ಬಿಎಸ್ಎಫ್ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ್ದ ಅಮೀರ್ ಮರಳಿ ಭಾರತಕ್ಕೆ: ಅಧಿಕಾರಿಗಳಿಗೆ ಶಿಕ್ಷೆ ಆಗಲಿ ಎಂದ ತಂದೆ

0
418

ಸನ್ಮಾರ್ಗ ವಾರ್ತೆ

ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಗಿದ್ದ ಪಶ್ಚಿಮ ಬಂಗಾಳದ 19 ವರ್ಷದ ಅಮೀರ್ ಶೇಕ್ ಮರಳಿ ಭಾರತಕ್ಕೆ ಹಿಂತಿರುಗಿದ್ದಾನೆ. ಅಕ್ರಮ ವಲಸಿಗ ಎಂದು ಹೇಳಿ ಆತ ಕೆಲಸ ಮಾಡುತ್ತಿದ್ದ ರಾಜಸ್ಥಾನದಿಂದ ಪೊಲೀಸರು ಅಮೀರ್ ನನ್ನು ಬಂಧಿಸಿಟ್ಟಿದ್ದರು ಮತ್ತು ಆ ಬಳಿಕ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ್ದರು. ಈತ ಬಾಂಗ್ಲಾದೇಶದಲ್ಲಿ ಒಂದು ತಿಂಗಳ ಕಾಲ ಬಂಧನದಲ್ಲಿದ್ದ. ಭಾರತದ ಗಡಿರಕ್ಷಣಾ ಪಡೆಯು ಆತನನ್ನು ಗಡೀ ಪಾರು ಮಾಡಿತ್ತು.

ತನ್ನ ಮಗನನ್ನು ಹುಡುಕಿ ಕೊಡಿ ಎಂದು ಆತನ ಹೆತ್ತವರು ಹೈಕೋರ್ಟಿಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಗಡಿ ರಕ್ಷಣಾ ಪಡೆ ಅಥವಾ ಬಿಎಸ್ಎಫ್ ನೀಡಿರುವ ಮಾಹಿತಿಯನ್ನು ಕೋರ್ಟ್ ಗೆ ತಿಳಿಸಲಾಯಿತು.

ಆಗಸ್ಟ್ 12ರಂದು ಬಿ ಎಸ್ ಎಫ್ ಅಧಿಕಾರಿಯವರು ಆಮೀರ್ ಕುಟುಂಬವನ್ನು ಸಂಪರ್ಕಿಸಿದ್ದಾರೆ. ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳುವ ವೇಳೆ ಅಮೀರ್ನನ್ನು ವಶಪಡಿಸಿಕೊಳ್ಳಲಾಗಿದೆ. ಈತ ಪಶ್ಚಿಮ ಬಂಗಾಳದ ನಾರ್ತ್ 24 ಫರಗನ್ ಜಿಲ್ಲೆಯ ಬಸಿರತ್ ಪೊಲೀಸ್ ಸ್ಟೇಷನ್ ನಲ್ಲಿ ಇದ್ದಾನೆ ಎಂದು ತಿಳಿಸಿದ್ದಾರೆ ಎಂದು ಕೋರ್ಟಿಗೆ ಮಾಹಿತಿಯನ್ನು ನೀಡಲಾಗಿದೆ.

ಆತನ ಐಡೆಂಟಿಟಿಯನ್ನು ಪರಿಶೀಲಿಸಿ ಆತನನ್ನು ತಂದೆಗೆ ಒಪ್ಪಿಸಿ ಎಂದು ನ್ಯಾಯಾಲಯ ಆದೇಶಿಸಿದೆ.

ಈತನನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ್ದ ಬಿಎಸ್ಎಫ್ ಇದೀಗ ನ್ಯಾಯಾಲಯದ ಮುಂದೆ ಸುಳ್ಳು ಹೇಳುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆತನಾಗಿಯೇ ಬಾಂಗ್ಲಾದೇಶಕ್ಕೆ ಹೋಗಿದ್ದ ಮತ್ತು ಆತ ಹಿಂತಿರುಗಿ ಬರುವಾಗ ಬಂಧಿಸಲಾಗಿದೆ ಎಂಬ ಕಥೆಯನ್ನು ಕಟ್ಟಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ನನ್ನ ಮಗ ನನಗೆ ಸಿಕ್ಕಿದ್ದಾನೆ. ಸಂತೋಷವಾಗಿದೆ. ಆದರೆ ಯಾರು ನನ್ನ ಮಗನನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು ಎಂದು ಅಮೀರ್ ನ ತಂದೆ ಆಗ್ರಹಿಸಿದ್ದಾರೆ.