ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ: ಅಪರಾಧಿಗಳ ಬಿಡುಗಡೆಗೆ ಎರಡು ವಾರದೊಳಗೆ ಅನುಮೋದನೆ ನೀಡಿದ್ದ ಕೇಂದ್ರ ಸರಕಾರ- ಕೋರ್ಟ್ ದಾಖಲೆ

0
358

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: 2002ರ ಗುಜರಾತ್ ಗಲಭೆಯ ವೇಳೆ ಬಿಲ್ಕಿಸ್ ಬಾನುರನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕುಟುಂಬ ಸದಸ್ಯರನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆಗೊಳಿಸುವ ಕ್ರಮಕ್ಕೆ ಕೇಂದ್ರ ಸರಕಾರ ಎರಡು ವಾರಗಳೊಳಗೆ ಅಂಗೀಕಾರ ನೀಡಿತ್ತು. ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದ್ದಾಗಿ ದಾಖಲೆಗಳು ಬಹಿರಂಗಪಡಿಸಿವೆ. ಆದರೆ, ಅಪರಾಧಿಗಳ ಬಿಡುಗಡೆಯನ್ನು ಸಿಬಿಐ ಮತ್ತು ವಿಶೇಷ ಕೋರ್ಟು ವಿರೋಧಿಸಿತ್ತು ಎಂದು ದಾಖಲೆಗಳು ತಿಳಿಸಿವೆ.

ಬಿಲ್ಕಿಸ್ ಬಾನುರನ್ನು ಸಾಮೂಹಿಕ ಅತ್ಯಾಚಾರಗೈದು ಅವರ ಕುಟುಂಬವನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಹನ್ನೊಂದು ಅಪರಾಧಿಗಳ ಶಿಕ್ಷಾ ಅವಧಿ ಪೂರ್ಣಗೊಳ್ಳುವ ಮೊದಲೇ ಗುಜರಾತ್ ಸರಕಾರ ಬಿಡುಗಡೆಗೊಳಿಸಿದ್ದು, ಇವರು ಹದಿನಾಲ್ಕು ವರ್ಷ ಜೈಲಿಲ್ಲಿದ್ದಾರೆ; ಉತ್ತಮ ವರ್ತನೆ ಹೊಂದಿದ್ದಾರೆ. ಹಾಗಾಗಿ ಬಿಡುಗಡೆಗೊಳಿಸಿದ್ದಾಗಿ ಗುಜರಾತ್ ಸರಕಾರ ಸುಪ್ರೀಂ ಕೋರ್ಟಿನಲ್ಲಿ ವಿವರಿಸಿತ್ತು. ಬಿಡುಗಡೆಯನ್ನು ಕೇಂದ್ರ ಸರಕಾರ ಅಂಗೀಕರಿಸಿದೆ ಎಂದೂ ಸುಪ್ರೀಂ ಕೋರ್ಟಿಗೆ ಗುಜರಾತ್ ಸರಕಾರ ತಿಳಿಸಿತ್ತು.

2022ರ ಜೂನ್ 28ರಂದು ಹನ್ನೊಂದು ಮಂದಿಯನ್ನು ಬಿಡುಗಡೆಗೊಳಿಸಲು ಗುಜರಾತ್ ಸರಕಾರ ಕೇಂದ್ರ ಸರಕಾರದ ಅನುಮತಿ ಕೇಳಿತ್ತು. ಜುಲೈ 11ರಂದು ಕೇಂದ್ರ ಸರಕಾರ ಅನುಮೋದನೆ ನೀಡಿತ್ತು. ನಂತರ ಅಪರಾಧಿಗಳನ್ನು ಸ್ವಾತಂತ್ರ್ಯ ದಿನದಂದು ಬಿಡುಗಡೆಗೊಳಿಸಲಾಗಿದೆ. ಇದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಇಂತಹ ಬಿಡುಗಡೆಗಳಿಗೆ ಕೇಂದ್ರ ಗೃಹ ಸಚಿವಾಲಯದ ಅನುಮತಿ ಬೇಕಿದ್ದು, ಅಪರಾಧಿಗಳನ್ನು ಬಿಡುಗಡೆಗೊಳಿಸಿದಾಗ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆಯೋ ಎಂಬ ವಿಷಯವನ್ನು ರಾಜ್ಯ ಸರಕಾರ ಸ್ಪಷ್ಟಪಡಿಸಿರಲಿಲ್ಲ. ಆದ್ದರಿಂದ, ಕೇಂದ್ರದ ಅನುಮತಿಯಿಲ್ಲದೆ ಬಿಡುಗಡೆಗೊಳಿಸಿದ್ದಾಗಿ ವರದಿಗಳು ಪ್ರಚಾರವಾಗಿದ್ದವು.

ಆದರೆ, ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಕೆಯಾದ ಅಫಿದಾವಿತ್‍ನಲ್ಲಿ ಅವಧಿಗಿಂತ ಮೊದಲು ಬಿಡಗಡೆಗೆ ಕೇಂದ್ರ ಸರಕಾರವು ಅನುಮತಿ ನೀಡಿದ ದಾಖಲೆಗಳನ್ನು ರಾಜ್ಯ ಸರಕಾರ ಸಲ್ಲಿಸಿದೆ. ಇದೇ ವೇಳೆ ಸಿಬಿಐ ಮತ್ತು ವಿಶೇಷ ಸಿವಿಲ್ ಜಡ್ಜ್ ನೇತೃತ್ವದಲ್ಲಿ ಅಪರಾಧಿಗಳ ಬಿಡುಗಡೆಯನ್ನು ವಿರೋಧಿಸಿತ್ತೆಂದು ದಾಖಲೆಗಳು ತಿಳಿಸಿವೆ. ಆರೋಪಿಗಳನ್ನು ಬಿಡುಗಡೆಯನ್ನು ಪ್ರಶ್ನಿಸಿದ ಮೂರು ಅರ್ಜಿಗಳನ್ನು ಸುಪ್ರೀಂ ಕೋರ್ಟು ವಿಚಾರಣೆಗೆತ್ತಿಕೊಂಡಿತ್ತು. ಪ್ರಕರಣ ಸಿಬಿಐ ತನಿಖೆ ಮಾಡಿದ್ದು ಆದ್ದರಿಂದ ಕೇಂದ್ರ ಸರಕಾರದೊಂದಿಗೆ ಸಮಾಲೋಚಿಸದೇ ಗುಜರಾತ್ ಸರಕಾರ ಈ ಕ್ರಮ ಕೈಗೊಂಡಿದೆ. ಕ್ರಿಮಿನಲ್ ಕಾನೂನಿನ ಅನ್ವಯ ಇದು ಸಾಧ್ಯವಿಲ್ಲ ಎಂದು ಅರ್ಜಿದಾರರಲ್ಲಿ ಒಬ್ಬರು ವಾದಿಸಿದ್ದರು.

ನಂತರ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳಿಗೆ ನೀಡಿದ ಕಾನೂನು ಸಡಿಲಿಕೆ ಆದೇಶ ಸಹಿತ ಸಂಪೂರ್ಣ ಪ್ರಕ್ರಿಯೆಯನ್ನು ಫೈಲ್ ಮಾಡಲು ಗುಜರಾತ್ ಸರಕಾರಕ್ಕೆ ಕೋರ್ಟು ಆದೇಶ ನೀಡಿತ್ತು. ದಾಖಲೆಗಳನ್ನು ಹಾಜರು ಪಡಿಸಿದಾಗ ಕೇಂದ್ರ ಸರಕಾರ ನೀಡಿದ ಅನುಮತಿ ಬಹಿರಂಗವಾಗಿದೆ.  ಅಪರಾಧಿಗಳ ಅಪರಾಧ ನಿಂದನೀಯ ಮತ್ತು ಗಂಭೀರವಾಗಿದ್ದು ಅವರು ಸಂಪೂರ್ಣ ಶಿಕ್ಷೆಯನ್ನು ಅನುಭವಿಸಬೇಕೆಂದು ಕಳೆದ ವರ್ಷ ಗೋಧ್ರಾ ಸಬ್ ಜೈಲ್ ಸುಪರಿಡೆಂಟೆಡ್ ಸಿಬಿಐಗೆ ಪತ್ರ ಬರೆದಿದ್ದರು. ಬಲಿಪಶುಗಳು ಒಂದು ಬೇರೆಯೇ ಧರ್ಮಕ್ಕೆ ಸೇರಿದವರಾದ್ದರಿಂದ ಅವರ ವಿರುದ್ಧ ಅಪರಾಧ ನಡೆದಿದೆ. ಈ ಪ್ರಕರಣದಲ್ಲಿ ಅಪ್ರಾಪ್ತ ಮಕ್ಕಳನ್ನು ಕೂಡ ಬಿಟ್ಟಿಲ್ಲ. ಆದ್ದರಿಂದ ಅಪರಾಧಿಗಳನ್ನು ಶಿಕ್ಷಾ ಅವಧಿಗಿಂತ ಮುನ್ನ ಬಿಡುಗಡೆ ಮಾಡಬಾರದೆಂದು ವಿಶೇಷ ಜಡ್ಜ್ ಆಗ್ರಹಿಸಿದ್ದರು. ಬಿಲ್ಕಿಸ್ ಬಾನುರ ಮೂರು ವರ್ಷದ ಹೆಣ್ಣು ಮಗುವಿನ ಸಹಿತ ಕುಟುಂಬದ ಏಳು ಮಂದಿಯನ್ನು ಅವರ ಕಣ್ಣ ಮುಂದೆಯೇ ಕೊಲೆ ಮಾಡಲಾಗಿತ್ತು. ಮಗುವಿನ ಕಾಲು ಹಿಡಿದು ತಲೆಯನ್ನು ಕಲ್ಲಿಗೆ ಜಜ್ಜಿ ಕೊಲ್ಲಲಾಗಿತ್ತು. ಬಿಲ್ಕಿಸ್ ಸೂಚಿಸಿದ ಇತರ ಸಂಬಂಧಿಕರೂ ಕಾಣೆಯಾಗಿದ್ದಾರೆ ಎಂದು ಘೋಷಿಸಲಾಗಿತ್ತು.

ಅಂದು ಬಿಲ್ಕಿಸ್‌ರಿಗೆ 21ವರ್ಷ ವಯಸ್ಸು. ಮೂರು ತಿಂಗಳ ಗರ್ಭಿಣಿಯಾಗಿದ್ದ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. 2019ರಲ್ಲಿ ಬಿಲ್ಕಿಸ್ ಬಾನುಗೆ ಸರಕಾರಿ ಉದ್ಯೋಗ, ಐವತ್ತು ಲಕ್ಷ ರೂಪಾಯಿ ನಷ್ಟ ಪರಿಹಾರ ನೀಡಲು ಸುಪ್ರೀ ಕೋರ್ಟು ಆದೇಶಿಸಿತ್ತು. ಅಪರಾಧಿಗಳನ್ನು ಮುಂಬೈ ವಿಶೇಷ ಕೋರ್ಟು ಜೀವಾವಧಿ ಶಿಕ್ಷೆ ನೀಡಿ ತಿರ್ಪು ನೀಡಿತ್ತು. ಅದನ್ನು ಹೈಕೋರ್ಟು ಎತ್ತಿ ಹಿಡಿದಿತ್ತು.

ಆರೋಪಿಗಳನ್ನು ಬಿಡುಗಡೆಗೆ ತೀರ್ಮಾನಿಸಿದ ಕುರಿತು ತನಗೆ ತಿಳಿಸಿಲ್ಲ ಎಂದು ಬಿಲ್ಕೀಸ್ ಬಾನು ಹೇಳಿದ್ದಾರೆ. ಅಪರಾಧಿಗಳ ಬಿಡುಗಡೆಗೆ ಶಿಫಾರಸು ಮಾಡಿದ ಗುಜರಾತ್ ಸರಕಾರದ ಸಲಹಾ ಸಮಿತಿಯ ಹತ್ತು ಸದಸ್ಯರಲ್ಲಿ ಐವರು ಬಿಜೆಪಿಯೊಂದಿಗೆ ಸಂಬಂಧ ಇರುವವರು ಎಂದು ಎನ್‍ಡಿಟಿವಿ ವರದಿ ಮಾಡಿತ್ತು. ಸ್ವಾತಂತ್ರ್ಯೋತ್ಸವದಂದು ನೀಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ಸಬಲೀಕರಣ ಕುರಿತು ಮಾತಾಡಿದ ಕೆಲವೇ ಗಂಟೆಗಳಲ್ಲಿ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿಗಳನ್ನು ಶಿಕ್ಷಾ ಅವಧಿ ಪೂರ್ಣಗೊಳ್ಳುವ ಮೊದಲೇ ಗುಜರಾತಿನ ಬಿಜೆಪಿ ಸರಕಾರ ಬಿಡುಗಡೆಗೊಳಿಸಿತ್ತು.