ಪ್ರೊ.ಅಬೂಬಕ್ಕರ್ ತುಂಬೆಯವರನ್ನು ‘ಅದ್ಭುತ, ಸಮರ್ಪಣಾ ಮತ್ತು ಧರ್ಮನಿಷ್ಠ ವ್ಯಕ್ತಿ’ ಎಂದು ಶ್ಲಾಘಿಸಿದ UAEಯ ‘ದಿ ನ್ಯಾಷನಲ್ ನ್ಯೂಸ್’

0
848

ಸನ್ಮಾರ್ಗ ವಾರ್ತೆ

ಅಬುಧಾಬಿ: ಮಾ.23ರಂದು ನಿಧನರಾದ ಶಿಕ್ಷಣ ತಜ್ಞ, ಯುಎಇ ರಾಸ್ ಅಲ್ ಖ್ಯೆಮಾದ ಸ್ಕಾಲರ್ಸ್ ಇಂಡಿಯನ್ ಹೈಸ್ಕೂಲ್ ಪ್ರಾಂಶುಪಾಲರಾದ ಪ್ರೊ.ಎಂ.ಅಬೂಬಕರ್ ತುಂಬೆಯವರನ್ನು ‘ಅದ್ಭುತ, ಸಮರ್ಪಣಾ ಮತ್ತು ಧರ್ಮನಿಷ್ಠ ವ್ಯಕ್ತಿ’ ಎಂದು ಶ್ಲಾಘಿಸಿ UAEಯ ‘ದಿ ನ್ಯಾಷನಲ್ ನ್ಯೂಸ್ ವೆಬ್ ಸೈಟ್’ ವರದಿ ಪ್ರಕಟಿಸಿದೆ.

ಮಾ.23 ಮಂಗಳವಾರ ಮುಂಜಾನೆ ಯುಎಇಯ ರಾಸ್ ಅಲ್ ಖೈಮಾದಲ್ಲಿರುವ ತನ್ನ ಸ್ವಗೃಹದಲ್ಲಿ ಪ್ರೊ.ಎಂ.ಅಬೂಬಕರ್ ತುಂಬೆಯವರು ಹೃದಯಾಘಾತದಿಂದ ನಿಧನರಾಗಿದ್ದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಅವರ ಅಂತ್ಯಕ್ರಿಯೆಯನ್ನು ಎರಡು ದಿನಗಳ ನಂತರ ಅವರ ಹುಟ್ಟೂರಾದ ತುಂಬೆಯಲ್ಲಿ ನಡೆಸಲಾಗಿತ್ತು.

“ಅದ್ಭುತ, ಸಮರ್ಪಿತ ಮತ್ತು ಧರ್ಮನಿಷ್ಠ ವ್ಯಕ್ತಿಗೆ” ಕುಟುಂಬ ಮತ್ತು ಸ್ನೇಹಿತರು ಗೌರವ ಸಲ್ಲಿಸಿದರು ಎಂದು ದಿ ನ್ಯಾಷನಲ್ ನ್ಯೂಸ್ ವೆಬ್ ಸೈಟ್ ಶ್ಲಾಘಿಸಿದೆ.

ಅಬೂಬಕರ್ ಅವರ ಪತ್ನಿ ಮುಮ್ತಾಜ್ ಅವರು ಊರಲ್ಲಿ ವಾಸಿಸುತ್ತಿದ್ದು, ಅವರ ಮಗ ಮೊಹಮ್ಮದ್ ಮಹಫೂಜ್(28) ಇವರು ರಾಸ್ ಅಲ್ ಖೈಮಾದಲ್ಲಿ ವೃತ್ತಿಯಲ್ಲಿದ್ದಾರೆ. ದೀಜಾ ಮಾಫೂಮಾ, ಹವ್ವಾ ಮುಬಾಶಿರಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಪ್ರೊ. ಅಬೂಬಕರ್ ಅವರು ತನ್ನ ಜೀವಿತಾವಧಿಯ ಕೊನೆಯವರೆಗೂ ಅಂದರೆ ಸುಮಾರು 25 ವರ್ಷಗಳ ಕಾಲ ಯುಎಇಯ ಶಾಲೆಗಳಲ್ಲಿ ಕೆಲಸ ಮಾಡಿದರು. 1997 ರಲ್ಲಿ ದುಬೈನ ನ್ಯೂ ಮಾಡೆಲ್ ಇಂಡಿಯನ್ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಮೊದಲ ಬಾರಿಗೆ ಕೆಲಸ ಮಾಡಿದರು. ನಂತರ ಅವರು ಅಜ್ಮಾನ್, ಶಾರ್ಜಾ, ದುಬೈ ಮತ್ತು ಅಲ್ ಐನ್ ನ ವಿವಿಧ ಭಾರತೀಯ ಶಾಲೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಥೈಲ್ಯಾಂಡ್ನ ಭಾರತೀಯ ಶಾಲೆಯಲ್ಲಿ ಕೆಲಸ ಮಾಡಿದ್ದನ್ನು ದಿ ನ್ಯಾಷನಲ್ ನ್ಯೂಸ್ ವರದಿ ಮಾಡಿದೆ.

2006 ರಲ್ಲಿ ಸ್ಕಾಲರ್ಸ್ ಇಂಡಿಯನ್ ಶಾಲೆಗೆ ಸೇರಿದ್ದ ಅವರು, ಕೊನೆಯವರೆಗೂ ಕೆಲಸ ಮಾಡಿದರು.

“ಕಳೆದ 14 ವರ್ಷಗಳಿಂದ, ಅವರು ನಮ್ಮ ಶಾಲೆಯನ್ನು ಹೆಚ್ಚಿನ ಎತ್ತರಕ್ಕೆ ಬೆಳೆಸಲು ದಣಿವರಿಯದ ಶಕ್ತಿ ಮತ್ತು ಉತ್ಸಾಹದಿಂದ ಕೆಲಸ ಮಾಡಿದ್ದಾರೆ” ಎಂದು ಶಾಲೆಯ ಅಧ್ಯಕ್ಷ ಹಬೀಬುರ್ ರಹಮಾನ್ ಮುಂಡೋಲ್ ಹೇಳಿದ್ದಾರೆ. ಪ್ರಾಂಶುಪಾಲರಾಗಿರುವುದರ ಜೊತೆಗೆ ಭಾವನಾತ್ಮಕ, ಸಾಮಾಜಿಕ ಮತ್ತು ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಸಲಹೆಗಾರರಾಗಿ ಕೆಲಸ ಮಾಡಿದರು.

ಪ್ರಪಂಚದಾದ್ಯಂತ ಇರುವ ಅವರ ವಿದ್ಯಾರ್ಥಿಗಳು ಅವರ ಆತ್ಮೀಯತೆಯನ್ನು ನೆನಪಿಸಿದ್ದಾರೆ. “ನಾನು ತುಂಬೆ ಬಿಎ ಕಾಲೇಜಿನಲ್ಲಿ ಅವರ ಶಿಷ್ಯನಾಗಿದ್ದೆ ಮತ್ತು ಅವರು ಶಿಸ್ತು ಮತ್ತು ನೈತಿಕತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು” ಎಂದು ಈಗ ಅಬುಧಾಬಿಯಲ್ಲಿರುವ ಅವರ ವಿದ್ಯಾರ್ಥಿ ಮುಬಾರಕ್ ಪಿ.ಡಿ. ನೆನಪಿಸುತ್ತಾರೆ ಎಂದು ದಿ ನ್ಯಾಷನಲ್ ನ್ಯೂಸ್ ವರದಿ ಮಾಡಿದೆ.

“ಖಂಡಿತ, ಇದು ಭರಿಸಲಾಗದ ನಷ್ಟ, ಆದರೆ ನಾವು ದೇವನ ಇಚ್ಛೆಗೆ ಶರಣಾಗಬೇಕು. ಅವರು ಮೂವರು ಮಕ್ಕಳಿಗೂ ಅದ್ಭುತ ತಂದೆಯಾಗಿದ್ದರು” ಎಂದು ಪುತ್ರ ಮಹಫೂಜ್ ಹೇಳಿದರು. ಪ್ರೊ. ಅಬೂಬಕರ್ ಅವರ ಸಾವು ಶಿಕ್ಷಣ ಕ್ಷೇತ್ರದ ತಜ್ಞರಿಗೆ, ಅವರ ಆತ್ಮೀಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಘಾತವನ್ನುಂಟು ಮಾಡಿದೆ ಎಂದು ದಿ ನ್ಯಾಷನಲ್ ನ್ಯೂಸ್ ವರದಿ ಮಾಡಿದೆ.