ಬೆಂಗಳೂರು: HRS ಏಕದಿನ ಲೀಡರ್ಸ್ ಕ್ಯಾಂಪ್

0
152

ಸನ್ಮಾರ್ಗ ವಾರ್ತೆ

ಬೆಂಗಳೂರು: ಪರಿಹಾರ ಅಥವಾ ಪುನರ್ವಸತಿ ಒದಗಿಸುವಾಗ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಸಂತ್ರಸ್ತರು ಸಾಮಾನ್ಯವಾಗಿ ನಮ್ಮ ಗಮನಕ್ಕೆ ಬಾರದೆ ವಂಚಿತರಾಗುತ್ತಾರೆ. ಸುಲಭವಾಗಿ ತಲುಪಬಹುದಾದ ಸಂತ್ರಸ್ತರಿಗೆ ಮಾತ್ರ ದೊಡ್ಡ ಮಟ್ಟದ ಪ್ರಯೋಜನಗಳು ಸಿಗುತ್ತವೆ. ಸಂಸ್ಥೆಗಳು ಈ ವಿಷಯವನ್ನು ಪರಿಗಣಿಸಬೇಕು ಎಂದು ಕರ್ನಾಟಕ ಪಂಚಾಯತ್ ರಾಜ್ ಆಯೋಗದ ಉಪ ಕಾರ್ಯದರ್ಶಿ ಮುಹಮ್ಮದ್ ಯೂಸುಫ್ ಹೇಳಿದರು.

ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (ಎಚ್‌ಆರ್‌ಎಸ್) ಕರ್ನಾಟಕದ ವಲಯ ಮತ್ತು ಗುಂಪುಗಳ ನಾಯಕರಿಗೆ ಬೆಂಗಳೂರಿನ ಮೌಲಾನ ಅಬುಲ್ ಕಲಾಮ್ ಅಝಾದ್ ಭವನದಲ್ಲಿ ಆಯೋಜಿಸಲಾದ ನಾಯಕತ್ವ ತರಬೇತಿ ಶಿಭಿರದಲ್ಲಿ ಮಾತನಾಡಿದ ಶ್ರೀ ಯೂಸುಫ್, ಕೋವಿಡ್ -19 ಸಮಯದಲ್ಲಿ ನಾಗರಿಕ ಸಮಾಜದ ಗುಂಪುಗಳು ನಿರ್ವಹಿಸಿದ ಪಾತ್ರವನ್ನು ಮೆಚ್ಚಿದರು. ವಿಶೇಷವಾಗಿ ಪ್ರಾಕೃತಿಕ ವಿಪತ್ತುಗಳ ಸಂದರ್ಭಗಳಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ಗುಂಪುಗಳ ನಡುವೆ ನಿಕಟ ಸಮನ್ವಯದ ಅಗತ್ಯವನ್ನು ಎತ್ತಿ ತೋರಿಸಿದರು.

ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಗೊಳಿಸುವ ಮತ್ತು ಸಬಲೀಕರಣಗೊಳಿಸುವಲ್ಲಿ ಪಂಚಾಯತ್ ರಾಜ್ ಇಲಾಖೆಯ ಕಾರ್ಯ ವೈಖರಿಯ ವಿವರಗಳನ್ನು ಅವರು ಪ್ರಸ್ತುತಪಡಿಸಿದರು.

ಸಾಂಕ್ರಾಮಿಕ ರೋಗ ಕೋವಿಡ್ ಸಮಯದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ರಚಿಸಲಾದ ಕೋವಿಡ್ ಗ್ರಾಮ ಪಂಚಾಯತ್ ಕಾರ್ಯಪಡೆ (ಜಿಪಿಟಿಎಫ್) ಈಗ ಸಾಂಕ್ರಾಮಿಕ, ಪ್ರವಾಹ, ಅನಾವೃಷ್ಟಿ ಮುಂತಾದ ವಿವಿಧ ತುರ್ತು ಪರಿಸ್ಥಿತಿಗಳನ್ನು ನಿಯಂತ್ರಿಸುವ ಪಡೆಯಾಗಿ ಮುಂದುವರಿಸಲಾಗಿದೆ. ಇವುಗಳು ಸಮಾಜದ ಚುನಾಯಿತ ಸದಸ್ಯರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡಿವೆ ಎಂದು ಅವರು ಹೇಳಿದರು.

ಜಿಲ್ಲಾ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿಗಳಿವೆ. ಅದು ವಿಪತ್ತುಗಳ ಪ್ರದೇಶಗಳನ್ನು ಸಮೀಕ್ಷೆ ಮಾಡುತ್ತದೆ ಮತ್ತು ಪರಿಹಾರ ಕಾರ್ಯವನ್ನು ಒದಗಿಸುತ್ತದೆ. ಆದ್ದರಿಂದ HRS ನಂತಹ ನಾಗರಿಕ ಸಮಾಜದ ಗುಂಪುಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಈ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು. ಸ್ವತಂತ್ರವಾಗಿ ಮಾಡಿದರೆ ಪರಿಹಾರ ಕಾರ್ಯದ ಅಂತಿಮ ಉದ್ದೇಶವನ್ನು ಸಂಪೂರ್ಣವಾಗಿ ಸಾಧಿಸಲಾಗುವುದಿಲ್ಲ ಎಂದು ಅವರು ಹೇಳಿದರು.

ಆರಂಭದಲ್ಲಿ HRS ನಿರ್ದೇಶಕರಾದ ಕೆ.ಎಂ. ಅಶ್ರಫ್‌ರವರು ಸಂಸ್ಥೆಯು ನಿರ್ವಹಿಸಿಕೊಂಡು ಬಂದ ಕಾರ್ಯ ಚಟುವಟಿಕೆಗಳನ್ನು ಮಂಡಿಸಿದರು. ಒಮ್ಮೆ ಉತ್ತರ ಕರ್ನಾಟಕದ 12 ಜಿಲ್ಲೆಗಳು ಪ್ರವಾಹದಿಂದ ಹಾನಿಗೊಳಗಾದವು ಮತ್ತು ನಂತರ ಅದೇ ಪ್ರದೇಶಗಳು ಭೀಕರ ಬರಗಾಲಕ್ಕೆ ತುತ್ತಾಗಿದ್ದು ಸಂತ್ರಸ್ತರನ್ನು ಸಂಪರ್ಕಿಸಿದ ನಾಗರಿಕ ಸಮಾಜದ ಗುಂಪುಗಳಲ್ಲಿ ಎಚ್‌ಆರ್‌ಎಸ್ ಮೊದಲನೆಯದು ಎಂದು ಅವರು ಹೇಳಿದರು.

ಸಂಸ್ಥೆಯು ನಡೆಸಿದ ಸಮೀಕ್ಷೆಯು ಸರ್ಕಾರಿ ಸಂಸ್ಥೆಗಳಿಗೆ ಪರಿಹಾರ ಕಾರ್ಯಾಚರಣೆ ನಡೆಸುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು. ಅದೇ ರೀತಿ, ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತದಿಂದ ಅನೇಕ ವಸತಿ ಪ್ರದೇಶಗಳು ಸಂಪೂರ್ಣವಾಗಿ ಮತ್ತು ಕೆಲವು ಭಾಗಶಃ ಕೊಚ್ಚಿ ಹೋಗಿತ್ತು. ಎಚ್‌ಆರ್‌ಎಸ್ ತಕ್ಷಣ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತು ಮತ್ತು ಸಂತ್ರಸ್ತರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ತಂಡವು ಹಲವು ದಿನಗಳವರೆಗೆ ನೆಲೆಸಿದ್ದರು. ಸಂತ್ರಸ್ತರ ಮನೆಗಳನ್ನು ದುರಸ್ತಿ ಮಾಡಲಾಗಿದೆ ಮತ್ತು ಬಡ ಸಂತ್ರಸ್ತರಿಗೆ ಎಚ್‌ಆರ್‌ಎಸ್‌ನಿಂದ ಅನೇಕ ಹೊಸ ಮನೆಗಳನ್ನು ನಿರ್ಮಿಸಲಾಗಿದೆ. ಕಳೆದ ಬಾರಿ ಬೆಂಗಳೂರಿಗೆ ಸಮೀಪದಲ್ಲಿರುವ ರಾಮನಗರ ಪಟ್ಟಣವು ಅತ್ಯಂತ ಭೀಕರ ಪ್ರವಾಹವನ್ನು ಕಂಡಿದೆ. ಎಚ್‌ಆರ್‌ಎಸ್ ಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡಿದೆ ಎಂದು ಅಶ್ರಫ್‌ರವರು ವಿವರಿಸಿದರು.

ಕೋಮು ಪ್ರದೇಶ ಕರಾವಳಿಯ ಮಂಗಳೂರಿನಲ್ಲಿ ನಡೆದ ಕೋಮು ಗಲಭೆಯ ಸಮಯದಲ್ಲಿಯೂ ಪರಿಹಾರ ಕಾರ್ಯಗಳನ್ನು ನಡೆಸಲಾಗಿದೆ. ಇದಲ್ಲದೆ, ಕರ್ನಾಟಕವಲ್ಲದೆ, ತಮಿಳುನಾಡು, ಕೇರಳ, ಒಡಿಸ್ಸಾ ಮತ್ತು ಅಸ್ಸಾಂ ಪ್ರವಾಹದಲ್ಲೂ HRS ಸ್ವಯಂಸೇವಕರು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಕೋವಿಡ್ -19 ಮತ್ತು 2020 ರ ಎರಡನೇ ಅಲೆಯ ಸಮಯದಲ್ಲಿ ವೈದ್ಯಕೀಯ ನೆರವು, ರಕ್ತ, ಪ್ಲಾಸ್ಮಾ ದಾನ ಮತ್ತು ನಿರಂತರ ಊಟದ ವ್ಯವಸ್ಥೆಯನ್ನು ರಾಜ್ಯದ ವಿವಿಧ ಭಾಗಗಳಲ್ಲಿ HRS ನಿರ್ವಹಿಸಿದೆ. ವಿಶೇಷವಾಗಿ ವಲಸೆ ಕಾರ್ಮಿಕರಿಗೆ ಮತ್ತು ಮೃತ ವ್ಯಕ್ತಿಗಳ ಸಂಸ್ಕರಣೆಯಲ್ಲಿಯೂ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸಿದೆ ಎಂದರು.

HRS ನುರಿತ ತರಬೇತುದಾರರ ತಂಡವನ್ನು ಹೊಂದಿದ್ದು ತುರ್ತು ಸಂದರ್ಭದಲ್ಲಿ ರಕ್ಷಣೆ ಪರಿಹಾರದ ಕಾರ್ಯದಲ್ಲಿ ಸ್ವಯಂ ಸೇವಕರು ತೊಡಗಿಸಿಕೊಳ್ಳುತ್ತಾರೆ. ಅಲ್ಲದೆ ಬೇರೆ ಬೇರೆ ಸಂಸ್ಥೆ ಹಾಗೂ ಸಾರ್ವಜನಿಕರಿಗೆ ರಕ್ಷಣೆ ಹಾಗೂ ಪಾರುಗಾಣಿಕೆಯ ತರಬೇತಿಯನ್ನು ನೀಡುತ್ತಾರೆ ಎಂದರು.

ಡಾ. ಸೈಯದ್ ಕಾಝಿಮ್ ಅವರು ನಾಯಕತ್ವದ ಗುಣಗಳು ಮತ್ತು ಪರಿಣಾಮಕಾರಿ ನಿರ್ವಹಣಾ ಕೌಶಲ್ಯಗಳ ಮೇಲೆ ಬೆಳಕು ಚೆಲ್ಲಿದರು. ಮತ್ತು ನಾಯಕತ್ವವು ನಿರ್ವಹಣೆಯ ವಿಜ್ಞಾನಕ್ಕಿಂತ ಹೆಚ್ಚಿನದನ್ನು ಸಾಧಿಸುವ ಕಲೆಯಾಗಿದೆ ಎಂಬುದನ್ನು ವಿವರಿಸಿದರು.

ಡಾ. ನಸೀಮ್ ಅಹ್ಮದ್‌ರವರು HRS ನ ಪ್ರಮುಖ ಚಟುವಟಿಕೆಗಳ ಕ್ಯಾನ್ವಾಸ್ ಅನ್ನು ವಿಸ್ತರಿಸಲು – ಪಾರುಗಾಣಿಕಾ, ಪರಿಹಾರ ಮತ್ತು ಪುನರ್ವಸತಿ, ಈ ಮೂರು ಡೊಮೇನ್‌ಗಳಲ್ಲಿನ ವಿವಿಧ ಅವಕಾಶಗಳು ಮತ್ತು ಮಾರ್ಗಗಳನ್ನು ವಿವರಿಸಿದರು. ತಮ್ಮ ಅಂಶಗಳನ್ನು ವಿವರಿಸುತ್ತಾ ಸ್ಥಳೀಯ ಸಮುದಾಯಗಳಿಗೆ ವಿಶೇಷವಾಗಿ ದುರ್ಬಲ ಪ್ರದೇಶಗಳ ವಿದ್ಯಾರ್ಥಿಗಳಲ್ಲಿ ವಿಪತ್ತು ಸನ್ನದ್ಧತೆ ಮತ್ತು ಜಾಗೃತಿ ಕುರಿತು ತರಬೇತಿ ನೀಡುವ ಮಹತ್ವವನ್ನು ವಿವರಿಸಿದರು.

ಜಮಾಅತೆ ಇಸ್ಲಾಮಿ ಹಿಂದ್‌ನ ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಸಿದ್ದಿಕಿ ಮಾತನಾಡಿ, ಮನುಕುಲಕ್ಕೆ ಸಲ್ಲಿಸುವ ಸೇವೆ ಎಂಬ ಭಾಷೆಗೆ ಯಾವುದೇ ಅನುವಾದ ಅಗತ್ಯವಿಲ್ಲ. ಇದು ನೊಂದವರಿಗೆ ಪರಿಹಾರವನ್ನು ನೀಡುವುದಲ್ಲದೆ ಇತರರ ನೋವುಗಳ ಬಗ್ಗೆ ಸಮಾಜದ ಉತ್ತಮ ವರ್ಗದವರಲ್ಲಿ ಜಾಗೃತಿ ಮೂಡಿಸುತ್ತದೆ ಮತ್ತು ಅಸಹಾಯಕರಿಗೆ ಸಹಾಯ ಮಾಡಲು ಪ್ರೇರೇಪಿಸುತ್ತದೆ. ಹೀಗೆ ಮಾನವ ಸಂಬಧಗಳು ಸುಧೃಡಗೊಳ್ಳುತ್ತವೆ ಮತ್ತು ಸಮಾಜದಲ್ಲಿ ಮಾನವೀಯತೆ ಮೇಲುಗೈ ಸಾಧಿಸುತ್ತದೆ. ಇದು ಪ್ರವಾದಿ ಮುಹಮ್ಮದ್ (ಸ) ಅವರ ಪ್ರಮುಖ ಗುಣವಾಗಿತ್ತು. ಇದು ಪ್ರವಾದಿತ್ವವನ್ನು ಪಡೆಯುವ ಮೊದಲು ಸಮಾಜದಲ್ಲಿ ಅವರಿಗೆ ಗೌರವಾನ್ವಿತ ಗುರುತನ್ನು ನೀಡಿತು ಎಂದು ಅವರು ಹೇಳಿದರು.

ಜನರ ಹೊರೆಯನ್ನು ಹಗುರಗೊಳಿಸುವ, ಅವರ ಸಮಸ್ಯೆಗಳನ್ನು ಪರಿಹರಿಸುವ, ತೊಂದರೆಗಳನ್ನು ದೂರೀಕರಿಸುವ ಕ್ರಮಗಳನ್ನು ತೆಗೆದುಕೊಳ್ಳುವವನು ನಾಯಕ ಎಂದು ಮಾನ್ಯ ಸಿದ್ದಿಕಿ ಒತ್ತಿ ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷರಾದ ಡಾ.ಬೆಳಗಾಮಿ ಮಹಮ್ಮದ್ ಸಾದ್, ಮಾಜಿ ರಾಜ್ಯಾಧ್ಯಕ್ಷ ಮಹಮ್ಮದ್ ಅಥರುಲ್ಲಾಃ ಶರೀಫ್ ಮಾತನಾಡಿದರು. ರಾಜ್ಯಾದ್ಯಂತ HRS ನ ಹತ್ತು ವಲಯ ಮತ್ತು ಗುಂಪುಗಳ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.