ತಾಯಿ ಕುಡಿಯುವ ನೀರು ಹುಡುಕುತ್ತಾ ಹೋದರು; ತಾಯಿ ಬರುವಷ್ಟರಲ್ಲಿ ಬಾಲಕಿ ಕುಸಿದು ಬಿದ್ದು ಸತ್ತಳು: ಭಾರತದ ವಲಸೆ ಕುಟುಂಬದಲ್ಲಿ ಹೀಗೊಂದು ಘಟನೆ

0
1637

ಫೀನಿಕ್ಸ್, ಜೂ.15: ಅಮೆರಿಕ ಪ್ರವೇಶಿಸಲು ಯತ್ನಿಸುವ ವೇಳೆ ಅರಿಝೋನದ ಮರುಭೂಮಿಯಲ್ಲಿ ಭಾರತದ ವಲಸೆ ತಂಡದ ಆರು ವರ್ಷದ ಬಾಲಕಿ ಉಷ್ಣತೆ ಸಹಿಸಲಾಗದೆ ಮೃತಪಟ್ಟಿದ್ದಾಳೆ. ಗುರುಪ್ರೀತ್ ಕೌರ್ ಎನ್ನುವ ಬಾಲಕಿ ಮೃತಪಟ್ಟಿದ್ದಾಳೆ ಎಂದು ಅಮೆರಿಕದ ಗಡಿ ಪಟ್ರೋಲ್ ಅಧಿಕಾರಿ ತಿಳಿಸಿದರು. ಪಶ್ಚಿಮ ಲೂಕ್ವಿಲ್ಲಿಯಲ್ಲಿ ಬುಧವಾರ ಘಟನೆ ನಡೆದಿತ್ತು. ಐವರು ಭಾರತೀಯರ ತಂಡ ಮೆಕ್ಸಿಕೊದ ಮೂಲ ಗಡಿ ದಾಟಲು ಬಂದಿತ್ತು. ಮಂಗಳವಾರ ಸ್ಥಳೀಯ ಕಾಲಮಾನ ಬೆಳಗ್ಗೆ ಹತ್ತು ಗಂಟೆಗೆ ಮಾನವ ಕಳ್ಳಸಾಗಾಟ ತಂಡ ಹಣ ಪಡೆದು ಲೂಕ್ವಿಲ್ಲಿಗೆ 27 ಕಿಲೊಮೀಟರ್ ಪಶ್ಚಿಮಕ್ಕೆ ತಲುಪಿಸಿತ್ತು. ತುಂಬ ನಡೆದು ಆಯಾಸಗೊಂಡಾಗ ಆರು ವರ್ಷದ ಬಾಲಕಿಯ ತಾಯಿ ಮತ್ತು ಇನ್ನೋರ್ವ ಮಹಿಳೆ ನೀರು ಹುಡುಕಲು ಹೊರಟು ಹೋಗಿದ್ದರು. ಇನ್ನೋರ್ವ ಮಹಿಳೆಯೊಂದಿಗೆ ಮಕ್ಕಳನ್ನು ಒಪ್ಪಿಸಿ ಹೋಗಿದ್ದರು. ಆದರೆ ನೀರು ಹುಡುಕಿ ಹೋದ ಮಹಿಳೆಯರಿಗೆ ಮರುಭೂಮಿಯಲ್ಲಿ ದಾರಿ ತಪ್ಪಿಹೋಯಿತು. 22 ಗಂಟೆಯ ಬಳಿಕ ಬೋರ್ಡರ್ ಪಟ್ರೋಲ್ ತಂಡ ಇವರನ್ನು ಪತ್ತೆಹಚ್ಚಿತ್ತು. ಇಂಗ್ಲಿಷ್ ಭಾಷೆ ಗೊತ್ತಿಲ್ಲದ ಮಹಿಳೆ ಸನ್ನೆಯಲ್ಲಿ ಮಗಳು ಮರುಭೂಮಿಯಲ್ಲಿದ್ದಾಳೆ ಎಂದು ತಿಳಿಸಿದ್ದಾರೆ. ನಾಲ್ಕು ಗಂಟೆಗಳ ಹುಡುಕಾಟದ ಬಳಿ ಅಮೆರಿಕದ ಗಡಿಯಿಂದ 1.6 ಕಿಲೋಮೀಟರ್ ದೂರದಲ್ಲಿ ಬಾಲಕಿಯ ಮೃತದೇಹ ಕಂಡು ಬಂದಿದೆ.

ಇಲ್ಲಿನ ಉಷ್ಣತೆ 42 ಡಿಗ್ರಿಯಾಗಿತ್ತು. ಆರು ವರ್ಷದ ಮಗಳನ್ನು ಒಪ್ಪಿಸಿದ್ದ ಮಹಿಳೆ ಮತ್ತು ಮಕ್ಕಳು ಗಡಿ ದಾಟಿ ಅಮೆರಿಕ ಪ್ರವೇಶಿಸಿದರೂ ಪೊಲೀಸರಿಗೆ ಸೆರೆಸಿಕ್ಕಿದ್ದಾರೆ. ಈ ವರ್ಷ ಮೇ 30ರವರೆಗೆ 58 ವಲಸೆಗಾರರು ಅರಿಝೋನದ ಮರು ಭೂಮಿಯಲ್ಲಿ ಗಡಿದಾಟುವಾಗ ಮೃತಪಟ್ಟಿದ್ದರು. ಮೆಕ್ಸಿಕೊ ಮೂಲಕ ಅನಧಿಕೃತವಾಗಿ ಅಮೆರಿಕಕ್ಕೆ ಹೋಗಲು ಯತ್ನಿಸುವ ಭಾರತೀಯರ ಸಂಖ್ಯೆ ಹೆಚ್ಚುತ್ತಿದೆ ಎಂದು ಇಮಿಗ್ರೇಶನ್ ಅಧಿಕಾರಿಗಳ ಲೆಕ್ಕವೂ ಬಹಿರಂಗಪಡಿಸಿದೆ.