ಹೊಸದಿಲ್ಲಿ,ಮೇ 10: ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ವಿರುದ್ಧ ಮಾಡಿರುವ ಆರೋಪಗಳಿಗೆ ಕಾಂಗ್ರೆಸ್ ಬಲವಾದ ಪ್ರತ್ಯುತ್ತರ ನೀಡಿದೆ. ವಾಯುಸೇನೆಯ ವಿಮಾನಗಳನ್ನು ಮೋದಿ ಸ್ವಂತ ಟ್ಯಾಕ್ಸಿಯಾಗಿ ಬದಲಾಯಿಸಿದರು ಎಂದು ಕಾಂಗ್ರೆಸ್ ವಕ್ತಾರ ರಣ್ದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.
ಸತ್ಯಕ್ಕೆ ಬೆಲೆ ನೀಡದ ಮೋದಿ, ಹೇಳುವುದಕ್ಕೆ ಯಾವುದೇ ಸ್ವಂತ ಸಾಧನೆ ಇಲ್ಲದ್ದರಿಂದ ಸುಳ್ಳು ಪ್ರಚಾರಕನಾಗಿ ಬದಲಾಗಿದ್ದಾರೆ ಎಂದು ಇನ್ನೋರ್ವ ಕಾಂಗ್ರೆಸ್ ವಕ್ತಾರ ಪವನ್ ಖೇರ್ ಹೇಳಿದರು. ಮೋದಿ ತೀರ ಹೇಡಿಯಾದ್ದರಿಂದ ಹತ್ಯೆಗೊಳಗಾದ ಪ್ರಧಾನಿಯನ ಹೆಸರನ್ನು ಅಸಾಂದರ್ಭಿಕವಾಗಿ ಎಳೆದು ಹಾಕುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಆರೋಪಿಸಿದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ, ವಿಮಾನ ವಾಹಕ ಹಡಗು ಐಎನ್ಎಸ್ ವಿರಾಟ್ನಲ್ಲಿ ರಜಾದಿನ ಕಳೆದಿದ್ದಾರೆ ಎಂದು ಮೋದಿ ಭಾಷಣವೊಂದರಲ್ಲಿ ಆರೋಪಿಸಿದ್ದರು.
ವಾಯು ಸೇನೆಯ ಒಂದು ಪ್ರಯಾಣಕ್ಕೆ ಮೋದಿ ಕೇವಲ 744ರೂಪಾಯಿ ಕೊಟ್ಟದ್ದೂ ಇದೆ ಎಂದು ಸುರ್ಜೇವಾಲ ಹೇಳಿದರು. ಅಧಿಕಾರಕ್ಕೆ ಬಂದ ನಂತರ ಮೋದಿ 240 ಅನಧಿಕೃತ ಪ್ರಯಾಣಕ್ಕೆ ಒಟ್ಟು 1.4 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ. ಸತ್ಯವನ್ನು ತಿರುಚಲು ಸುಳ್ಳು ಘಟನೆಗಳನ್ನು ಸೃಷ್ಟಿಸುವುದು ಮೋದಿಯ ರೀತಿಯಾಗಿದೆ. ಸ್ವಂತ ಲೋಪಗಳು ಬೇಟೆಯಾಡುತ್ತಿರುವುದರಿಂದ ಲಜ್ಜೆಯಿಲ್ಲದೆ ಇತರರ ವಿರುದ್ಧ ಮೋದಿ ಬೆರಳೆತ್ತುತ್ತಿದ್ದಾರೆಂದು ಅವರು ಹೇಳಿದರು.
ಐಎನ್ಎಸ್ ವಿರಾಟ್ನಲ್ಲಿ ರಾಜೀವ್ ಗಾಂಧಿ ರಜಾಕಾಲ ಪ್ರಯಾಣವಲ್ಲ, ಅಧಿಕೃತ ಪ್ರಯಾಣವಾಗಿತ್ತು ಎಂದು ಮಾಜಿ ನೌಕಾಸೇನಾ ವೈಸ್ ಅಡ್ಮಿರಲ್ ವಿನೋದ ಪಸ್ರಚ್ ತಿಳಿಸಿದ್ದಾರೆ ಎಂದು ಖೇರ ಹೇಳಿದರು. ರಫೇಲ್ ಅಕ್ರಮ, ನೋಟು ಅಮಾನ್ಯೀಕರಣ, ನಿರುದ್ಯೋಗ ಮುಂತಾದ ಗಂಭೀರ ವಿಷಯಗಳಲ್ಲಿ ಕಳೆದ ಆರು ತಿಂಗಳಲ್ಲಿ ರಾಹುಲ್ ಗಾಂಧಿ ಮೋದಿಯನ್ನು ಚರ್ಚೆಗೆ ಕರೆಯುತ್ತಲೇ ಇದ್ದಾರೆ. ಈ ಬಗ್ಗೆ ಮಾತಾಡಲು ಮೋದಿ ಈವರೆಗೂ ಧೈರ್ಯ ತೋರಿಸಿಲ್ಲ. ಸ್ವಂತ ವೈಫಲ್ಯಗಳ ಹೆಸರಿನಲ್ಲಿ ಮತ ಯಾಚಿಸುತ್ತಿರುವ ಮೊದಲ ಪ್ರಧಾನಿ ಮೋದಿ ಆಗಲಿದ್ದಾರೆ. ಪುಲ್ವಾಮ ಘಟನೆ ಅದರಲ್ಲೊಂದು. 40 ಸೈನಿಕರನ್ನು ಭಯೋತ್ಪಾದಕರು ಹತ್ಯೆ ಮಾಡಿದರು. ಮೋದಿ ಆಡಳಿತದಲ್ಲಿ ಆಂತರಿಕ ಸುರಕ್ಷೆಯ ದೊಡ್ಡ ವೈಫಲ್ಯವಿದು ಎಂದು ಖೇರ್ ಹೇಳಿದರು.












