ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಪರಿಚಿತ ಬ್ಯಾಗ್ ಪತ್ತೆ: ಬಾಂಬ್ ಶಂಕೆ

0
761

ಸನ್ಮಾರ್ಗ ವಾರ್ತೆ

ಮಂಗಳೂರು; ಜ. 20- ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ ಇವತ್ತು (ಜ. 20) ಬೆಳಿಗ್ಗೆ ಬ್ಯಾಗೊಂದು ಪತ್ತೆಯಾಗಿದ್ದು ಅನುಮಾನಗಳಿಗೆ ಕಾರಣವಾಗಿದೆ. ಬ್ಯಾಗನ್ನು ಪರಿಶೀಲಿಸಿದ ಅಧಿಕಾರಿಗಳು ಅದರಲ್ಲಿ ಸುಧಾರಿತ ಬಾಂಬ್ ಇರುವುದನ್ನು ಪತ್ತೆ ಮಾಡಿದ್ದಾರೆ ಅನ್ನುವ ಮಾಹಿತಿಗಳು ಬರುತ್ತಿದ್ದು, ವಾಸ್ತವಾಂಶ ಇನ್ನಷ್ಟೇ ಸ್ಪಷ್ಟಗೊಳ್ಳಬೇಕಿದೆ.

ಈ ಬ್ಯಾಗ್ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿರುವ ಭದ್ರತಾ ತಪಾಸಣೆ ಸ್ಥಳದ ಬಳಿ ಪತ್ತೆಯಾಗಿದ್ದು, ಕೂಡಲೇ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಅಧಿಕಾರಿಗಳು ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ದೊಂದಿಗೆ ವಿಮಾನನಿಲ್ದಾಣಕ್ಕೆ ಧಾವಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈಗಾಗಲೇ ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ ಎಸ್ ಹರ್ಷ ಅವರು ತನ್ನ ಅಧಿಕಾರಿಗಳ ಜೊತೆ ಸ್ಥಳದಲ್ಲಿದ್ದು, ವಿಮಾನ ನಿಲ್ದಾಣದ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ. ಲ್ಯಾಪ್ಟಾಪ್ ಬ್ಯಾಗ್ ನಂತಿರುವ ವಸ್ತುವನ್ನು ಬಾಂಬ್ ನಿಷ್ಕ್ರಿಯ ದಳದ ವಾಹನದೊಳಗೆ ಸಾಗಿಸಲಾಗಿದೆ ಎಂದು ವರದಿಯಿದ್ದು, ಈಗಾಗಲೇ ಈ ಶಂಕಾಸ್ಪದ ಬ್ಯಾಗಿನ ಬಗ್ಗೆ ಟಿವಿ ಚಾನೆಲ್ ಗಳಲ್ಲಿ ಸುದ್ದಿ ಬಿತ್ತರವಾಗಿ ಸಾರ್ವಜನಿಕರಲ್ಲೂ ಕೋತೂಹಲಕ್ಕೆ ಕಾರಣವಾಗಿದೆ. ಬಾಂಬನ್ನು ನಿಷ್ಕ್ರಿಯಗೊಳಿಸಲು ಬೆಂಗಳೂರಿನಿಂದ ತಜ್ಞರು ಆಗಮಿಸುತ್ತಿದ್ದಾರೆ ಎನ್ನುವ ವರದಿಗಳು ಬರುತ್ತಿದ್ದು ವದಂತಿಗಳಿಗೆ ಕಾರಣವಾಗಿದೆ. ಸರಿಯಾದ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ