ಪ್ರವಾದಿ ಮುಹಮ್ಮದ್(ಸ): ಜಗತ್ತು ಕಂಡ ಶ್ರೇಷ್ಠ ನಾಯಕ

0
323

ಖದೀಜ ನುಸ್ರತ್ ಅಬುಧಾಬಿ

ಪ್ರವಾದಿ ಮುಹಮ್ಮದ್(ಸ)ರು ಧಾರ್ಮಿಕ ಹಾಗೂ ಲೌಖಿಕ ವಿಷಯದಲ್ಲಿ ಇತಿಹಾಸದಲ್ಲಿಯೇ ಅತಿ ಹೆಚ್ಚು ಯಶಸ್ಸನ್ನು ಕಂಡ ನಾಯಕರಾಗಿದ್ದರು. ಓರ್ವ ನಾಯಕನಲ್ಲಿರಬೇಕಾದಂತಹ ಎಲ್ಲಾ ರೀತಿಯ ಶ್ರೇಷ್ಠ ಗುಣಗಳನ್ನು ಸಂಪೂರ್ಣವಾಗಿವಾಗಿ ಹೊಂದಿದ್ದಂತಹ ಮಾದರಿ ವ್ಯಕ್ತಿಯಾಗಿದ್ದರು. ಪ್ರವಾದಿ ಮುಹಮ್ಮದ್(ಸ)ರ ಮರಣಾನಂತರ ಜಗತ್ತಿನಾದ್ಯಂತ ಎಲ್ಲಾ ಧರ್ಮದ ಜನರು ಜಾತಿಮತ ಭೇದಭಾವವಿಲ್ಲದೆ ಅವರ ಚರಿತ್ರೆಯನ್ನು ಅಧ್ಯಯನ ಮಾಡುವುದನ್ನು ಕಾಣುತ್ತೇವೆ. ಜಗತ್ತಿನ ಹೆಚ್ಚಿನ ಇತಿಹಾಸಗಾರರು ಬರಹಗಾರರು, ಬುದ್ದಿಜೀವಿಗಳು, ಪತ್ರಕತ೯ರು, ಲೇಖಕರು, ಚಿಂತಕರು, ತತ್ವಜ್ಞಾನಿಗಳು ಹಾಗೂ ಶ್ರೇಷ್ಠ ನಾಯಕರು ಪ್ರವಾದಿಯವರ ಚರಿತ್ರೆಯನ್ನು ಅಧ್ಯಯನ ಮಾಡಿದ್ದಾರೆ. ಮಾತ್ರವಲ್ಲ ಅವರು ಈ ಶ್ರೇಷ್ಠ ನಾಯಕನ ಚರಿತ್ರೆಯಿಂದ ಪಾಠವನ್ನು ಕಲಿತು ಪ್ರಭಾವಿತರಾಗಿದ್ದಾರೆ. ಗಾಂಧೀಜಿ, ನೆಪೋಲಿಯನ್, ಟಾಲ್ ಸ್ಟಾಯ್, ಮೈಕಲ್ ಹೆಚ್ ಹಾರ್ಟ್, ಅನ್ನಿ ಬೆಸಂಟ್, ಎಡ್ವರ್ಡ್ ಗಿಬ್ಬನ್, ಸರ್ ಜಾರ್ಜ್ ಬೆರ್ನಾಡ್ ಶಾ, ಸರೀಜಿನಿ ನಾಯ್ಡು, ಜೇಮ್ಸ್ ಮಿಷನರ್ ಇತ್ಯಾದಿ ಕೆಲವು ಪ್ರಭಾವಿತ ನಾಯಕರು ಮುಹಮ್ಮದ್(ಸ) ರ ಬಗ್ಗೆ ತಮ್ಮ ಲೇಖನ ಮತ್ತು ಆತ್ಮಕಥೆಗಳಲ್ಲಿ ಅಮೂಲ್ಯವಾದ ಅಭಿಪ್ರಾಯಗಳನ್ನು ಬರೆದಿಟ್ಟಿರುವುದನ್ನು ಕಾಣುತ್ತೇವೆ.

ಪ್ರವಾದಿ ಮುಹಮ್ಮದ್(ಸ) ಒಂದು ಉತ್ತಮ ಸಮಾಜವನ್ನು ನಿರ್ಮಿಸುವ ಸಮಗ್ರ ದೂರದೃಷ್ಟಿಯನ್ನು ಹೊಂದಿದ್ದರು. ಅದು ಜೀವನದ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಜನರನ್ನು ಅಂಧಕಾರದಿಂದ ಹೊರತೆಗೆದು ಸನ್ಮಾರ್ಗದ ಪ್ರಕಾಶದೆಡೆಗೆ ತರುವ ಸಮಗ್ರವಾದ ಧ್ಯೇಯೊದ್ದೇಶವನ್ನು ಹೊಂದಿದ್ದರು. ಅವರು ದ್ವೇಷ, ಕಠಿಣ ಹೃದಯದ ಜನರನ್ನು ಸೌಮ್ಯತೆ, ಸಹೋದರತ್ವ, ಪರಸ್ಪರ ಪ್ರೀತಿಸುವ ಗೌರವಿಸುವವರನ್ನಾಗಿ ಮಾರ್ಪಡಿಸಿದರು. ಹೆಣ್ಣಮಕ್ಕಳನ್ನು ಜೀವಂತವಾಗಿ ಹೂಳುವ, ಮದ್ಯ, ಅಕ್ರಮ, ಅನೀತಿ, ಅರಾಜಕತೆ, ಜೂಜು, ಅತ್ಯಾಚಾರ, ಅಸಮಾನತೆ, ಅನ್ಯಾಯ ತಾಂಡವಾಡುತ್ತಿದ್ದಂತಹ ಕಾಲದಲ್ಲಿ ಆಧ್ಯಾತ್ಮಿಕತೆ, ನೈತಿಕತೆ, ನೀತಿಶಾಸ್ತ್ರ, ಧರ್ಮಶಾಸ್ತ್ರದ ಬಗ್ಗೆ ಬೋಧಿಸಿದರು.

ಪ್ರವಾದಿ ಮುಹಮ್ಮದ್(ಸ) ನಿಷ್ಕಳಂಕ ಹೃದಯದಿಂದ ಜನರನ್ನು ಒಳಿತಿನೆಡೆಗೆ ಪ್ರೇರೇಪಿಸುತ್ತಿದ್ದರು ಮತ್ತು ಎಲ್ಲಾ ರೀತಿಯ ಕೆಡುಕಿನಿಂದ ತಡೆಯುತ್ತಿದ್ದರು. ಇಹಪರ ಲೋಕದಲ್ಲಿ ದೇವನ ಸಂಪ್ರೀತಿಯನ್ನು ಗಳಿಸುವುದು ಮಾತ್ರ ಅವರ ಜೀವನದ ಗುರಿಯಾಗಿತ್ತು. ಅವರು ವಾಸಿಸುತ್ತಿದ್ದಂತಹ ಪರಿಸರಕ್ಕೆ ಪರಿಚಯವೇ ಇಲ್ಲದಂತಹ ಧರ್ಮದ ಸತ್ಯ ಮತ್ತು ಸಮಾನತೆಯ ತತ್ವಗಳು ಜನರನ್ನು ಆಕರ್ಷಿಸಿತು. ಅವರ ಸೌಮ್ಯ ಸ್ವಭಾವ ಮತ್ತು ಅತ್ಯುತ್ತಮ ರೀತಿಯಲ್ಲಿ ಸದುಪದೇಶ ನೀಡುವ ಕಲೆ, ಅಲ್ಲಾಹನೊಂದಿಗಿನ ದೃಢ ವಿಶ್ವಾಸ. ಉಪದೇಶಿಸುವ ವಿಷಯದಲ್ಲಿರುವ ಆತ್ಮವಿಶ್ವಾಸ, ಅವರ ಧೈರ್ಯ ಮತ್ತು ಶೌರ್ಯ ಜನರ ಮೇಲೆ ಅತೀ ಹೆಚ್ಚು ಪ್ರಭಾವ ಬೀರುತ್ತಿತ್ತು. ಸಂದೇಶವನ್ನು ಜನರಿಗೆ ಅತ್ಯುತ್ತಮ ರೀತಿಯಲ್ಲಿ ಮನವರಿಕೆ ಮಾಡುವ ಸಾಮರ್ಥ್ಯ ಹೊಂದಿದರು.

ಪ್ರವಾದಿ ಮುಹಮ್ಮದ್(ಸ) ಅತ್ಯುನ್ನತ ಹಾಶಿಮ್ ಮನೆತನದಲ್ಲಿ ಹುಟ್ಟಿದವರಾಗಿದ್ದರೂ ಅಧಿಕಾರ ಸಂಪತ್ತನ್ನು ಹೊಂದಿರಲಿಲ್ಲ. ಹುಟ್ಟಿನಲ್ಲೇ ಓರ್ವ ಅನಾಥರಾಗಿದ್ದರು. ಸೇನಾಬಲವು ಇರಲಿಲ್ಲ. ಔಪಚಾರಿಕ ಶಿಕ್ಷಣವನ್ನೂ ಪಡೆದಿರಲಿಲ್ಲ. ಓದುವ, ಬರೆಯುವಂತಹ ಕಲೆಯನ್ನು ಕಲಿತಿರಲಿಲ್ಲ. ಅವರು ಓರ್ವ ನಿರಕ್ಷರಿಯಾಗಿದ್ದರು. ಆದರೂ ಅವರು ಸ್ವತಃ ತಮ್ಮದೇ ಆದ ಅದ್ಭುತಕರವಾದ ಪರಂಪರೆಯನ್ನು ನಿರ್ಮಿಸಿದರು.

ಇಂದಿನಂತೆ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಅಧಿಕಾರವುಳ್ಳವರು ಯಾವಾಗಲೂ ಅತೀ ಹೆಚ್ಚು ಅಹಂಕಾರಿಯಾಗಿರುತ್ತಾರೆ. ಪ್ರಸಕ್ತ ಕಾಲದಲ್ಲಿಯೂ ಜನರಿಗೆ ಅಧಿಕಾರ ಸಿಕ್ಕಿದರೆ ಅವರ ಆಹಾರ ಪದ್ದತಿ, ಧರಿಸುವ ಬಟ್ಟೆ, ವಾಸಿಸುವ ಮನೆ, ಭದ್ರತಾ ಪಡೆ, ಚಲಿಸುವ ಐಶಾರಾಮಿ ವಾಹನಗಳು ಮತ್ತು ವಿಮಾನಗಳು ಹೀಗೆ ಅವರ ಜೀವನ ರೀತಿ ಬದಲಾಗುತ್ತದೆ. ಪ್ರವಾದಿ ಮುಹಮ್ಮದ್(ಸ) ಓರ್ವ ವಿನಮ್ರ ನಾಯಕರಾಗಿದ್ದರು. ಸಾಮಾನ್ಯ ಜನರು ತಿನ್ನುವುದನ್ನೇ ತಿನ್ನುತ್ತಿದ್ದರು. ನೆಲದ ಮೇಲೆ ಕುಳಿತು ತಿನ್ನುತ್ತಿದ್ದರು. ಜನರೊಂದಿಗೆ ಬೆರೆಯುತ್ತಿದ್ದರು. ಸಾಮಾನ್ಯ ಜನರಂತೆಯೇ ವಸ್ತ್ರ ಧರಿಸುತ್ತಿದ್ದರು. ತಮ್ಮ ವಸ್ತ್ರಗಳಿಂದ ಇತರರನ್ನು ಆಕರ್ಷಿಸಲು ಪ್ರಯತ್ನಿಸುತ್ತಿರಲಿಲ್ಲ. ಇತರ ಯಾವುದೇ ನಾಯಕರಂತೆ ಹಣ ಸಂಪಾದಿಸುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಅವರು ಬರುವಾಗ ತಮ್ಮ ಅನುಯಾಯಿಗಳು ಎದ್ದು ನಿಲ್ಲುವುದನ್ನೂ ಕೂಡಾ ಇಷ್ಟ ಪಡುತ್ತಿರಲಿಲ್ಲ. ಮಾತ್ರವಲ್ಲ ಮನೆಯಲ್ಲಿಯೂ ತಮ್ಮ ಎಲ್ಲಾ ಕೆಲಸಗಳನ್ನು ಸ್ವತಃ ಮಾಡುತ್ತಿದ್ದರು.

“ಅವರು ಏಕಕಾಲದಲ್ಲಿ ಧರ್ಮಾಧಿಕಾರಿ ಮತ್ತು ಆಡಳಿತಾಧಿಕಾರಿ ಆಗಿದ್ದರು. ಅವರು ಆಡಂಭರಗಳಿಲ್ಲದ ಧರ್ಮಾಧಿಕಾರಿ ಆಗಿದ್ದರು. ಸೇನಾಪಡೆಗಳಿಲ್ಲದ ಆಡಳಿತಾಧಿಕಾರಿಯಾಗಿದ್ದರು. ಸದಾ ಸಜ್ಜರಾಗಿರುವ ಸೇನೆಗಳಿಲ್ಲದೆ, ಅಂಗರಕ್ಷಕರಿಲ್ಲದೆ, ಅರಮನೆಗಳಿಲ್ಲದೆ, ಸ್ಥಿರ ಆದಾಯಗಳಿಲ್ಲದೆ. ಯಾವುದೇ ಒಬ್ಬ ಮನುಷ್ಯ ದೈವಿಕ ಆಳ್ವಿಕೆ ನಡೆಸಿದ್ದೇನೆಂದು ಹೇಳಲಿದ್ದರೆ ಅದು ಮುಹಮ್ಮದ್ ಆಗಿದ್ದಾರೆ . ಯಾವುದೇ ಆಯುಧಗಳು ಮತ್ತು ಅದರ ಬೆಂಬಲಗಳಿಲ್ಲದೆ ಅದರ ಅಧಿಕಾರ ಇತ್ತು.” -ರೆವೆರೆಂಡ್ ಬಾಸ್ವರ್ತ್ ಸ್ಮಿತ್

ಕಟ್ಟು ನಿಟ್ಟು, ಕ್ಷಮೆ, ಸಹಾನು ಭೂತಿ, ಕರುಣೆ, ನ್ಯಾಯದ ಮಧ್ಯೆ ಸಮತೋಲನವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದರು ಎಂಬುದಕ್ಕೆ ಅವರ ಚರಿತ್ರೆಯು ಸಾಕ್ಷಿಯಾಗಿದೆ. ಅಧಿಕೃತ ಕಾರ್ಯದರ್ಶಿ, ಸಿಬ್ಬಂದಿ, ಸೇನೆ, ನಿಯೋಗ ಯಾವುದೂ ಇಲ್ಲದೇ ಓರ್ವ ನಾಯಕನ ಎಲ್ಲಾ ಕೆಲಸದ ಉಸ್ತುವಾರಿ ಸ್ವತಃ ತಾವೇ ವಹಿಸುತ್ತಿದ್ದರು. ಮದೀನಾಕ್ಕೆ ಬರುತ್ತಿದ್ದ ನಿಯೋಗಗಳನ್ನು ಸ್ವತಃ ಭೇಟಿಯಾಗುತ್ತಿದ್ದರು. ತಮ್ಮ ಸಂಗಾತಿಗಳಿಗೆ ಆದೇಶಿಸುವುದಕ್ಕಿಂತ ಮೊದಲು ಅದನ್ನು ಸ್ವತಃ ಪಾಲಿಸುತ್ತಿದ್ದರು. ತಮ್ಮ ಸಂಗಾತಿಗಳ ಸಾಹಿತ್ಯ, ಕಲೆ, ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಅವರ ಧ್ಯೇಯವನ್ನು ಸಾಧಿಸುವುದರಲ್ಲಿ ಪ್ರೊತ್ಸಾಹ ನೀಡುತ್ತಿದ್ದರು. ಯಾವುದೇ ಸಂಗಾತಿಯನ್ನು ಕಾಣದಿದ್ದರೆ ಅವರ ಬಗ್ಗೆ ವಿಚಾರಿಸುತ್ತಿದ್ದರು. ಎಲ್ಲರ ಅಭಿಪ್ರಾಯಗಳಿಗೆ ಗೌರವ ಮತ್ತು ಆದ್ಯತೆ ನೀಡುತ್ತಿದ್ದರು. ಎಂತಹ ಸಂಕಷ್ಟಗಳ ಸಂದರ್ಭದಲ್ಲೂ ತಮ್ಮ ಅನುಯಾಯಿಗಳಿಗೆ ಸಕಾರಾತ್ಮಕ ಆಶಾವಾದಿ ಭಾವನೆಯೊಂದಿಗೆ ಸಹನೆಯ ಉಪದೇಶ ನೀಡಿ ಹುರಿದುಂಬಿಸುತ್ತಿದ್ದರು. ಹಲವಾರು ರೀತಿಯ ವೈಯಕ್ತಿಕ ಸಂಕಷ್ಟಗಳನ್ನು ಎದುರಿಸಬೇಕಾಂತಹ ಪರಿಸ್ಥಿತಿ ಉಂಟಾಗಿತ್ತು. ಸೋಲಿನ ಬಗ್ಗೆ ನಿರಾಶರಾಗದಂತೆ, ಅಲ್ಲಾಹನ ಮೇಲೆ ದೃಢವಾದ ವಿಶ್ವಾಸವಿಡಲು ಪ್ರೊತ್ಸಾಹಿಸುತ್ತಿದ್ದರು. ಹಲವು ವೈವಿಧ್ಯಮಯ ಜನಾಂಗಗಳನ್ನು ಯಾವುದೇ ಸಾಮಾಜಿಕ, ಆರ್ಥಿಕ, ವರ್ಣ, ಕುಲ, ಗೋತ್ರಗಳೆಂಬ ಬೇಧಭಾವಗಳಿಲ್ಲದೆ ಸಮಾನರಾಗಿ ಒಂದುಗೂಡಿಸುವಲ್ಲಿ ವಿಜಯಿಯಾಗಿದ್ದರು. ಇತಿಹಾಸದಾದ್ಯಂತ ಹೀಗೆ ಎಲ್ಲ ರೀತಿಯ ಜನರನ್ನು ಒಂದುಗೂಡಿಸುವ ಕೆಲಸವನ್ನು ಯಾರೂ ಮಾಡಿದ ಉದಾಹರಣೆ ವಿರಳವಾಗಿದೆ.

ಜಗತ್ತಿನಲ್ಲಿ ವ್ಯಾಪಾರ, ರಾಜಕೀಯ, ಮತ್ತು ಇತರ ಮಹತ್ಕಾರ್ಯಗಳಲ್ಲಿ ಸಫಲರಾದ ಅನೇಕ ನೇತಾರರು ಕುಟುಂಬ ಜೀವನದಲ್ಲಿ ವಿಫಲರಾಗುವುದನ್ನು ಕಾಣುತ್ತೇವೆ. ಆದರೆ ಪ್ರವಾದಿ ಮಹಮ್ಮದ್(ಸ್) ಕುಟುಂಬ ಜೀವನದಲ್ಲಿಯೂ ಉತ್ತಮ ಮಾದರಿಯಾಗಿದ್ದಾರೆ. ಪತ್ನಿಯರು, ಪುತ್ರಿಯರು ಮತ್ತು ಕುಟುಂಬದ ಇನ್ನಿತರ ಬಂಧುಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಇಂದಿನಂತೆ ಕಂಪ್ಯುಟರ್ ,ಇನ್ ಟರ್ನೆಟ್ ಮತ್ತು ಸಾಮಾಜಿಕ ಜಾಣತಾಣಗಳು ಇಲ್ಲದಂತಹ ಕಾಲದಲ್ಲಿ ಅವರಿಗೆ ಮಿಲಿಯಾಂತರ ಅನುಯಾಯಿಗಳಿದ್ದರು ಮಾತ್ರವಲ್ಲ ಇಂದಿಗೂ ಪ್ರಪಂಚದಾದ್ಯಂತ ಕಾಣಸಿಗುತ್ತಾರೆ. ನಿಷ್ಠಾವಂತ ಜನರು ಅವರನ್ನು ನೋಡದೆಯೇ ಅವರ ಮಾತುಗಳನ್ನು ಪ್ರತ್ಯಕ್ಷವಾಗಿ ಕೇಳದೆಯೇ ಅವರ ಸಂದೇಶಗಳಲ್ಲಿ ದೃಢ ವಿಶ್ವಾಸವಿರಿಸುತ್ತಾರೆ. ಅವರ ನಂತರ ಪ್ರತಿಯೊಂದು ತಲೆಮಾರುಗಳಲ್ಲಿಯೂ ಉತ್ತಮ ನಾಯಕರನ್ನು ಹುಟ್ಟು ಹಾಕಿದೆ. ಜಗತ್ತಿನ ಹೆಚ್ಚಿನೆಲ್ಲಾ ನಾಯಕರ ಮರಣದೊಂದಿಗೆ ಅವರ ಆದರ್ಶವು ಕೊನೆಗೊತ್ತದೆ. ಆದರೆ ಮುಹಮ್ಮದ್(ಸ) ತಮ್ಮ ಲಕ್ಷಾಂತರ ಅನುಯಾಯಿಗಳ ಹೃದಯ ಮಾತು ಕೃತಿಯಲ್ಲಿಯೂ ಜೀವಿಸುವುದನ್ನು ನಾವು ಕಾಣುತ್ತಿದ್ದೇವೆ.