ ಮನಸ್ಸು ಬಯಸುತಿದೆ ಎಂದು ಐಸಮ್ಮ ನನ್ನ ಮಗನಿಗೆ ಹೇಳುತ್ತಾಳೆ.

ಒಂದು ದಿವಸವೂ ಅಮ್ಮನನ್ನು ಬಿಟ್ಟಿರಲಾರದ ಸಮೀರ್ ನಿಗೆ ತಾಯಿಯ ಮಾತು ಕೇಳಿ ಭಯವಾಗುತ್ತದೆ. ಇಲ್ಲ ಅಮ್ಮ ನಿನ್ನನ್ನು ಬಿಟ್ಟು ಒಂದು ದಿವಸವೂ ಸಂಬಂದಿಕರ ಮನೆಯಲ್ಲಿ ಕುಳಿತವನು ನಾನಲ್ಲ ನಿನ್ನನ್ನು ಬಿಟ್ಟು ಒಂದು ಕ್ಷಣವೂ ಇರಲು ನನ್ನ ಮನಸ್ಸು ಒಪ್ಪುತಿಲ್ಲ ಎನ್ನುತ್ತಾನೆ. ಹೇಗೂ ಮಗನ‌ ಮನಸನ್ನು ಸರಿ ಮಾಡಿಸಿ ಗಲ್ಫಿಗೆ ಕಳಿಸುತ್ತಾಳೆ.

ತನ್ನ ತಾಯಿಯ ಪ್ರಾರ್ಥನೆಯನ್ನು ತನ್ನ ಹೃದಯದಲ್ಲಿ ಹೊತ್ತು ತಂದವನಿಗೆ ಮೊದಲ ಇಂಟರ್ ವ್ಯೂವಿನಲ್ಲಿ ಒಳ್ಳೆಯ ಕೆಲಸ ಸಿಗುತ್ತದೆ. ಮೊದಲ ತಿಂಗಳನ್ನು ಬಹಳ ಕಷ್ಟಪಟ್ಟು ಮೇಲೆ ಹಾಕಿದವನಿಗೆ ಕೈಗೆ ಮೊದಲ ತಿಂಗಳ ಸಂಬಳ,ಊರಿನ ಕೆಲವು ಹೊಸ ಗೆಳೆಯರು ರೂಮಿನಲ್ಲಿ ಒಳ್ಳೆಯ ಸ್ನೇಹಿತರು ಹೀಗೆ ಮುಟ್ಟಿದ್ದು ಎಲ್ಲವೂ ಚಿನ್ನದಂತೆ ಭಾಸವಾಗುತ್ತದೆ. ಹೀಗೆ ಒಳ್ಳೆಯ ಕಂಪನಿಯಲ್ಲಿ ಕೆಲಸದಲ್ಲಿ ಇದ್ದವನಿಗೆ ಪ್ರೊಮೊಸನ್ ಜೊತೆಗೆ ಕೈ ತುಂಬಾ ಸಂಬಳವೂ ಸಿಗುತ್ತದೆ.

ಒಂದೆರಡು ವರ್ಷಗಳು ಉರುಳಿ ಹೋದಂತೆ ಐಸಮ್ಮಳಿಗೆ ತನ್ನ ಮಗನನ್ನು ನೋಡುವ ಆಸೆ ಆಗುತ್ತದೆ. ಒಂದು ದಿವಸ ಪೋನಿನಲ್ಲಿ ಮಗನನ್ನು ಊರಿಗೆ ಕರೆಯುತ್ತಾಳೆ. ಅಮ್ಮನ ಕರೆಗೆ ಸ್ಪಂದಿಸಿ ಮಗನು ಊರಿಗೆ ಬರುತ್ತಾನೆ. ಮಗನನ್ನು ನೋಡಿ ಐಸಮ್ಮಳಿಗೆ ಖುಷಿಯಲ್ಲಿ ಮಾತು ಹೊರಡುತಿಲ್ಲ. ತೀರ ಸಣ್ಣ ದೇಹದ ತನ್ನ ಮಗ ಸಮೀರ್ ಈಗ ಬಹಳ ಬೆಳೆದಿದ್ದಾನೆ ಉದ್ದವಾಗಿ ದಪ್ಪಗಾಗಿದ್ದಾನೆ. ಒಳ್ಳೆಯ ಮನೆತನದ ಸುಂದರಿಯಾದ ಹುಡುಗಿ ನೋಡಿ ಮದುವೆ ಮಾಡಬೇಕು ಎಂದು ಬಯಸುತ್ತಾಳೆ. ತನ್ನ ಆಸೆಯನ್ನು ಗಂಡನಲ್ಲಿ ಮತ್ತು ಮಗನಲ್ಲಿಯೂ ಹೇಳುತ್ತಾಳೆ. ಗಂಡ ರಜಾಕ್ ತನ್ನ ಹೆಂಡತಿ ಐಸಮ್ಮಳಿಗೆ ಇಷ್ಟು ಬೇಗ ಅವನಿಗೆ ಮದುವೆ ಬೇಡ ಅನ್ನುತ್ತಾನೆ. ಅವನಿಗೆ ಇನ್ನು 25 ವರ್ಷ ಆಗಿದೆ ಅಷ್ಟೇ ಇನ್ನೊಂದು ಎರಡು ಮೂರು ವರ್ಷ ಹೋಗಲಿ‌ ಅನ್ನುತ್ತಾರೆ. ಆದರೆ ಐಸಮ್ಮ ಕೇಳುವುದಿಲ್ಲ ಹೆಗೂ ಮೂರು ತಿಂಗಳು ರಜೆಯಲ್ಲಿ ಬಂದಿದ್ದಾನೆ ಇನ್ನು ಎರಡು ವರ್ಷ ಬಿಟ್ಟು ಬರುವಾಗ ನಾವು ಬದುಕಿ ಇರುತ್ತೆಯೋ ಇಲ್ಲವೊ ಎಂದು ಹೇಳುತ್ತಾಳೆ.

ಹಾಗೆ ಒಂದು ಒಳ್ಳೆಯ ಸುಂದರಿಯಾದ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣವನ್ನು ಪಡೆದ ಹುಡುಗಿಯನ್ನು ನೋಡಿ ತನ್ನ ಮಗನಿಗೆ ಐಸಮ್ಮ ಮತ್ತು ರಜಾಕ್ ಮದುವೆಯನ್ನು ಮಾಡುತ್ತಾರೆ. ಇತ್ತ ಮದುವೆಯೇ ಬೇಡವೆಂದು ಹಠ ಹಿಡಿದಿದ್ದ ಸಮೀರ್ ನಿಗೆ ಮೊದಲ ಸಲ ಹುಡುಗಿಯನ್ನು ನೋಡುವಾಗ ಅವಳ ಪ್ರೀತಿ ಪೂರ್ವಕ ಮಾತುಗಳನ್ನು ಕೇಳುವಾಗ ತುಂಬಾ ಸಂತೋಷವಾಗುತ್ತದೆ. ತಾನು ಎನಿಸಿದಂತೆ ಇಲ್ಲ ಹುಡುಗಿ ತುಂಬಾ ಒಳ್ಳೆಯವಳು ಎಂದು ಮನದಲ್ಲಿ ಭಾವಿಸಿ ಅಲ್ಲಾಹನಿಗೆ ಶುಕ್ರ್ ಅರ್ಪಿಸುತ್ತಾನೆ. ಅವಳ ಧಾರ್ಮಿಕ ಭಕ್ತಿ ಮತ್ತು ಲೋಕದ ಬಗ್ಗೆ ಅವಳಿಗೆ ಇರುವ ಸಾಮಾನ್ಯ ಜ್ಞಾನ ಎಲ್ಲದಕ್ಕೂ ಮಾರು ಹೋಗುತ್ತಾನೆ.

ಅತ್ತೆಯ ಮನೆಯಲ್ಲಿ ಬಗೆ ಬಗೆಯ ಔತಣ, ನಾದಿನಿಯರ ಚೇಷ್ಟೆಯ ಹಾಸ್ಯಭರಿತ ಮಾತುಗಳು ಅಳಿಯಂದಿರ ಮರ್ಯಾದೆ, ಹೆಂಡತಿಯ ಸಂಬಂದಿಕರ ಮನೆಯಲ್ಲಿಯ ಔತಣ ಹೀಗೆ ಎಲ್ಲಾ ವಿಷಯದಲ್ಲಿಯೂ ಬಹಳವಾಗಿ ಸಂತೋಷ ಪಡುತ್ತಾನೆ. ಮನೆಯಲ್ಲಿ ಐಸಮ್ಮಳಿಗೂ ಬಹಳ ಖುಷಿ ತನಗೆ ಮತ್ತು ತನ್ನ ಮಗನನ್ನು ಅರ್ಥ ಮಾಡುವಂತಹ ಸೊಸೆಯನ್ನು ಪಡೆದಿದಕ್ಕೆ ಬಹಳ ಹೆಮ್ಮೆ ಪಟ್ಟುಕೊಳ್ಳುತ್ತಾಳೆ.

ಇತ್ತ ಮೂರು ತಿಂಗಳ ರಜೆಯಲ್ಲಿ ಬಂದವನಿಗೆ ಉಳಿದಿರುವುದು ಎರಡೇ ತಿಂಗಳು ಅನ್ನುವಾಗ ಬಹಳ ಬೇಸರವಾಗುತ್ತದೆ. ತನ್ನ ಪ್ರೀತಿಯ ಹೆಂಡತಿಯನ್ನು ಬಿಟ್ಟು ಹೋಗುವುದಕ್ಕೆ ಮನಸ್ಸು ಕೇಳುವುದಿಲ್ಲ. ಪಾಸ್‌ಪೋರ್ಟ್ ಮಾಡಬೇಕು ಎಂದು ಭಾವಿಸಿ ಅವಸರದಲ್ಲಿ ತನ್ನ ಹೆಂಡತಿಯ ಪಾಸ್‌ಪೋರ್ಟ್ ಅನ್ನು ಮಾಡುತ್ತಾನೆ. ಮೊದಲ ಬಾರಿಗೆ ತನ್ನ ಮಗ ತನ್ನಲ್ಲಿ ಕೇಳದೆ ತನ್ನ ಹೆಂಡತಿಯ ಪಾಸ್‌ಪೋರ್ಟ್ ಅನ್ನು ಮಾಡಿದ್ದು ಐಸಮ್ಮಳಿಗೆ ಬೇಸರ ಮೂಡಿಸುತ್ತದೆ. ತನ್ನ ಮಗ ಯಾಕೊ ಇತ್ತೀಚಿನ ದಿನಗಳಲ್ಲಿ ತನ್ನ ಪಂಜರದಿಂದ ಹೊರಕ್ಕೆ ಹಾರಿ ಹೋದಂತೆ ಭಾಸವಾಗುತ್ತದೆ.ಐಸಮ್ಮಳ ಇಬ್ಬರು ಹೆಣ್ಣು ಮಕ್ಕಳು ಮನೆಗೆ ಬಂದವರು ತಾಯಿಯಲ್ಲಿ ಜಾಗ್ರತೆ ಮಾಡುವಂತೆ ಹೇಳುತ್ತಾರೆ. ನೋಡು ಇವನು ಹೆಂಡತಿಯನ್ನು ಗಲ್ಫಿಗೆ ಕರೆದು ಕೊಂಡು ಹೋದರೆ ಇಲ್ಲಿ ಮನೆಯಲ್ಲಿ ನಿಮ್ಮನ್ನು ನೋಡಲು ಯಾರು ಇದ್ದಾರೆ. ನಮ್ಮ ಅತ್ತೆಯವರು ಒಂದು ಎರಡು ದಿವಸ ಹೆಚ್ಚು ತವರು ಮನೆಯಲ್ಲಿ ಕುಳಿತು ಕೊಳ್ಳಲು ಬಿಡುವುದಿಲ್ಲ. ನೀನು ನಿನ್ನ ಮಗನನ್ನು ಸ್ವಲ್ಪ ಜಾಗ್ರತೆ ಮಾಡು.ಒಮ್ಮೆ ಆಚೆ ಕಡೆ ಹೋದರೆ ಜೀವನ ಪೂರ್ತಿ ಅವರು ಅಲ್ಲಿಯೇ ಸೆಟಲ್ ಆಗುತ್ತಾರೆ. ನಮ್ಮ ನೆರೆಮನೆಯ ಮಮ್ಮದಾಕನ ಮಗನೂ ಹಾಗೆಯೇ ಮಾಡಿದ ಅವರ ಮುಪ್ಪಿನ ಸಮಯದಲ್ಲಿ ಯಾರೂ ಮನೆಯಲ್ಲಿ ಇರಲಿಲ್ಲ.

ಕೊನೆಯ ಗಳಿಗೆಯಲ್ಲಿ ಮೊಮ್ಮಕ್ಕಳ ಕೂಡ ನಲಿಯುವುದನ್ನೂ ಸಮಯ ಕಳೆಯುವುದನ್ನೂ ನಷ್ಟ ಪಡಿಸಿಕೊಂಡರು. ಎಂದೆಲ್ಲಾ ಹೇಳಿ ತಾಯಿಯ ತಲೆಯನ್ನು ತಿನ್ನಲು ಇಬ್ಬರು ಹೆಣ್ಣು ಮಕ್ಕಳು ಶುರು ಮಾಡುತ್ತಾರೆ. ಇದನ್ನೆಲ್ಲವನ್ನೂ ತಲೆಗೆ ಹಾಕಿದ ಐಸಮ್ಮಳಿಗೆ ಇಲ್ಲ ನನ್ನ ಮಗ ಹಾಗೆ ಮಾಡುವವನು ಅಲ್ಲ ಎಂದು ಮನದಲ್ಲಿ ಭಾವಿಸುತ್ತಾಳೆ. ಒಳಗೊಳಗೆ ಭಯವೂ ಆವರಿಸುತ್ತದೆ. ನಾನು ಏನಾದರೂ ತಪ್ಪು ಮಾಡಿದೆನಾ? ನನ್ನ ಮಗ ಈಗ ಅವನ ಹೆಂಡತಿಯನ್ನು ಬಹಳವಾಗಿ ಹಂಚಿಕೊಂಡಿದ್ದಾನೆ ಈಗ ಅವನಲ್ಲಿ ಗಲ್ಫಿಗೆ ಕರೆದು ಕೊಂಡು ಹೋಗ ಬೇಡ ಎಂದರೆ ಬೇಸರ ಪಟ್ಟು ಕೊಳ್ಳುತ್ತಾನೆ. ನನ್ನ ಹೆಣ್ಣುಮಕ್ಕಳು ಹೇಳಿದ ಹಾಗೆ ಅವನು ಅವನ ಹೆಂಡತಿಯನ್ನು ಗಲ್ಫಿಗೆ ಕರೆದು ಕೊಂಡು ಹೋದರೆ ಮತ್ತೆ ನಮಗೆ ನಮ್ಮ ಮೊಮ್ಮಕ್ಕಳನ್ನು ಮುದ್ದಿಸಲು ಅವರ ಕೂಡ ನಲಿಯಲು ಸಮಯ ಕಳೆಯಲು ಸಾಧ್ಯವಾಗದು. ಮತ್ತು ಅವರು ಅಲ್ಲಿಯೇ ಸಟಲ್ ಆಗುವರು ನಮ್ಮನ್ನು ನೋಡುವವರು ಪ್ರೀತಿಸುವವರೂ ಇರಲಾರರು. ನಾನು ಮುದ್ದಾಗಿ ಸಾಕಿದ ನನ್ನ ಪಂಜರದ ಗಿಣಿ ನನ್ನ ನೆರೆಕರೆಯವರು ಹೇಳಿದ ಹಾಗಿ ಹಾರಿಸಿ ಕೊಂಡು ನನ್ನ ಸೊಸೆ ಹೋಗ ಬಹುದೇ ಮನದಲ್ಲಿ ನೂರಾರು ಆಲೋಚನೆಗಳನ್ನು ಮಾಡುತ್ತಾಳೆ. ಯಾವುದನ್ನೂ ತನ್ನ ಮಗನಲ್ಲಿ ಹೇಳುವುದಿಲ್ಲ. ಇತ್ತ ರಜಾಕ್ನಿಗೂ ತನ್ನ ಹೆಂಡತಿಯ ವಿಷಯ ಗೊತ್ತಾಗುತ್ತದೆ. ಯಾವುದನ್ನೂ ಕೇಳಲು ಹೋಗುವುದಿಲ್ಲ. ಎಲ್ಲವೂ ಜಗದೊಡೆಯನ ಇಚ್ಛೆಯಂತೆ ಎಂದು ಸುಮ್ಮನಾಗುತ್ತಾನೆ.

ಇತ್ತ ಐಸಮ್ಮಳ ಮಗನಿಗೆ ಗಲ್ಫಿಗೆ ತಿರುಗಿ ಹೋಗಲು ಸಮಯ ಹತ್ತಿರ ಬರುತ್ತದೆ. ತನ್ನ ಹೆಂಡತಿಯನ್ನು ತನ್ನ ಜೊತೆಗೆ ಕರೆದು ಕೊಂಡು ಹೋಗಲು ವೀಸಾವನ್ನು ಮಾಡುತ್ತಾನೆ. ಒಂದು ದಿವಸ ನೋಡಿ ತನ್ನ ಪ್ರೀತಿಯ ತಾಯಿಯಲ್ಲಿ ತನ್ನ ಹೆಂಡತಿಯನ್ನು ಜೊತೆಯಾಗಿ ಕರೆದು ಕೊಂಡು ಹೋಗುವ ವಿಷಯವನ್ನು ಹೇಳುತ್ತಾನೆ. ಐಸಮ್ಮ ತನ್ನ ಮಗನ ಜೊತೆ ಮಾತಾಡಲು ಇದೇ ಸಮಯ ಎಂದು ಭಾವಿಸಿ ಮಾತು ಶುರು ಮಾಡುತ್ತಾಳೆ. ಈಗ ನಿನಗೆ ಮದುವೆಯಾಗಿ ಎರಡು ತಿಂಗಳು ಕಳೆದಿದೆ ಅಷ್ಟೇ ಒಂದು ಎರಡು ವರ್ಷ ನಿನ್ನ ಹೆಂಡತಿ ನನ್ನ ಸೊಸೆ ನನ್ನ ಜೊತೆಯಲ್ಲಿಯೇ ಇರಲಿ ಆಮೇಲೆ ನೀನು ಬಂದು ಕರೆದು ಕೊಂಡು ಹೋಗು ಎನ್ನುತ್ತಾಳೆ. ಐಸಮ್ಮಳ ಮಗನಿಗೆ ತಾಯಿಯ ಮಾತು ಇಷ್ಟವಾಗುವುದಿಲ್ಲ. ತನ್ನ ತಾಯಿಯನ್ನು ಒಪ್ಪಿಸಲು ಪ್ರಯತ್ನಿಸುತ್ತಾನೆ. ತನ್ನ ಪ್ರೀತಿಯ ಹೆಂಡತಿಯನ್ನು ಬಿಟ್ಟು ಹೋಗಲು ಅವನ ಮನಸ್ಸು ಕೇಳುತಿಲ್ಲ. ಐಸಮ್ಮಳಿಗೂ ತನ್ನ ಮಗ ತನ್ನ ಮಾತು ಕೇಳುತ್ತಾನೆ ಅನ್ನುವ ನಂಬಿಕೆ. ಹೀಗೆ ಎರಡು ದಿವಸ ಮನೆಯಲ್ಲಿ ಮಾತುಕತೆ ಮುಂದುವರಿಯುತ್ತದೆ.

ಐಸಮ್ಮಳ ಸೊಸೆಯೂ ತನ್ನ ಗಂಡನನ್ನು ಬಿಟ್ಟಿರಲಾರದಷ್ಟು ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾಳೆ.ಅವಳ ಮನೆಯವರೂ ಗಂಡನ ಜೊತೆ ಹೋಗು ಮದುವೆಯಾಗಿ ಎರಡು ತಿಂಗಳಾಗಿದೆ ಅಷ್ಟೇ ಒಂದು ಆರು ತಿಂಗಳು ಗಂಡನ ಜೊತೆಯಲ್ಲಿ ಇದ್ದು ಬಾ ಎಂದು ಹೇಳುತಿದ್ದಾರೆ. ಇತ್ತ ಐಸಮ್ಮಳ ಮಗನಿಗೆ ತಲೆಯಲ್ಲಿ ನೂರಾರು ಆಲೋಚನೆಗಳು ಒಂದರ ಮೇಲೆ ಒಂದರಂತೆ ಗುಯ್ಯ್ ಗುಟುತ್ತದೆ. ಹೆಂಡತಿಯ ಸಂಬಂದಿಕರ ಮನೆಯಲ್ಲಿ ಹೆಂಡತಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಆಗಿದೆ. ಗಲ್ಪಿನಲ್ಲಿ ರೂಮ್ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇನೆ ಏನು ಮಾಡುವುದು ಎಂದು ತಲೆಯಲ್ಲಿ ನೂರಾರು ಆಲೋಚನೆಗಳನ್ನು ಇಟ್ಟು ಮಸೀದಿಯ ಕಡೆಗೆ ಹೆಜ್ಜೆಯನ್ನು ಹಾಕುತ್ತಾನೆ. ನಮಾಜು ಮುಗಿಸಿ ಕುರಾನ್ ಓದುವುದರಲ್ಲಿ ಮಗ್ನನಾಗಿದ್ದವನನ್ನು ಮಸೀದಿಯ ಕತೀಬರು ಗಮನಿಸುತ್ತಾರೆ. ಹತ್ತಿರ ಬಂದು ಗಲ್ಫಿಗೆ ಯಾವಾಗ ಹೋಗುವುದು ಎಂದು ಕೇಳುತ್ತಾರೆ. ಕುರಾನ್ ಓದಿ ಮುಗಿಸಿ ಉಸ್ತಾದರಲ್ಲಿ ಮಾತು ಕತೆಗೆ ನಿಲ್ಲುತ್ತಾನೆ. ಬಹಳ ತಣ್ಣಗಿದ್ದವನನ್ನು ಉಸ್ತಾದರು ಗಮನಿಸಿ ಮಾತಿಗೆಳೆಯುತ್ತಾರೆ.ಏನು ನಿನ್ನ ಮುಖದಲ್ಲಿ ಯಾವಾಗಲೂ ಇರುವ ಕಲೆ ಇಲ್ಲ ಬಹಳ ಡಲ್ ಆಗಿದ್ದಿ ಏನು ವಿಷಯ ಕೇಳುತ್ತಾರೆ. ಅಷ್ಟರಲ್ಲಿ ತನ್ನ ಬಿಕ್ಕಟ್ಟನ್ನು ಉಸ್ತಾದರಲ್ಲಿ ಹೇಳಲು ಶುರು ಮಾಡುತ್ತಾನೆ.

ಉಸ್ತಾದರು ಎಲ್ಲಾ ವಿಷಯ ತಿಳಿದು ಕೊಳ್ಳುತ್ತಾರೆ. ಮತ್ತು ಅವನಲ್ಲಿ ಹೇಳುತ್ತಾರೆ. ತಾಯಿಯ ವಿಷಯದಲ್ಲಿ ನಮಗೆ ನಮ್ಮ ಧರ್ಮುವು ಉಫ್ ಕೂಡ ಹೇಳ ಕೂಡದೆಂದು ಕಲಿಸಿದೆ.ಆದರೆ ಹೆಂಡತಿಯ ವಿಷಯದಲ್ಲೂ ಗಂಡನಿಗೆ ಅವಳ ಎಲ್ಲಾ ಭಾದ್ಯತೆಗಳನ್ನು ಪೂರೈಸಬೇಕೆಂದು ಹೇಳಿದೆ. ಮದುವೆಯಾದ ಮೇಲೆ ಹೆಂಡತಿಗೆ ಗಂಡನೇ ಸರ್ವಸ್ವ ಮದುವೆ ಆದ ಮೇಲೆ ಗಂಡನಿಗೂ ಹೆಂಡತಿ ಮತ್ತು ತಾಯಿಯಲ್ಲಿ ಸಮಾನವಾದ ಜವಾಬ್ದಾರಿ ಇದೆ. ಎಂದು ಬುದ್ಧಿವಾದ ಹೇಳಿ ಸರಿಯಾಗಿ ಆಲೋಚಿಸಿ ತೀರ್ಮಾನ ತೆಗೆದು ಕೊಳ್ಳಲು ಹೇಳಿ ಹೋಗುತ್ತಾರೆ.
ಉಸ್ತಾದರ ಮಾತು ಕೇಳಿ ಮನಸ್ಸನ್ನು ಸ್ವಲ್ಪ ಹಗುರ ಮಾಡಿಕೊಂಡು ಮನೆಯ ಕಡೆಗೆ ಹೆಜ್ಜೆಯನ್ನು ಹಾಕುತ್ತಾನೆ. ಇತ್ತ ಮನೆಗೆ ಬಂದವನಿಗೆ ಮನೆಯಲ್ಲಿ ತನ್ನ ಹೆಂಡತಿ ಬಾಗಿಲಿನಲ್ಲಿ ಕಾಯುತಿರುತ್ತಾಳೆ.

ಮಸೀದಿಯಿಂದ ಬರಲು ಏಕೆ ಇಷ್ಟು ತಡ ಮಾಡಿದ್ದೀರಿ. ಅಮ್ಮನಿಗೆ ಉಸಾರಿಲ್ಲ ನಿಮ್ಮ ಅಪ್ಪ ಕಾರು ತರಲು ಹೋಗಿದ್ದಾರೆ. ಬೇಗ ಹೊರಡಿ ಅಮ್ಮನನ್ನು ಡಾಕ್ಟರಲ್ಲಿಗೆ ಕರೆದು ಕೊಂಡು ಹೋಗಬೇಕು ಎನ್ನುತ್ತಾಳೆ. ಒಮ್ಮೆಲೆ ಹೆಂಡತಿ ಹೇಳಿದ ವಿಷಯ ತಿಳಿದು ಅಮ್ಮನ ಬಳಿಗೆ ಓಡುತ್ತಾನೆ. ಅಮ್ಮ ನಿನಗೆ ಏನಾಗಿದೆ ಅಮ್ಮ ನಾನು ಮಸೀದಿಗೆ ಹೋಗುವಾಗ ಉಸಾರಿಗಿದ್ದಿ ಏನಾಯಿತು ಅಮ್ಮ ಎಂದು ಒಂದೇ ಉಸಿರಿನಲ್ಲಿ ಕೇಳುತ್ತಾನೆ. ಅದಕ್ಕೆ ಐಸಮ್ಮ ಹೇಳುತ್ತಾಳೆ. ಏನೂ ಇಲ್ಲ ಸ್ವಲ್ಪ ತಲೆ ಸುತ್ತು ಬಂದಾಗೆ ಆಯಿತು ಕೈ ಕಾಲು ನಡುಗುತ್ತಿದೆ. ಬೇರೆ ಏನೂ ಇಲ್ಲ ನೀನು ಗಾಬರಿ ಆಗ ಬೇಡ. ನನಗೆ ಏನೂ ಆಗಿಲ್ಲ ಎಂದು ಹೇಳುತ್ತಾಳೆ. ಅಷ್ಟರಲ್ಲಿ ರಜಾಕ್ ಕಾರನ್ನು ತೆಗೆದು ಕೊಂಡು ಬರುತ್ತಾರೆ.
ಕಾರಿನಲ್ಲಿ ತನ್ನ ತಾಯಿಯನ್ನು ಕರೆದು ಕೊಂಡು ಸಮೀರ್ ಡಾಕ್ಟರಲ್ಲಿ ಬರುತ್ತಾನೆ. ಡಾಕ್ಟರ್ ಎಲ್ಲಾ ಟೆಸ್ಟುಗಳನ್ನು ಮಾಡಿ ಏನೂ ಆಗಿಲ್ಲ ಸ್ವಲ್ಪ ಸುಗರ್ ಜಾಸ್ತಿ ಆಗಿದೆ. ಹಾಗೆಯೇ ಬ್ಲಡ್ ಪ್ರೆಷರ್ ಜಾಸ್ತಿ ಇದೆ ಏನೂ ಟೆನ್ಸನ್ ಮಾಡಿಕೊಳ್ಳದೆ ವಿಶ್ರಾಂತಿ ಪಡೆಯಲು ಹೇಳುತ್ತಾರೆ. ಜಾಗ್ರತೆ ಮಾಡದಿದ್ದರೆ ಜೀವಕ್ಕೆ ಅಪಾಯ ಎಂದೂ ಹೇಳುತ್ತಾರೆ.

ರಜಾಕ್ನಿಗೆ ಒಮ್ಮೆಲೆ ಚಿಂತೆ ಆಗುತ್ತದೆ. ಇಲ್ಲಿ ತನಕ ನನ್ನ ಹೆಂಡತಿಗೆ ಒಂದು ರೋಗ ಇರಲಿಲ್ಲ ಇಷ್ಟು ಬೇಗ ಸುಗರ್ ಬೀಪಿ ಹೇಗೆ ಬಂತು ಡಾಕ್ಟರ್ ಅವರಲ್ಲಿ ಕೇಳುತ್ತಾರೆ. ಅದಕ್ಕೆ ಡಾಕ್ಟರ್ ಹೇಳುತ್ತಾರೆ ನೋಡಿ ರಜಾಕ್ ಈ ಸುಗರ್ ಮತ್ತು ಬೀಪಿ ಬರಲು ಸಮಯ ಬೇಕಾಗಿಲ್ಲ. ನಿಮ್ಮ ಹೆಂಡತಿ ಐಸಮ್ಮ ಸಿಕ್ಕಾ ಪಟ್ಟೆ ಟೆನ್ಸನ್ ಮೈ ಮೇಲೆ ಎಳೆದು ಕೊಂಡಿದ್ದಾರೆ. ಅವರ ಮೇಲೆ ಯಾವುದೇ ಒತ್ತಡ ಹಾಕ ಬೇಡಿ ಮನಸ್ಸು ರಿಲಾಕ್ಸ್ ಆಗಿರಲಿ. ನಾನು ಕೊಟ್ಟ ಮದ್ದನ್ನು ತಪ್ಪದೆ ಕೊಡಿ ಸಿಹಿ ವಸ್ತುಗಳನ್ನು ದೂರ ಮಾಡಿ ಎಂದು ಹೇಳಿ ಮದ್ದಿನ ಚೀಟಿಯನ್ನು ಬರೆದು ಕೊಡುತ್ತಾರೆ.

ಮದ್ದಿನ ಚೀಟಿಯನ್ನು ತನ್ನ ತಂದೆಯ ಕೈಯಿಂದ ಪಡೆದು ಕೊಂಡು ಸಮೀರ್ ಮೆಡಿಕಲ್ ಸೋಪಿನಿಂದ ಮದ್ದನ್ನು ಪಡೆದು ಕೊಂಡು ಮನೆಗೆ ಬರುತ್ತಾನೆ.
ಬಂದವನೇ ತನ್ನ ತಾಯಿಗೆ ಊಟವನ್ನು ಮಾಡಿಸಿ ಮಾತ್ರೆಗಳನ್ನು ಕೊಟ್ಟು ಮಲಗುತ್ತಾನೆ. ಇನ್ನು ಐಸಮ್ಮಳಿಗೆ ಸಿಹಿ ಮುಟ್ಟುವಂತೆ ಇಲ್ಲ. ಯಾವತ್ತೂ ಮಾತ್ರೆಗಳನ್ನು ನೋಡದೇ ಇದ್ದವಳು ಇನ್ನು ಪ್ರತೀ ದಿನ ಅಷ್ಟೊಂದು ಮಾತ್ರೆಗಳನ್ನು ಸೇವಿಸುವಂತೆ ಆಯಿತು. ಡಾಕ್ಟರ್ ಐಸಮ್ಮಳಿಗೆ ಯಾವುದನ್ನೂ ತಲೆಗೆ ಹಚ್ಚಿಕೊಳ್ಳದಂತೆ ಹೇಳಿದ್ದರು. ಸ್ವಲ್ಪ ದಿನಗಳ ವಿಶ್ರಾಂತಿಯ ಬಳಿಕ ಐಸಮ್ಮ ಚೇತರಿಕೆಯನ್ನು ಕಂಡಿದ್ದರು. ಇತ್ತ ಐಸಮ್ಮಳ ಮಗ ಗಲ್ಪಿಗೆ ಹೋಗಲು ತಯಾರಿಯನ್ನು ನಡೆಸಿದ್ದ. ಜೊತೆಗೆ ತನ್ನ ಹೆಂಡತಿಯನ್ನೂ ಕರೆದು ಕೊಂಡು ಹೋಗುವುದು ಎಂದು ನಿಶ್ಚಯಿಸಿದ. ತನ್ನ ತಾಯಿಯ ಬಳಿ ಬಂದು ವಿಷಯ ಹೇಳಿದ ಅಮ್ಮ ನೀನು ಈಗ ಸ್ವಲ್ಪ ಉಸಾರಿಗಿದ್ದೀಯ ನಾನು ನನ್ನ ಹೆಂಡತಿಯನ್ನು ಕರೆದುಕೊಂಡು ಬರುವ ಗುರುವಾರ ಗಲ್ಪಿಗೆ ಹೋಗಲು ಟಿಕೆಟ್ ಮಾಡಿದ್ದೇನೆ. ಒಂದು ಆರು ತಿಂಗಳು ಅವಳು ನನ್ನ ಹತ್ತಿರ ಇರುತ್ತಾಳೆ ಮತ್ತೆ ಊರಿಗೆ ಕಳುಹಿಸುತ್ತೇನೆ ನೀನು ಬೇಸರ ಮಾಡಬೇಡ ಹೇಳುತ್ತಾನೆ.

ಮೊದಲೇ ಜರ್ಜರಿತವಾಗಿದ್ದ ತನ್ನ ಮನಸ್ಸಿಗೆ ಐಸಮ್ಮಳಿಗೆ ಮಗನ‌ ಮಾತು ಅಷ್ಟೊಂದು ಹಿಡಿಸುವುದಿಲ್ಲ ತನಗೆ ಉಸಾರಿಲ್ಲ ಎಂದು ತಿಳಿದೂ ತನ್ನ ಮಗ ಗಲ್ಪಿಗೆ ಹೋಗಲು ಟಿಕೆಟ್ ಮಾಡಿದ್ದು ಕೇಳಿ ಬೇಸರದ ಜೊತೆಗೆ ಸ್ವಲ್ಪ ಕೋಪವನ್ನು ಮಾಡುತ್ತಾಳೆ. ರಜಾಕ್ನಿಗೂ ತನ್ನ ಮಗನನ್ನು ನೋಡಿ ಮನಸ್ಸಿಗೆ ಜಿಗುಪ್ಸೆ ಜೊತೆಗೆ ಕೋಪವು ಬರುತ್ತದೆ. ಅವರು ತನ್ನ ಮಗನ ಬಳಿ ಮೊದಲ ಬಾರಿಗೆ ಹೇಳುತ್ತಾರೆ ನೋಡು ನಿನ್ನ ತಾಯಿಯು ನಿನ್ನನ್ನು ಹೆರುವಾಗ ನನಗೆ ಗಂಡು ಮಗು ಬೇಕೆಂದು ಬಹಳ ಆಸೆ ಪಟ್ಟವಳು. ನಿನ್ನನ್ನೇ ತನ್ನ ಸರ್ವಸ್ವ ಎಂದು ಬಗೆದವಳು ಈಗ ಅವಳಿಗೆ ಉಸಾರಿಲ್ಲ ಈ ಪರಿಸ್ಥಿತಿಯಲ್ಲಿ ನಿನ್ನ ಹೆಂಡತಿಯನ್ನು ಗಲ್ಫಿಗೆ ಜೊತೆಯಲ್ಲಿ ಕರೆದು ಕೊಂಡು ಹೋಗ ಬೇಡ ನಿನ್ನ ತಾಯಿಯ ಮನಸ್ಸನ್ನು ನೋಹಿಸಬೇಡ ಎಂದು ಬುದ್ದಿ ಮಾತು ಹೇಳುತ್ತಾರೆ. ಯಾರ ಬುದ್ದಿ ಮಾತನ್ನು ಕೇಳುವುದರಲ್ಲಿ ಐಸಮ್ಮನ ಮಗ ಸಮೀರ್ ಇರಲಿಲ್ಲ ನಾನು ಅಲ್ಲಿ ರೂಮು ಬುಕ್ ಮಾಡಿದ್ದೇನೆ ಅವಳ ಮನೆಯವರಲ್ಲಿ ಕುಟುಂಬದವರಲ್ಲಿ ನನ್ನ ಹೆಂಡತಿಯನ್ನು ಜೊತೆಗೆ ಕರೆದು ಕೊಂಡು ಹೋಗುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ನನ್ನ ಮರ್ಯಾದಿಗೆ ಏನು ಆಗಬೇಡ ನನಗೆ ಈಗ ಮದುವೆ ಬೇಡ ಎಂದವನನ್ನು ನೀವೆಲ್ಲ ಸೇರಿ ಮದುವೆ ಮಾಡಿಸಿದ್ದೀರಿ ಈಗ ನನ್ನ ಹೆಂಡತಿಯನ್ನು ಜೊತೆಗೆ ಕರೆದು ಕೊಂಡು ಹೋಗುವುದರಲ್ಲಿ ಏನು ತಪ್ಪು ಎಂದು ಉಡಾಪೆಯ ಮಾತನ್ನು ಹೇಳುತ್ತಾನೆ.

ಯಾರ ಮಾತನ್ನೂ ಕೇರ್ ಮಾಡದೆ ತನ್ನ ಹೆಂಡತಿಯನ್ನು ಜೊತೆಗೆ ಕರೆದು ಕೊಂಡು ಗಲ್ಫಿಗೆ ಹೋಗುತ್ತಾನೆ. ಮಗ ಸೊಸೆಯ ಜೊತೆಗೆ ಗಲ್ಫಿಗೆ ಹೋದ ಮೇಲೆ ಐಸಮ್ಮ ಕೆಲವು ದಿನ ಯಾರ ಹತ್ತಿರವು ಮಾತನಾಡದೆ ಖಿನ್ನತೆಯಿಂದ ಇರುತ್ತಾಳೆ. ಆದರೆ ನೆರೆಮನೆಯವರ ಸಂಬದಿಕರ ಮಾತುಗಳು ಹೆಚ್ಚು ನೋವನ್ನು ಉಂಟುಮಾಡುತ್ತದೆ. ನೋಡಿದೆಯಾ ಎಂತಾ ಮಗ ತಾಯಿಗೆ ಉಸಾರಿಲ್ಲ ಎಂದು ಗೊತ್ತಿದ್ದೂ ಹೆಂಡತಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋದ ಈಗಿನ ಮಕ್ಕಳಿಗೆ ತಂದೆ ತಾಯಿ ಎಂದರೆ ಗೌರವ ಪ್ರೀತಿ ಯಾವುದೂ ಇಲ್ಲ. ಅದು ಇದು ಎಂದು ತಲೆಯನ್ನು ತಿನ್ನಲು ಪ್ರಾರಂಭಿಸುತ್ತಾರೆ. ರಜಾಕ್ನಿಗೆ ಇದೆಲ್ಲ ಹಿಡಿಸುವುದಿಲ್ಲ. ತನ್ನ ಹೆಂಡತಿಗೆ ವಿಶ್ರಾಂತಿ ಪಡೆಯಲು ಡಾಕ್ಟರ್ ಹೇಳಿದ್ದಾರೆ ನೀವು ಬಂದು ಅವಳಿಗೆ ಇನ್ನಷ್ಟು ಟೆನ್ಸನ್ ಕೊಡಬೇಡಿ ಅವಳ ಪಾಡಿಗೆ ಅವಳನ್ನು ಬಿಟ್ಟು ಹೋಗಿ ಹೇಳುತ್ತಾನೆ. ಐಸಮ್ಮಳನ್ನು ನೋಡಲು ಬಂದವರು‌ ಆಯಿತು ಮರಾಯ ನಮಗೆ ಯಾಕೆ ಬೇಕು ನಿಮ್ಮ ಉಸಾಬರಿ ನಾವು ಯಾವತ್ತೂ ನೋಡಿ ಕೊಂಡು ಮಾತಾಡುತ್ತಿರುವವಳು ಎಂದು ಬಂದೆವು ಎಂದು ಹೇಳಿ ಹೋಗುತ್ತಾರೆ.

ತನ್ನ ತಮ್ಮ ಹೆಂಡತಿಯನ್ನು ಕರೆದು ಕೊಂಡು ಹೋದದನ್ನು ನೋಡಿ ಐಸಮ್ಮಳ ಇಬ್ಬರು ಸುಮಯ್ಯ,ಸುಫೈರ ಹೆಣ್ಣುಮಕ್ಕಳು ತಮ್ಮ ತಾಯಿಯನ್ನು ಛೇಡಿಸುತ್ತಾರೆ. ಎಲ್ಲವೂ ಆದದ್ದು ನಿನ್ನಿಂದ ನಾವು ಎಷ್ಟು ಬಾರಿ ಹೇಳಿದೆವು ಅವನನ್ನು ಲೆಕ್ಕಕಿಂತ ಹೆಚ್ಚಾಗಿ ಮುದ್ದು ಮಾಡ ಬೇಡ ನಾವು ಹೇಳಿದ ಮಾತು ನೀನು ಕೇಳಿದೆಯ ಈಗ ಅನುಭವಿಸು ಹೇಳುತ್ತಾರೆ.

ರಜಾಕ್ನಿಗೆ ತನ್ನ ಹೆಣ್ಣುಮಕ್ಕಳ ಮಾತು ಕೇಳಿ ವಿಪರೀತ ಕೋಪ ಬರುತ್ತದೆ. ಅವನು ಏನು ಮಹಾ ತಪ್ಪು ಮಾಡಿದ್ದಾನೆ ಎಂದು ನೀವು ಹಾಗೆ ಹೇಳುತ್ತೀರಿ ಅವನು ಮದುವೆ ಆಗಿ ತಾನೆ ಹೆಂಡತಿಯನ್ನು ಜೊತೆಗೆ ಕರೆದು ಕೊಂಡು ಹೋಗಿದ್ದಾನೆ ಮದುವೆ ಈಗ ಆಗುವುದಿಲ್ಲ ಎಂದವನನ್ನು ನಿಮ್ಮ ತಾಯಿ ತಾನೆ ಮದುವೆ ಆಗು ಎಂದು ಒತ್ತಾಯ ಮಾಡಿದ್ದು ಇಲ್ಲಿ ನಮಗೆ ಯಾರ ಸಹಾಯವೂ ಬೇಡ ನೀವು ನಿಮ್ಮ ಗಂಡಂದಿರ ಮನೆಗೆ ಹೊರಡಿ. ಆಡಿದ ಮಾತನ್ನೇ ಮತ್ತೆ ಮತ್ತೆ ಆಡಿ ನಮ್ಮ ಜೀವ ಹಿಂಡಬೇಡಿ ಹೇಳುತ್ತಾನೆ. ಐಸಮ್ಮ ಕೆಮ್ಮುತ್ತಾ ನೀವು ನನ್ನಿಂದ ಆಗಿ ಗಲಾಟೆ ಮಾಡಬೇಡಿ ಮಕ್ಕಳೇ ನಿಮ್ಮ ಮಕ್ಕಳನ್ನು ಚೆನ್ನಾಗಿ ನೋಡಿ ಕೊಳ್ಳಿ ನೀವು ಹೊರಡಿ ನಾವು ಇಲ್ಲಿ ಆರಾಮವಾಗಿ ಇರುತ್ತೇವೆ ಹೇಳುತ್ತಾಳೆ. ಇಬ್ಬರು ಹೆಣ್ಣುಮಕ್ಕಳು ತಮ್ಮ ಮಕ್ಕಳಿಗೆ ವಸ್ತ್ರಗಳನ್ನು ತೊಡಿಸಿ ಹೊರಡುತ್ತಾರೆ.

ಇತ್ತ ಐಸಮ್ಮಳ ದೇಹದ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋಗುತ್ತದೆ. ರಜಾಕ್ ತನ್ನ ಹೆಂಡತಿಯನ್ನು ಬಹಳವಾಗಿ ಪ್ರೀತಿಸಿ ಅವಳ ಕೂಡ ಹೆಚ್ಚು ಸಮಯವನ್ನು ಕಳೆಯಲು ಪ್ರಯತ್ನಿಸುತ್ತಾನೆ. ರಜಾಕ್ ಪ್ರೀತಿಯನ್ನು ಕಂಡು ಐಸಮ್ಮ ತನ್ನ ಗಂಡನ ಮುಖವನ್ನು ನೋಡಿ ನಾನು ಏನಾದರೂ ನಿಮಗೆ ಮನಸ್ಸಿಗೆ ನೋವನ್ನು ಉಂಟು ಮಾಡಿದ್ದರೆ ನನ್ನನ್ನು ಕ್ಷಮಿಸಿ ನಾನು ಇನ್ನು ಹೆಚ್ಚು ದಿನ ಬದುಕುವುದಿಲ್ಲ ಎಂದು ನನಗೆ ಅನಿಸುತ್ತಿದೆ. ನನ್ನ ಮರಣದ ಬಳಿಕ ನೀವು ಹೆಚ್ಚು ವ್ಯತೆ ಪಡಬಾರದು ಮನಸ್ಸಿಗೆ ಹೆಚ್ಚು ಹಚ್ಚಿಕೊಳ್ಳಬಾರದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಿ ಎಂದು ಅತ್ತು ಕೊಂಡು ಹೇಳುತ್ತಾಳೆ. ರಜಾಕಿಗೂ ದುಃಖ ತಡೆಯಲು ಆಗುವುದಿಲ್ಲ. ಹುಚ್ಚು ಹುಚ್ಚಾಗಿ ಏನೂ ಮಾತಾನಾಡ ಬೇಡ ಸುಮ್ಮನೆ ಊಟ ಮಾಡಿ ಮಲಗು ನಿನಗೆ ಏನೂ ಆಗುವುದಿಲ್ಲ ಎಂದು ಹೇಳುತ್ತಾನೆ. ಮರು ದಿವಸ ಐಸಮ್ಮಳ ಸುಗರ್ ಚೆಕ್ ಮಾಡಲು ಡಾಕ್ಟರ್ ಬಳಿಗೆ ಕರೆದು ಕೊಂಡು ಹೋಗುತ್ತಾನೆ. ಡಾಕ್ಟರ್ ರಕ್ತ ಪರೀಕ್ಷೆ ಮಾಡಿ ಸುಗರ್ ತುಂಬಾ ಜಾಸ್ತಿ ಆಗಿದೆ. ನಿಮಗೆ ಮೊದಲೇ ಜಾಗ್ರತೆ ಮಾಡಿ ಹೇಳಿದ್ದೇನೆ ಸುಗರ್ ಜಾಸ್ತಿ ಆದರೆ ಕಿಡ್ನಿಗೂ ಸಮಸ್ಯೆ ಬರುತ್ತದೆ ಹೇಳುತ್ತಾರೆ.

ಇತ್ತ ಗಲ್ಫಿಗೆ ಹೋದ ಸಮೀರಿನ ಪೋನ್ ಕರೆಗಳೂ ಬರುವುದು ಕಡಿಮೆ ಆಗುತ್ತದೆ. ಐಸಮ್ಮ ದಿನದಿಂದ ದಿನಕ್ಕೆ ಕೊರಗಿ ಕೊರಗಿ ಹಾಸಿಗೆ ಹಿಡಿಯುತ್ತಾಳೆ.
ರಜಾಕ್ ತನ್ನ ಹೆಂಡತಿಯನ್ನು ಉಳಿಸಲು ಪಡಬಾರದ ಪ್ರಯತ್ನಗಳನ್ನು ಮಾಡುತ್ತಾನೆ. ಒಂದು ದಿವಸ ಬೆಳಿಗ್ಗೆ ರಜಾಕ್ ತನ್ನ ಪ್ರೀತಿಯ ಹೆಂಡತಿಯನ್ನು ಎಬ್ಬಿಸಲು ಕೋಣೆಗೆ ಹೋಗಿ ಕರೆಯುತ್ತಾನೆ. ಆದರೆ ಐಸಮ್ಮಳ ಕಡೆಯಿಂದ ಯಾವುದೂ ಚಲನೆಗಳು ಬರುವುದಿಲ್ಲ ರಜಾಕ್ ಎರಡೂ ಕೈಯಿಂದ ತನ್ನ ಹೆಂಡತಿಯನ್ನು ಎಬ್ಬಿಸುತ್ತಾನೆ ಅಷ್ಟು ಹೊತ್ತಿಗಾಗಲೇ ಐಸಮ್ಮಳ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆ.

ತಾಯಿಯ ಮರಣದ ವಾರ್ತೆ ಗಲ್ಪಿಗೆ ಹೋಗುತ್ತದೆ. ಸಮೀರ್ ಎಮರ್ಜೆನ್ಸಿ ಟಿಕೆಟ್ ಮಾಡಿಕೊಂಡು ಹೆಂಡತಿಯ ಜೊತೆ ಊರಿಗೆ ಬರುತ್ತಾನೆ.
ಸಮೀರ್ ಬಂದ ಕೂಡಲೇ ಊರಿನ ಕೆಲವು ಹಿರಿಯರು ಇನ್ನು ತಡಮಾಡುವುದು ಬೇಡ ಎಂದು ಹೇಳಿ ಮಯ್ಯತನ್ನು ಆದಷ್ಟು ಬೇಗ ದಫನ ಮಾಡಬೇಕು ಎಂದು ಹೇಳಿ ಮಸೀದಿ ಕಡೆಗೆ ಹೊತ್ತೊಯ್ಯುತ್ತಾರೆ. ರಜಾಕ್ ಕೊನೆಯ ಬಾರಿಗೆ ತನ್ನ ಪ್ರೀತಿಯ ಹೆಂಡತಿಯ ಮೇಲೆ ಮೂರು ಹಿಡಿ ಮಣ್ಣನ್ನು ಹಾಕಿ ಮನೆಯ ಕಡೆಗೆ ಬಂದು ಜಗಲಿಯಲ್ಲಿ ಕುಳಿತು ಮೇಲೆ ಆಕಾಶವನ್ನು ನೋಡಿ ಆಲೋಚನೆಯನ್ನು ಮಾಡುತ್ತಾನೆ. ನನ್ನ ಹೆಂಡತಿ ಗಂಡು ಮಗು ಬೇಕೆಂದು ಆಸೆ ಪಟ್ಟದ್ದು ತಪ್ಪೆ, ತನ್ನ ಮಗ ನಾನು ಹೇಳಿದಂತೆ ಕೇಳಬೇಕು ಎಂದು ತನ್ನ ಹೆಂಡತಿ ಬಯಸಿದ್ದು ತಪ್ಪೆ,ತನ್ನ ಮಗ ಸಮೀರ್ ಮದುವೆ ಆಗಿ ಹೆಂಡತಿಯನ್ನು ಜೊತೆಯಲ್ಲಿ ಕರೆದು ಕೊಂಡು ಹೋಗಿದ್ದು ತಪ್ಪೆ.? ಯಾವುದಕ್ಕೂ ಉತ್ತರವಿರಲಿಲ್ಲ.

ಸುಮಯ್ಯ ಮತ್ತು ಸುಫೈರಳ ಎರಡು ಗಂಡು ಮಕ್ಕಳು ಲೋಕದ ಅರಿವೇ ಇಲ್ಲದೆ ಜಗಲಿಯಲ್ಲಿ ಆಡುತಿದ್ದವು. ಸಮೀರ್ ತಿರುಗಿ ಗಲ್ಫಿಗೆ ಹೋಗಲು ತನ್ನ ಸಾಮಾನುಗಳನ್ನು ಪ್ಯಾಕ್ ಮಾಡುತಿದ್ದ. ರಜಾಕ್ ನಾವು ಯೋಚಿಸಿದಂತೆ ಯಾವುದೂ ನಡೆಯುವುದಿಲ್ಲ ಜಗದೊಡೆಯನು ಆಡಿಸಿದಂತೆ ಆಡುವ ಗೊಂಬೆಗಳು ಮಾತ್ರ ನಾವು ಎಂದು ಯೋಚಿಸುತ್ತಿರುವಾಗ ದೂರದ ಮಸೀದಿಯಿಂದ ಆಜಾನ್ ಕರೆಗಳು‌ ಮೊಳಗುತ್ತದೆ ದೀರ್ಘವಾದ ಉಸಿರನ್ನು ಎಳೆದು ರಜಾಕ್ ಮಸೀದಿಗೆ ನಮಾಜ್ ಮಾಡಲು ಹೊರಡುತ್ತಾನೆ.