ಇವರೇಕೆ ಹೆಸರನ್ನು ದ್ವೇಷಿಸುತ್ತಾರೆ?

0
343

✍️ ಏ.ಕೆ. ಕುಕ್ಕಿಲ

1992ರಿಂದ 95ರ ನಡುವೆ ಬೋಸ್ನಿಯಾದಲ್ಲಿ ಜಗತ್ತನ್ನೇ ಬೆಚ್ಚಿ ಬೀಳಿಸಿದ ಯುದ್ಧ ನಡೆಯಿತು.

1992ರ ವರೆಗೆ ಬೋಸ್ನಿಯಾವು ಯುಗೋಸ್ಲಾವಿಯಾ ಎಂಬ ರಾಷ್ಟ್ರದ ಏಳಕ್ಕಿಂತ ಹೆಚ್ಚು ರಾಜ್ಯಗಳ ಪೈಕಿ ಒಂದು ರಾಜ್ಯವಾಗಿತ್ತು. 1980ರ ವರೆಗೆ ಯುಗೋಸ್ಲಾವಿಯಾವನ್ನು ಜೋಸೆಫ್ ವಿಟೋ ಒಂದಾಗಿ ಇರಿಸಿಕೊಂಡಿದ್ದರು. 1980ರಲ್ಲಿ ಅವರು ನಿಧನರಾದರು. 1989-91ರಲ್ಲಿ ಸೋವಿಯತ್ ಯೂನಿಯನ್ ಎಂಬ ಕಮ್ಯುನಿಸ್ಟ್ ಮಹಾ ಸಾಮ್ರಾಜ್ಯ ಕುಸಿಯಿತು. ಯುಗೋಸ್ಲಾವಿಯಾ ಕೂಡ ಇದೇ ಸೋವಿಯತ್ ಯೂನಿಯನ್‌ನಿಂದ ಪ್ರಭಾವಿತವಾದ ಕಮ್ಯುನಿಸ್ಟ್ ರಾಷ್ಟ್ರವಾಗಿತ್ತು. ಹೀಗೆ ಸೋವಿಯತ್ ಯೂನಿಯನ್ ಕುಸಿದಾಗ ಇತ್ತ ಯುಗೋಸ್ಲಾವಿಯಾ ಗಣರಾಜ್ಯದ ವಿವಿಧ ರಾಜ್ಯಗಳು ಸ್ವತಂತ್ರ ರಾಷ್ಟ್ರಗಳಾಗುವ ಬಯಕೆ ತೋರಿದುವು. ಹೀಗೆ,

1991ರಲ್ಲಿ ಸ್ಲೊವೇನಿಯಾ ಮತ್ತು ಕ್ರೊಯೇಶಿಯಾ ಎಂಬ ರಾಜ್ಯಗಳು ಸ್ವಾತಂತ್ರ‍್ಯ ಘೋಷಿಸಿದುವು. ನಂತರ ಬೋಸ್ನಿಯಾ ಎಂಬ ರಾಜ್ಯವು ಸ್ವಾತಂತ್ರ್ಯ ಘೋಷಣೆಗೆ ಮುಂದಾಯಿತು. ಬೋಸ್ನಿಯಾದಲ್ಲಿ 44% ಮುಸ್ಲಿಮ್ ಜನಸಂಖ್ಯೆ ಇತ್ತು. ಸರ್ಬ್‌ಗಳು ಎಂಬುದಾಗಿ ಗುರುತಿಸಿಕೊಂಡಿದ್ದ ಆರ್ಥೊಡಾಕ್ಸ್ ಕ್ರಿಶ್ಚಿಯನ್ನರು ಸುಮಾರು 31% ಇದ್ದರು. ಕ್ರೋಟ್‌ಗಳೆಂದು ಕರೆಯಲ್ಪಡುತ್ತಿದ್ದ ಕ್ಯಾಥೋಲಿಕ್ ಕ್ರಿಶ್ಚಿಯನ್ನರ ಸಂಖ್ಯೆ 17% ಇತ್ತು. ಇದೇವೇಳೆ,

ಸರ್ಬಿಯಾ ಎಂಬ ರಾಜ್ಯದ ಅಧ್ಯಕ್ಷ ಸ್ಲೊಬೊದಾನ್ ಮಿಲೋಸೋವಿಚ್ ಅವರು ಗ್ರೇಟರ್ ಸರ್ಬಿಯಾ ನಿರ್ಮಾಣಕ್ಕೆ ಮುಂದಾದರು. ಅಂದರೆ, ಬೋಸ್ನಿಯಾವನ್ನು ತನ್ನ ಸರ್ಬಿಯಾದೊಳಗೆ ಸೇರಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಆದರೆ,

ಬೋಸ್ನಿಯಾದಲ್ಲಿರುವ ಸರ್ಬರು ಇದಕ್ಕೆ ವಿರುದ್ಧವಾಗಿದ್ದರು. ಇವರು ಬೋಸ್ನಿಯಾದಿಂದ ಬೇರ್ಪಟ್ಟು ಸ್ವತಂತ್ರ ಸರ್ಬ್ ರಿಪಬ್ಲಿಕ್ ರಾಷ್ಟ್ರ ರಚಿಸಲು ಮುಂದಾದರು. ಇನ್ನೊಂದು ಕಡೆ, ಕ್ರೊಯೇಶಿಯಾ ಎಂಬ ರಾಜ್ಯದ ಅಧ್ಯಕ್ಷ ಫ್ರಾಂಜೋ ಟುಜ್‌ಮನ್ ಅವರು ಗ್ರೇಟರ್ ಕ್ರೊಯೇಶಿಯಾ ಅಥವಾ ಅಖಂಡ ಕ್ರೊಯೇಶಿಯಾ ಸ್ಥಾಪಿಸಲು ನಿರ್ಧರಿಸಿದರು. ಇದೇ ಸಂದರ್ಭದಲ್ಲಿ ಬೋಸ್ನಿಯಾದ ಅಧ್ಯಕ್ಷರಾಗಿದ್ದ ಅಲಿಝಾ ಅಲಿ ಇಝ್ಝತ್ ಬೆಗೋವಿಚ್ ಅವರು ಏಕೀಕೃತ ಬೋಸ್ನಿಯಾದ ಕನಸು ಕಂಡರು. 1992 ರಲ್ಲಿ ಸ್ವತಂತ್ರ ಬೋಸ್ನಿಯಾದ ಹಿನ್ನೆಲೆಯಲ್ಲಿ ಜನಮತಗಣನೆ ನಡೆಯಿತು. ಮುಸ್ಲಿಮರು ಮತ್ತು ಕ್ರೋಟ್‌ಗಳು ಸ್ವತಂತ್ರ ಬೋಸ್ನಿಯಾ ವನ್ನು ಬೆಂಬಲಿಸಿದರು. ಆದರೆ,

ಸರ್ಬ್ಗಳು ಈ ಜನಮತಗಣನೆ ಯನ್ನೇ ಬಹಿಷ್ಕರಿಸಿದರು. ಇದು ಆಂತರಿಕ ಸಂಘರ್ಷವನ್ನು ಸೃಷ್ಟಿಸಿತು. ಬೋಸ್ನಿಯಾದಲ್ಲಿರುವ ಸರ್ಬರಿಗೆ ಸರ್ಬಿಯಾದ ಅಧ್ಯಕ್ಷ ಸ್ಲೊಬೋದಾನ್ ಮಿಲೋ ಸೋವಿಚ್ ಬೆಂಬಲ ನೀಡಿದರು. ರಸ್ಕೋಮ್ಲಾಡಿಚ್ ಮತ್ತು ರಾಡೋವಾಲ್‌ನ ಕರಾಡ್ಜಿಕ್ ನೇತೃತ್ವದಲ್ಲಿ ಸರ್ಬ್ ಪಡೆಗಳು ಬೋಸ್ನಿಯನ್ ಮುಸ್ಲಿಮರ ಮೇಲೆ ಎರಗಿದುವು. ಬೋಸ್ನಿಯಾದ ದೊಡ್ಡ ಭಾಗವನ್ನು ವಶಪಡಿಸಿಕೊಂಡು ಗ್ರೇಟರ್ ಸರ್ಬಿಯಾ ರಚಿಸುವುದು ಮಿಲೋ ಸೋವಿಚ್ ಅವರ ಗುರಿಯಾಗಿತ್ತು. ಇನ್ನೊಂದೆಡೆ ಬೋಸ್ನಿಯಾದ ಕ್ರೋಟ್ ಗಳೂ ಮುಸ್ಲಿಮರ ವಿರುದ್ಧ ತಿರುಗಿ ಬಿದ್ದರು. ಜನಮತಗಣನೆಯಲ್ಲಿ ಸ್ವಾತಂತ್ರ‍್ಯ ಮತ್ತು ಏಕೀಕೃತ ಬೋಸ್ನಿಯಾ-ಹರ್ಜೆಗೋವಿನಾ ರಾಷ್ಟ್ರ ನಿರ್ಮಾಣದ ಪರ ಇವರು ಮತ ಚಲಾಯಿಸಿದ್ದರೂ ಆ ಬಳಿಕ ಕ್ರೊಯೇಶಿಯಾದ ಅಧ್ಯಕ್ಷ ಫ್ರಾಂಜೋ ಟ್ರುಜ್‌ಮನ್ ಅವರ ಬೆಂಬಲದೊಂದಿಗೆ ಮುಸ್ಲಿಮರ ವಿರುದ್ಧ ಯುದ್ಧಕ್ಕಿಳಿದರು. ಕ್ರೋಟ್ ಪ್ರದೇಶಗಳನ್ನು ಕ್ರೊಯೇಶಿಯಾದೊಂದಿಗೆ ಸೇರಿಸಿಕೊಂಡು ಗ್ರೇಟರ್ ಕ್ರೊಯೇಶಿಯಾ ನಿರ್ಮಾಣ ಮಾಡುವುದು ಫ್ರಾಂಜೋ ಟ್ರುಜ್‌ಮನ್ ಅವರ ಗುರಿಯಾಗಿತ್ತು. ಹೀಗೆ,

ಮುಸ್ಲಿಮರ ಮೇಲೆ ಸರ್ಬರು ಮತ್ತು ಕ್ರೋಟ್‌ಗಳು ಮುಗಿಬಿದ್ದರು. ಹಾಗಂತ, ಇದು ಕೇವಲ ಭೂವಿವಾದ ಅಥವಾ ಸ್ವಾತಂತ್ರ್ಯದ ಬಯಕೆಯ ಘರ್ಷಣೆಯಷ್ಟೇ ಆಗಿರಲಿಲ್ಲ. ದೇಶದಲ್ಲಿ ಮುಸ್ಲಿಮರ ಜನಾಂಗ ನಿರ್ಮೂಲನೆಯನ್ನೇ ಗುರಿ ಯಾಗಿಸಿಕೊಂಡಿದ್ದ ಯೋಜಿತ ತಂತ್ರದ ಭಾಗವಾಗಿತ್ತು. ಮುಸ್ಲಿಮರ ಐಡೆಂಟಿಟಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅಳಿಸುವ ತಂತ್ರವನ್ನು ಹೆಣೆಯಲಾಗಿತ್ತು. ಕಲ್ಚರಲ್ ಜನೋಸೈಡ್ ಎಂದು ವಿಶ್ಲೇಷ ಕರು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೇ ಹೇಳಿರುವ ಈ ಸಂಚಿನ ಭಾಗವಾಗಿ 1000ಕ್ಕಿಂತ ಅಧಿಕ ಮಸೀದಿ ಮತ್ತು ಮದ್ರಸಗಳನ್ನು ಬಹುತೇಕ ನಾಶ ಪಡಿಸಲಾಯಿತು.

ಯುದ್ಧಕ್ಕಿಂತ ಮೊದಲು ಬೋಸ್ನಿಯಾ – ಹರ್ಜೆಗೋವಿನಾದಲ್ಲಿ ಇಂಥ 1144 ಮಸೀದಿ ಮತ್ತು ಮದ್ರಸಾಗಳಿದ್ದುವು ಮತ್ತು ಇವುಗಳ ಪೈಕಿ ಸಾವಿರದಷ್ಟನ್ನೂ ಹಾನಿಗೋ ನಾಶಕ್ಕೋ ಗುರಿಪಡಿಸಲಾಗಿದೆ ಎಂಬುದೇ ಅಂದಿನ ಕ್ರೌರ್ಯದ ಭಯಾನಕತೆಯನ್ನು ಹೇಳುತ್ತದೆ. ಬೋಸ್ನಿಯಾದ ಸರ್ಬ್ ಪಡೆಗಳೇ ಇದಕ್ಕೆ ಮುಖ್ಯ ಕಾರಣವಾಗಿತ್ತು. ಮುಸ್ಲಿಮರ ಐತಿಹಾಸಿಕ ಇರುವಿಕೆಯನ್ನೇ ಅಳಿಸುವುದು ಇದರ ಉದ್ದೇಶವಾಗಿತ್ತು. ಅಲ್ಲದೇ,
ಸರಾಜೊವೋದ ಐತಿಹಾಸಿಕ ಲೈಬ್ರರಿಯೂ ಸೇರಿ ಅನೇಕ ಗ್ರಂಥಾಲಯಗಳನ್ನೂ ನಾಶಪಡಿಸಲಾಯಿತು. ಉಸ್ಮಾನಿಯಾ ಖಿಲಾಫತ್ ಕಾಲದ ಸ್ಮಾರಕಗಳು, ಗಡಿಯಾರ ಗೋಪುರಗಳು ಮತ್ತು ಸಮಾಧಿ ಸ್ಥಳಗಳನ್ನು ನಾಶಪಡಿಸಲಾಯಿತು.

ಸರ್ಬರು ಬಹುಸಂಖ್ಯೆಯಲ್ಲಿರುವ ಪ್ರದೇಶದಿಂದ ಮುಸ್ಲಿಮರನ್ನು ಹೊರಹಾಕುವುದರ ಭಾಗವಾಗಿ ಈ ಕ್ರೌರ್ಯಗಳು ನಡೆದುವು. ಹತ್ಯೆ, ಅತ್ಯಾಚಾರ, ಬಲವಂತದ ವಲಸೆ ನಡೆಯಿತು. ಅದರಲ್ಲೂ ಜುಲೈ 11ರಿಂದ 19ರ ನಡುವೆ ಸ್ರೆಬ್ರೆನಿಕಾ ಎಂಬ ಪ್ರದೇಶದಲ್ಲಿ ನಡೆಸಲಾದ ಹತ್ಯಾ ಕಾಂಡ ಎರಡನೇ ವಿಶ್ವ ಯುದ್ಧದ ಬಳಿಕದ ಅತಿದೊಡ್ಡ ಹತ್ಯಾಕಾಂಡವಾಗಿ ಗುರುತಿಸಿಕೊಂಡಿತು. 8 ಸಾವಿರಕ್ಕೂ ಹೆಚ್ಚು ಮುಸ್ಲಿಮರನ್ನು ಸರ್ಬ್ ಪಡೆಗಳು ಹತ್ಯೆ ಮಾಡಿತು. ಈ ಪ್ರದೇಶದಲ್ಲಿ 400 ರಷ್ಟು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಕಾವಲು ಕಾಯುತ್ತಿತ್ತು. ಇದನ್ನು ಸುರಕ್ಷಿತ ಪ್ರದೇಶ ಎಂದು ವಿಶ್ವಸಂಸ್ಥೆಯೇ ಪರಿಚಯಿಸಿತ್ತು. ಆದರೆ,

ಜುಲೈ 11ರಂದು ರಾತ್ರಿ ಕರಾಡ್ಜಿಕ್ ಮತ್ತು ಮ್ಲಾಡಿಚ್ ಎಂಬವರ ನೇತೃತ್ವದಲ್ಲಿ ಸರ್ಬ್ ಪಡೆಗಳು ಈ ಪ್ರದೇಶಕ್ಕೆ ನುಗ್ಗಿ 8 ದಿನಗಳ ಕಾಲ ರಕ್ತ ಹರಿಸಿದುವು. 25 ಸಾವಿರಕ್ಕಿಂತಲೂ ಅಧಿಕ ಮುಸ್ಲಿಮರು ಬೇರೆಡೆಗೆ ವಲಸೆ ಹೋದರು. 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಕರಾಡ್ಜಿಕ್, ಮ್ಲಾಡಿಚ್ ಮತ್ತು ಅನೇಕ ಸೇನಾ ನಾಯಕರಿಗೆ ಶಿಕ್ಷೆ ವಿಧಿಸಿತು. 1995ರಲ್ಲಿ ಅಮೇರಿಕದ ಮಧ್ಯಸ್ಥಿಕೆಯಲ್ಲಿ ಶಾಂತಿ ಒಪ್ಪಂದ ನಡೆಯಿತಲ್ಲದೇ, ಬೋಸ್ನಿಯಾವನ್ನು ಒಂದು ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಗಿ ಘೋಷಿಸಲಾಯಿತು. ಅಂದಹಾಗೆ,

ಮುಸ್ತಫಾ ಕಮಾಲ್ ಅತಾತುರ್ಕ್ ನೇತೃತ್ವದಲ್ಲಿ ಟರ್ಕಿಯಲ್ಲಿ ನಡೆದಿರುವುದೂ ಇಸ್ಲಾಮಿಕ್ ಪರಂಪರೆ ಮತ್ತು ಗುರುತುಗಳನ್ನು ಅಳಿಸುವ ಕೆಲಸಗಳೇ.

1920ರಿಂದ 30ರ ನಡುವೆ ಸುಧಾರಣೆಯ ಹೆಸರಲ್ಲಿ ಅವರು ಇಸ್ಲಾಮಿಕ್ ಗುರುತು ನಾಶದ ಹಲವು ಕ್ರಮಗಳನ್ನು ಕೈಗೊಂಡರು. 1924ರಲ್ಲಿ ಅವರು ಖಲೀಫಾ ಪದವಿಯನ್ನು ರದ್ದುಗೊಳಿಸಿದರು. ಆವರೆಗೆ ಇಸ್ಲಾಮಿಕ್ ಜಗತ್ತಿನಲ್ಲಿ ಟರ್ಕಿಗೆ ಉಸ್ಮಾನಿಯಾ ಖಿಲಾಫತ್‌ನ ವಿಶೇಷ ನಾಯಕತ್ವ ಇತ್ತು. ಇಸ್ಲಾಮಿಕ್ ನ್ಯಾಯಾಲಯಗಳನ್ನು ಮುಚ್ಚಿ ಸ್ವಿಸ್ ಸಿವಿಲ್ ಕೋಡ್ (ನಾಗರಿಕ ಸಂಹಿತೆ) ಮತ್ತು ಇಟಾಲಿಯನ್ ಪೀನಲ್ ಕೋಡ್ ಅಥವಾ ಇಟಾಲಿಯನ್ ದಂಡ ಸಂಹಿತೆಯನ್ನು ಜಾರಿಗೊಳಿಸಿದರು. 1925 ರಲ್ಲಿ ಅವರು ಮುಸ್ಲಿಮರ ಸಾಂಪ್ರದಾಯಿಕ ಟೋಪಿಯನ್ನು ನಿಷೇಧಿಸಿದರು. ಅದರ ಬದಲು ಪಾಶ್ಚಾತ್ಯ ಹ್ಯಾಟನ್ನು ಪರಿಚಯಿಸಿದರು. ಈ ಹ್ಯಾಟ್ ಧರಿಸದವರಿಗೆ ಶಿಕ್ಷೆ ವಿಧಿಸುವಷ್ಟು ಈ ನಿಯಮವನ್ನು ಕಠಿಣವಾಗಿ ಜಾರಿಗೊಳಿಸಿದರು. ಹಿಜಾಬ್ ಮತ್ತು ಧಾರ್ಮಿಕ ಶೈಲಿಯ ಉಡುಪುಗಳನ್ನು ಸರಕಾರಿ ಕಚೇರಿಗಳಲ್ಲಿ ಬಹುತೇಕ ನಿಷೇಧಕ್ಕೆ ಒಳಪಡಿಸಿದರು.

1928ರಲ್ಲಿ ಅರೇಬಿಕ್ ಲಿಪಿಯನ್ನೇ ನಿಷೇಧಿಸಿದರು. ಲ್ಯಾಟಿನ್ ಆಧಾರಿತ ಟರ್ಕಿಶ್ ಅಕ್ಷರ ಮಾಲೆಯನ್ನು ಸಾರ್ವಜನಿಕರ ಮೇಲೆ ಹೇರಿದರು. ಇದರಿಂದಾಗಿ ಉಸ್ಮಾನಿಯಾ ಖಿಲಾಫತ್‌ನ ಕಾಲದಲ್ಲಿ ಸಮೃದ್ಧವಾಗಿ ಬೆಳೆದಿದ್ದ ಇಸ್ಲಾಮಿಕ್ ಸಾಹಿತ್ಯ ಮತ್ತು ಧಾರ್ಮಿಕ ಗ್ರಂಥಗಳಿಗೆ ಭಾರೀ ದೊಡ್ಡ ಏಟು ಬಿತ್ತು. ಹೊಸ ತಲೆಮಾರಿಗೆ ಹಳೆಯ ಸಾಹಿತ್ಯ ಕೃತಿಗಳನ್ನು ಓದಲು ಅವಕಾಶ ಇಲ್ಲದಂತಾಯಿತು. ಇಷ್ಟೇ ಅಲ್ಲ,

ಮದರಸಗಳನ್ನು ಮುಚ್ಚಲಾಯಿತು. ಸೂಫಿಗಳ ಆಶ್ರಮಗಳಿಗೂ ಬೀಗ ಜಡಿಯಲಾಯಿತು. ಧಾರ್ಮಿಕ ವ್ಯವಹಾರಗಳನ್ನು ವಕ್ಫ್ ವ್ಯವಸ್ಥೆಯ ಬದಲು ಸರಕಾರವೇ ನಿಯಂತ್ರಿಸುವುದಕ್ಕೆ ಮುಂದಾಯಿತು. ಅಝಾನ್ ಕರೆಯನ್ನು ಅರಬಿ ಭಾಷೆಯ ಬದಲು ಟರ್ಕಿಶ್ ಭಾಷೆಯಲ್ಲಿ ಕೊಡಲಾಯಿತು. ಹಿಜರಿ ಕ್ಯಾಲೆಂಡರ್ ಬದಲು ಗ್ರೆಗೋರಿಯನ್ ಕ್ಯಾಲೆಂಡರನ್ನು ಅಳವಡಿಸಲಾಯಿತು. ಟರ್ಕಿಯನ್ನು ಆವರೆಗೆ ಇಸ್ಲಾಮಿಕ್ ರಾಷ್ಟ್ರ ಎಂದು ಸಂವಿಧಾನದಲ್ಲಿ ನಮೂದಿಸಲಾಗಿತ್ತು. ಅದನ್ನು ಕಿತ್ತೆಸೆದರು. ಹಾಗೆಯೇ,

ಈ ಎರಡೂ ಘಟನೆಗಳನ್ನು ಉಲ್ಲೇಖಿಸುವುದಕ್ಕೆ ಒಂದು ಕಾರಣ ಇದೆ.

ಅದುವೇ, ಇಸ್ಲಾಮಿಕ್ ಗುರುತುಗಳನ್ನು ಅಳಿಸುವ ಸಂಚು. ಪಶ್ಚಿಮ ಬಂಗಾಳದಲ್ಲಿ ಮೇ 4ರ ಬಳಿಕ ಉಂಟಾದ ಹಿಂಸಾಚಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಗುರುತು ಅಳಿಸುವಿಕೆಯು ಸ್ಪಷ್ಟವಾಗಿ ಗೋಚರವಾಗುತ್ತದೆ.

ಉತ್ತರ 24 ಪರಗಣ ಜಿಲ್ಲೆಯ ಬಾರಾಸಾತ್ ಎಂಬಲ್ಲಿ ಸಿರಾಜ್ ಉದ್ಯಾನ್ ಎಂಬ ಪಾರ್ಕ್ ಇದೆ. ಬಂಗಾಳದ ಕೊನೆಯ ಸ್ವತಂತ್ರ ನವಾಬ ಸಿರಾಜುದ್ದೌಲನ ಸ್ಮರಣಾರ್ಥ ಈ ಪಾರ್ಕ್‌ಗೆ ಸಿರಾಜ್ ಉದ್ಯಾನ್ ಎಂದು ಹೆಸರಿಡಲಾಗಿದೆ. ಅಲ್ಲಿ ಆತನ ಸಣ್ಣ ಸ್ಮಾರಕವೂ ಇದೆ. ಮೊನ್ನೆ ಹಿಂಸಾಚಾರದಲ್ಲಿ ಭಾಗಿಯಾದವರು ಈ ಸ್ಮಾರಕವನ್ನು ಕಿತ್ತೆಸೆದರಲ್ಲದೇ, ಸಿರಾಜ್ ಹೆಸರನ್ನು ಅಳಿಸಿ ಹಾಕಿ ಶಿವಾಜಿ ಉದ್ಯಾನ್ ಆಗಿ ಬದಲಾಯಿಸಿದರು. ಡೈಮಂಡ್ ಹಾರ್ಬರ್ ಪ್ರದೇಶದಲ್ಲಿ ಮಸ್ಜಿದ್ ಬಾರಿ ರೋಡ್‌ನ ಹೆಸರನ್ನು ನೇತಾಜಿ ಪಲ್ಲಿ ರೋಡ್ ಎಂದು ಬದಲಾಯಿಸಿದರು. ಹಾಗಂತ,

ಇದು ದಿಢೀರ್ ಆಗಿ ಕಾಣಿಸಿಕೊಂಡ ಬದಲಾವಣೆಗಳಲ್ಲ. 2018ರಲ್ಲಿ ದೆಹಲಿಯ ಮುಘಲ್ ಸರೈ ರೈಲ್ವೆ ನಿಲ್ದಾಣವನ್ನು ದೀನ್‌ದಯಾಳ್ ಉಪಾಧ್ಯಾಯ ಜಂಕ್ಷನ್‌ ಎಂದು ಬದಲಾಯಿಸಲಾಯಿತು. ಹಾಗೆಯೇ, ಅಲಹಾಬಾದ್ ಇಂದು ಪ್ರಯಾಗ್‌ರಾಜ್ ಆಗಿ ಬದಲಾಗಿದೆ. ಫೈಝಾಬಾದ್‌ಗೆ ಅಯೋಧ್ಯೆ ಎಂದು ಮರು ನಾಮಕರಣ ಮಾಡಲಾಗಿದೆ. ಔರಂಗಾಬಾದ್‌ನ ಹೆಸರನ್ನು ಛತ್ರಪತಿ ಸಂಭಾಜಿ ನಗರ್ ಎಂದು ಬದಲಾಯಿಸಲಾಗಿದೆ. ಉಸ್ಮಾನಾ ಬಾದ್‌ಗೆ ದಾರಾಶಿಕೋವ್ ಎಂದು ನಾಮಕರಣ ಮಾಡಲಾಗಿದೆ. ಹಾಗೆಯೇ, ತುಘಲಕ್ ರೋಡ್, ಅಕ್ಬರ್ ರೋಡ್, ಹುಮಾಯೂನ್ ರೋಡ್, ಶಾಜಹಾನ್ ರೋಡ್ ಇತ್ಯಾದಿಗಳ ಹೆಸರು ಬದಲಾವಣೆಯೂ ಶೀಘ್ರದಲ್ಲಿಯೇ ನಡೆಯಲಿದೆ.

ಅಂದಹಾಗೆ, ಹಿಂಸಾಚಾರ ಬೇರೆ, ಗುರುತಿನ ನಾಶ ಬೇರೆ. ಹಿಂಸೆಯ ಗಾಯ ನಿಧಾನಕ್ಕೆ ಒಣಗಬಹುದು. ಆದರೆ, ಗುರುತನ್ನೇ ಅಳಿಸಿದರೆ ಅದು ನಿಧಾನಕ್ಕೆ ಒಂದು ಪರಂಪರೆಯನ್ನೇ ಮರೆಯುವಂತೆ ಮಾಡುತ್ತದೆ. ಮುಘಲ್ ಸರೈ ಎಂಬುದು ಬರೇ ಹೆಸರಲ್ಲ. ಅದರ ಹಿಂದೆ ಒಂದು ಇತಿಹಾಸವೇ ಇದೆ. ಸಿರಾಜುದ್ದೌಲ ಬರೇ ಒಂದು ಹೆಸರಲ್ಲ. ಅದರ ಹಿಂದೆ ಒಂದು ಕಾಲದ ದೊರೆತನ ಮತ್ತು ಆಡಳಿತ ಚರಿತ್ರೆಯಿದೆ.

ಶಾಜಹಾನ್ ಆಗಲಿ, ಅಲಹಾಬಾದ್ ಆಗಲಿ ಎಲ್ಲದಕ್ಕೂ ಒಂದು ಐತಿಹಾಸಿಕ ಗುರುತಿದೆ. ಆ ಹೆಸರನ್ನು ಯಾರೆಲ್ಲ ಓದುತ್ತಾರೋ ಅವರಲ್ಲಿ ಒಂದು ಕುತೂಹಲ ಹುಟ್ಟುತ್ತದೆ. ಈ ಹೆಸರಿನ ಹಿಂದೆ ಏನಿದೆ ಎಂಬ ಆ ಕುತೂಹಲವು ಅಧ್ಯಯನಕ್ಕೆ ಪ್ರೇರೇಪಿಸುತ್ತದೆ. ಆ ಮೂಲಕ ಇತಿಹಾಸದ ಓದು ಅವರಿಗೆ ದಕ್ಕುತ್ತದೆ. ಭಾರತದಲ್ಲಿ 800 ವರ್ಷಗಳ ಕಾಲ ಆಡಳಿತ ನಡೆಸಿದ ಮುಸ್ಲಿಮ್ ದೊರೆಗಳ ಉತ್ಥಾನ-ಪತನದ ರೋಚಕ ಇತಿಹಾಸವನ್ನು ಅವರು ಮನನ ಮಾಡುತ್ತಾರೆ. ಅವರಿಗೆ ಆ ವರೆಗೆ ಗೊತ್ತಿಲ್ಲದ ಭಾರತವೆಂಬ ಉಪಭೂಖಂಡವನ್ನು ಇಂಥ ಹೆಸರುಗಳು ಅವರಿಗೆ ತಿಳಿಸಿಕೊಡುತ್ತದೆ. ಆದ್ದರಿಂದಲೇ,

ಬಂಗಾಳದ ಹಿಂಸಾಚಾರ ಮುಖ್ಯವಾಗುತ್ತದೆ. ಬೋಸ್ನಿಯಾದ ಹಿಂಸಾಚಾರವನ್ನು ನೆನಪಿಸಿಕೊಳ್ಳಬೇಕಾಗುತ್ತದೆ.

(ನಿಮ್ಮ ಅನಿಸಿಕೆಯನ್ನು ಈ ಕೆಳಗಿನ ಸಂಖ್ಯೆಗೆ ವಾಟ್ಸಪ್ ಮಾಡಿ: 7899701978)