ರೋಹಿಂಗ್ಯನ್ನರ ಕುರಿತು ವಿಶ್ವಸಂಸ್ಥೆ-ಬಾಂಗ್ಲಾದೇಶದ ನಡುವೆ ಒಪ್ಪಂದ

0
535

ಸನ್ಮಾರ್ಗ ವಾರ್ತೆ

ಢಾಕಾ: ಬಂಗಾಳ ಕೊಲ್ಲಿಯ ಭಾಸನ್ ಚಾರ್ ದ್ವೀಪದಲ್ಲಿರಿಸಲಾದ ರೋಹಿಂಗ್ಯನ್ ನಿರಾಶ್ರಿತರ ಸುರಕ್ಷೆ, ಹೊಣೆಗಾರಿಕೆಗಳಿಗೆ ಸಂಬಂಧಿಸಿ ವಿಶ್ವಸಂಸ್ಥೆ ಮತ್ತು ಬಾಂಗ್ಲಾದೇಶ ಸರಕಾರದ ನಡುವೆ ಒಪ್ಪಂದವಾಗಿದೆ. ರೋಹಿಂಗ್ಯನ್ ನಿರಾಶ್ರಿತರ ಸುರಕ್ಷೆ, ಶಿಕ್ಷಣ, ಕೆಲಸ ತರಬೇತಿ, ಜೀವನ ಸಹಾಯ, ಆರೋಗ್ಯ ವಿಷಯದಲ್ಲಿ ವಿಶ್ವಸಂಸ್ಥೆ ಮತ್ತು ಬಾಂಗ್ಲಾದೇಶ ಪರಸ್ಪರ ಸಹಕಾರದಲ್ಲಿ ಕೆಲಸ ಮಾಡಲಿದೆ. ಭವಿಷ್ಯದಲ್ಲಿ ಮ್ಯಾನ್ಮಾರಿಗೆ ಹೋಗುವವರೆಗೆ ಉತ್ತಮ ಜೀವನ ಪರಿಸ್ಥಿತಿ ನಿರಾಶ್ರಿತರಿಗೆ ಒದಗಿಸುವುದು ಒಪ್ಪಂದದ ಉದ್ದೇಶವಾಗಿದೆ ಎಂದು ವಿಶ್ವಸಂಸ್ಥೆ ನಿರಾಶ್ರಿತರ ಆಯೋಗ ಪ್ರತಿನಿಧಿ ಜೊಹನ್ನಸ್ ವಾನ್ ಡೆರ್ ಕ್ಲಾವ್ ತಿಳಿಸಿದ್ದಾರೆ.

ಬಾಂಗ್ಲಾದೇಶ ಮ್ಯಾನ್ಮಾರ್ ಗಡಿಯಲ್ಲಿ ಇರುವ ಶಿಬಿರದಲ್ಲಿ 11 ಲಕ್ಷ ರೋಹಿಂಗ್ಯನ್ ಜನರಲ್ಲಿ 19,000 ಕ್ಕೂ ಹೆಚ್ಚು ಜನರನ್ನು ಭಾಸನ್ ಚಾರ್ ದ್ವೀಪಕ್ಕೆ ಈಗಾಗಲೇ ಸ್ಥಳಾಂತರಿಸಲಾಗಿದೆ. ಇವರಿಗೆ ಸಹಾಯ ಮಾಡುವ ಉದ್ದೇಶದಿಂದ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತೆಂದು ವಿಶ್ವಸಂಸ್ಥೆ ಪ್ರತಿನಿಧಿ ತಿಳಿಸಿದರು. ಕೊಕ್ಸಬಾಝಾರ್ ನಿರಾಶ್ರಿತರ ಶಿಬಿರದ 1 ಲಕ್ಷ ಮಂದಿಯನ್ನು ಬೇರೆ ಕಡೆಗೆ ವರ್ಗಾಯಿಸುವ ಯೋಜನೆಯಿದೆ ಎಂದು ಬಾಂಗ್ಲಾದೇಶ ಸರಕಾರ ತಿಳಿಸಿತು.

ಈಗ ರೋಹಿಂಗ್ಯನ್ನರನ್ನು ಇರಿಸಲಾದ ದ್ವೀಪಕ್ಕೆ 30 ವರ್ಷದ ಇತಿಹಾಸ ಮಾತ್ರ ಇದೆ. ವಾಸಕ್ಕೆ ಸೂಕ್ತವಾಗಿಲ್ಲ. ನಿರಾಶ್ರಿತರನ್ನು ಅಲ್ಲಿಗೆ ಕಳುಹಿಸಬೇಡಿ ಎಂದು ವಿಶ್ವಸಂಸ್ಥೆ ಮತ್ತು ಮಾನವ ಹಕ್ಕು ಸಂಘಟನೆಗಳು ರಂಗ ಪ್ರವೇಶಿಸಿತ್ತು. ಈ ನಿಲುವಿನಿಂದ ಬಾಂಗ್ಲಾದೇಶ ಹಿಂದೆ ಸರಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಒಪ್ಪಂದ ಪತ್ರದಲ್ಲಿ ಸಹಿ ಹಾಕಿದ್ದು. 11.2 ಕೋಟಿ ಅಮೆರಿಕ ಡಾಲರ್ ಅಭಿವೃದ್ಧಿ ಕಾರ್ಯ ಮಾಡಿ ದ್ವೀಪವನ್ನು ವಾಸಕ್ಕೆ ಅರ್ಹವಾಗುವಂತೆ ಮಾಡಲಾಗಿದೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ತಿಳಿಸಿದ್ದಾರೆ. ನಂತರ ವಿಶ್ವಸಂಸ್ಥೆ ತಂಡ ದ್ವೀಪಕ್ಕೆ ಹೋಗಿ ನೋಡಿತ್ತು. ತದನಂತರ ಒಪ್ಪಂದ ಪತ್ರಕ್ಕೆ ಸಹಿಹಾಕಿತು. ಮುಂದಿನ ಮೂರು ತಿಂಗಳಲಿ 81,000 ನಿರಾಶ್ರಿತರ ಸ್ಥಳಾಂತರಕ್ಕೂ ಒಪ್ಪಂದ ಆಗಿದೆ.