ಪತ್ರಿಕೋದ್ಯಮ ಕೇವಲ ವೃತ್ತಿಯಾಗದೆ ಬದಲಾವಣೆಯ ಕಹಳೆ ಮೊಳಗಿಸಲಿ: ಶಾಂತಮಲ್ಲಿಕಾರ್ಜುನ ಸ್ವಾಮೀಜಿ

0
483

ವಿರಾಜಪೇಟೆಯಲ್ಲಿ ಅನುಪಮ 20 ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ

ಸನ್ಮಾರ್ಗ ವಾರ್ತೆ

ವಿರಾಜಪೇಟೆ: ಪತ್ರಿಕೋದ್ಯಮ ಕೇವಲ ವೃತ್ತಿಯಾಗಿ ಉಳಿಯದೆ ಅದು ಬದಲಾವಣೆಯ ಕಹಳೆಯನ್ನು ಮೊಳಗಿಸಬೇಕು. ಜೊತೆಯಲ್ಲಿಯೇ ಕೆಡುಕುಗಳ ವಿರುದ್ಧ ಪ್ರತಿಭಟಿಸುವ ಮನೋಭಾವನೆಯನ್ನು ಬೆಳೆಸಬೇಕು” ಎಂದು ವಿರಾಜಪೇಟೆ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ವಿರಾಜಪೇಟೆಗೆ ಸಮೀಪದ ಅರಮೇರಿಯ ಶ್ರೀ ಕಳಂಚೇರಿ ಮಠದ ಶಾಂತಮಲ್ಲಸ್ವಾಮಿ ಸಭಾಂಗಣದಲ್ಲಿ ನಡೆದ ‘ಅನುಪಮ’ ಮಹಿಳಾ ಮಾಸಿಕದ 20ನೇ ವರ್ಷಾಚರಣೆಯ ವಿಶೇಷ ಸಂಚಿಕೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಮನುಷ್ಯನ ಪರಿಪೂರ್ಣತೆಯಿರುವುದು ಓದುವಿಕೆಯಲ್ಲಿ. ಓದುವಿಕೆಯೆಂಬುದು ಕಾಲಹರಣಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಕನ್ನಡಿಗರಾದ ಮಹಿಳಾ ಓದುಗರಿಗೆ ಓದುವಿಕೆಯ ಹೊಸ ಆಯಾಮವನ್ನು ಅನುಪಮ ಒದಗಿಸುತ್ತಾ ಬಂದಿದೆ. ಸಮಾಜದ ಅವಿಭಾಜ್ಯ ಅಂಗವಾದ ಮಹಿಳೆಯರು ಸ್ವಾಭಿಮಾನದ ಬದುಕು ಸಾಗಿಸಬೇಕೆಂಬುದು ಪತ್ರಿಕೆಯ ಧ್ಯೇಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಬಿಳಿಗುಂದ ಸರಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ಹೆಚ್.ಜಿ.ಸಾವಿತ್ರಿಯವರು ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, ಅನುಪಮ ಮಾಸಪತ್ರಿಕೆಯು ಕಳೆದ ಎರಡು ದಶಕಗಳಿಂದ ಕನ್ನಡ ನಾಡಿನ ಮಹಿಳೆಯರ ಜಾಗೃತಿಯ ಪ್ರಜ್ಞೆಯಾಗಿ ಕೆಲಸ ನಿರ್ವಹಿಸಿದೆ. ಕನ್ನಡ ನುಡಿಗೆ ಅನುಪಮದ ಕೊಡುಗೆ ಅತ್ಯಮೂಲ್ಯವಾಗಿದ್ದು. ಒಂದು ಪರಿಪೂರ್ಣ ಕೌಟುಂಬಿಕ ಪತ್ರಿಕೆ ಎಂಬ ನೆಲೆಯಲ್ಲಿ ಅತ್ಯಂತ ಯಶಸ್ವಿ ಹೆಜ್ಜೆಗಳನ್ನು ಕ್ರಮಿಸಿದೆ. ಪ್ರಸಕ್ತ ದಿನಗಳಲ್ಲಿ ಮಹಿಳೆಯರಿಗೆ ಧೈರ್ಯ ತುಂಬಲು, ಸ್ವಾಭಿಮಾನದ ಬದುಕು ಸಾಧಿಸಲು ಅನುಪಮದ ಸೇವೆ ನಿಚ್ಚಳವಾದದ್ದು ಎಂದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಶಿಕ್ಷಕಿ ಜಯಶ್ರೀಯವರು ಮಾತನಾಡುತ್ತಾ ಮಹಿಳಾ ಶೋಷಣೆ, ಮಹಿಳೆಯರ ಸ್ವಾತಂತ್ರ್ಯ, ಅವರ ಸ್ಥಾನಮಾನದ ಬಗ್ಗೆ ಅತಿಹೆಚ್ಚು ಚರ್ಚೆಯಾಗುತ್ತಿರುವ ಇಂದಿನ ದಿನಗಳಲ್ಲಿ ಮಹಿಳೆಯರು ಮಾಧ್ಯಮ ರಂಗದಲ್ಲಿಯೂ ಸಕ್ರಿಯರಾಗಬೇಕಾದ ಅಗತ್ಯವಿದೆ. ಮಹಿಳೆಯ ನೋವು-ನಲಿವುಗಳ ದ್ವನಿಯಾಗಿ ಆಕೆಯ ವ್ಯಕ್ತಿತ್ವ ಮತ್ತು ಪ್ರತಿಭೆಗಳ ವಿಕಸನಕ್ಕೆ ಸ್ಪೂರ್ತಿಯ ವೇದಿಕೆಯನ್ನು ಅನುಪಮ ಒದಗಿಸಿದೆ” ಎಂದರು.

ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ವಹೀದಾ ಶೌಕತ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಮಾಜ ಸೇವಕಿ ಐ.ಎಂ.ಕಾವೇರಮ್ಮ, ಕದನೂರು ಗ್ರಾಮ ಪಂಚಾಯ್ತಿ ಸದಸ್ಯೆ ಕೆ.ಎಂ.ಕಾವೇರಿ, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಸ್ಥಾನೀಯ ಅಧ್ಯಕ್ಷೆ ಎಂ.ಟಿ.ಪಿ.ನಜ್ಮಾ ವೇದಿಕೆಯಲ್ಲಿದ್ದರು. ಝಿಯಾ ಲಾಝಿಮ್ ಕಿರಾಅತ್ ಪರಿಸಿದರು. ಅನೀಷಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೆ.ಎಸ್. ರಫಿಯತ್ ಧನ್ಯವಾದವಿತ್ತರು. ಸಮೀರಾ ರಾಝಿಕ್ ನಿರೂಪಣೆಗೈದರು.