ಹರ್ಯಾಣದಲ್ಲಿ ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಹೆಣೆದ ಪ್ರತಿ ತಂತ್ರವೇನು? ಅದರ ಹಿಂದೆ ಯಾರಿದ್ದರು? ಕಾಂಗ್ರೆಸ್ ಯಶಸ್ಸಿನ ಹಿಂದಿರುವ ರಹಸ್ಯದ ಬಗ್ಗೆ ದ ಹಿಂದೂ ಪತ್ರಿಕೆಯ ವಿಶ್ಲೇಷಣೆ

0
1021

ಅಶೋಕ್ ಕುಮಾರ್

ಹರ್ಯಾಣದಲ್ಲಿ ಬಿಜೆಪಿಯ “ಅಬ್ಕಿ ಬಾರ್ 75 ಪಾರ್” (ಈ ಬಾರಿ 75 ಕ್ಕೂ ಹೆಚ್ಚು ಸ್ಥಾನಗಳು) ಎಂಬ ಘೋಷಣೆಗೆ ಮತ್ತು ಹೆಚ್ಚಿನ ಮತದಾನೋತ್ತರ ಸಮೀಕ್ಷೆಗಳಿಗೆ ವ್ಯತಿರಿಕ್ತವಾಗಿ ಫಲಿತಾಂಶ ಬಂದಿದೆ. ಈ ಚುನಾವಣೆಯಲ್ಲಿ ರಾಜ್ಯದ ಜೀವನೋಪಾಯ, ರೈತರ ಯಾತನೆ, ನಿರುದ್ಯೋಗ ಮತ್ತು ಆರ್ಥಿಕ ಕುಸಿತದ ಸಮಸ್ಯೆಗಳು ರಾಷ್ಟ್ರೀಯ ಸಮಸ್ಯೆಗಳಿಗಿಂತ ಹೆಚ್ಚಿನ ಪ್ರಾಶಸ್ತ್ಯವನ್ನು ಪಡೆಯಿತು ಮತ್ತು ಇತರ ವಿಷಯಗಳ ಜೊತೆಗೆ ಪ್ರಬಲ ಆಡಳಿತ ವಿರೋಧಿ ಮನೋಭಾವವು ಮೇಲುಗೈ ಸಾಧಿಸಿತು ಎಂದು ನೆಲದ ವರದಿಗಳು ಸೂಚಿಸುತ್ತವೆ.

370 ನೇ ವಿಧಿಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯತೆಯ ಅಲೆಯ ಮೇಲೆ ಸವಾರಿ ಮಾಡುವ ಆಶಯದೊಂದಿಗೆ ಬಿಜೆಪಿ ಹರ್ಯಾಣದಲ್ಲಿ ರಂಗಕ್ಕಿಳಿಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಏಳು ರಾಲಿಗಳಲ್ಲಿ ರಾಷ್ಟ್ರೀಯ ಭದ್ರತೆಯನ್ನು ಕೇಂದ್ರೀಕರಿಸಿ ಮಾತಾಡಿದ್ದರು. ಆದರೆ ಮತದಾರರ ಮೇಲೆ ಇದು ದೊಡ್ಡ ಪರಿಣಾಮವನ್ನು ಬೀರಲಿಲ್ಲ. ಸ್ವಚ್ಛ ಮತ್ತು ಪಾರದರ್ಶಕ ಆಡಳಿತದ ಬಗ್ಗೆ ಬಿಜೆಪಿ ನಾಯಕತ್ವದ ಮಾತುಗಳು ಮತದಾರರನ್ನು ಮೆಚ್ಚಿಸುವಲ್ಲಿ ವಿಫಲವಾಗಿವೆ. ಇಂಥ ಮಾತುಗಳು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗದು ಎನ್ನುವುದು ಮೋದಿ ಮತ್ತು ಕೇಂದ್ರ ತಂಡಕ್ಕೆ ಮನದಟ್ಟಾಗುತ್ತಿರುವಂತೆಯೇ, ಚುನಾವಣಾ ಪ್ರಚಾರದ ಕೊನೆಯಲ್ಲಿ ರೈತರು, ವ್ಯಾಪಾರಿಗಳು ಮತ್ತು ಯುವಕರ ಬಗ್ಗೆ ಮಾತನಾಡಲು ಬಿಜೆಪಿ ಪ್ರಾರಂಭಿಸಿತು. ಆದರೆ ಅಷ್ಟೊತ್ತಿಗೆ ತಡವಾಗಿತ್ತು.

ಮತ್ತೊಂದೆಡೆ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ನ ಭೂಪಿಂದರ್ ಸಿಂಗ್ ಹೂಡಾ, ಅವರ ಪುತ್ರ ಮತ್ತು ಮಾಜಿ ರೋಹ್ಟಕ್ ಸಂಸದ ದೀಪೇಂದರ್ ಹೂಡಾ ಮತ್ತು ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥೆ ಕುಮಾರಿ ಸೆಲ್ಜಾ ನೇತೃತ್ವದಲ್ಲಿ ರೈತರ ಸಂಕಟ, ನಿರುದ್ಯೋಗದ ಸುತ್ತ ಕಾಂಗ್ರೆಸ್ ನಡೆಸಿದ ಸದ್ದಿಲ್ಲದ ಚುನಾವಣಾ ಅಭಿಯಾನವು ಯಶಸ್ವಿಯಾಯಿತು.

370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪಕ್ಷದ ನಿಲುವಿಗೆ ವಿರುದ್ಧವಾಗಿ ಬೆಂಬಲಿಸುವ ಮೂಲಕ ಭೂಪಿಂದರ್ ಸಿಂಗ್ ಹೂಡಾ ಅವರು ಬಿಜೆಪಿ ಹೆಣೆದ ತಂತ್ರಕ್ಕೆ ಸಮರ್ಥ ಪ್ರತಿ ತಂತ್ರವನ್ನು ಹೆಣೆದರು. ರಾಷ್ಟ್ರೀಯತೆಯನ್ನು ಮುನ್ನೆಲೆಗೆ ತಂದು ಕಾಂಗ್ರೆಸನ್ನು ಹಣಿಯಬಹುದು ಎಂದು ಅಂದುಕೊಂಡಿದ್ದ ಬಿಜೆಪಿಯನ್ನು ಆರ೦ಭದಲ್ಲೇ ಅವರು ಕಟ್ಟಿಹಾಕಿದರು. ಮಾತ್ರವಲ್ಲ, ಆ ಮೂಲಕ ಈ ಚುನಾವಣೆಯನ್ನು ಖಟ್ಟರ್ ಮತ್ತು ಹೂಡಾ ನಡುವಿನ ಸ್ಪರ್ಧೆಯಾಗಿ ಮಾರ್ಪಡಿಸಿದರು. ಕಾಂಗ್ರೆಸ್ ನ ಕೇಂದ್ರ ನಾಯಕತ್ವವು ಸಂಪೂರ್ಣವಾಗಿ ಹುಡಾ ಅವರಿಗೆ ಸ್ವಾತಂತ್ರ್ಯವನ್ನು ನೀಡಿತು.

“ಕಾಂಗ್ರೆಸ್ ಅಭ್ಯರ್ಥಿಗೆ ನೀಡುವ ಪ್ರತಿ ಮತವೂ ನನಗೆ ನೀಡಿದಂತೆ” ಎಂದು ಹೂಡಾ ಪ್ರತಿ ಚುನಾವಣಾ ರಾಲಿಯಲ್ಲಿ ಹೇಳುತ್ತಲೇ ಹೋದರು. ತಮ್ಮ ನೇತೃತ್ವದ ಈ ಹಿಂದಿನ ಸರ್ಕಾರವು ರೈತರ ಬಾಕಿ ಉಳಿದಿರುವ 6 1,600 ಕೋಟಿ ವಿದ್ಯುತ್ ಬಿಲ್ಲನ್ನು ಹೇಗೆ ಮನ್ನಾ ಮಾಡಿದೆ ಮತ್ತು ಪರಿಶಿಷ್ಟ ಜಾತಿಯವರಿಗೆ ಮೂರು ಲಕ್ಷಕ್ಕೂ ಹೆಚ್ಚು ಫ್ಲಾಟ್ ಗಳನ್ನು ಹೇಗೆ ಮಂಜೂರು ಮಾಡಿದೆ ಎಂದು ಮತದಾರರಿಗೆ ನೆನಪಿಸಿದರು. ವೃದ್ಧಾಪ್ಯ ಪಿಂಚಣಿ, ಉಚಿತ ವಿದ್ಯುತ್ ಮತ್ತು ಸರಕಾರೀ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಹೆಚ್ಚಿಸುವ ಪಕ್ಷದ ಭರವಸೆ ಕೂಡ ಮತದಾರರನ್ನು ಸೆಳೆಯಿತು.

ರಾಜ್ಯದಲ್ಲಿ ಜಾಟ್ ಮತ್ತು ಜಾಟ್ ರಹಿತರ ನಡುವಿನ ವಿಭಜನೆಯು ಈ ಹಿಂದೆ ಚರ್ಚೆಗೆ ಕಾರಣವಾಗಿತ್ತು. ವಿಶೇಷವಾಗಿ 2016 ರಲ್ಲಿ ಜಾಟ್ ಮೀಸಲಾತಿ ಆಂದೋಲನದ ಹಿನ್ನೆಲೆಯಲ್ಲಿ ಈ ಚರ್ಚೆ ಮುನ್ನೆಲೆಗೆ ಬಂದಿತ್ತು. ಜಾಟ್ ಅಲ್ಲದವರೇ ಹೆಚ್ಚಿರುವ ಗ್ರ್ಯಾಂಡ್ ಟ್ರಂಕ್ ರಸ್ತೆಯ ಉದ್ದಕ್ಕೂ ಕಾಂಗ್ರೆಸ್ ಈ ಬಾರಿ 10 ಸ್ಥಾನಗಳನ್ನು ಗಳಿಸಿತು. ಈ ಮೊದಲು ಇದು ಬಿಜೆಪಿಯ ಭದ್ರಕೋಟೆಯಾಗಿತ್ತು. ಕಳೆದ ಬಾರಿ ಬಿಜೆಪಿ ಇಲ್ಲಿ ಒಂಬತ್ತು ಸ್ಥಾನಗಳನ್ನು ಪಡೆದಿತ್ತು.

ಏನೆ ಆಗಲಿ, ಭಾರತೀಯ ರಾಷ್ಟ್ರೀಯ ಲೋಕ ದಳ ಪಕ್ಷದಲ್ಲಾದ ವಿಭಜನೆ ಮತ್ತು ಹರ್ಯಾಣ ಕಾಂಗ್ರೆಸ್ ಘಟಕದ ಮುಖ್ಯಸ್ಥೆಯಾಗಿ ಕುಮಾರಿ ಸೆಲ್ಜಾ ಅವರನ್ನು ನೇಮಕ ಮಾಡಲು ಕಾಂಗ್ರೆಸ್ ಹೈಕಮಾಂಡ್ ತಡಮಾಡಿರುವುದು (ಕುಮಾರಿ ಶೆಲ್ಜಾ ಅವರನ್ನು ಮತದಾನಕ್ಕಿಂತ 40 ಬರೇ ದಿನಗಳ ಮೊದಲು ಮುಖ್ಯಸ್ಥೆಯಾಗಿ ನೇಮಿಸಲಾಯಿತು) ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸಿದೆ.