ಮುಸ್ಲಿಂ ಸಮುದಾಯದ ಹಿತವನ್ನು ಕಾಯಲು ಸುಪ್ರೀಂ ಮೆಟ್ಟಲೇರಿದ ಸಮಸ್ತ ಕೇರಳ ಜಮೀಅತುಲ್ ಉಲಮಾ

0
722

✍️ ಅಮಾನ್ ಕೆ.

ಒಡಿಸ್ಸಾದಲ್ಲಿ ಗುಂಪು ಥಳಿತದಿಂದ ಶೇಕ್ ಮಹಮ್ಮದ್ ಎಂಬ 28 ವರ್ಷದ ಯುವಕನ ಹತ್ಯೆ ನಡೆದಿರುವುದರ ಬೆನ್ನಿಗೆ ಇದೀಗ ಸಮಸ್ತ ಕೇರಳ ಜಮೀಯತ್ತುಲ್ ಉಲಮ ಸುಪ್ರೀಂಕೋರ್ಟಿನ ಬಾಗಿಲು ಬಡಿದಿದೆ.

ಗುಂಪು ಥಳಿತ ಮತ್ತು ದ್ವೇಷ ಭಾಷಣಗಳಿಗೆ ಎದುರಾಗಿ 2018 ಜುಲೈ 17ರಂದು ತಹ್ ಸಿನ್ ಪೂನಾವಾಲಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಮಾರ್ಗ ನಿರ್ದೇಶನಗಳನ್ನು ರಾಜ್ಯಗಳು ಜಾರಿ ಮಾಡ್ತಾ ಇಲ್ಲ, ಅವುಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಮಸ್ತ ಸುಪ್ರೀಂಕೋರ್ಟಿಗೆ ದೂರು ನೀಡಿದೆ. ಸಮಸ್ತ ದ ಪರವಾಗಿ ಪ್ರಧಾನ ಕಾರ್ಯದರ್ಶಿ ಆಲಿಕುಟ್ಟಿ ಮುಸ್ಲಿಯರ್ ಸುಪ್ರೀಂ ಕೋರ್ಟ್ ನ್ಯಾಯವಾದಿ ಅಡ್ವಕೇಟ್ ಜುಲ್ಫಿ ಕರ್ ಅಲಿ ಅವರ ಮೂಲಕ ಅರ್ಜಿಯನ್ನು ಸಲ್ಲಿಸಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಬಿಹಾರದಲ್ಲಿ ವಸ್ತ್ರ ವ್ಯಾಪಾರಿ ಮಹಮ್ಮದ್ ಅಥರ್ ಹುಸೇನ್ ರನ್ನು ಭೀಕರವಾಗಿ ಥಳಿಸಿ ಹತ್ಯೆ ಮಾಡಲಾಗಿತ್ತು. ಔರಂಗಾಬಾದ್ನಲ್ಲಿ ವಲಸೆ ಕಾರ್ಮಿಕ ವಸೀಮ್ ನನ್ನು ಹತ್ಯೆ ಮಾಡಲಾಗಿತ್ತ್ತು. ಸುಪ್ರೀಂ ಕೋರ್ಟಿಗೆ ಸಮಸ್ತ ಸಲ್ಲಿಸಿದ ದೂರಿನಲ್ಲಿ ಈ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ.

ಇದಲ್ಲದೆ ಜಾರ್ಖಂಡಿನ ವಲಸೆ ಕಾರ್ಮಿಕನನ್ನು ಬಾಂಗ್ಲಾದೇಶಿ ಎಂದು ಹೇಳಿ ಕೇರಳದಲ್ಲಿ ಥಳಿಸಿ ಹತ್ಯೆ ಮಾಡಲಾಗಿತ್ತು. ಒಡಿಸ್ಸಾದಲ್ಲಿ ಇತ್ತೀಚೆಗೆ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕನನ್ನು ಬಾಂಗ್ಲಾದೇಶಿ ಎಂದು ಹೇಳಿ ಹತ್ಯೆ ಮಾಡಲಾಗಿತ್ತು. ಇದೀಗ ಅದೇ ಒಡಿಸ್ಸಾದಲ್ಲಿ 28 ವರ್ಷದ ಮಹಮ್ಮದ್ ನನ್ನು ಗುಂಪು ಥಳಿಸಿ ಹತ್ಯೆ ಮಾಡಿದೆ. ಗೋ ಸಾಗಾಟದ ನೆಪದಲ್ಲಿ ವಾಹನವನ್ನು ಅಡ್ಡಗಟ್ಟಿ ಆ ಬಳಿಕ ಈ ಹತ್ಯೆ ನಡೆದಿದೆ.

ಕಳೆದ ಐದು ವರ್ಷಗಳಲ್ಲಿ ಗುಂಪು ಥಳಿತ ಆಕ್ರಮಣ ನಡೆದ ಜಿಲ್ಲೆಗಳು ಮತ್ತು ಸಬ್ ಡಿವಿಜನ್ ಗಳು ಯಾವುವು ಎಂಬುದನ್ನು ರಾಜ್ಯ ಸರಕಾರಗಳು ಮೂರು ವಾರಗಳ ಒಳಗೆ ಪತ್ತೆ ಹಚ್ಚಿ ಮಾಹಿತಿಯನ್ನು ಒದಗಿಸಬೇಕು ಎಂದು 2018 ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆದರೆ ಇದನ್ನು ಜಾರಿ ಮಾಡಲಾಗಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಧರ್ಮ ಮತ್ತು ಜಾತಿಯನ್ನು ನೋಡಿ ಗುಂಪು ಥಳಿತ ಪ್ರಕರಣ ಮುಂದುವರೆಯುತ್ತಿದೆ. ಮುಸ್ಲಿಮರ ವಿರುದ್ಧ ಗುಂಪು ಥಳಿತದಲ್ಲಿ ಹೆಚ್ಚಳವಾಗ್ತಾ ಇದೆ ಎಂದು ಸಮಸ್ತ ತನ್ನ ದೂರಿನಲ್ಲಿ ಆತಂಕ ವ್ಯಕ್ತಪಡಿಸಿದೆ.

ಗುಂಪು ಥಳಿತವನ್ನು ತಡೆಯುವುದಕ್ಕೆ ಜಿಲ್ಲಾ ಪೊಲೀಸ್ ಸೂಪರ್ ಡೆಂಟ್ ರಾಂಕ್ ನ ಓರ್ವ ನೋಡಲ್ ಆಫೀಸರ್ ಅನ್ನು ಎಲ್ಲಾ ಜಿಲ್ಲೆಗಳಲ್ಲೂ ನಿಯಮಿಸಬೇಕೆಂದು ಸುಪ್ರೀಂ ಕೋರ್ಟ್ ನ ತೀರ್ಪಿನಲ್ಲಿ ಹೇಳಲಾಗಿತ್ತು. ಮಾತ್ರ ಅಲ್ಲ ಇವರ ಸಹಾಯಕ್ಕಾಗಿ ಡಿಎಸ್ಪಿ ರ‍್ಯಾಂಕ್‌ಗೆ ಸಮವಾಗಿರುವ ಆಫೀಸರನ್ನು ನಿಯುಕ್ತ ಗೊಳಿಸಬೇಕು ಮತ್ತು ಪೂರಕ ವ್ಯವಸ್ಥೆ ಮಾಡಬೇಕು ಎಂದು ಸುಪ್ರೀಂಕೋರ್ಟ್ 2018 ರ ತೀರ್ಪಿನಲ್ಲಿ ಹೇಳಿತ್ತ್ತು. ಆದರೆ ಈ ಬಗ್ಗೆ ಕ್ರಮಗಳು ಕೈಗೊಳ್ಳಲಾಗಿಲ್ಲ ಎಂಬ ಆತಂಕವನ್ನು ಅರ್ಜಿಯಲ್ಲಿ ಹೇಳಲಾಗಿದೆ.

ಸದ್ಯ ಬಾಂಗ್ಲಾದೇಶಿ ನುಸುಳು ಕೋರರು ಎಂಬ ಹೆಸರಲ್ಲಿ ಮುಸ್ಲಿಮರ ಮೇಲೆ ದೇಶದ ವಿವಿಧ ಭಾಗಗಳಲ್ಲಿ ಹಲ್ಲೆಗಳು ನಡಿತಾ ಇದೆ. ಥಳಿತಗಳು ನಡಿತಾ ಇದೆ. ಈ ಹಿನ್ನೆಲೆಯಲ್ಲಿ ಸಮಸ್ತ ಕೇರಳ ಜಮೀಯತುಲ್ ಉಲಮ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಅರ್ಜಿ ಗಮನಾರ್ಹವಾಗಿದೆ. 2018 ರಲ್ಲಿ ಸುಪ್ರೀಂ ಕೋರ್ಟ್ ಈ ಬಗ್ಗೆ ಕಠಿಣ ಆದೇಶ ನೀಡಿದ ಬಳಿಕವೂ ರಾಜ್ಯಗಳು ಇದನ್ನು ಜಾರಿ ಮಾಡುವುದಕ್ಕೆ ನಿರಾಸಕ್ತಿ ವಹಿಸಿರುವುದನ್ನು ಅತ್ಯಂತ ಸಂದರ್ಭೋಚಿತವಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಗುಂಪು ಥಳಿತಕ್ಕಿಡಾಗಿ ಸಂಕಷ್ಟ ಅನುಭವಿಸುತ್ತಿರುವ ಮುಸ್ಲಿಂ ಸಮುದಾಯದ ಪರ ಧ್ವನಿ ಎತ್ತಿದ ಸಮಸ್ತ ಕೇರಳ ಜಮೀಯತುಲ್ ಉಲಮಾಗೆ ಧನ್ಯವಾದ.