ಪಾಕ್ ಉಪಚುನಾವಣೆ: ಇಮ್ರಾನ್ ಖಾನ್ ಪಕ್ಷಕ್ಕೆ ಭರ್ಜರಿ ಗೆಲುವು

0
195

ಸನ್ಮಾರ್ಗ ವಾರ್ತೆ

ಇಸ್ಲಾಮಾಬಾದ್‌: ಪಾಕಿಸ್ತಾನದ ಸಂಸತ್‌ಗೆ ನಡೆದ ಉಪಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷ ಭಾರೀ ಮೇಲುಗೈ ಸಾಧಿಸಿದೆ. ಚುನಾವಣೆ ನಡೆದ 8 ಸ್ಥಾನಗಳ ಪೈಕಿ ಆರು ಸ್ಥಾನಗಳನ್ನು ಇಮ್ರಾನ್ ಖಾನ್‌ರ ಪಿಟಿಐ ಪಡೆದುಕೊಂಡಿದೆ.

“ಪಿಟಿಐ ದುರ್ಬಲವಾಗಿದೆ ಎಂದು ಭಾವಿಸಿದ ಕ್ಷೇತ್ರಗಳಲ್ಲಿ ಸರ್ಕಾರ ಚುನಾವಣೆಗಳನ್ನು ನಡೆಸಿತ್ತು” ಎಂದ ಖಾನ್ ಆರೋಪಿಸಿದ್ದಾರೆ. ಇಸ್ಲಾಮಾಬಾದ್‌ನ ಹೊರವಲಯದಲ್ಲಿರುವ ತಮ್ಮ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಪಾಕಿಸ್ತಾನ್ ತೆಹ್ರೀಕ್-ಏ-ಇನ್ಸಾಫ್ ಪಕ್ಷವನ್ನು ಉಲ್ಲೇಖಿಸಿ ಗೆಲುವನ್ನು ಸಂಭ್ರಮಿಸಿದ್ದಾರೆ.

ಒಟ್ಟಿನಲ್ಲಿ, ಉಪಚುನಾವಣೆ ಫಲಿತಾಂಶವು ಇಮ್ರಾನ್ ಖಾನ್‌ರ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ನಿಗದಿಯಾಗಿದ್ದಕ್ಕಿಂತ ಮುಂಚಿತವಾಗಿ ರಾಷ್ಟ್ರೀಯ ಚುನಾವಣೆಯನ್ನು ಘೋಷಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಖಾನ್ ಮುಂದಾಗಿದ್ದಾರೆ. ರಾಜಧಾನಿಗೆ ‘ಜನ ಯಾತ್ರೆ’ ಕೈಗೊಳ್ಳಲು ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವುದಾಗಿ ಅವರು ಹೇಳಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಸಾಧ್ಯವಾಗದೇ ಇಮ್ರಾನ್ ಖಾನ್ ಸರಕಾರ ಪತನಗೊಂಡಿತ್ತು. ಆ ಸೋಲನ್ನು ಇಮ್ರಾನ್ ಸಂಚು ಎಂದು ಹೇಳಿದ್ದರು. ವಿದೇಶಿ ಶಕ್ತಿಗಳೊಂದಿಗೆ ಸೇರಿಕೊಂಡು ವಿರೋಧ ಪಕ್ಷಗಳು ತನ್ನನ್ನು ಅಧಿಕಾರದಿಂದ ಹೊರಕ್ಕೆ ತಳ್ಳಿವೆ ಎಂದು ಆರೋಪಿಸಿದ್ದರು.