“ಭಾರತ ಹೂಡಿಕೆಗೆ ಸುರಕ್ಷಿತವಲ್ಲ” ಎಂದ ವಾಲ್‌ ಸ್ಟ್ರೀಟ್ ಜರ್ನಲ್ ಜಾಹೀರಾತಿಗೆ ಕೆಂಡಾಮಂಡಲವಾದ ಕೇಂದ್ರ ಸರಕಾರ

0
204

ಭಾರತದ ಸಾರ್ವಭೌಮತ್ವದ ಮೇಲೆ ದಾಳಿ- ಕೇಂದ್ರ ಸರಕಾರ

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರವರ ಅಮೆರಿಕ ಪ್ರವಾಸದ ವೇಳೆ ಅಮೆರಿಕದ ಪ್ರಮುಖ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟವಾದ ಜಾಹೀರಾತಿಗೆ ಕೇಂದ್ರ ಸರಕಾರ ಆಕ್ಷೇಪ ವ್ಯಕ್ತಪಡಿಸಿದೆ. ಕಳೆದ ವಾರ ವಿಶ್ವಬ್ಯಾಂಕ್-ಐಎಂಎಫ್ ಸಭೆಗಳಲ್ಲಿ ಪಾಲ್ಗೊಳ್ಳಲು ನಿರ್ಮಲಾ ಸೀತಾರಾಮನ್ ಅಮೆರಿಕಕ್ಕೆ ತೆರಳಿದಾಗ, ‘ಭಾರತ ಹೂಡಿಕೆಗೆ ಸುರಕ್ಷಿತವಲ್ಲ’ ​​ಎಂಬ ಪೂರ್ಣ ಪುಟದ ಜಾಹೀರಾತು ಕಾಣಿಸಿಕೊಂಡಿತ್ತು.

ನಿರ್ಮಲಾ ಸೀತಾರಾಮನ್, ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ಮತ್ತು ತನಿಖಾ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಸೇರಿದಂತೆ 11 ಜನರ ವಿರುದ್ಧ ಹಣಕಾಸು ಮತ್ತು ವೀಸಾ ನಿರ್ಬಂಧಗಳನ್ನು ಹೇರುವಂತೆ ಜಾಹೀರಾತಿನಲ್ಲಿ ಆಗ್ರಹಿಸಲಾಗಿತ್ತು. ಆದರೆ, ಈ ಜಾಹೀರಾತನ್ನು ಭಾರತದ ಸಾರ್ವಭೌಮತ್ವದ ಮೇಲಿನ ದಾಳಿ ಎಂದು ಕೇಂದ್ರ ಸರ್ಕಾರ ಖಂಡಿಸಿದೆ.

ನಿರ್ಮಲಾ ಸೀತಾರಾಮನ್ ಅವರನ್ನೊಳಗೊಂಡ ಮೋದಿ ಸರ್ಕಾರವು ರಾಜಕೀಯ ಮತ್ತು ವ್ಯಾಪಾರ ವಿರೋಧಿಗಳನ್ನು ನಿಗ್ರಹಿಸಲು ಮತ್ತು ಕಾನೂನಿನ ನಿಯಮವನ್ನು ದುರ್ಬಲಗೊಳಿಸಲು ಸರ್ಕಾರಿ ಏಜೆನ್ಸಿಗಳನ್ನು ಬಳಸುತ್ತಿದೆ. ಅಲ್ಲದೇ, ಹೂಡಿಕೆದಾರರಿಗೆ ಭಾರತವನ್ನು ಅಸುರಕ್ಷಿತ ಸ್ಥಳವನ್ನಾಗಿ ಮಾಡಿದೆ ಎಂದು ಜಾಹೀರಾತು ಆರೋಪಿಸಿದೆ.

“ನೀವು ಭಾರತದಲ್ಲಿ ಹೂಡಿಕೆದಾರರಾಗಿದ್ದರೆ, ಮುಂದಿನ ಸರದಿ ನಿಮ್ಮದಾಗಿರಬಹುದು. ಮೋದಿ ಸರ್ಕಾರದ ಅಡಿಯಲ್ಲಿ, ಕಾನೂನಿನ ನಿಯಮದ ಕುಸಿತವು ಭಾರತವನ್ನು ಹೂಡಿಕೆ ಸ್ನೇಹಿಯಲ್ಲದ ಸ್ಥಳವನ್ನಾಗಿ ಮಾಡಿದೆ” ಎಂದು ಜಾಹೀರಾತು ಆರೋಪಿಸಿದೆ.

ಸೀತಾರಾಮನ್ ಅವರಲ್ಲದೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿ.ರಾಮ ಸುಬ್ರಮಣಿಯನ್, ಹೇಮಂತ್ ಗುಪ್ತಾ, ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಆರ್. ರಾಜೇಶ್, ಆಂಟ್ರಿಕ್ಸ್ ಕಾರ್ಪೊರೇಷನ್ ಅಧ್ಯಕ್ಷ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವ್ಯಾಪಾರ ವಿಭಾಗ) ರಾಕೇಶ್ ಶಶಿಭೂಷಣ್, ಭ್ರಷ್ಟಾಚಾರ ನಿಗ್ರಹ ಕಾಯ್ದೆ ವಿಶೇಷ ನ್ಯಾಯಾಧೀಶ ಚಂದ್ರಶೇಖರ್, ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಉಪ ಪೊಲೀಸ್ ವರಿಷ್ಠಾಧಿಕಾರಿ (ಸಿಬಿಐ) ಆಶಿಶ್ ಪಾರಿಖ್, ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಎ.ಸಾದಿಕ್ ಮುಹಮ್ಮದ್ ನೈಜ್ನಾರ್ ಮತ್ತು ಎನ್ಫೋರ್ಸ್‌ಮೆಂಟ್ ಡೈರೆಕ್ಟರ್ ಸಂಜಯ್ ಕುಮಾರ್ ಮಿಶ್ರಾ ಅವರನ್ನು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ.

“ಗ್ಲೋಬಲ್ ಮ್ಯಾಗ್ನಿಟ್ಸ್ಕಿ ಹ್ಯೂಮನ್ ರೈಟ್ಸ್ ಅಕೌಂಟೆಬಿಲಿಟಿ ಆಕ್ಟ್ ಅಡಿಯಲ್ಲಿ ಅವರ ವಿರುದ್ಧ ಆರ್ಥಿಕ ಮತ್ತು ವೀಸಾ ನಿರ್ಬಂಧಗಳನ್ನು ವಿಧಿಸಲು ನಾವು ಯುಎಸ್ ಸರ್ಕಾರವನ್ನು ಕೇಳಿದ್ದೇವೆ” ಎಂದು ಜಾಹೀರಾತಿನಲ್ಲಿ ವಿನಂತಿಸಲಾಗಿದೆ. ವಿತ್ತ ಸಚಿವ ಸೀತಾರಾಮನ್ ಸೇರಿದಂತೆ 11 ಭಾರತೀಯ ಅಧಿಕಾರಿಗಳನ್ನು ‘ಮೋದಿಯ ಮ್ಯಾಗ್ನಿಟ್ಸ್ಕಿ 11’ ಎಂದು ಜಾಹೀರಾತು ವಿವರಿಸುತ್ತದೆ. ಮ್ಯಾಗ್ನಿಟ್ಸ್ಕಿ ಕಾಯಿದೆಯು ವಿದೇಶಿ ಸರ್ಕಾರಿ ಅಧಿಕಾರಿಗಳ ಅಮೇರಿಕ ಪ್ರವೇಶವನ್ನು ಅಧಿಕೃತವಾಗಿ ನಿಷೇಧಿಸುತ್ತದೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಅವರ ಆಸ್ತಿಗಳನ್ನು ನಿಷ್ಕ್ರೀಯಗೊಳಿಸಲಾಗುತ್ತದೆ.

ಭಾರತೀಯ ಉದ್ಯಮಿ ರಾಮಚಂದ್ರನ್ ವಿಶ್ವನಾಥನ್ ಮತ್ತು ಅವರ ಸ್ನೇಹಿತರು ಸ್ಥಾಪಿಸಿದ ಯುಎಸ್ ಮೂಲದ ಫ್ರಾಂಟಿಯರ್ಸ್ ಆಫ್ ಫ್ರೀಡಮ್ ಫೌಂಡೇಶನ್ ಜಾಹೀರಾತಿನ ಹಿಂದೆ ಇದೆ ಎಂಬ ಶಂಕೆ ಇದೆ.