ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ; ಅಬ್ದುಲ್ಲ ಕುಟ್ಟಿ

0
555

ಕಣ್ಣೂರ್, ಜೂ. 29: ಲೋಕದಲ್ಲಿಯೇ ಅತ್ಯಂತ ಶಕ್ತಿಶಾಲಿ ಪ್ರಜಾಪ್ರಭತ್ವ ಇರುವ ಆಂದೋಲನವು ತನ್ನನ್ನು ಸ್ವೀಕರಿಸಿದ್ದು ಮೂರು ಜನ್ಮದ ಸುಕೃತವಾಗಿದೆ ಎಂದು ಕಾಂಗ್ರೆಸ್‍ನಿಂದ ಬಿಜೆಪಿ ಸೇರಿದ ಮಾಜಿ ಸಂಸದ ಎ ಪಿ ಅಬ್ದುಲ್ಲಕುಟ್ಟಿ ಹೇಳಿದ್ದಾರೆ. ಮಾಡದ ತಪ್ಪಿಗೆ ಕೇರಳದ ಎಡ, ಬಲ ಪಂಥ ರಾಜಕೀಯ ಬಾಗಿಲು ಮುಚ್ಚಿ ಪಿಂಡವನ್ನು ಬಿಟ್ಟ ಓರ್ವ ಕಾರ್ಯಕರ್ತ ನಾನು. ಪ್ರಧಾನಿಯನ್ನು ಹೊಗಳಿದ್ದಕ್ಕಾಗಿ ಜಗತ್ತಿನಲ್ಲಿ ಹೊರದಬ್ಬಲ್ಪಟ್ಟ ಮೊದಲ ವ್ಯಕ್ತಿ ನಾನು. ಬಿಜೆಪಿ ಮಹಾ ಆಂದೋಲನವಾಗಿದೆ. ಇದನ್ನು ಜಗತ್ತು ಮತ್ತು ಭಾರತ ತಪ್ಪಾಗಿ ತಿಳಿದುಕೊಂಡಿದೆ. ಮಹಾತ್ಮಾಗಾಂದಿಯ ಮೌಲ್ಯಗಳನ್ನು ಎತ್ತಿಹಿಡಿಯುವ ಆಂದೋಲನ ಬಿಜೆಪಿಯಾಗಿದೆ ಎಂದು ಅಬ್ದುಲ್ಲ ಕುಟ್ಟಿ ಹೇಳಿದರು.

ಮಂಗಳೂರಿನಿಂದ ಕಣ್ಣೂರಿಗೆ ಬಂದಾಗ ಕಣ್ಣೂರ್ ಬಿಜೆಪಿ ಕಚೇರಿಯಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಿಜೆಪಿ ಸೇರ್ಪಡೆಯಾದಾಗ ತನ್ನನ್ನು ರಾಷ್ಟ್ರೀಯ ಮುಸ್ಲಿಂ ಎಂದು ಕರೆದುಕೊಂಡಿದ್ದೆ. ಆದರೆ ತಪ್ಪಾಗಿ ಅರ್ಥಮಾಡಿಕೊಂಡಿರುವ ಯುವಕರು ಟ್ರಾಲ್ ಮಾಡುತ್ತಿದ್ದಾರೆ. ಮುಹಮ್ಮದಲಿ ಜಿನ್ನಾ ದೇಶವನ್ನು ವಿಭಜಿಸುವ ರಾಜಕೀಯವನ್ನು ಮುಂದಿಟ್ಟಾಗ ಅಬ್ದುಲ್ ಕಲಾಂ ಆಝಾದ್, ಖಾನ್ ಅಬ್ದುಲ್ ಗಪ್ಫಾರ್ ಖಾನ್‍ ರಂತಹವರು ದೇಶದ ಪರಂಪರೆ, ಸಂಸ್ಕೃತಿಯ ಜೊತೆ ನಿಂತರು. ಹುಟ್ಟಿದ ಮಣ್ಣಲ್ಲಿ ಜೀವಿಸಿ ಸಾಯುವ ರಾಷ್ಟ್ರೀಯ ಮುಸ್ಲಿಮರು ಎಂದು ಅವರು ಘೋಷಿಸಿದರು. ಈ ಐತಿಹಾಸಿಕ ಘಟ್ಟವನ್ನು ಸ್ಮರಿಸಬೇಕಾದ ಸಂದರ್ಭ ಇದು ಎಂದು ಅವರು ಹೇಳಿದರು.

ಭ್ರಷ್ಟಾಚಾರ ಇಲ್ಲದ, ಸತ್ಯಸಂಧನಾದ ಆಡಳಿತಗಾರ ನರೇಂದ್ರ ಮೋದಿಯಾಗಿದ್ದಾರೆ. ಸಾಮಾಜಿಕ ಕೆಲಸಗಳನ್ನು ತಪಸ್ಸಿನಂತೆ ಮಾಡುತ್ತಾರೆ. ನರೇಂದ್ರ ಮೋದಿಯ ಗುಜರಾತ್‍ನಲ್ಲಿ ಯಾವ ಉದ್ಯಮಿಗೂ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿಲ್ಲ ಎಂದು ಅಬ್ದುಲ್ಲ ಕುಟ್ಟಿ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಮಾರಾರ್ ಪ್ರತಿಮೆಗೆ ಅವರು ಹಾರರ್ಪಿಸಿದರು. ಮೋದಿಯನ್ನು ಹೊಗಳಿದ್ದಕ್ಕಾಗಿ ಅಬ್ದುಲ್‍ ಕುಟ್ಟಿಯನ್ನು ಕಾಂಗ್ರೆಸ್ ಪಾರ್ಟಿಯಿಂದ ತೆಗೆದು ಹಾಕಲಾಗಿದೆ. ನಂತರ ಅವರು ಬಿಜೆಪಿ ನಾಯಕರೊಂದಿಗೆ ಮಾತಾಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.