ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.16:ಝಾರ್ಕಂಡಿನಲ್ಲಿ ಮತಾಂತರ ಆರೋಪದಲ್ಲಿ ಕ್ರೈಸ್ತ ಸಮುದಾಯ ಪಾದ್ರಿ ವಿರುದ್ಧ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ ಘಟನೆಯನ್ನು ವಿರೋಧಿಸಿ ಕಾಂಗ್ರೆಸ್ ರಂಗಪ್ರವೇಶಿಸಿದೆ. ಕೇರಳದ ಪಾದ್ರಿಯೊಬ್ಬರನ್ನು ಮತಾಂತರ ಆರೋಪಿಸಿ ಝಾರ್ಕಂಡಿನಲ್ಲಿ ಬಂಧಿಸಲಾಗಿದೆ. ಫಾದರ್ ಬಿನೊಯ್ ಜೋನ್ ಬಂಧಿತ ಪಾದ್ರಿಯಾಗಿದ್ದಾರೆ. ಬಂಧಿತ ಫಾದರ್ ಬಿನೊಯ್ ಜೋನ್ರವರನ್ನು ಹಾಗೂ ಸಂಘಪರಿವಾರವು ಕೆಡವಿದ ಝಾರ್ಕಂಡಿನ ಜೆಸ್ಯೂಟ ಮಿಶನರಿ ಸಭೆಯ ಅಧೀನದ ಸೇಂಟ್ ಜೋನ್ ಬೆರಕುಮಾನ್ಸ್ ಕಾಲೇಜಿಗೆ ಕೇರಳದ ಕಾಂಗ್ರೆಸ್ ಸಂಸದ ಡೀನ್ ಕುರ್ಯಕೋಸ್ ಮತ್ತು ಝಾರ್ಕಂಡಿನ ಕಾಂಗ್ರೆಸ್ ಕಮಿಟಿಯ ಉನ್ನತ ಪ್ರತಿನಿಧಿಗಳ ತಂಡ ಭೇಟಿ ಮಾಡಲಿದ್ದಾರೆ.
ಆದಿವಾಸಿಗಳ ಜಮೀನು ಒತ್ತುವರಿ, ಮತಾಂತರ ಆರೋಪಿಸಿ ಸೆಪ್ಟಂಬರ್ ಆರರಂದು ಪಾದ್ರಿ ಬಿನಯ್ ಜೋನ್ರನ್ನು ಗೋಡ ಜಿಲ್ಲೆಯ ಧ್ಯಾನ ಕೇಂದ್ರದಿಂದ ಬಂಧಿಸಲಾಗಿತ್ತು. ಅವರ ಭೇಟಿಯಾಗಲು ತಾನು ಹೋಗುತ್ತಿರುವುದಾಗಿ ಕಾಂಗ್ರೆಸ್ ಸಂಸದ ಬಿನಯ್ ಕುರ್ಯಕೋಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಕಚೇರಿಯ ಹೊಣೆಯಿರುವ ಸಚಿವ ಜಿತೇಂದ್ರ ಸಿಂಗ್, ರಾಷ್ಟ್ರೀಯ ಮಾನವಹಕ್ಕು ಆಯೋಗದ ಮುಖ್ಯಸ್ಥ ಜಸ್ಟಿಸ್ ದತ್ತು, ರಾಷ್ಟ್ರೀಯ ಅಲ್ಪಂಖ್ಯಾತರ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಡೀನ್ ಕುರ್ಯಕೋಸ್ ಹೇಳಿದರು.
ಝಾರ್ಕಂಡಿನ್ ಸೇಂಟ್ ಜೋನ್ ಬೆರ್ಕುಮಾನ್ಸ್ ಕಾಲೇಜಿಗೆ ಝಾರ್ಕಂಡಿನ ಪ್ರದೇಶ ಕಾಂಗ್ರೆಸ್ ಸಮಿತಿಯ ಉನ್ನತ ಪ್ರತಿನಿಧಿ ತಂಡ ಸಂದರ್ಶಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ತಿಂಗಳು ಮೂರನೆ ತಾರಿಕಿಗೆ ಐನೂರರಷ್ಟು ಬಲಪಂಥೀಯ ವಾದಿಗಳು ಸಾಹಿಬ್ಗಂಜ್ ಜಿಲ್ಲೆಯ ಜೂನಿಯರ್ ಕಾಲೇಜಿನಲ್ಲಿ ದಾಂಧಲೆ ಎಬ್ಬಿಸಿ ಪಾದ್ರಿ, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ನಿಜಸ್ಥಿತಿಯನ್ನು ಅರಿತುಕೊಳ್ಳಲು ಕಾಂಗ್ರೆಸ್ ತಂಡ ಹೋಗಲಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
ಮಾರಕಾಯುಧಗಳ ಜೊತೆ ಬಂದ ದುಷ್ಕರ್ಮಿಗಳ ತಂಡ ಕಾಲೇಜಿನ ಪೀಠೋಪಕರಣಗಳನ್ನು ಒಡೆದು ಹಾಕಿದ್ದಾರೆ. ಪಾದ್ರಿ, ವಿದ್ಯಾರ್ಥಿಗಳನ್ನು ಕ್ರೂರವಾಗಿ ಹೊಡೆದಿದ್ದಾರೆ. ಆರೋಪಿಗಳನ್ನು ಬಂಧಿಸುವ ಬದಲು ಪೆಟ್ಟು ತಿಂದ ಪಾದ್ರಿಗಳನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ್ದಾರೆ ಎಂದು ವೇಣುಗೋಪಾಲ್ ಆರೋಪಿಸಿದರು.












