ವೈವಾಹಿಕ ಜೀವನದಲ್ಲಿ ನಮ್ಮ ಬಾಳಸಂಗಾತಿ ತೃಪ್ತರೇ?

0
1155

ಖದೀಜ ನುಸ್ರತ್ ಅಬು ಧಾಬಿ

ವೈವಾಹಿಕ ಜೀವನದಲ್ಲಿ ನಮ್ಮ ಬಾಳಸಂಗಾತಿಯು ತೃಪ್ತಿಯಾಗಿದ್ದಾರೆಯೇ? ನಮ್ಮ ಸಂಗಾತಿಯು ನಿರೀಕ್ಷಿಸುವುದೆಲ್ಲವೂ ನಮ್ಮಿಂದ ಸಿಗುತ್ತಿದೆಯೇ? ಹೆಚ್ಚಿನವರು ಭಾವಿಸುವುದು ನನ್ನ ಸಂಗಾತಿ ತೃಪ್ತರಾಗಿದ್ದಾರೆ. ಅವರಿಗೇನು ಕೊರತೆಯಿದೆ? ಉತ್ತಮ ಆಹಾರ, ಮನೆ, ಮಕ್ಕಳು, ಕುಟುಂಬ, ಬೇಕಾದಷ್ಟು ಹಣ ಎಲ್ಲವೂ ಇದೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಪ್ರತಿಯೊಬ್ಬರೂ ತನ್ನ ಬಾಳ ಸಂಗಾತಿಯು ತನ್ನನ್ನು ಹೆಚ್ಚು ಪ್ರೀತಿಸಬೇಕು, ತನ್ನೊಂದಿಗೆ ಹೆಚ್ಚು ಸಮಯ ಕಳೆಯಬೇಕೆಂದು, ಅವರು ಅವರು ಹೇಳುವುದನ್ನೆಲ್ಲಾ ಆಲಿಸಬೇಕೆಂದು ಬಯಸುತ್ತಾರೆ. ಹೊರಗೆ ಹೋಗುವಾಗ ಜೊತೆಯಾಗಿ ಹೋಗಬೇಕು. ತನ್ನನ್ನು, ತನ್ನ ಕುಟುಂಬದವರನ್ನು ಗೌರವಿಸಬೇಕು, ತನ್ನ ಬಗ್ಗೆ ಕಾಳಜಿ ವಹಿಸಬೇಕೆಂದು ನಿರೀಕ್ಷಿಸುತ್ತಾರೆ. ಕಾಳಜಿ ವಹಿಸುವುದೆಂದರೆ ಅವರಿಗೆ ಉತ್ತಮ ಉಡುಪು, ಆಹಾರ,ವಾಹನ ಮನೆ, ಆಭರಣ ನೀಡುವುದು ಮಾತ್ರವಲ್ಲ. ಅವರ ಎಲ್ಲಾ ತರಹದ ಭಾವನೆಗಳಿಗೆ ಸ್ಪಂದಿಸುವುದಾಗಿದೆ.

ಪ್ರೀತಿ, ಪ್ರೇಮ ಅಥವಾ ಪ್ರಣಯವೆಂಬುದು ಕೇವಲ ಅವಿವಾಹಿತರಿಗಿರುವುದಲ್ಲ. ಪ್ರತಿಯೊಬ್ಬರ ಜೀವನದಲ್ಲೂ ವಿವಾಹದ ನಂತರ ಸಂಭವಿಸಬೇಕಾದುದಾಗಿದೆ. ಪ್ರೀತಿ, ಪ್ರೇಮವೆಂಬುದು ಕೇವಲ ಲೈಂಗಿಕ ಬಂಧನಗಳಿಗೆ ಸೀಮಿತವಾಗಿರಬಾರದು. ಪ್ರೀತಿಯೆಂಬುದು ಪತಿ ಪತ್ನಿಯ ನಡುವಿನ ಭಾವನಾತ್ಮಕ ಭಾಂಧವ್ಯವಾಗಿದೆ. ಅದು ಪತಿ ಪತ್ನಿಯರನ್ನು ಮಾನಸಿಕವಾಗಿ ಬಂಧಿಸುವ ಸೇತುವೆಯಾಗಿದೆ. ಪತಿ ಪತ್ನಿಯರ ಮಧ್ಯೆ ಉತ್ತಮ ಸಂಬಂಧವಿದ್ದಾಗ ಮಾತ್ರ ಅವರ ಆರೋಗ್ಯ, ಸೌಂದರ್ಯ, ಆತ್ಮ ವಿಶ್ವಾಸ ಇತ್ಯಾದಿ ವೃದ್ಧಿಸುತ್ತದೆ. ಕುಟುಂಬ ಜೀವನದಲ್ಲಿ ಉತ್ಸಾಹ ,ಆಕರ್ಷಣೆ ಮತ್ತು ಆಸಕ್ತಿಯುಂಟುಮಾಡುತ್ತದೆ. ಪತಿ ಮತ್ತು ಪತ್ನಿಯೆನ್ನುವುದು ಒಂದು ವಾಹನದ ಎರಡು ಚಕ್ರದಂತೆ ಎಲ್ಲಾ ಸಂಕಷ್ಟಗಳನ್ನು ಎದುರಿಸುತ್ತಾ ಹೋಗುವಂತಹ ಒಂದು ದೀರ್ಘ ಪ್ರಯಾಣವಾಗಿದೆ.

ದಂಪತಿಯರ ಮಧ್ಯೆ ಸಮಸ್ಯೆಯುಂಟಾಗಲು ಮತ್ತು ವಿವಾಹ ವಿಚ್ಛೇಧನೆಯ ಮುಖ್ಯ ಕಾರಣ ಅವರ ನಡುವೆ ಮಾತುಕತೆಯ ಕೊರತೆ, ಸಮಯದ ಕೊರತೆ, ತನ್ನ ಉದ್ಯೋಗದಲ್ಲಿ ನಿಬಿಡರಾಗಿರುವುದು, ಒಬ್ಬರು ಇನ್ನೊಬ್ಬರನ್ನು ನಿರ್ಲಕ್ಷಿಸುವುದು ಅಥವಾ ಅವಗಣಿಸುವುದು. ಅದೇ ರೀತಿ ವಿವಾಹೇತರ ಸಂಬಂಧವು ಯಶಸ್ವಿಯಾಗಲು ಮುಖ್ಯ ಕಾರಣ ಅವರು ಪರಸ್ಪರ ನಗುತ್ತಾ ಮಾತನಾಡಲು, ಹರಟೆ ಹೊಡೆಯಲು, ಚಾಟಿಂಗ್ ಮಾಡಲು, ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಬೇಕಾದಷ್ಟು ಸಮಯ ಕಳೆಯುತ್ತಾರೆ. ಅವರ ಸೌಂದರ್ಯ, ವಸ್ತ್ರ ಅಥವಾ ಇನ್ನಾವುದನ್ನೇ ಪರಸ್ಪರ ಇಷ್ಟಪಡುತ್ತಾ ಪ್ರಶಂಸಿಸುತ್ತಾರೆ. ಯಾರೂ ಕೂಡಾ ವಿವಾಹೇತರ ಬಂಧವನ್ನು ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ. ಕೆಲವು ಸಂದರ್ಭಗಳಲ್ಲಿ ತಮಗರಿವಿಲ್ಲದೆಯೇ ಈ ಬಲೆಯಲ್ಲಿ ಬೀಳುತ್ತಾರೆ. ತಮಗೆ ಬೇಕಾದ ಪ್ರೀತಿ, ಸಾಂತ್ವನ, ಆರೈಕೆ ಮನೆಯಲ್ಲಿ ಸಿಗದಿದ್ದಾಗ ಬೇರೆ ಯಾರಾದರೂ ಅದನ್ನು ನೀಡಿದಾಗ ಅವರೊಂದಿಗೆ ನಿಕಟ ಸಂಬಂಧವಿರಿಸುವುದು ಸ್ವಾಭಾವಿಕ. ಇಂತಹ ಸನ್ನಿವೇಶ ಕುಟುಂಬದಲ್ಲಿ ಉಂಟಾಗುವುದಕ್ಕಿಂತಲೇ ಮುಂಚೆ ಜಾಗ್ರತರಾಗಬೇಕು.

ತನ್ನ ಬಾಳಸಂಗಾತಿಯ ಕುಟುಂಬ, ಉದ್ಯೋಗ, ವೃತ್ತಿ, ಸೌಂದರ್ಯ, ಬಣ್ಣದಲ್ಲಿ ಸಂತೃಪ್ತರಾಗಬೇಕು. ಇಲ್ಲಿ ಸುಂದರಿ ಅಥವಾ ಸುಂದರನಾಗಬೇಕೆಂದಿಲ್ಲ. ಮನಸ್ಸು ಸುಂದರವಾಗಿ ಅದನ್ನು ಪ್ರದರ್ಶಿಸಿದರೆ ಮಾತ್ರ ಇಬ್ಬರಿಗೂ ಸುಂದರವಾಗಿಯೇ ಕಾಣಬಹುದು. ಸಂಪತ್ತು ಇದ್ದರೂ ಇಲ್ಲದಿದ್ದರೂ ಅದರಲ್ಲಿ ತೃಪ್ತಿಯಾಗಬೇಕು. ತನ್ನ ಬಾಳಸಂಗಾತಿ ಮಾಡುವ ಕೆಲಸಕಾರ್ಯಗಳನ್ನು ಮೆಚ್ಚುಗೆ ಪಡುತ್ತಾ ಪ್ರಶಂಸಬೇಕು ಮತ್ತು ಪ್ರೊತ್ಸಾಹಿಸಬೇಕು. ಅವರ ವಸ್ತ್ರಗಳನ್ನು ಮೆಚ್ಚುವುದು. ಅವರು ತಯಾರಿಸುವ ಆಹಾರವನ್ನು ಪ್ರಶಂಸಿಸಿರಿ. ಅವರ ಉತ್ತಮ ಸ್ವಭಾವಗಳನ್ನು ಹೊಗಳಿರಿ. ತನ್ನ ಸಂಗಾತಿಯ ಯಾವುದೇ ಸಣ್ಣ ಒಳಿತುಗಳನ್ನು ಕ್ಷುಲ್ಲಕ್ಕವಾಗಿ ಕಾಣಬೇಡಿರಿ. ಒಳಿತುಗಳನ್ನು ನೆನಪಿನಲ್ಲಿಡಿರಿ. ಕೆಡುಕುಗಳನ್ನು ಮರೆತುಬಿಡಿರಿ. ಇಬ್ಬರ ಮನಸ್ಸಿನಲ್ಲೂ ಉತ್ತಮವಾದ ನೆನಪುಗಳಿರಬೇಕು. ಇಬ್ಬರು ದೂರವಾದಾಗ ಪರಸ್ಪರ ಭೇಟಿಯಾಗಲು ಕಾತುರರಾಗಿರಬೇಕು. ತಮ್ಮ ಬಾಳಸಂಗಾತಿಯ ಅಗತ್ಯ, ಅವಶ್ಯಕತೆಗಳನ್ನು ಅವರು ಹೇಳುವುದಕ್ಕಿಂತಲೇ ಮುಂಚೆ ಅರ್ಥ ಮಾಡಿಕೊಂಡು ಪರಸ್ಪರ ಪೂರೈಸುವಂತಿರಬೇಕು. ನೀವು ಸ್ವತಃ ಮಾದರಿ ಕುಟುಂಬವಾಗಿರಬೇಕು. ಇತರರು ನಮ್ಮನ್ನು ಅನುಕರಿಸುವಂತಹ ಮಾದರಿ ಕುಟುಂಬವಾಗಬೇಕು.

ಮಕ್ಕಳಾದ ನಂತರ ಒಬ್ಬ ತಂದೆ, ತಾಯಿಯಾಗಿ ಪಾತ್ರವಹಿಸುವುದರ ಜೊತೆಗೆ ನಿಮ್ಮ ಬಾಳಸಂಗಾತಿಯೊಂದಿಗೆ ರೋಮಾಂಚನಕಾರಿಯಾಗಿ ನವ ವಧುವರನಂತೆಯೇ ವರ್ತಿಸಿರಿ. ಏಕಾಂಗಿಯಾಗಿ, ರಜಾ ದಿನಗಳ ಕೆಲವು ಸಮಯಗಳನ್ನು ಅವರೊಂದಿಗೆ ಕಳೆಯಿರಿ. ಬಾಳಸಂಗಾತಿಯೊಂದಿಗೆ ನಿಮ್ಮಯಾವ ವಿಷಯ, ಸಂಗತಿಯನ್ನು ಮುಚ್ಚಿಡಬೇಡಿರಿ. ಇಬ್ಬರೂ ಆಪ್ತ ಮಿತ್ರರಾಗಬೇಕು. ಕುಟುಂಬದ ಎಲ್ಲಾ ವಿಷಯಗಳನ್ನು ಪರಸ್ಪರ ಚರ್ಚಿಸಿ ತೀರ್ಮಾನ ಮಾಡಿಕೊಳ್ಳಿರಿ. ನಿಮ್ಮ ಎಲ್ಲಾ ಆರ್ಥಿಕ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳಿರಿ. ಜೀವನದಲ್ಲಿ ಎಲ್ಲರಿಗೂ ಏನಾದರೂ ಕೊರತೆ, ಪರಿಮಿತಿ ಇದ್ದೇ ಇರುತ್ತದೆ. ಬಾಳಸಂಗಾತಿಯಲ್ಲಿ ಇಲ್ಲದಿರುವುದರ ಬಗ್ಗೆ ಕೊರಗಬೇಡಿರಿ. ಅವರ ಕುಂದುಕೊರತೆ, ರಹಸ್ಯ ವಿಷಯಗಳನ್ನು ಇನ್ನೊಬ್ಬರೊಂದಿಗೆ ಹೇಳಬೇಡಿರಿ. ನಿಮ್ಮ ಬಾಳ ಸಂಗಾತಿಯನ್ನು ಇನ್ನೊಬ್ಬರಿಗೆ ಹೋಲಿಕೆ ಮಾಡುತ್ತಾ ಇನ್ನೊಬ್ಬರ ಬಾಳಸಂಗಾತಿಯನ್ನು ಹೊಗಳಬೇಡಿರಿ. ನಿಮ್ಮ ಬಾಳಸಂಗಾತಿಯನ್ನು ಮಕ್ಕಳ ಮುಂದೆ ಅವಮಾನಿಸಬೇಡಿರಿ. ಅವರ ಕುಟುಂಬದವರನ್ನು ಅವಮಾನಿಸಬೇಡಿರಿ. ಮಕ್ಕಳ ಮುಂದೆ ಎಂದೂ ಜಗಳವಾಡಬೇಡಿರಿ. ಇದು ಮಕ್ಕಳ ಮೇಲೆ ಭಾರೀ ಕೆಟ್ಟ ಪರಿಣಾಮಗಳನ್ನುಂಟುಮಾಡುತ್ತದೆ ಮಾತ್ರವಲ್ಲ ಮಕ್ಕಳಿಗೆ ಹೆತ್ತವರ ಮೇಲಿನ ಗೌರವ ಕಡಿಮೆಯಾಗುತ್ತದೆ. ಕಟ್ಟುನಿಟ್ಟಾದ ಪೋಲಿಸ್ ಅಥವಾ ಮುಖ್ಯೋಪಾಧ್ಯಾಯರಂತೆ ಗಂಭೀರವಾಗಿ ವರ್ತಿಸಬೇಡಿರಿ.

ಕಷ್ಟ, ನಷ್ಟ, ನೋವು, ದುಃಖದ ಕಾಲದಲ್ಲಿ ಬೆಂಬಲ, ಸಹಕಾರ, ಆತ್ಮವಿಶ್ವಾಸವನ್ನು ನೀಡಿರಿ. ಸುಖ ಮತ್ತು ಸಂತೋಷಗಳಲ್ಲಿ ಅವರೊಂದಿಗೆ ಉತ್ಸಾಹದೊಂದಿಗೆ ಪಾಲ್ಗೊಳ್ಳಿರಿ. ಕುಟುಂಬದ ಸ್ಠಿರತೆ, ದೀರ್ಘಕಾಲ ಬಾಳಿಕೆಗೆ ದಂಪತಿಗಳ ಮಧ್ಯೆ ಪರಸ್ಪರ ಸ್ನೇಹ, ವಿಶ್ವಾಸ, ಐಕ್ಯತೆ, ಸಹಕಾರ ಅತ್ಯಗತ್ಯ. ಹೊರಗಿನ ಎಲ್ಲಾ ಒತ್ತಡ, ನೋವು, ಸಮಸ್ಯೆಗಳಿಗೆ ಪರಸ್ಪರ ನೋವು ನಿವಾರಕರೂ, ಒತ್ತಡ ನಿವಾರಕರೂ ಆಗಬೇಕು. ತಮ್ಮ ದುಃಖ, ಸಂಕಟ, ನೋವು, ಸಮಸ್ಯೆ, ಚಿಂತೆಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡಾಗ ಮನಸ್ಸು ಹಗುರವಾಗುವುದು. ಅವರ ನೋವು,ಸಮಸ್ಯೆ ಪರಿಹಾರವಾಗುದಕ್ಕಿಂತಲೂ ಭಾವನೆಗಳಿಗೆ ಸ್ಪಂದಿಸುತ್ತಾ ಅಂಗೀಕರಿಸುವುದು ಮುಖ್ಯವಾಗಿರುತ್ತದೆ.