ತೊಕ್ಕೊಟ್ಟು: ಸತತ ಮಳೆಯ ಕಾರಣ ಸಂಕಷ್ಟಕ್ಕೆ ಒಳಗಾಗಿದ್ದ ತನ್ನ ವಾರ್ಡಿನ ಜನರ ನೆರವಿಗೆ ಧಾವಿಸಿದ್ದ ವೇಳೆ ರಾಜಕೀಯ ವಿರೋಧಿಯ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ಸೇರಿದ್ದ ಉಳ್ಳಾಲ ಬಬ್ಬುಕಟ್ಟೆ ವಾರ್ಡಿನ ಸದಸ್ಯ ಮುಸ್ತಾಕ್ ಪಟ್ಲ ಅವರು ನಿನ್ನೆ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿದ್ದ ಜನರಿಗೆ ನೆರವಾಗುವ ಬದಲು ನೆರವಿಗೆ ಧಾವಿಸಿದವರನ್ನೇ ತಡೆಯಲು ಯತ್ನಿಸಿದ ಕಾಂಗ್ರಸ್ ನ ಮಾಜಿ ಸ್ಥಳೀಯ ಕೌನ್ಸಿಲರ್ ಉಸ್ಮಾನ್ ಕಲ್ಲಾಪು ಅವರ ತಮ್ಮ ಜಲೀಲ್ ಕಲ್ಲಾಪು ಅವರ ವರ್ತನೆಗೆ ಸ್ಥಳೀಯವಾಗಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಘಟನೆ ಹೀಗಿದೆ:
ಪೌರ ಕಾರ್ಮಿಕರೊಂದಿಗೆ ಸೇರಿಕೊಂಡು ಬಬ್ಬುಕಟ್ಟೆ 19ನೇ ವಾರ್ಡಿನ ( ಇದರ ವ್ಯಾಪ್ತಿಯಲ್ಲಿ ಪಟ್ಲ, ಕಲ್ಲಾಪು, ಬಬ್ಬುಕಟ್ಟೆ ಮತ್ತು ಸೇವಂತಿಗುಡ್ಡೆ ಪ್ರದೇಶಗಳು ಬರುತ್ತವೆ) ಪಕ್ಷೇತರ ಸದಸ್ಯ ಮುಸ್ತಾಕ್ ಪಟ್ಲ ಅವರು ತನ್ನ ವಾರ್ಡಿನಲ್ಲಿ ಕಸ ವಿಲೇವಾರಿ, ಬ್ಲೀಚಿಂಗ್ ಪೌಡರ್ ಹಾಕುವುದು ಮತ್ತು ನೀರು ಖಾಲಿ ಮಾಡುವ ಪ್ರಕ್ರಿಯೆಯಲ್ಲಿ ಕಳೆದ ಶನಿವಾರ (ಆ. 10) ತೊಡಗಿಸಿಕೊಂಡಿದ್ದರು. ನೇತ್ರಾವತಿ ನದಿ ಪಾತ್ರದ ಪ್ರದೇಶವಾದ ಕಾರಣ ಕಲ್ಲಾಪುವಿನಲ್ಲಿ ಪ್ರವಾಹದ ಭೀತಿಯೂ ಇತ್ತು. ನೆರೆನೀರು ಪರಿಸರ ಪ್ರದೇಶಗಳಿಗೆ ನುಗ್ಗಿದ್ದರಿಂದ ಮುಸ್ತಾಕ್ ಅವರು ಸ್ಥಳೀಯರನ್ನು ಸೇರಿಸಿ ಪರಿಹಾರ ಕಾರ್ಯಗಳಲ್ಲಿ ನಿರತರಾಗಿದ್ದ ವೇಳೆ ಜಲೀಲ್ ಅವರು ವಿನಾ ಕಾರಣ ತಗಾದೆ ತೆಗೆದಿದ್ದಾರೆ. ಕಸ ತೆಗೆಯುತ್ತಿದ್ದ ಪೌರ ಕಾರ್ಮಿಕರಲ್ಲಿ ತನ್ನ ಕಡೆಯ ಒಳ ರಸ್ತೆಯ ಕೆಸರನ್ನೂ ಎತ್ತಬೇಕು ಎಂದು ಜಲೀಲ್ ಬಲವಂತಪಡಿಸಿದ್ದಾರೆ. ಆದರೆ, ಕಾರ್ಮಿಕರು- ಇದು ಕಸ ತೆಗೆಯುವ ವಾಹನ, ಕೆಸರು ತೆಗೆಯಲಾಗದು ಎಂದು ಹೇಳಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆಗ ಜಲೀಲ್ ಅವರು ಪೌರ ಕಾರ್ಮಿಕರ ವಾಹನಕ್ಕೆ ತನ್ನ ಬೈಕನ್ನು ಅಡ್ಡ ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಜಗಳ ಬೇಡವೆಂದು ತೀರ್ಮಾನಿಸಿ ಪೌರ ಕಾರ್ಮಿಕರಲ್ಲಿ ಕೆಸರನ್ನೂ ತೆಗೆಯುವಂತೆ ಹೇಳಿದ ಮುಸ್ತಾಕರು ಬಳಿಕ ಮುಖ್ಯ ರಸ್ತೆಯಲ್ಲಿ ಹೋಗಿದ್ದಾರೆ. ಆ ಸಂದರ್ಭದಲ್ಲಿ ಮುಸ್ತಾಕ್ ರನ್ನು ತರಾಟೆಗೆ ಎತ್ತಿಕೊಂಡ ಜಲೀಲ್ ಅವರು, ನೀನು ಈ ಈ ರಸ್ತೆಯಲ್ಲಿ ಬರಬಾರದು ಎಂದು ಆವಾಜ್ ಹಾಕಿದ್ದಲ್ಲದೆ, ತನ್ನ ಕೈಯಲ್ಲಿದ್ದ ಕೀ ಗೊಂಚಲಿನಿಂದ ಮುಸ್ತಾಕ್ ಅವರ ಮುಖಕ್ಕೆ ಹೊಡೆಯಲು ಮುಂದಾಗಿದ್ದಾರೆ. ಆ ಹೊಡೆತವನ್ನು ಮುಸ್ತಾಕ್ ರು ತಪ್ಪಿಸಿದ್ದು, ಆಗ ಜಲೀಲ್ ಅವರು ಮುಸ್ತಾಕ್ ರ ಗುಪ್ತಾ೦ಕ್ಕೆ ತುಳಿದಿದ್ದಾರೆ. ಇದರಿಂದಾಗಿ ಗಾಯಗೊಂಡ ಮುಸ್ತಾಕ್ ರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಬಾರಿ ನಡೆದ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಸ್ಮಾನ್ ಕಲ್ಲಾಪು ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುಸ್ತಾಕ್ ಪಟ್ಲ ಅವರು ಸೋಲಿಸಿದ್ದರು. ಚುನಾವಣಾ ಪ್ರಚಾರ ಸಂದರ್ಭದಲ್ಲೇ ಉಸ್ಮಾನ್ ಬೆಂಬಲಿಗರು ಮುಸ್ತಾಕ್ ರಿಗೆ ಕಿರುಕುಳವನ್ನು ನೀಡಿದ್ದರು ಎಂದು ಆರೋಪಿಸಲಾಗುತ್ತಿದೆ. ಮುಸ್ತಾಕ್ ರ ಗೆಲುವಿಗೆ ಕ್ರುದ್ಧಗೊಂಡು ಕಲ್ಲಾಪುವಿನಲ್ಲಿದ್ದ ಅವರ ಬೆಂಬಲಿಗರೊಬ್ಬರ ಅಂಗಡಿಗೆ ಉಸ್ಮಾನ್ ಬೆಂಬಲಿಗರು ಹಾನಿಯೆಸಗಿದ್ದರು. ಆ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಅಲ್ಲದೆ,
ಕಲ್ಲಾಪು ವಾರ್ಡಿನ ಪ್ರತಿ ಅಭಿವೃದ್ಧಿ ಕಾಮಗಾರಿಗಳಲ್ಲೂ ಉಸ್ಮಾನ್ ಕಡೆಯವರು ಅಡ್ಡ ಬರುತ್ತಿದ್ದಾರೆಂದು ಮುಸ್ತಾಕ್ ಅವರು ಆರೋಪಿಸುತ್ತಿದ್ದು, ಪರಿಸರದ ಸ್ವಚ್ಛತಾ ಕಾರ್ಯದ ಸಂದರ್ಭದಲ್ಲೂ ಮತ್ತು ನೆರೆ ನಿರ್ವಹಣೆಯ ಭಾಗವಾಗಿ ಬೋಟ್ ಕರೆಸಿಕೊಳ್ಳುವ ಸಂದರ್ಭದಲ್ಲೂ ಅವರು ಅಡಚಣೆಯೊಡ್ಡಿದ್ದರು ಎಂದು ಹೇಳಿದ್ದಾರೆ. ಆದರೆ, ಆ ಎಲ್ಲ ಸಂದರ್ಭದಲ್ಲಿ ತಾನು ಸಹನೆ ವಹಿಸಿದ್ದೆ, ಆದರೆ, ಈಗ ದೈಹಿಕ ಹಲ್ಲೆಗೆ ಮುಂದಾದ್ದರಿಂದ ಪೊಲೀಸು ದೂರು ದಾಖಲಿಸಿದ್ದೇನೆ ಎಂದವರು ಹೇಳಿದ್ದಾರೆ. ಪೊಲೀಸರು ಘಟನಾ ಸ್ಥಳದ ಮಹಜರು ನಡೆಸಿದ್ದು, ಎಫ್ ಐ ಆರ್ ದಾಖಲಿಸಿದ್ದಾರೆ.
ಮುಸ್ತಾಕ್ ಅವರ ಮೇಲೆ ನಡೆದ ಹಲ್ಲೆ ಘಟನೆಯನ್ನು ವೆಲ್ ಫೇರ್ ಪಾರ್ಟಿ, ಎಸ್ ಡಿ ಪಿ ಐ ಗಳು ತೀವ್ರವಾಗಿ ಖಂಡಿಸಿದ್ದು, ಈ ಪಕ್ಷಗಳ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಮುಸ್ತಾಕ್ ರಿಗೆ ಸಾಂತ್ವನ ಹೇಳಿದ್ದಾರೆ. ಹಾಗೆಯೇ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸ್ಥಳೀಯ ಮುಖಂಡರೂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.












