ಕೋರ್ಟಿಗೆ ಹಣ ಪಾವತಿಸಲು ಸಾಧ್ಯವಾಗದೇ ಜೈಲಲ್ಲೇ ಉಳಿದ ನೂರ್ ಮುಹಮ್ಮದ್: ಇದು ದೆಹಲಿ ಗಲಭೆಯ ಬಳಿಕದ ಕಥೆ

0
510

ಸನ್ಮಾರ್ಗ ವಾರ್ತೆ

ನವದೆಹಲಿ,ಅ.14: ದೆಹಲಿಯ ಸೋನಿಯಾ ವಿಹಾರ್ ನಿವಾಸಿ ನೂರ್ ಮುಹಮ್ಮದ್ ಎಂಬ 30 ವರ್ಷದ ಯುವಕ ಜಾಮೀನು ಲಭಿಸಿಯೂ ಜೈಲಲ್ಲೇ ಇರಬೇಕಾದ ಸ್ಥಿತಿ ಎದುರಾಗಿದೆ. ಆತನ ಮೇಲೆ ಒಂಬತ್ತು ಕೇಸುಗಳು ದಾಖಲಾಗಿದ್ದರೂ ಎಲ್ಲ ಕೇಸುಗಳಲ್ಲೂ ಕೋರ್ಟ್ ಆತನಿಗೆ ಜಾಮೀನು ನೀಡಿದೆ.

ಕಳೆದ ಮಾರ್ಚ್‌ನಲ್ಲಿ ದೆಹಲಿಯಲ್ಲಿ ನಡೆದ ಗಲಭೆಯ
ಸಂದರ್ಭದಲ್ಲಿ ಪೊಲೀಸರು ನೂರ್ ಮುಹಮದ್‌ನನ್ನು ಅಂಗಡಿಯೊಂದನ್ನು ನಾಶಮಾಡಿದ ಆರೋಪದಲ್ಲಿ ಬಂಧಿಸಿದ್ದರು. ಬಳಿಕ ಎಂಟು ಕೇಸುಗಳನ್ನು ಆತನ ಮೇಲೆ ಹೆಚ್ಚುವರಿಯಾಗಿ ಹೊರಿಸಿದ್ದರು.

ಆದರೆ ಪೊಲೀಸರು ನೂರ್ ಮುಹಮ್ಮದನ ಮೇಲೆ ಹೊರಿಸಿದ ಆರೋಪಕ್ಕೆ ಸಂಬಂಧಿಸಿ ಆತನೊಬ್ಬನ ಹೊರತು ಇನ್ನಾರನ್ನೂ ಸೇರಿಸಿಲ್ಲ. ಆದ್ದರಿಂದ ಗುಂಪು ಕಟ್ಟಿಕೊಂಡು ನಾಶ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂಬ ಪೊಲೀಸರ ವಾದಕ್ಕೆ ಅರ್ಥವಿಲ್ಲ
ಎಂದು ಹೇಳಿ ಅಡಿಷನಲ್ ಸೆಷನ್ಸ್ ಜಡ್ಜ್ ವಿನೋದ್ ಯಾದವ್ ಅಕ್ಟೊಬರ್ ಐದರಂದು ನೂರ್ ಮುಹಮ್ಮದನಿಗೆ ಜಾಮೀನು ನೀಡಿದ್ದರು.

ಎಂಟು ಪ್ರಕರಣಗಳಲ್ಲಿ ತಲಾ 20 ಸಾವಿರದಂತೆ ಒಂದು ಲಕ್ಷದ 60000 ರೂಪಾಯಿ ಮತ್ತು ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ 15000 ರೂಪಾಯಿ, ಹೀಗೆ ಒಂದು ಲಕ್ಷದ 75 ಸಾವಿರ ರೂಪಾಯಿಯನ್ನು ಜಾಮೀನು ಮೊತ್ತವಾಗಿ ಈತ ಕೋರ್ಟಿಗೆ ನೀಡಬೇಕಿದೆ.

ಆದರೆ 22 ವರ್ಷದ ಆತನ ಪತ್ನಿ ಫಾತಿಮ ಬೇಗ್‌ಳಿಗೆ ಇದು ಅಸಾಧ್ಯದ ಮೊತ್ತ. ನೂರ್ ಬಂಧನದ ಬಳಿಕ ಆಕೆ ಈವರೆಗೂ ಫೋನ್ ಮುಖಾಂತರ ಮಾತಾಡಿದ್ದಾಗಲಿ ಭೇಟಿಯಾದದ್ದಾಗಲಿ ಮಾಡಿಲ್ಲ.

ಪ್ರೇಮ ವಿವಾಹ ನಡೆದುದರಿಂದಾಗಿ ಇವರಿಬ್ಬರ ಕುಟುಂಬಗಳು ಇವರಿಂದ ದೂರವಾಗಿವೆ. ಅಂಗಡಿ ನಾಶಪಡಿಸಿದ್ದಾನೆ ಎಂದು ಆರೋಪಿಸಿ ಮಾರ್ಚ್ 31ರಂದು ಪೊಲೀಸರು ನೂರ್ ಮುಹಮ್ಮದ್‌ನನ್ನು ಬಂಧಿಸಿದ್ದರು.