ಸನ್ಮಾರ್ಗ ವಾರ್ತೆ
ಬಿಹಾರ ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟಿನಲ್ಲಿ ಮುಖಭಂಗವಾಗಿದೆ. ಆಗಸ್ಟ್ ಒಂದರಂದು ಬಿಡುಗಡೆಗೊಳಿಸಿದ ಬಿಹಾರದ ಕರಡು ಮತದಾರರ ಪಟ್ಟಿಯಲ್ಲಿ 65 ಲಕ್ಷ ಮಂದಿಯನ್ನು ಕೈಬಿಟ್ಟಿರುವ ಆರೋಪ ಕೇಳಿ ಬಂದಿತ್ತು. ಯಾವ ರೀತಿಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆ ಮತದಾರರನ್ನು ಪಟ್ಟಿಯಿಂದ ಕೈ ಬಿಟ್ಟಿದ್ದೀರಿ ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವನ್ನು ಪ್ರಶ್ನಿಸಿದೆ. ಕೈ ಬಿಡಲಾದ 65 ಲಕ್ಷ ಜನರ ಪಟ್ಟಿಯನ್ನು ಬಹಿರಂಗಪಡಿಸಬೇಕು. ಮಾತ್ರ ಅಲ್ಲ ಯಾಕೆ ಕೈ ಬಿಟ್ಟಿದ್ದೀರಿ ಎಂಬುದಕ್ಕೆ ಕಾರಣವನ್ನು ನೀಡಬೇಕು. ಅಲ್ಲದೆ ಆಧಾರನ್ನು ಪೌರತ್ವ ದಾಖಲೆಯಾಗಿ ಅಂಗೀಕರಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ಕೈ ಬಿಡಲಾದ 65 ಲಕ್ಷ ಮಂದಿಯ ಹೆಸರನ್ನು ತನ್ನ ವೆಬ್ಸೈಟ್ನಲ್ಲಿ ಮುಂದಿನ 19 ನೇ ತಾರೀಕಿನ ಒಳಗಡೆ ಪ್ರಕಟಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೆ ಆಧಾರ್ ಕಾರ್ಡನ್ನು ಕೂಡ ಪೌರತ್ವ ದಾಖಲೆಯಾಗಿ ಅಂಗೀಕರಿಸಬೇಕು ಎಂದು ಆದೇಶಿಸಿದೆ.
ಬಿಹಾರದಲ್ಲಿ ಅತ್ಯಂತ ಹೆಚ್ಚು ಪ್ರಸಾರವುಳ್ಳ ಪತ್ರಿಕೆಯಲ್ಲಿ ಮತದಾರರ ಪಟ್ಟಿಯ ಹೆಸರನ್ನು ಬಹಿರಂಗಪಡಿಸುವ ಮಾಹಿತಿಯನ್ನು ಜಾಹೀರಾತಾಗಿ ಹಂಚಿಕೊಳ್ಳಬೇಕು. ದೂರದರ್ಶನ ಮತ್ತು ರೇಡಿಯೋ ದಲ್ಲೂ ಈ ಕುರಿತಂತೆ ಮಾಹಿತಿಯನ್ನು ಬಹಿರಂಗ ಪಡಿಸಬೇಕು. ಜಿಲ್ಲಾ ಎಲೆಕ್ಟ್ರಾರಲ್ ಅಧಿಕಾರಿಗಳ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲೂ ಈ ವಿಷಯದ ಕುರಿತಂತೆ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯುವುದಕ್ಕೆ ತಿಂಗಳುಗಳಷ್ಟೇ ಬಾಕಿ ಇದೆ. ಇಂಥ ಸಂದರ್ಭದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಮುಂದಾಗಿರುವುದನ್ನು ಪ್ರಶ್ನಿಸಿ, ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆ ನಡೆಸುತ್ತಾ ಸುಪ್ರೀಂಕೋರ್ಟ್ ಈ ನಿರ್ದೇಶನ ನೀಡಿದೆ.
ಈ ಮೊದಲು ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಇದೀಗ ಅಂತವರನ್ನು ಕೈ ಬಿಡಲಾಗಿದೆ. ಅವರ ಸಂಖ್ಯೆ 65 ಲಕ್ಷಕ್ಕಿಂತಲೂ ಅಧಿಕ ಇದೆ ಎಂಬುದು ಬಹಿರಂಗವಾದ ಬಳಿಕ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ. ಕೈ ಬಿಡಲಾದವರ ಹೆಸರನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿ ಎಂದು ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.
ಪ್ರತಿ ಜಿಲ್ಲಾ ಎಲೆಕ್ಟ್ರಾರಲ್ ಅಧಿಕಾರಿಯ ವೆಬ್ಸೈಟ್ನಲ್ಲಿ ಪಟ್ಟಿಯನ್ನು ಪ್ರಕಟಿಸಿ ಎಂಬುದು ಸುಪ್ರೀಂ ಕೋರ್ಟ್ ಆದೇಶವಾಗಿದೆ. ಪ್ರತಿ ವಿವರದಲ್ಲೂ ಬೂತ್ ಮಾಹಿತಿಯನ್ನು ನೀಡಬೇಕು. ಅಲ್ಲದೇ ಮತದಾರರಿಗೆ ಇದನ್ನು ತಿಳಿದುಕೊಳ್ಳಲು ಸಾಧ್ಯವಾಗುವ ರೂಪದಲ್ಲಿ ಇರಬೇಕು ಎಂದು ಸುಪ್ರೀಂ ಕೋರ್ಟ್ ವಿವರಿಸಿದೆ.












