ಕೈ ಚುಂಬಿಸಿ ಕೋರೋನಾ ಗುಣಪಡಿಸುವೆನೆಂದ ಬಾಬಾ ಕೊರೋನಕ್ಕೆ ಬಲಿ; 24 ಮಂದಿಗೆ ಸೋಂಕು ದೃಢ

0
1356

ಸನ್ಮಾರ್ಗ ವಾರ್ತೆ

ಭೋಪಾಲ,ಜೂ.13: ಕೊರೋನಾ ಹರಡುವಿಕೆ ತಡೆಯುವುದಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಸಲಹೆಯನ್ನು ಕಿವಿಗೆ ಹಾಕಿಕೊಳ್ಳದ ಮಂತ್ರವಾದಿಯೊಬ್ಬ ಜನರ ಕೈಯನ್ನು ಚುಂಬಿಸಿ ರೋಗವನ್ನು ಶಮನಗೊಳಿಸುವುದಾಗಿ ಹೇಳಿಕೊಂಡಿದ್ದನು.

“ವಿಶ್ವವನ್ನೇ ಕಂಗೆಡಿಸಿರುವ ಮಹಾಮಾರಿಯನ್ನು ನಾನು ಹಸ್ತವನ್ನು ಚುಂಬಿಸುವ ಮೂಲಕ ನನ್ನ ಈ ಪವಿತ್ರ ಚಿಕಿತ್ಸೆಯಿಂದ ಹೋಗಲಾಡಿಸಬಹುದೆಂದು” ತನ್ನ ಅಂಧ ಭಕ್ತರನ್ನು ನಂಬಿಸಿದ್ದನು. ಆದರೆ, ಈ ವೈರಸ್ ಮುಂದೆ ಆತನ ಆಟ ನಡೆಯಲಿಲ್ಲ. ಸೋಂಕು ಬಾಧಿತ ವ್ಯಕ್ತಿಯೊಬ್ಬ ತನ್ನ ರೋಗ ಶಮನಗೊಳಿಸಲು ಈ ಅಸ್ಲಮ್ ಬಾಬಾ ಎಂಬ ಮದ್ಯಪ್ರದೇಶದ ಮಂತ್ರವಾದಿಯ ಬಳಿ ತೆರಳಿ ಹಸ್ತವನ್ನು ಚುಂಬಿಸಲು ನೀಡಿದ್ದ. ಕೊನೆಗೆ ಆತನಿಂದ ಸೋಂಕು ತಗುಲಿಸಿಕೊಂಡ ಮಂತ್ರವಾದಿಯೇ ಸಾವಿಗೆ ಶರಣಾಗಬೇಕಾಯಿತು.

ರೋಗದಿಂದ ಮುಕ್ತ ಪಡೆಯಲು ಬಂದ ಹಲವಾರು ಭಕ್ತರು ಕೊರೋನಾ ಸೋಂಕನ್ನು ಪಡೆದುಕೊಂಡು ಹೋದರು. ಬಾಬಾನ ಸುಮಾರು ಇನ್ನೂರರಷ್ಟು ಅನುಯಾಯಿಗಳು ಈಗ ಕ್ವಾರಂಟೈನಿನಲ್ಲಿದ್ದಾರೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾಡುವೆನೆಂದು ಹೇಳಿಕೊಂಡ ಮಂತ್ರವಾದಿಯ ಆಶ್ರಮ ಈಗ ಸೀಲ್ ಡೌನ್ ಆಗಿದೆ. ಭಕ್ತ ಗಣದಲ್ಲಿ ರೋಗ ಲಕ್ಷಣಗಳು ಕಂಡು ಬಂದಾಗ ಇದು ಬೆಳಕಿಗೆ ಬಂತು.

ಈ ಮಂತ್ರವಾದಿಯ ಭೇಟಿಗಾಗಿ ಬಂದ ಹಲವಾರು ಜನರಲ್ಲಿ ಸೋಂಕು ದೃಢ ಪಟ್ಟಿರುವುದಾಗಿ ಸ್ಥಳೀಯ ರಲತ್‍ಪೋಲೀಸಧಿಕಾರಿ ಗೌರತ್ ತಿವಾರಿ ಸ್ಪಷ್ಟಪಡಿಸಿದ್ದಾರೆ. ಮಂತ್ರವಾದಿಯಿಂದಲೇ ರೋಗ ಹರಡಿದೆಯೆಂದೂ ಇನ್ನೂ ಎಷ್ಟು ಮಂದಿಗೆ ಹರಡಿದೆ ಎಂಬ ಬಗ್ಗೆ ಇನ್ನೂ ಸರಿಯಾದ ಲೆಕ್ಕ ಸಿಗದಿದ್ದರೂ 24 ಮಂದಿಗೆ ಸೋಂಕು ತಗಲಿರುವುದಾಗಿ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ನೋಡೆಲ್ ಅಧಿಕಾರಿ ಪ್ರಮೋದ್ ಪ್ರಜಾಪತಿ ತಿಳಿಸಿದ್ದಾರೆ.

ಬಾಬಾ ಸಾವಿನೊಂದಿಗೆ, ಆತನೊಂದಿಗೆ ನಿಕಟ ಸಂಪರ್ಕವಿದ್ದ 50 ಮಂದಿಯನ್ನು ತಕ್ಷಣ ಕ್ವಾರಂಟೈನ್‌ನಲ್ಲಿರಿಸಲಾಗಿದ್ದು, ನಂತರ ಇವರ ವಾಸಸ್ಥಳದಿಂದ 150 ಮಂದಿಯನ್ನು ಕ್ವಾರಂಟೈನಿಗೆ ಕಳುಹಿಸಲಾಗಿದೆ.ಈ ಮಂತ್ರವಾದಿಗೆ ಸಾಕಷ್ಟು ಭಕ್ತ ಗಣಗಳಿದ್ದುವು. ಇಲ್ಲಿ ಇಂತಹ ಮಂತ್ರವಾದಿಗಳು ಬಹಳಷ್ಟು ಮಂದಿ ಇದ್ದಾರೆ. ಈ ಬಾಬಾನ ಮರಣದ ಬಳಿಕ ಸುಮಾರು 32 ಬಾಬಾರನ್ನು ಕ್ವಾರಂಟೈನಿಗೆ ಕಳುಹಿಸಲಾಗಿದೆ. ಎಂದು ಪೋಲೀಸರು ಸ್ಪಷ್ಟ ಪಡಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.