ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 3: ತಮ್ಮ ವಿವಾದಿತ ಹೇಳಿಕೆಯಿಂದ ಕುಪ್ರಸಿದ್ಧಿ ಗಳಿಸಿದ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧಿಯ ಪಾತ್ರದ ಕುರಿತು ಅದೊಂದು ನಾಟಕ ಎನ್ನುವಂತೆ ಬಿಂಬಿಸಿ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಕಾರ್ಯಕ್ರಮದಲ್ಲಿ ಬ್ರಿಟಿಷ್ ಸರಕಾರದ ಅನುಮತಿ ಮತ್ತು ಬೆಂಬಲದಿಂದ ಸ್ವಾತಂತ್ರ್ಯ ಹೋರಾಟ ನಡೆಯಿತು. ಸ್ವಾತಂತ್ರ್ಯ ಸಂಗ್ರಾಮದ ತಥಾಕಥಿತ ನಾಯಕರಲ್ಲಿ ಯಾರೂ ಒಬ್ಬ ಒಂದು ಸಲ ಕೂಡ ಪೊಲೀಸರಿಂದ ಪೆಟ್ಟು ತಿಂದಿಲ್ಲ. ಒಮ್ಮೆಯೂ ತಿನ್ನಲಿಲ್ಲ. ಗಾಂಧಿಯ ಸ್ವಾತಂತ್ರ್ಯ ಹೋರಾಟ ಒಂದು ನಾಟವಾಗಿತ್ತು. ಇಡೀ ಸ್ವಾತಂತ್ರ್ಯ ಆಂದೋಲನಕ್ಕೆ ಬ್ರಿಟಿಷರ ಸಹಮತ ಮತ್ತು ಬೆಂಬಲ ಇತ್ತು ಎಂದ ಅವರು, ಅವರು ಗಾಂಧಿಯ ಅನ್ನ ಸತ್ಯಾಗ್ರಹ ಮತ್ತು ಸತ್ಯಾಗ್ರಹವನ್ನು ನಾಟಕ ಎಂದು ಹೇಳಿದರು.
ಕಾಂಗ್ರೆಸ್ ಬೆಂಬಲಿಗರು ಅನ್ನಸತ್ಯಾಗ್ರಹ ಮತ್ತು ಸತ್ಯಾಗ್ರಹಗಳಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ನಿರಂತರ ಹೇಳುತ್ತಾ ಬಂದಿದ್ದಾರೆ. ಬ್ರಿಟಿಷರು ಸತ್ಯಾಗ್ರಹಗಳ ಕಾರಣದಿಂದ ಭಾರತ ಬಿಟ್ಟು ಹೋಗಿಲ್ಲ. ಬ್ರಿಟಿಷರು ನಿರಾಶೆಯಿಂದ ನಮಗೆ ಸ್ವಾತಂತ್ರ್ಯ ಕೊಟ್ಟರು ಎಂದು ಅವರು ಹೇಳಿದರು.












