ಮೌಲಾನಾ ಸಾದ್ ಅವರದ್ದೆಂದು ಹೇಳಲಾದ ಆಡಿಯೋ ನಕಲಿಯಾಗಿರುವ ಸಾಧ್ಯತೆ; ದೆಹಲಿ ಪೊಲೀಸ್ ತನಿಖೆಯಲ್ಲಿ ಬಹಿರಂಗ: ಪ್ರಯೋಗಾಲಯಕ್ಕೆ ರವಾನೆ- ತಬ್ಲೀಗಿಗಳನ್ನು ಹಣಿಯಲು ತಿರುಚಿದ ಆಡಿಯೋವನ್ನು ಬಳಸಲಾಯಿತೇ?

0
700

ಸನ್ಮಾರ್ಗ ವಾರ್ತೆ

ನವದೆಹಲಿ, ಮೇ ನಿಷೇಧಾಜ್ಞೆಯನ್ನು ಮತ್ತು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ನಿಯಮಗಳನ್ನು ಉಲ್ಲಂಘಿಸುವಂತೆ ತಬ್ಲೀಗಿ ಸದಸ್ಯರಲ್ಲಿ ಅದರ ನಾಯಕ ಮೌಲಾನಾ ಸಾದ್ ಕೇಳಿಕೊಂಡಿದ್ದಾರೆ ಅನ್ನುವ ವೈರಲ್ ಆಡಿಯೋ ನಕಲಿಯಾಗಿರುವ ಸಾಧ್ಯತೆಯಿದೆ ಎಂದು ದೆಹಲಿ ಪೊಲೀಸ್ ನ ಅಪರಾಧ ವಿಭಾಗವು ನಡೆಸಿದ ಆರಂಭಿಕ ತನಿಖೆಯಲ್ಲಿ ಕಂಡುಕೊಳ್ಳಲಾಗಿದೆ ಎಂದು indianexpress.com ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ತಿರುಚಿದೆ ಎಂದು ಆರೋಪಿಸಲ್ಪಟ್ಟ ಆಡಿಯೋ ಸೇರಿದಂತೆ ಎಲ್ಲಾ ಆಡಿಯೋಗಳನ್ನು ಕೂಡ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ವರದಿ ತಿಳಿಸಿದೆ.

ಈ ಮೊದಲು ಈ ಆರೋಪದ ಹಿನ್ನೆಲೆಯಲ್ಲಿ ತಬ್ಲೀಗಿ ಜಮಾಅತಿನ ಪ್ರಧಾನ ಕಚೇರಿಯಾದ ದೆಹಲಿಯ ಮರ್ಕಜ್ ಬಂಗ್ಲೆವಾಲಿ ಮಸೀದಿಯ ಆಡಳಿತ ಸಮಿತಿಯೊಂದಿಗೆ ಸಂಬಂಧ ಹೊಂದಿರುವ ಆರು ಮಂದಿಯ ಮೇಲೆ ದೆಹಲಿ ಪೊಲೀಸರು ಮಾರ್ಚ್ ನಲ್ಲಿ ಕೇಸು ದಾಖಲಿಸಿದ್ದರು. ಪೊಲೀಸ್ ಅಧಿಕಾರಿಗಳ ಎಚ್ಚರಿಕೆಯ ಹೊರತಾಗಿಯೂ 2000 ಜನರನ್ನು ಸೇರಿಸಿ ಲಾಕ್ ಡೌನ್ ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ಹತ್ಯೆ ಮತ್ತು ಕಾನೂನು ಉಲ್ಲಂಘನೆಯ ಪ್ರಕರಣಗಳ ಅಡಿ ಕೇಸು ದಾಖಲಿಸಿದ್ದರು. ಆದರೆ ಇದೀಗ ಆರಂಭಿಕ ತನಿಖೆಯ ವೇಳೆ ಸಾದ್ ಅವರ ಆಡಿಯೋವನ್ನು ತಿರುಚಲಾಗಿದೆ ಎಂದು ಕಂಡುಕೊಳ್ಳಲಾಗಿದೆ.

ಮಾರ್ಚ್ 21ರಂದು ವಾಟ್ಸಾಪ್ ನಲ್ಲಿ ಚಲಾವಣೆಯಲ್ಲಿದ್ದ ಮೌಲಾನಾ ಸಾದ್ ರದ್ದೆಂದು ಹೇಳಲಾದ ಆಡಿಯೋ ಈ ಎಲ್ಲ ಬೆಳವಣಿಗೆಗಳಿಗೆ ಕಾರಣವಾಗಿತ್ತು. ಆಡಿಯೋದಲ್ಲಿ ಲಾಕ್ ಡೌನ್ ಮತ್ತು ಸುರಕ್ಷಿತ ಅಂತರವನ್ನು ಉಲ್ಲಂಘಿಸಿ ಎಂದು ಹೇಳುವ ಧ್ವನಿ ಇತ್ತು. ಇದೀಗ ಮರ್ಕಜ್ ನ ಸಭೆಯಲ್ಲಿ ಭಾಗವಹಿಸಿದ ಸದಸ್ಯರಿಂದ ಪೊಲೀಸರು ಲ್ಯಾಪ್ ಟಾಪ್ ಅನ್ನು ವಶಪಡಿಸಿಕೊಂಡಿದ್ದು ಅವುಗಳಲ್ಲಿ 350ಕ್ಕಿಂತ ಹೆಚ್ಚು ಆಡಿಯೋ ವೀಡಿಯೋಗಳನ್ನು ಪೊಲೀಸರು ಪಡೆದುಕೊಂಡಿದ್ದರೂ ಯಾವುದೇ ಆಡಿಯೋ ವಿಡಿಯೋ ಗಳಲ್ಲೂ ಸಾದ್ ಅವರದ್ದು ಎಂದು ಹೇಳಲಾದ ಉಲ್ಲಂಘನೆಯ ವಿಡಿಯೋ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಆದ್ದರಿಂದ ಸಾದ್ ಅವರ ಈ ಹಿಂದಿನ ಹಲವಾರು ಆಡಿಯೋ, ವೀಡಿಯೋಗಳ ತುಣುಕುಗಳನ್ನು ಪಡೆದು ಈ ವಿಡಿಯೋವನ್ನು ತಯಾರಿಸಿರಬಹುದು ಅನ್ನುವ ನಿರ್ಣಯಕ್ಕೆ ಪೊಲೀಸರು ಬಂದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.