ಸನ್ಮಾರ್ಗ ವಾರ್ತೆ
ಗುವಾಹಟಿ, ಸೆ.5: ಪೌರತ್ವ ಪಟ್ಟಿ ಎನ್ಆರ್ಸಿಗೆ ಸಂಬಂಧಿಸಿದ ವರದಿಗಳು ಮತ್ತು ವಸ್ತುಸ್ಥಿತಿಗಳನ್ನು ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ಕಳುಹಿಸಿಕೊಡುತ್ತಿರುವ ವಿದೇಶಿ ಪತ್ರಕರ್ತರನ್ನು ಅಸ್ಸಾಂನಿಂದ ಹೊರ ಹಾಕಲಾಗಿದೆ. ವಿದೇಶಿ ಏಜೆನ್ಸಿಗಳಿಗೆ ಸುದ್ದಿ ಸಂಗ್ರಹಿಸಲು ಕಠಿಣ ನಿಯಂತ್ರಣ ಹೇರಲಾಗಿದ್ದು ಈಶಾನ್ಯ ರಾಜ್ಯಗಳಲ್ಲಿರುವಂತೆ ವಿಶೇಷ ನಿಯಂತ್ರಣವನ್ನು ಅಸ್ಸಾಮಿನಲ್ಲಿಯೂ ಕೇಂದ್ರ ಸರಕಾರ ಅನ್ವಯಗೊಳಿಸಿದೆ. ಎನ್ಆರ್ಸಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಏಜೆನ್ಸಿಗಳು ನೀಡಿದ ಸುದ್ದಿ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ತುರ್ತು ಕ್ರಮಕೈಗೊಂಡಿದೆ.
ತದನಂತರ ಅಸೋಸಿಯೇಟ್ ಪ್ರಸ್ನ ಮಹಿಳಾ ವರದಿಗಾರ್ತಿಯನ್ನು ಪೊಲೀಸರು ವಿಮಾನ ನಿಲ್ದಾಣಕ್ಕೆ ಕರೆತಂದು ದಿಲ್ಲಿಯ ಮೊದಲ ವಿಮಾನದಲ್ಲಿ ಹತ್ತಿಸಿದರು. ಇನ್ನು ಮುಂದೆ ಸುದ್ದಿ ಸಂಗ್ರಹಿಸಲು ಕೇಂದ್ರ ಸರಕಾರದಿಂದ ವಿಶೇಷ ಅನುಮತಿ ಪಡೆಯಬೇಕೆಂದು ನಿಶ್ಚಯಿಸಲಾಗಿದೆ. ಅರುಣಾಚಲ ಪ್ರದೇಶ, ನಾಗಲೆಂಡ್, ಸಿಕ್ಕಿಂ, ಜಮ್ಮುಕಾಶ್ಮೀರದ ಕೆಲವು ಭಾಗಗಳಲ್ಲಿರುವ ಮಾಧ್ಯಮ ನಿಯಂತ್ರಣ ಈಗ ಅಸ್ಸಾಮಿನಲ್ಲಿಯೂ ಅನ್ವಯವಾಗುತ್ತಿದೆ. ವಿದೇಶಿ ವರದಿಗಾರರು ಅಸ್ಸಾಮಿಗೆ ಬರಲು ಕೇಂದ್ರ ವಿದೇಶ ಸಚಿವಾಲಯದ ವಿಶೇಷ ಅನುಮತಿ ಪಡೆಯಬೇಕಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ರಾಷ್ಟ್ರೀಯ ಪೌರತ್ವ ಪಟ್ಟಿಯಲ್ಲಿ ಭಾರತದ ಪ್ರಜೆಗಳನ್ನು ವ್ಯಾಪಕವಾಗಿ ವಿದೇಶಿಗಳೆಂದು ಘೋಷಿಸಿ ದೇಶವಿಲ್ಲದವರನ್ನಾಗಿ ಮಾಡಿದ ಹಲವಾರು ವರದಿಗಳು ವಾಷಿಂಗ್ಟನ್ ಪೋಸ್ಟ್ , ನ್ಯೂಯಾರ್ಕ್ ಟೈಮ್ಸ್, ಅಲ್ಜಝೀರ, ಬಿಬಿಸಿ ಮೊದಲಾದ ಅಂತಾರಾಷ್ಟ್ರೀಯ ಮಾಧ್ಯಮಗಳು ಬಹಿರಂಗಪಡಿಸಿದ್ದವು.
ಜಮ್ಮು-ಕಾಶ್ಮೀರದಿಂದ 370 ವಿಧಿ ರದ್ದುಪಡಿಸಿದ ಬಳಿಕ ಕೇಂದ್ರ ಸರಕಾರ ಕೈಗೊಂಡ ಎರಡನೆ ಅಲ್ಪಸಂಖ್ಯಾತ ವಿರೋಧಿ ನಿಲುವು ಇದಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಹಿಂದೆ, ಹತ್ತೊಂಬತ್ತು ಲಕ್ಷಕ್ಕೂ ಜನರು ದೇಶವಿಲ್ಲದವರನ್ನಾಗಿಸುವ ಅಪಾಯಕಾರಿ ಕ್ರಮ ಇದು ಎಂದು ವಿಶ್ವಸಂಸ್ಥೆಯ ಹೈಕಮಿಶನರ್ ಫಿಲಿಪ್ಪೋ ಗ್ರಾಂಡಿ ಆತಂಕ ವ್ಯಕ್ತಪಡಿಸಿದ್ದರು.
ಅಸ್ಸಾಂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಯಾಗುವುದರೊಂದಿಗೆ, “ಎನ್ಆರ್ಸಿಯಯ ಸರಕಾರ ಜಾರಿಗೆ ತಂದ ಪ್ರಕ್ರಿಯೆಯಲ್ಲ; ಬದಲಾಗಿ ಸುಪ್ರೀಂಕೋರ್ಟಿನ ಮೇಲ್ನೋಟದಲ್ಲಿ ನಡೆದ ಪ್ರಕ್ರಿಯೆ ಆಗಿದೆ” ಎಂದು ವಿದೇಶ ವಕ್ತಾರ ರವೀಶ್ಕುಮಾರ್ ನುಣುಚಿಕೊಂಡಿದ್ದರು. ಎನ್ಆರ್ಸಿಯ ಕುರಿತು ವಿದೇಶಿ ಮಾಧ್ಯಮಗಳಲ್ಲಿ ಬರುವ ಪ್ರತಿಕ್ರಿಯೆಗಳು ಸರಿಯಲ್ಲ ಎಂದು ಅವರು ಹೇಳಿದ್ದರು.












