ಹೊಸದಿಲ್ಲಿ, ಜ.18: ಪ್ರಜಾಪ್ರಭುತ್ವ ವಿರುದ್ಧದ ಶರ್ತಗಳಿಂದ ತನಗೆ ಜಾಮೀನು ನೀಡಲಾಗಿದೆ ಎಂದು ಸೂಚಿಸಿ ಭೀಂ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ದಿಲ್ಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟಿಸಿದ್ದಕ್ಕೆ ಬಂಧಿಸಲಾಗಿದ್ದ ಅವರಿಗೆ ತೀಸ್ ಹಝಾರಿ ಕೋರ್ಟು ವಿಧಿಸಿದ ಶರ್ತಗಳು ಸರಿಯಲ್ಲ. ಅದನ್ನು ತೆರವುಗೊಳಿಸಬೇಕೆಂದು ಚಂದ್ರಶೇಖರ್ ಅರ್ಜಿ ಸಲ್ಲಿಸಿದ್ದಾರೆ.
ಚಂದ್ರಶೇಖರ್ ಅಪರಾಧಿಯಲ್ಲ. ಆದ್ದರಿಂದ ಅವರಿಗೆ ವಿಧಿಸಿದ ಶರ್ತಗಳನ್ನು ತೆರವುಗೊಳಿಸಬೇಕೆಂದು ಅರ್ಜಿಯಲ್ಲಿ ಸೂಚಿಸಲಾಗಿದೆ. ವಕೀಲರಾದ ಮಹ್ಮೂದ್ ಪ್ರಾಚ, ಒ ಪಿ ಭಾರತಿ ಅರ್ಜಿ ಸಲ್ಲಿಸಿದ್ದಾರೆ. ಚಂದ್ರಶೇಖರ್ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ದಿಲ್ಲಿಗೆ ಬರುವುದಕ್ಕೂ ಅನುಮತಿ ಪಡೆಯಬೇಕೆಂದು ಶರ್ತವಿದ್ದು ಅದನ್ನು ತೆರವುಗೊಳಿಸಬೇಕೆಂದು ಅರ್ಜಿಯಲ್ಲಿ ಅವರು ಬೆಟ್ಟು ಮಾಡಿದ್ದಾರೆ. ಜನವರಿ 21ಕ್ಕ ಕೋರ್ಟು ಅರ್ಜಿಯನ್ನು ವಿಚಾರಣೆಗೆತ್ತಿಕೊಳ್ಳಲಿದೆ. ಪೌರತ್ವ ತಿದುಪಡಿ ಕಾನೂನು ವಿರುದ್ಧ ಪ್ರತಿಭಟಿಸಿದ ಆಝಾದ್ರನ್ನು ಡಿಸೆಂಬರ್ 21ರ೦ದು ದಿಲ್ಲಿ ಜಾಮಾ ಮಸೀದಿಯಿಂದ ಬಂಧಿಸಿ ಕರೆದೊಯ್ಯಲಾಗಿತ್ತು. ಗುರುವಾರ ರಾತ್ರೆ ತೀಸ್ ಹಝಾರಿ ಕೋರ್ಟು ಜಾಮೀನು ನೀಡಿತ್ತು. ನಾಲ್ಕು ವಾರ ದಿಲ್ಲಿಗೆ ಬರಬಾರದು. ಈ ಸಮಯದಲ್ಲಿ ಪ್ರತೀವಾರ ಶನಿವಾರ ಆಝಾದ್ರ ಊರು ಸಹರಾನ್ ಪುರದಲ್ಲಿ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕಬೇಕೆಂದು ಶರ್ತ ವಿಧಿಸಲಾಗಿದೆ.












