ಸನ್ಮಾರ್ಗ ವಾರ್ತೆ
ಚಂಡಿಗಢ: ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಸ್ಥಳವೊಂದರಲ್ಲಿ ಪರಿಶೀಲನೆ ನಡೆಸಲು ತೆರಳಿದ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಲಾರಿ ಹರಿಸಿ ಕೊಲೆಗೆ ಯತ್ನಿಸಿದ ಘಟನೆಯು ಹರ್ಯಾಣದ ಕರ್ನಾಲಿನಲ್ಲಿ ವರದಿಯಾಗಿದೆ.
ಕರ್ನಾಲಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಪೊಲೀಸರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಪೊಲೀಸರನ್ನೊಳಗೊಂಡ ತಂಡವು ಇಲ್ಲಿ ಪರಿಶೀಲನೆಗೆ ತೆರಳಿತ್ತು. ಅಧಿಕಾರಿಗಳನ್ನು ನೋಡಿದ ಕೂಡಲೇ ಚಾಲಕ ಲಾರಿ ಹರಿಸಿ ಕೊಲೆಗೆ ಯತ್ನಿಸಿದ್ದು, ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಹರ್ಯಾಣದ ಉಪ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಗಣಿ ಇಲಾಖೆ ಹಾಗೂ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಕರ್ನಾಲ್ ಪೊಲೀಸ್ ವರಿಷ್ಠಾಧಿಕಾರಿ ಗಂಗಾರಾಮ್ ಪುನಿಯಾ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕರ್ನಾಲ್‌ನಲ್ಲಿ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಕೊಲೆಗೆ ಯತ್ನಿಸಿದ ಚಾಲಕನನ್ನು ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.