ಅಂಗನವಾಡಿ ನೌಕರರ ಪ್ರತಿಭಟನೆ: ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆಗೆ ನಿರ್ಧಾರ

0
126

ಸನ್ಮಾರ್ಗ ವಾರ್ತೆ

ಬೆಂಗಳೂರು : ತಮಗೂ ಶಿಕ್ಷಕಿಯರ ಸ್ಥಾನಮಾನ ನೀಡಬೇಕು ಹಾಗೂ ಗ್ಯಾಚ್ಯೂಇಟಿ ನೀಡುವಂತೆ ಒತ್ತಾಯಿಸಿ ಅಂಗನವಾಡಿ ನೌಕರರು ನಡೆಸುತ್ತಿರುವ ಹೋರಾಟ 10ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಎರಡು ಬೇಡಿಕೆ ಈಡೇರಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಉಳಿದ ಬೇಡಿಕೆಗಳನ್ನು ಪರಿಗಣಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲು ಅಂಗನವಾಡಿ ನೌಕರರು ನಿರ್ಧರಿಸಿದ್ದಾರೆ.

ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ 35 ಸಾವಿರಕ್ಕೂ ಹೆಚ್ಚು ಅಂಗನವಾಡಿ ನೌಕರರು ಭಾಗವಹಿಸಿದ್ದಾರೆ. ಬೇಡಿಕೆ ಈಡೇರುವವರೆಗೂ ಈ ಜಾಗದಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಹೋರಾಟ ನಿರತರಾಗಿದ್ದು, ಮೂರು ಬೇಡಿಕೆಗಳನ್ನು ಸರಕಾರ ಈಡೇರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಅಂಗನವಾಡಿ ಶಿಕ್ಷಣದ ಅವಧಿಯನ್ನು ಮೂರು ತಾಸು ಕಡಿತಗೊಳಿಸಲಾಗಿದೆ. ಬೆಳಗ್ಗೆ 9:30 ರಿಂದ ಸಂಜೆ 4 ಗಂಟೆಯ ಬದಲಿಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಾಠ ಮಾಡಲು ಸೂಚಿಸಲಾಗಿದೆ.

31/01/2023ರ ಆದೇಶಕ್ಕೆ ತಿದ್ದುಪಡಿ ಮಾಡಿ ಪದೋನ್ನತಿಗೆ ಗುರುತಿಸುವ ವಿಧಾನದಲ್ಲಿ ವಯಸ್ಸಿನಲ್ಲಿ ಹಿರಿಯರಾದವರನ್ನು ಪರಿಗಣಿಸತಕ್ಕದ್ದು ಎಂದು ತಿದ್ದುಪಡಿ ಮಾಡಲಾಗಿದೆ. ಈ ಎರಡು ಆದೇಶಗಳನ್ನು ಲಿಖಿತವಾಗಿ ನೀಡಲಾಗಿದೆ. ಗ್ರಾಚ್ಯೂಇಟಿ ಹಾಗೂ ಶಿಕ್ಷಕಿ ಸ್ಥಾನಮಾನ ಕುರಿತಾಗಿ ಸರಕಾರ ಲಿಖಿತ ಆದೇಶ ನೀಡಬೇಕು. ಇಲ್ಲದೆ ಹೋದಲ್ಲಿ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಎಚ್ಚರಿಸಿದೆ.