ಚೆನ್ನೈ: ನಲವತ್ತು ವರ್ಷಗಳ ಬಳಿಕ ಸಿಕ್ಕ ತಾಯಿ

0
920

ಸನ್ಮಾರ್ಗ‌ ವಾರ್ತೆ

ಚೆನ್ನೈ,ನ.29: ಚೆನ್ನೈಯಲ್ಲಿ ಡೇವಿಡ್ ಕಿಲ್‍ಡೆಂಡಲ್ ನಿಲ್ಸನ್‍ರಿಗೆ 40 ವರ್ಷಗಳ ಬಳಿಕ ತನ್ನ ತಾಯಿ ಸಿಕ್ಕಿದ್ದಾರೆ. ಡೆನ್ಮಾರ್ಕಿನ ಪ್ರಜೆ ನಿಲ್ಸನ್ ಹೆಸರು ಶಾಂತ ಕುಮಾರ್. 1978 ಫೆಬ್ರುವರಿ 25ರಂದು ಜನಿಸಿದ್ದರು. ಅವರ ತಾಯಿ ಧನಲಕ್ಷ್ಮಿ ಕಾಲಿಯಾ ಮೂರ್ತಿ. ಧನಲಕ್ಷ್ಮಿ ತನ್ನ ಪತಿಯಿಂದ ದೂರವಾಗಿ ಇಬ್ಬರು ಮಕ್ಕಳೊಂದಿಗೆ ಅನಾಥಾಶ್ರಮದಲ್ಲಿದ್ದರು. ಅಲ್ಲಿಂದ ಅವರು ಹೊರ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಕ್ಕಳನ್ನು ಭೇಟಿಯಾಗಲು ಆಗಾಗ ಬಂದು ಹೋಗಬಹುದು ಎಂದು ಆಶ್ರಮದ ಅಧಿಕಾರಿಗಳು ತಿಳಿಸಿದ್ದರು. ಒಂದು ದಿನ ಧನಲಕ್ಷ್ಮಿಗೆ ನಿಮ್ಮಿಬ್ಬರ ಮಕ್ಕಳನ್ನು ವಿದೇಶಕ್ಕೆ ಕಳುಹಿಸುವ ಅಲ್ಲಿ ಅವರ ಭವಿಷ್ಯ ಉಜ್ವಲವಾಗಲಿದೆ ಎಂದು ತಿಳಿಸಲಾಗಿತ್ತು. ಆದರೆ ಮಕ್ಕಳನ್ನು ದತ್ತು ಕೊಡಲಾಗುತ್ತಿದೆ ಎಂಬುದು ಅವರಿಗೆ ಗೊತ್ತಿರಲಿಲ್ಲ.

ನೆದರ್‍ಲೆಂಡಿನ ಎನ್‍ಜಿಒ ಮಕ್ಕಳ ಸಾಗಾಟದ ವಿರುದ್ಧ ಆಂದೋಲನ ನಡೆಸುತ್ತಿದೆ. ಇದರ ಮುಖ್ಯಸ್ಥೆ ಅಂಜಲಿ ಪವಾರ್ ಹೇಳುತ್ತಾರೆ…., ಕೆಲವು ತಿಂಗಳಲ್ಲಿ ಧನಲಕ್ಷ್ಮಿ ಪತಿ ಮರಳಿ ಬಂದಿದ್ದರು. ಇಬ್ಬರಿಗೂ ಮೂರನೆ ಮಗು ಆಗಿತ್ತು. ಈ ಮಗುವನ್ನು ಯಾರಿಗೂ ಕೊಡಲು ಅವರು ಒಪ್ಪಲಿಲ್ಲ. ಅಂಜಲಿ ಪವಾರ್ ತನ್ನ ಸಹವರ್ತಿಗಳೊಂದಿಗೆ ಸೇರಿ ನಿಲ್ಸನ್‍ರ ತಾಯಿ ಧನಲಕ್ಷ್ಮಿಯನ್ನು ಹುಡುಕಲು ನೆರವಾಗಿದ್ದಾರೆ.

ಫೆಬ್ರುವರಿ 2013ರಲ್ಲಿ ನಿಲ್ಸನ್‍ರಿಗೆ ಕೆಲವು ದಾಖಲೆಗಳು ಸಿಕ್ಕಿದ್ದು, ಅದರಲ್ಲಿ ತನಗೊಬ್ಬ ತಮ್ಮನಿರುವುದು ಗೊತ್ತಾಗಿದೆ. ತನ್ನ ಸಹೋದರನ್ನು ಹುಡುಕಿ ಪತ್ತೆ ಹಚ್ಚಿದರು. ಡಿಎನ್‍ಎ ಟೆಸ್ಟ್ ಮಾಡಿಸಿದರು. ತನ್ನ ತಂದೆ-ತಾಯಿಯನ್ನು ಚೆನ್ನೈಯಲ್ಲಿ ಹುಡುಕಿದರು. ಪಲ್ಲವಾರಂ ಅನಾಥಾಲಯದ ಪಾದ್ರಿಯ ಪತ್ನಿ ಮತ್ತು ಧನಲಕ್ಷ್ಮಿಯ ಚಿತ್ರವನ್ನು ನಿಲ್ಸನ್‍ಗೆ ಕಳುಹಿಸಿದರು. ಟಿವಿ ಕಾರ್ಯಕ್ರಮದಲ್ಲಿ ನಿಲ್ಸನ್ ತಾಯಿಯನ್ನು ಹುಡುಕುತ್ತಿರುವುದು ಪ್ರಸಾರವಾಗಿತ್ತು. ಕಾರ್ಯಕ್ರಮ ನೋಡಿದ ಸಂಬಂಧಿಕರು ನಿಲ್ಸನ್ ಕುರಿತು ತಾಯಿಗೆ ತಿಳಿಸಿದ್ದಾರೆ. ನಲ್ವತ್ತು ವರ್ಷದ ಬಳಿಕ ಧನಲಕ್ಷ್ಮಿ ಮಗನ ಮುಖ ನೋಡಿದರು. ನಿಲ್ಸನ್‍ಗೆ ಆದ ಸಂತೋಷಕ್ಕೆ ಪಾರವಿರಲಿಲ್ಲ.