ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳ ಭವಿಷ್ಯ: ಹೆತ್ತವರ ಪಾತ್ರ ಏನು?

0
263

ಸನ್ಮಾರ್ಗ ವಾರ್ತೆ

ಲೇಖಕಿ: ಖದೀಜ ನುಸ್ರತ್ ಅಬುಧಾಬಿ

ಮಕ್ಕಳ ವಿದ್ಯಾಭ್ಯಾಸ, ಅವರ ಭವಿಷ್ಯವು ಯಶಸ್ವಿಯಾಗಬೇಕೆಂಬುದು ಎಲ್ಲಾ ಹೆತ್ತವರ ಆಗ್ರಹವಾಗಿರುತ್ತದೆ. ಹೆತ್ತವರು ಹಣ ಸಂಪಾದಿಸುವ, ಕಠಿಣ ಪರಿಶ್ರಮದ ಉದ್ದೇಶವು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿರುತ್ತದೆ. ತಮ್ಮ ಮಕ್ಕಳ ಬಗ್ಗೆ ಎಲ್ಲ ಹೆತ್ತವರಿಗೆ ಉತ್ತಮ ಕನಸುಗಳಿರುತ್ತದೆ. ಆ ಕನಸುಗಳು ನನಸಾಗಲು ಮಕ್ಕಳ ಪ್ರತಿಭೆ, ಕೌಶಲ್ಯ, ಆಸಕ್ತಿ, ಸೃಜನಶೀಲತೆ, ಯೋಗ್ಯತೆ, ಸಾಮರ್ಥ್ಯ ಇತ್ಯಾದಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ, ಉತ್ತೇಜನ ನೀಡುವುದು ಹೆತ್ತವರ ಜವಾಬ್ದಾರಿಯಾಗಿರುತ್ತದೆ. ವಿದ್ಯಾಭ್ಯಾಸ ಎಂಬುದು ಕೇವಲ ಅಂಕ, ಸರ್ಟಿಫಿಕೇಟ್ ಹಾಗೂ ಡಿಗ್ರಿಗಳಿಗೆ ಮೀಸಲಾಗಿರಬಾರದು. ವಿದ್ಯಾಭ್ಯಾಸ ಎಂಬುದು ಮಕ್ಕಳಿಗೆ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಕೌಟುಂಬಿಕ ಹಾಗೂ ಜೀವನದ ಇತರ ಕ್ಷೇತ್ರಗಳ ಬಗ್ಗೆ ಅರಿವು ಮೂಡಿಸುತ್ತಾ ಜೀವಿಸಲು ಕಲಿಸುವುದಾಗಿದೆ.

ಹದಿಹರೆಯದ ಪ್ರಾಯದಲ್ಲಿ ಪಠ್ಯ ಪುಸ್ತಕದ ಹೊರತಾಗಿಯೂ ಹಲವಾರು ವಿಷಯಗಳನ್ನು ಕಲಿಯುವುದು, ಹಲವಾರು
ಉತ್ತಮವಾದ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಅವರು ಕಾಲಿಡುವಂತಹ ಹೊಸ ಜಗತ್ತಿನಲ್ಲಿ ಹಲವು ರೀತಿಯ ಸ್ವಭಾವ, ಆಚಾರ, ವಿಚಾರ, ವಿಶ್ವಾಸ, ಜಾತಿ ಮತ, ರಾಷ್ಟ್ರೀಯ, ರಾಜಕೀಯ ಅಭಿಪ್ರಾಯ ವ್ಯತ್ಯಾಸಗಳಿರುವ ಜನರೊಂದಿಗೆ ಸಹಿಷ್ಣುತೆಯಿಂದ ಜೀವಿಸಲು ಕಲಿಯಬೇಕಾಗಿದೆ. ಸಮಸ್ಯೆಗಳನ್ನು ಗುರುತಿಸುವ, ಅನಿರೀಕ್ಷಿತ ಸಂದರ್ಭ, ಕಷ್ಟ ಹಾಗೂ ಸವಾಲುಗಳನ್ನು ಎದುರಿಸುವ ಮತ್ತು ಉತ್ತಮ ಪರಿಹಾರಗಳನ್ನು ಕಾರ್ಯಗತಗೊಳಿಸುವ ಜಾಣತನ ಚಿಕ್ಕಂದಿನಲ್ಲೇ ಬೆಳೆಸಬೇಕು.

ಜಗತ್ತಿನಲ್ಲಿ ಉತ್ತಮ ರೀತಿಯಲ್ಲಿ ಅಥವಾ ಕೆಟ್ಟ ರೀತಿಯಲ್ಲಿ ಪ್ರಭಾವಶಾಲಿಗಳಾದ ವ್ಯಕ್ತಿಗಳ ಚರಿತ್ರೆಯನ್ನು ಅಧ್ಯಯನ ಮಾಡಿದಾಗ ಅವರಲ್ಲಿರುವ ದೊಡ್ಡ ಸಾಮರ್ಥ್ಯವೆಂದರೆ ಜನರೊಂದಿಗೆ ಮಾತನಾಡುವ, ಸಂಭಾಷಣೆ ನಡೆಸುವ ಹಾಗೂ ನಾಯಕತ್ವ ಗುಣವಾಗಿದೆ. ನಿಮ್ಮ ಹದಿಹರೆಯದ ಮಕ್ಕಳಿಗೆ ಜನರ ಕಣ್ಣು ಮುಖ ನೋಡಿ ಆತ್ಮ ವಿಶ್ವಾಸದಿಂದ ಮಾತನಾಡುವ, ಹತ್ತು ಜನರ ಮುಂದೆ ವಿಚಾರ, ಸಿದ್ಧಾಂತವನ್ನು ಮುಂದಿಡುವ, ಸ್ವತಂತ್ರವಾಗಿ ಉದ್ಯೋಗ ಮಾಡುವಂತಹ ಕಲೆಯನ್ನು ಬೆಳೆಸಲು ಪ್ರೋತ್ಸಾಹಿಸಿರಿ. ಇನ್ನೊಬ್ಬರನ್ನು ಒಳಿತು, ವಿಜಯದೆಡೆಗೆ ಪ್ರೇರೇಪಿಸುವ, ಸ್ಪೂರ್ತಿ ನೀಡುವ, ಒಳಿತನ್ನು ಆದೇಶಿಸುವ, ಕೆಡುಕನ್ನು ವಿರೋಧಿಸುವ ನಾಯಕತ್ವದ ಗುಣಗಳನ್ನು ಕಲಿಸಿರಿ ಮತ್ತು ನಾಯಕರನ್ನಾಗಿ ಬೆಳೆಸಿರಿ. ಯಾವುದೇ ತಂಡ, ಸಂಸ್ಥೆ, ಸಂಘಟನೆಗಳ ಗುರಿಯನ್ನು ಅರಿತು ಯಶಸ್ಸಿಗಾಗಿ ಕೆಲಸ ಮಾಡುವ ಮನೋಭಾವವನ್ನು ಬೆಳೆಸಿರಿ.

ಅಂಕ ಕಡಿಮೆಯಾದರೂ, ಅನುತ್ತೀರ್ಣರಾದರೂ ನಿರಾಶರಾಗಬೇಡಿರಿ. ಅವರಿಗೆ ಉತ್ತಮ ಅಂಕ ಗಳಿಸುವ ಸಾಮರ್ಥ್ಯವಿಲ್ಲದಿದ್ದರೂ ಬೇರೆ ಹಲವಾರು ರೀತಿಯ ಪ್ರತಿಭೆಗಳಿರುತದೆ. ಜಗತ್ತಿನಲ್ಲಿ ಉತ್ತಮ ಅಂಕಗಳನ್ನು ಪಡೆಯದವರು ಕೂಡಾ ಅತ್ಯುತ್ತಮ ಸಾಧನೆಗಳನ್ನು ಮಾಡಿದ ಇತಿಹಾಸವಿದೆ. ನಿನ್ನಿಂದ ಏನೂ ಸಾಧ್ಯವಿಲ್ಲ ಎಂಬ ಮಾತಿನಿಂದ ಮಕ್ಕಳನ್ನು ನಿರುತ್ಸಾಹಗೊಳಿಸಬೇಡಿರಿ. ಬದಲಾಗಿ ನಿನ್ನಿಂದ ಎಲ್ಲವೂ ಸಾಧ್ಯವಿದೆ ಎಂಬ ಮಾತುಗಳಿಂದ ಪ್ರೋತ್ಸಾಹಿಸಿರಿ. ಎಲ್ಲ ವೃತ್ತಿಗಳಿಗೆ ಅಂಕ ಮಹತ್ವವಲ್ಲ. ವೈದ್ಯ, ಇಂಜಿನಿಯರ್ ಆಗುವವರಿಗೆ ಭಾಷಾ ವಿಷಯಗಳ ಅಂಕ ಮುಖ್ಯವಲ್ಲ. ಪತ್ರ ಕರ್ತನಾಗುವವನಿಗೆ ಗಣಿತ, ವಿಜ್ಞಾನದ ಅಂಕ ಮುಖ್ಯವಲ್ಲ. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ನೇಮಕಾತಿ ಮಾಡುವಾಗ ಅಂಕಗಳಿಗಿಂತಲೂ ಹೆಚ್ಚಾಗಿ ಸಂಭಾಷಣೆ, ಸಂವಹನ, ಮಾತನಾಡುವ ಶೈಲಿ, ಬಾಷಾ ಪಾಂಡಿತ್ಯ, ಪ್ರಸ್ತುತಿ ಪಡಿಸುವ, ಸೃಜನಶೀಲತೆ ಹಾಗೂ ಕೆಲಸಕಾರ್ಯಗಳನ್ನು ನಿರ್ವಹಣೆ ಮಾಡುವಂತಹ ಕೌಶಲ್ಯಗಳನ್ನು ಪರಿಗಣಿಸಲಾಗುತ್ತದೆ.

ಪ್ರತಿಯೊಬ್ಬರಿಗೂ ಜೀವನದಲ್ಲಿ ಹಲವು ರೀತಿಯ ಉತ್ತಮ ಕನಸು, ಗುರಿ ಇದ್ದಾಗ ಮಾತ್ರ ಅದಕ್ಕೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಯಾವುದೇ ಕೆಲಸ ಮಾಡದೆ ಏನೂ ಸಂಭವಿಸಲು ಸಾಧ್ಯವಿಲ್ಲ. ಇಂದು ನಾವು ಕಾಣುತ್ತಿರುವ, ಅನುಭವಿಸುತ್ತಿರುವ ಜಗತ್ತಿನ ಎಲ್ಲಾ ಉಪಕರಣ, ಅಭಿವೃದ್ಧಿಗಳು, ಅದ್ಭುತಗಳು, ಕಟ್ಟಡ, ಕಂಪೆನಿ ಹಾಗೂ ನಾವು ಉಪಯೋಗಿಸುತ್ತಿರುವ ತಂತ್ರಜ್ಞಾನ, ಯಾವುದೇ ವಸ್ತುಗಳಾಗಲಿ ಕೆಲವು ವರ್ಷಗಳ ಹಿಂದೆ ಯಾರದೋ ಮನಸ್ಸಿನಲ್ಲಿ ಮೂಡಿದ ಕನಸಾಗಿತ್ತು. ಬೇರೆ ಬೇರೆ ಜನರ ಚಿಂತನೆ, ಆಲೋಚನೆ, ಆಶಯ, ಪ್ರವೃತ್ತಿಗಳ ಫಲಿತಾಂಶವಾಗಿದೆ.

ಪ್ರತಿಯೊಬ್ಬರಿಗೂ ಹಲವು ವಿಷಯಗಳಲ್ಲಿ ವಿವಿಧ ರೀತಿಯ ಜ್ಞಾನ, ಸಾಮರ್ಥ್ಯ, ಆಸಕ್ತಿ, ಇಷ್ಟ, ಒಲವು ಅಭಿಪ್ರಾಯಗಳಿರುತ್ತದೆ. ಹತ್ತು ಹದಿಮೂರು ವರ್ಷ ಪ್ರಾಯವಾಗುವಾಗ ನಿಮ್ಮ ಮಕ್ಕಳು ಯಾವ ವಿಷಯವನ್ನು ಇಷ್ಟ ಪಡುತ್ತಾರೆ, ಯಾವುದನ್ನೂ ಹೆಚ್ಚು ಆಸಕ್ತಿಯಿಂದ ಸುಲಭವಾಗಿ ಕಲಿಯುತ್ತಾರೆಂಬುದನ್ನು ಪರಿಗಣಿಸುತ್ತ ಅವರನ್ನು ಪ್ರೋತ್ಸಾಹಿಸುತ್ತಾ ಸೂಕ್ತ ಮಾಹಿತಿಯನ್ನು ನೀಡಬೇಕು. ನಿಮ್ಮ ಮಕ್ಕಳಲ್ಲಿ ಒಂದಕ್ಕಿಂತ ಹೆಚ್ಚು ವಿಷಯಗಳಲ್ಲಿ ಆಸಕ್ತಿ, ಕೌಶಲ್ಯವನ್ನು ಬೆಳೆಸಲು ಪ್ರಯತ್ನಿಸಿ. ಕೆಲವೊಮ್ಮೆ ಅವರು ಕಲಿತ ಕೋರ್ಸ್ ಗೆ ಉದ್ಯೋಗ ಸಿಗದಿದ್ದಾಗ ಬೇರೆ ಯಾವುದಾದರೂ ಉದ್ಯೋಗವನ್ನು ಮಾಡುವಂತಹ ಕೌಶಲ್ಯವಿರಬೇಕು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ನಂತರ ಅವರು ಏನು ಆಯ್ಕೆ ಮಾಡುತ್ತಾರೋ ಅದು ಅವರು ಭವಿಷ್ಯದಲ್ಲಿ ಏನಾಗಬೇಕೆಂಬುದನ್ನು ತೀರ್ಮಾನಿಸುತ್ತದೆ. ಮಕ್ಕಳು ಸಣ್ಣ ಪ್ರಾಯದಲ್ಲೇ ಸ್ವಇಚ್ಛೆಯಿಂದ ವೃತ್ತಿಯನ್ನು ಆಯ್ಕೆ ಮಾಡುವಂತಹ ಅವಕಾಶವನ್ನು ಕಲ್ಪಿಸಿರಿ.

ಕಂಪ್ಯೂಟರ್ ನ ಮೂಲಭೂತ ಜ್ಞಾನ ಆಧುನಿಕ ಕಾಲದಲ್ಲಿ ಎಲ್ಲ ಹುದ್ದೆಯಲ್ಲೂ ಅಗತ್ಯವಾಗಿದೆ. ಹೊಸ ಹೊಸ ತಂತ್ರಜ್ಞಾನಗಳನ್ನು ಬೇಗನೆ ಕಲಿಯುವ , ಹೊಂದಿಕೊಳ್ಳುವ, ಅಳವಡಿಸುವಂತಹ ಜಾಣತಣವನ್ನು ಮಕ್ಕಳಿಗೆ ಪ್ರೋತ್ಸಾಹಿಸಿರಿ. ನಿಮ್ಮ ಮಕ್ಕಳಿಗೆ ತಾವು ಮಾಡುವ ಎಲ್ಲಾ ಕೆಲಸಗಳಲ್ಲಿ ಸತ್ಯ ಸಂಧತೆ ಹಾಗೂ ಪ್ರಾಮಾಣಿಕತೆಯನ್ನು ಕಲಿಸಿರಿ. ಶಿಕ್ಷಕರಾಗುವವರು ವಿದ್ಯಾರ್ಥಿಗಳೊಂದಿಗೆ ಸಹನೆಯಿಂದ ವರ್ತಿಸುವ, ಮಕ್ಕಳ ಮನವೊಲಿಸುವ, ಅವರ ಪ್ರತಿಭೆಗಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವಂತಹ ಗುಣಗಳನ್ನು ಬೆಳೆಸಬೇಕು, ವೈದ್ಯರಾಗುವ ಕನಸುಗಳಿರುವ ಮಕ್ಕಳಿಗೆ ರೋಗಿಯ ಸೇವೆ ಹಾಗೂ ಶುಶ್ರೂಷೆಯ ಮಹತ್ವವವನ್ನು ಮನವರಿಕೆ ಮಾಡಿರಿ. ಯಾವುದೇ ಕೆಲಸವನ್ನು ಮಾಡುವಾಗ ಹಣ ಸಂಪಾದಿಸುವುದು ಮಾತ್ರ ದುಡಿಯುವ ಉದ್ದೇಶವಾಗದಿರಲಿ.

ಬಿಕಾಮ್ ಕಲಿತವರಿಗೆಲ್ಲರಿಗೂ ಲೆಕ್ಕಿಗನಾಗಲು ಸಾಧ್ಯವಾಗುವುದಿಲ್ಲ, ಇಂಜಿನೀಯರ್ ಕಲಿತವರೆಲ್ಲರೂ ಆ ಹುದ್ದೆ ಮಾಡಲು ಅರ್ಹರಾಗಿರುವುದಿಲ್ಲ. ಮಕ್ಕಳ ಅರ್ಹತೆ, ಸಾಮರ್ಥ್ಯ, ಅಭಿರುಚಿಯನ್ನು ಪರೀಕ್ಷಿಸದೆ ಕೋರ್ಸನ್ನು ಆಯ್ಕೆ ಮಾಡುವುದೇ ಇದಕ್ಕೆ ಕಾರಣ. ಅಗತ್ಯ ಕಂಡುಬಂದಾಗ ಆಪ್ಟಿಟುಡ್ ಟೆಸ್ಟ್ (Aptitude test) ಮಾಡಿಸಿರಿ ಮತ್ತು ವಿದ್ಯಾಭ್ಯಾಸ ಕ್ಷೇತ್ರದ ಪರಿಣತರಿಂದ ಸರಿಯಾದ ಮಾರ್ಗದರ್ಶನ ಪಡೆಯಿರಿ. ಮಾರುಕಟ್ಟೆಯಲ್ಲಿ ಯಾವ ಉದ್ಯೋಗಕ್ಕೆ ಎಷ್ಟು ಸಂಭಳ ಸಿಗುತ್ತದೆ, ಯಾವ ಉದ್ಯೋಗಕ್ಕೆ ಹೆಚ್ಚು ಪ್ರತಿಷ್ಠೆ ಇದೆ ಎಂಬುದನ್ನು ನೋಡಬೇಡಿರಿ. ನಿಮ್ಮ ಸಂಬಂಧಿಕರೊಬ್ಬರು ಯಾವುದೋ ಕೋರ್ಸ್ ಮಾಡಿ ಉತ್ತಮ ಹುದ್ದೆಯಲ್ಲಿದ್ದಾರೆಂದು ಅದನ್ನೇ ನಿಮ್ಮ ಮಕ್ಕಳಿಗೆ ಕಲಿಯಲು ಒತ್ತಾಯ ಮಾಡಬೇಡಿರಿ. ಮಕ್ಕಳಿಗೆ ಯಾವ ವಿಷಯದಲ್ಲಿ ಸಾಮರ್ಥ್ಯ, ಆಸಕ್ತಿ, ಅಭಿರುಚಿಯಿದೆಯೆಂಬುದು ಇಲ್ಲಿ ಮುಖ್ಯವಾಗಿರುತ್ತದೆ.

ನಿಮ್ಮ ಮಕ್ಕಳನ್ನು ನಿಮ್ಮ ಕುಟುಂಬದ ಉತ್ತಮ ಸಂಭಳ ಪಡೆಯುವ ಉದ್ಯೋಗಿಯನ್ನಾಗಿ ಮಾಡುವುದರ ಬದಲಾಗಿ ಅವರ ಜೇಬಿನ ಹಣದಿಂದ ಸಮಾಜದಲ್ಲಿ ಸಾವಿರಾರು ಜನರಿಗೆ ಪ್ರಯೋಜನವಾಗುವಂತಹ ಆಸೆಯನ್ನಿರಿಸಿರಿ. ದರಿದ್ರ ಆಲೋಚನೆ, ಚಿಂತನೆಗಳಿಂದ ದೂರವಿರಲು ಕಲಿಸಿರಿ. ಪಠ್ಯ ಪುಸ್ತಕದ ಹೊರತಾಗಿಯೂ ಹಲವಾರು ಹೊಸಹೊಸ ವಿಷಯಗಳನ್ನು ಕಲಿಯಲು, ಸಂಶೋಧನೆ, ಆವಿಷ್ಕಾರಗಳನ್ನು ಮಾಡುವಂತಹ ಕನಸುಗಳ ಬೀಜವನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಿರಿ. ಅದರಿಂದ ಉಂಟಾಗುವ ಸೋಲು, ನಷ್ಟ, ಅಪಾಯಗಳನ್ನು ಆತ್ಮ ಸಾಕ್ಷಿ, ಆತ್ಮವಿಶ್ವಾಸದೊಂದಿಗೆ ಎದುರಿಸಲು ಕಲಿಸಿರಿ. ಜೀವನದಲ್ಲಿ ಎದುರಾಗುವ ಸೋಲು, ನಷ್ಟಗಳನ್ನು ಹೇಗೆ ಎದುರಿಸುವುದು ಎಂದು ಕಲಿಯುವುದು ಮುಖ್ಯವಾಗಿದೆ. ಮನುಷ್ಯತ್ವ, ಮನಃಸ್ಸಾಕ್ಷಿ ನಷ್ಟವಾಗುತ್ತಿರುವ ಈ ಕಾಲದಲ್ಲಿ ಸಮಾಜದಲ್ಲಿ ಉತ್ತಮ ಮನುಷ್ಯರಾಗಿ ಜೀವಿಸಲು ಕಲಿಸಿರಿ. ಹಣ ಮತ್ತು ವಿಜಯವೆಂಬುದು ರಾತ್ರಿ ಹಗಲಾಗುವುದರೊಳಗೆ ಸಂಭವಿಸುವುದಿಲ್ಲ. ಅದು ನಿರಂತರ ಪರಿಶ್ರಮ, ಸಹನೆ, ನೋವು, ಪ್ರಾರ್ಥನೆಯ ಮೂಲಕ ಕ್ರಮೇಣ ಬರುತ್ತದೆ.