ಪತ್ರಿಕೋದ್ಯಮದಲ್ಲಿ ಮಹಿಳೆಯರ ಈ ಸಾಧನೆ ವಿಜ್ಞಾನ, ರಾಜಕೀಯ ಕ್ಷೇತ್ರದಷ್ಟೇ ಕಷ್ಟಕರ- ಕಾವ್ಯಶ್ರೀ ಮಹಾಗಾಂಕರ್

0
474

ಕಲ್ಬುರ್ಗಿಯಲ್ಲಿ ಅನುಪಮ 20ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ

ಸನ್ಮಾರ್ಗ ವಾರ್ತೆ

ಕಲ್ಬುರ್ಗಿ: ಸಮಾಜದಲ್ಲಿರುವ ದಿನಪತ್ರಿಕೆ, ವಾರಪತ್ರಿಕೆಗಳಿಗೆ ಸರಿಸಾಟಿಯಾಗಿ ಅನುಪಮ ನಿರಂತರ ಮೂಡಿ ಬರುತ್ತಿದೆ. ಬದುಕಿನ ಎಲ್ಲಾ ಆಯಾಮಗಳಿಗೂ- ಅದರಲ್ಲೂ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ತಿಳಿಸುವ ಹಾಗೂ ವಿವಿಧ ಅಂಕಣಗಳ ಮೂಲಕ ಅವರಿಗೆ ಮಾರ್ಗದರ್ಶನ ನೀಡುತ್ತಿದೆ.

ವ್ಯಕ್ತಿ-ಕುಟುಂಬ ಹಾಗೂ ಸಮಾಜವನ್ನು ಉನ್ನತ ಮಟ್ಟಕ್ಕೇರಿಸುವ ಮೂಲಕ ದೇಶ ಕಟ್ಟುವ ಕೆಲಸವನ್ನು `ಅನುಪಮ’ ಮಾಡಿದೆ. ಮಹಿಳೆಯರನ್ನು ಎರಡನೇ ದರ್ಜೆಯವರೆಂದು ಭಾವಿಸುವ ಈ ಕಾಲದಲ್ಲೂ ಮಹಿಳೆಯರಿಗೆ ಕಠಿಣವಾಗಿರುವುದು ವಿಜ್ಞಾನ, ರಾಜಕೀಯ ಮತ್ತು ಪತ್ರಿಕೋದ್ಯಮ ಕ್ಷೇತ್ರ. ಆದರೆ ಅನುಪಮ ಬಳಗವು ಒಂದು ಮಹಿಳಾ ಮಾಸಿಕವನ್ನು ಮುನ್ನಡೆಸುವುದರೊಂದಿಗೆ ತಮ್ಮ ಸಾಧನೆಯನ್ನು ಸಾರ್ವತ್ರಿಕ ಗೊಳಿಸಿದ್ದಾರೆ. ಇದರಲ್ಲಿರುವ ಮುಖ್ಯ ಅಂಶವೆಂದರೆ ಕೋಮು ಸೌಹಾರ್ದತೆ. ಜಾತಿ-ಮತ-ಪಂಥಗಳನ್ನು ಮೀರಿ ಯೋಚಿಸುವ ಪ್ರಕ್ರಿಯೆ ಅನುಪಮದ ವಿಶೇಷತೆ. ಈ ತರಹದ ಪತ್ರಿಕೆಗಳನ್ನು ಮುಂದುವರಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು’ ಎಂದು ಲೇಖಕಿ ಕಾವ್ಯಶ್ರೀ ಮಹಾಗಾಂಕರ್ ತಿಳಿಸಿದರು. ಅವರು ಕಲ್ಬುರ್ಗಿಯಲ್ಲಿ ಅನುಪಮ 20ನೇ ವಾರ್ಷಿಕ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಇನ್ನೋರ್ವ ಮುಖ್ಯ ಅತಿಥಿ ಆಶಾದೇವಿ ವಿ.ಕುಮಾರ್ ಅವರು ಮಾತನಾಡಿ “ಓದುವ ಹವ್ಯಾಸ ಕಡಿಮೆಯಾಗಿರುವ ಹಾಗೂ ಪುಸ್ತಕಗಳಿಗೆ ಬೆಲೆ ಕಡಿತಗೊಳಿಸುವ ಈ ಕಾಲದಲ್ಲಿ, ಅನುಪಮ ಇಂದಿನವರೆಗೂ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಅಚ್ಚರಿದಾಯಕ. ಇದರ ಹಿಂದಿರುವ ಪುರುಷರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ” ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ಬಸಂತ ಬಾಯಿ ಅಕ್ಕಿ, ನೀಲಮ್ಮ ಎಂ.ಬೆಳಮಗಿ, ಮಂಗಳಾದೇವಿ ಕಪೂರ್, ಸಾಬೆರಾ ಬಾನು, ನಿಖ್ಖತ್ ಸುಲ್ತಾನಾ, ಪರ್ವೀನ್ ಅಖ್ತರ್ ಹಾಗೂ ಮುಹಮ್ಮದ್ ಶಂಶುದ್ದೀನ್ ಉಪಸ್ಥಿತರಿದ್ದರು.