ಲಾಕ್‌ಡೌನ್ ಸಂಕಷ್ಟ: ಉಡುಪಿ ದ.ಕನ್ನಡ ಜಿಲ್ಲೆಗಳಲ್ಲಿ ಅಕ್ಷಯಪಾತ್ರಾ ವತಿಯಿಂದ ಬಿಸಿಯೂಟ ಹಾಗೂ ಕಿಟ್ ವಿತರಣೆ

0
376

ಸನ್ಮಾರ್ಗ ವಾರ್ತೆ

ಮಂಗಳೂರು,ಮೇ.9: ಕೋವಿಡ್‌-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಜನತೆಗೆ ಬಿಸಿಯೂಟ ಹಾಗೂ ಆಹಾರದ ಕಿಟ್‌ಗಳನ್ನು ಅಕ್ಷಯಪಾತ್ರೆ ಫೌಂಡೇಷನ್‌ ವಿತರಿಸುತ್ತಿದೆ.

ಏ.28ರವರೆಗೆ ಅಕ್ಷಯಪಾತ್ರೆ ಫೌಂಡೇಷನ್‌ ವತಿಯಿಂದ ವಲಸೆ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು, ನಿರ್ಗತಿಕರು ಹಾಗೂ ಇತರರಿಗೆ ದೇಶಾದ್ಯಂತ 3.01 ಕೋಟಿ ಊಟ ವಿತರಿಸಿದೆ.

ಕರ್ನಾಟಕ ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಕರ್ನಾಟಕದಲ್ಲಿ ಅಕ್ಷಯಪಾತ್ರೆ ವತಿಯಿಂದ 95 ಲಕ್ಷ ಊಟವನ್ನು ಒದಗಿಸಲಾಗಿದೆ. ಇದರಲ್ಲಿ 8.30 ಲಕ್ಷ ಬಿಸಿಯೂಟ ಹಾಗೂ 2.40 ಲಕ್ಷ ಆಹಾರ ಕಿಟ್‌ಗಳು ಸೇರಿವೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ದುರ್ಬಲ ವರ್ಗದವರಿಗೆ ಇನ್ಫೋಸಿಸ್‌ ಫೌಂಡೇಷನ್‌, ಅಡೋಬ್‌, ವಿಶ್ವ ಕೊಂಕಣಿ ಕೇಂದ್ರ, ಮೆಸ್ಕಾಂನಂತಹ ದಾನಿಗಳ ನೆರವಿನೊಂದಿಗೆ 2.15 ಲಕ್ಷ ಮೌಲ್ಯದ 5141 ಆಹಾರ ಕಿಟ್‌ಗಳನ್ನು ಹಾಗೂ ಉಡುಪಿಯಲ್ಲೇ 21 ಸಾವಿರ ಮೌಲ್ಯದ 500 ಆಹಾರ ಧಾನ್ಯಗಳ ಕಿಟ್‌ ವಿತರಿಸಲಾಗಿದೆ.

ಪ್ರತಿ ಕಿಟ್‌ನಲ್ಲಿ ಅಡುಗೆ ಸಾಮಗ್ರಿಗಳನ್ನೊಳಗೊಂಡ ತಯಾರಿಸಲು 42 ವಸ್ತುಗಳನ್ನು ಹೊಂದಿವೆ. ಮಂಗಳೂರಿನಲ್ಲಿ ವಿತರಿಸಿದ ಕಿಟ್‌ಗಳಲ್ಲಿ ಅಕ್ಕಿ, ತೊಗರಿಬೇಳೆ, ಎಣ್ಣೆ, ಸಾಂಬಾರ ಪದಾರ್ಥಗಳು, ಸಾಂಬಾರ್‌ ಮತ್ತು ರಸಂ ಪೌಡರ್‌, ವಿವಿಧ ತರಕಾರಿಗಳು ಸೇರಿವೆ ಎಂದು ಮಂಗಳೂರು ಅಕ್ಷಯಪಾತ್ರೆ ಅಧ್ಯಕ್ಷ ಕಾರುಣ್ಯಸಾಗರ ದಾಸ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಮಂಗಳೂರಿನಲ್ಲಿ 2004ರ ಬಳಿಕ ಶಾಲೆಗಳಿಗೆ ಮಧ್ಯಾಹ್ನದೂಟ ಪೂರೈಸಲಾಗುತ್ತಿದ್ದು, ನಗರದ 135 ಶಾಲೆಗಳ 12 ಸಾವಿರ ವಿದ್ಯಾರ್ಥಿಗಳಿಗೆ ಬಿಸಿಯೂಟ ಒದಗಿಸುತ್ತಾ ಬಂದಿದೆ.