ಹೊಸದಿಲ್ಲಿ,ಮೇ 11: ಗುಜರಾತ್ ಗಲಭೆಯಲ್ಲಿ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕಲು ವಾಜಪೇಯಿ ನಿರ್ಧರಿಸಿದ್ದರು ಎಂದು ಮಾಜಿ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವರಾದ ಯಶ್ವಂತ್ ಸಿನ್ಹಾ ಹೇಳಿದರು. ಅಂದು ಅಡ್ವಾಣಿ ಮಧ್ಯೆ ಪ್ರವೇಶಿಸಿದ್ದರಿಂದ ಮೋದಿ ಬಚಾವಾದರು ಎಂದು ಯಶ್ವಂತ್ ಸಿನ್ಹಾ ತಿಳಿಸಿದರು.
ಗೋವಾದಲ್ಲಿ ನಡೆದ ಪಾರ್ಟಿ ಕಾರ್ಯಕಾರಿಣಿಯಲ್ಲಿ ಮೋದಿಯನ್ನು ರಾಜೀನಾಮೆ ನೀಡುವಂತೆ ವಾಜಪೇಯಿ ಹೇಳಿದರು. ಅದಕ್ಕೆ ಮೋದಿ ಸಿದ್ಧರಾಗುವುದಿಲ್ಲವಾದರೆ ಸರಕಾರವನ್ನು ವಿಸರ್ಜಿಸಲಾಗುವುದೆಂದು ವಾಜಪೇಯಿ ಹೇಳಿದ್ದರು. ಆದರೆ, ಗುಜರಾತ್ ಸರಕಾರದ ವಿರುದ್ಧ ಕ್ರಮ ಕೈಗೊಂಡರೆ ಕೇಂದ್ರದ ಸಚಿವ ಸ್ಥಾನಕ್ಕೆ ರಾಜೀಮೆ ನೀಡುವುದಾಗಿ ಅಡ್ವಾಣಿ ಬೆದರಿಕೆ ಹಾಕಿದರು. ಇದು ತೀರ್ಮಾನದಿಂದ ಹಿಂದೆ ಸರಿಯಲು ವಾಜಪೇಯಿಯವರನ್ನು ಪ್ರೇರೇಪಿಸಿತು ಎಂದು ಸಿನ್ಹಾ ತಿಳಿಸಿದರು. ರಾಜೀವ್ ಗಾಂಧಿ ಐಎನ್ಎಸ್ ವಿರಾಟ್ನ್ನು ಖಾಸಗಿ ಟ್ಯಾಕ್ಸಿಯಂತೆ ಬಳಸಿದರೆನ್ನುವ ಹೇಳಿಕೆಯನ್ನು ಯಶ್ವಂತ್ ಸಿನ್ಹಾ ಟೀಕಿಸಿದರು. ಓರ್ವ ಪ್ರಧಾನಿಯಿಂದ ಇಂತಹ ಮಾತುಗಳು ಒಮ್ಮೆಯೂ ಬರಬಾರದಾಗಿತ್ತು ಎಂದು ಅವರು ಹೇಳಿದರು. ಕಳೆದ ಯುಪಿಎ ಸರಕಾರದ ಕಾಲದಲ್ಲಿ ಈಗಿನದಕ್ಕಿಂತ ಜಿಡಿಪಿ ಹೆಚ್ಚು ಬೆಳವಣಿಗೆ ಕಂಡಿತ್ತು ಎಂದರು.












