ಅಸ್ಸಾಂನ ಕೇಸರಿ ಅಲೆಯ ಹಿಂದೆ

0
197

✍️ ರಾಕಿಬುಝ್ಝಮಾನ್
ಪತ್ರಕರ್ತರು

ಭಾರತೀಯ ಜನತಾ ಪಕ್ಷವು ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಿದೆ. ಒಟ್ಟು 126 ಸ್ಥಾನಗಳಲ್ಲಿ 82 ಸ್ಥಾನಗಳನ್ನು ಗೆದ್ದಿದೆ. ಇದಕ್ಕೆ ವ್ಯತಿರಿಕ್ತವಾಗಿ, 29 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ನ ಅಸ್ತಿತ್ವವು 2021 ರ ವಿಧಾನಸಭಾ ಚುನಾವಣೆಯ ನಂತರ ಗಣನೀಯವಾಗಿ ಕುಸಿದಿದೆ. ರಾಜ್ಯದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಪಕ್ಷವು ಧೂಳೀಪಟವಾಗಿದೆ. ಕಾಂಗ್ರೆಸ್‌ನ 19 ಸ್ಥಾನಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲವೂ ಮುಸ್ಲಿಂ ಮತದಾರರ ಸಂಖ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುವ ಕ್ಷೇತ್ರಗಳಿಂದ ಬಂದಿವೆ.

ಹಿಂದೂ ಮತಗಳ ಕ್ರೋಡೀಕರಣ:

ಬಿಜೆಪಿಯ ಈ ಭರ್ಜರಿ ಜಯದ ಹಿಂದಿನ ಪ್ರಮುಖ ಕಾರಣ ಬೃಹತ್ ಪ್ರಮಾಣದಲ್ಲಿ ಹಿಂದೂ ಮತಗಳ ಕ್ರೋಡೀಕರಣ. “ಬಿಜೆಪಿಯು ತನ್ನನ್ನು ಹಿಂದೂಗಳ ರಕ್ಷಕ ಎಂದು ಬಿಂಬಿಸಿಕೊಂಡಿರುವುದು ಮತ್ತು ಹಿಂದೂ ಹಾಗೂ ಅಸ್ಸಾಮಿ ಗುರುತನ್ನು ಒಂದಾಗಿಸಿರುವುದು ಪಕ್ಷವು ಮತಗಳನ್ನು ಕ್ರೋಢೀಕರಿಸಲು ಸಹಾಯ ಮಾಡಿದೆ” ಎಂದು ದಿಬ್ರುಗಢ್ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರಜ್ಞ ಕೌಸ್ತುಭ್ ದೇಕಾ ಹೇಳಿದ್ದಾರೆ. 2016 ರಲ್ಲಿ ‘ಜಾತಿ, ಮಾತಿ ಮತ್ತು ಭೇತಿ’ – ಸಮುದಾಯ, ಭೂಮಿ ಮತ್ತು ಅಸ್ಮಿತೆಯನ್ನು ರಕ್ಷಿಸುವ ಭರವಸೆಯೊಂದಿಗೆ ಅಸ್ಸಾಂನಲ್ಲಿ ಮೊದಲ ಬಾರಿಗೆ ಬಿಜೆಪಿಯು ಅಧಿಕಾರಕ್ಕೆ ಬಂದಿತ್ತು. ಎರಡನೇ ಅವಧಿಯಲ್ಲಿ, ವಿಶೇಷವಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಂದ ಅದು ಆಕ್ರಮಣಕಾರಿ ಕೋಮು ರಾಜಕಾರಣವಾಗಿ ಬದಲಾಯಿತು.

ಅಸ್ಸಾಂ ರಾಜ್ಯವನ್ನು ಹೊರಗಿನವರು ಆಕ್ರಮಿಸುತ್ತಿದ್ದಾರೆ ಎಂಬ ಅಸ್ಸಾಮಿ ಜನರ ದಶಕಗಳ ಹಳೆಯ ಆತಂಕವನ್ನು ಕಳೆದ ಐದು ವರ್ಷಗಳಲ್ಲಿ ಶರ್ಮಾ ಅವರು ಆಯುಧವಾಗಿ ಬಳಸಿಕೊಂಡಿದ್ದಾರೆ. ಅದನ್ನು ಮುಸ್ಲಿಮರ ಮೇಲಿನ ಹಿಂದುತ್ವದ ಅನುಮಾನದೊಂದಿಗೆ ಬೆಸೆದಿದ್ದಾರೆ. ತೀಕ್ಷ್ಣವಾದ ಪ್ರಚಾರವನ್ನು ನಡೆಸಿದ ಶರ್ಮಾ, ರಾಜ್ಯದಲ್ಲಿರುವ ಬಂಗಾಳ ಮೂಲದ ಮುಸ್ಲಿಂ ಸಮುದಾಯದ ವಿರುದ್ಧ “ಬಾಂಗ್ಲಾದೇಶದ ಅಕ್ರಮ ವಲಸಿಗರು” ಎಂದು ಆರೋಪಿಸಿದರು. ಪದೇ ಪದೇ ಕಾಂಗ್ರೆಸ್ ಅನ್ನು ಮುಸ್ಲಿಮರಿಗಾಗಿ ಮಾತ್ರ ಕೆಲಸ ಮಾಡುವ ಪಕ್ಷ ಎಂದು ಬಿಂಬಿಸಿದರು ಮತ್ತು ಅದರ ನಾಯಕ ಗೌರವ್ ಗೊಗೊಯ್ ಅವರನ್ನು “ಪಾಕಿಸ್ತಾನಿ ಏಜೆಂಟ್” ಎಂದು ಆರೋಪಿಸಿದರು. ಉತ್ತರ ಅಸ್ಸಾಂನ ಹಿಂದೂ ಬಹುಸಂಖ್ಯಾತ ಪ್ರದೇಶಗಳು ಮತ್ತು ಅಸ್ಸಾಮಿ ಜನಾಂಗೀಯ ಸಮುದಾಯಗಳು ವಾಸಿಸುವ ಬೋಡೋಲ್ಯಾಂಡ್, ಕರ್ಬಿ, ದಿಮಾಸಾ ಹಿಲ್ಸ್‌ನಂತಹ ಆರನೇ ಅನುಸೂಚಿ ಆಡಳಿತದ ಪ್ರದೇಶಗಳಲ್ಲಿ ಕಾಂಗ್ರೆಸ್‌ನ ಹೀನಾಯ ಪ್ರದರ್ಶನವನ್ನು ಗಮನಿಸಿದರೆ, ಈ ಹಣೆಪಟ್ಟಿ ಅಂಟಿಕೊಂಡಂತೆ ಕಾಣುತ್ತದೆ. ಕಾಂಗ್ರೆಸ್ ಗೆದ್ದಿರುವ 19 ಸ್ಥಾನಗಳಲ್ಲಿ 18 ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳಾಗಿವೆ. ಹಿಂದೂ ಮತದಾರರು ಬಹುಸಂಖ್ಯಾತರಾಗಿರುವ ಅಪ್ಪರ್ ಅಸ್ಸಾಂನ ನೌಬೋಯಿಚಾ ಒಂದು ಸ್ಥಾನದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಈ ಕ್ಷೇತ್ರವು ಗಣನೀಯ ಸಂಖ್ಯೆಯ ಮುಸ್ಲಿಂ ಮತದಾರರನ್ನು ಹೊಂದಿದೆ. 2021 ರಲ್ಲಿ, ಕಾಂಗ್ರೆಸ್ 29 ಸ್ಥಾನಗಳನ್ನು ಗೆದ್ದಿತ್ತು ಮತ್ತು 16 ಶಾಸಕರು ಹಿಂದೂಗಳಾಗಿದ್ದರು.

ರಾಜ್ಯಶಾಸ್ತ್ರಜ್ಞ ದೇಕಾ ಅವರು, “ಕ್ರೋಡೀಕರಣಕ್ಕೆ ಒತ್ತು ನೀಡಿದ ಬಿಜೆಪಿಯ ಕಠಿಣ ಹಿಂದೂ ಧೋರಣೆಯು ಜನಸಂಖ್ಯಾ ಲಾಭವನ್ನು ತಂದುಕೊಟ್ಟಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಲ್ಯಾಣ ಯೋಜನೆಗಳು ಮತ್ತು ಮೂಲಸೌಕರ್ಯ:

ಬಿಜೆಪಿ ಸರ್ಕಾರದ ನಗದು ಪ್ರಯೋಜನಗಳ ದೊಡ್ಡ ಜಾಲ – ಮಹಿಳೆಯರಿಗಾಗಿ ಪ್ರಮುಖ ‘ಅರುಣೋದೋಯ್’ ಯೋಜನೆಯಿಂದ ಹಿಡಿದು ವಿದ್ಯಾರ್ಥಿಗಳು ಮತ್ತು ಪದವೀಧರರಿಗೆ ಆರ್ಥಿಕ ನೆರವಿನವರೆಗೆ – ಮತದಾರರಲ್ಲಿ ಪ್ರತಿಧ್ವನಿಸಿದೆ ಎಂದು ಸ್ಕ್ರಾಲ್ (Scroll) ವರದಿಯಲ್ಲಿ ಕಂಡುಕೊಂಡಿದೆ.  ದೇಕಾ ರವರು ಇದನ್ನು ಅವಲೋಕಿಸುತ್ತಾ, “ಬಿಜೆಪಿಯ ‘ಅಭಿವೃದ್ಧಿ’ ಮಾದರಿಯು ವಿಭಿನ್ನ ರೀತಿಯಲ್ಲಿ ಕೆಲಸ ಮಾಡಿದೆ. ವ್ಯಾಪಕವಾಗಿ ಸಂಪರ್ಕ ಸಾಧಿಸಿರುವುದು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ಪಕ್ಷವು ಸಾಧನೆ ಮಾಡಿದೆ ಎಂದು ಒಂದು ವರ್ಗದ ಜನರು ಭಾವಿಸುತ್ತಾರೆ. ಹೆಚ್ಚು ಸೂಕ್ಷ್ಮ ಮಟ್ಟದಲ್ಲಿ, ವಿವಿಧ ಕಲ್ಯಾಣ ಯೋಜನೆಗಳು ಅತ್ಯಗತ್ಯ ಮತ್ತು ಅವುಗಳನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಜನರು ಭಾವಿಸುತ್ತಾರೆ.” ಎಂದು ಹೇಳಿದ್ದಾರೆ.

ಹಿಮಂತಗೆ ಮತ: 

ಮುಖ್ಯಮಂತ್ರಿ ಹಿಮಂತ ಶರ್ಮಾ ಅವರ ಜನಪ್ರಿಯತೆಯು ರಾಜ್ಯದಲ್ಲಿ ಕುಂದಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಗೆ ಸರಿಸಮನಾಗಿದೆ ಎಂದು ಸ್ಕ್ರಾಲ್ (Scroll) ವರದಿಯಲ್ಲಿ ಕಂಡುಕೊಂಡಿದೆ. ಚುನಾವಣಾ ಫಲಿತಾಂಶಗಳು ಅದನ್ನು ದೃಢಪಡಿಸಿವೆ.

ರಾಜ್ಯದ ರಾಜಕೀಯ ವೀಕ್ಷಕ ಮತ್ತು ಸಂಶೋಧಕ ಅಂಶುಮಾನ್ ಚೌಧರಿ ರವರು, “ಹಿಮಂತ ಬಿಸ್ವಾ ಶರ್ಮಾ ಪಕ್ಷದ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮದೇ ಸ್ವತಂತ್ರ ಚಿತ್ರಣವನ್ನು ನಿರ್ಮಿಸಲು ಮತ್ತು ವಿಶಾಲವಾದ ಪ್ಯಾನ್-ಇಂಡಿಯಾ ಬಿಜೆಪಿ ಭೂದೃಶ್ಯದಲ್ಲಿ ತಮ್ಮ ಸ್ವಂತ ಸ್ಥಾನವನ್ನು ಕೆತ್ತಲು ಶಕ್ತರಾಗಿದ್ದಾರೆ” ಎಂದು ಹೇಳಿದ್ದಾರೆ. ಕಳೆದ ವರ್ಷ ಸಿಂಗಾಪುರದಲ್ಲಿ ಖ್ಯಾತ ಗಾಯಕ ಜುಬೀನ್ ಗಾರ್ಗ್ ಅವರ ನಿಧನದ ಮೇಲಿನ ಆಕ್ರೋಶವು ಶರ್ಮಾ ರವರ ಜನಪ್ರಿಯತೆಯನ್ನು ಸ್ವಲ್ಪಮಟ್ಟಿಗೆ ಕುಗ್ಗಿಸಿದ್ದರೂ, ಆ ಸವಾಲನ್ನು ಮೆಟ್ಟಿ ನಿಲ್ಲಲು ಅವರು ಶಕ್ತರಾದರು. ಮಾಜಿ ಕಾಂಗ್ರೆಸ್ಸಿಗರಾದ ಶರ್ಮಾ ಅವರ “ಅಸ್ಸಾಂ ಕಾಂಗ್ರೆಸ್‌ನಿಂದ ಪಕ್ಷಾಂತರವನ್ನು ಪ್ರೇರೇಪಿಸುವ ಸಾಮರ್ಥ್ಯವು ಅವರಿಗೆ ಗಮನಾರ್ಹ ಪ್ರಭಾವವನ್ನು ನೀಡುತ್ತದೆ. ಅವರ ನೇರ ಕೋಮು ವಾದವು ಮೋದಿಯವರಿಗಿಂತಲೂ ಬಲವಾಗಿದೆ ಮತ್ತು ಹೆಚ್ಚು ಸ್ಪಷ್ಟವಾಗಿದೆ. ಅದು ಕೇವಲ ಅಸ್ಸಾಂನಲ್ಲಿ ಮಾತ್ರವಲ್ಲದೆ ಹೊರಗೂ ಹೆಚ್ಚು ಕಟ್ಟಾ ಬಿಜೆಪಿ ಬೆಂಬಲಿಗರನ್ನು ಆಕರ್ಷಿಸುತ್ತದೆ.” ಎಂದು ಚೌಧರಿ ಹೇಳಿದರು.  

ದಿಬ್ರುಗಢ್ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರಜ್ಞ ದೇಕಾ ಅವರು, ಕೇಂದ್ರ-ರಾಜ್ಯ “ಒಟ್ಟಾಗಿ ಕೆಲಸ ಮಾಡುವುದು” ಈಶಾನ್ಯ ಭಾರತದ ಐತಿಹಾಸಿಕ ವಾಸ್ತವವಾಗಿರುವುದರಿಂದ ಶರ್ಮಾ ಅವರು “ಡಬಲ್ ಇಂಜಿನ್” ಸರ್ಕಾರದ ಪ್ರಚಾರದಿಂದಲೂ ಪ್ರಯೋಜನ ಪಡೆದರು ಎಂದು ಗಮನಸೆಳೆದರು. “ಈ ವಿಷಯಗಳ ಸುತ್ತ ಪ್ರಚಾರವನ್ನು ನಡೆಸಿದ್ದು ಉತ್ತಮ ಫಲಿತಾಂಶ ನೀಡಿದೆ” ಎಂದು ಅವರು ಹೇಳಿದರು.

ಕ್ಷೇತ್ರ ಪುನರ್ವಿಂಗಡಣೆ: 

ಅಸ್ಸಾಂ ದೇಶದಲ್ಲೇ ಅತ್ಯಂತ ವಿವಾದಾತ್ಮಕ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಕಂಡಿದೆ ಎಂದು ಸ್ಕ್ರಾಲ್ (Scroll) ವರದಿ ಮಾಡಿದೆ. ಇದು ರಾಜ್ಯದಲ್ಲಿ ಮುಸ್ಲಿಂ ಪ್ರಾತಿನಿಧ್ಯವನ್ನು ಪರಿಣಾಮಕಾರಿಯಾಗಿ ದುರ್ಬಲಗೊಳಿಸಿದೆ. ಚುನಾವಣೆಯ ಫಲಿತಾಂಶಗಳ ವಿಶ್ಲೇಷಣೆಯು ಕ್ಷೇತ್ರ ಪುನರ್ವಿಂಗಡಣೆಯು ಕ್ಷೇತ್ರವಾರು ‘ಮುಸ್ಲಿಂ ಮತಗಳ’ ಪರಿಣಾಮವನ್ನು ಕಡಿಮೆ ಮಾಡುವ ಮೂಲಕ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. 2021 ರಲ್ಲಿ, ಅಸ್ಸಾಂನ ಮತದಾರರು 31 ಮುಸ್ಲಿಂ ಶಾಸಕರನ್ನು ವಿಧಾನಸಭೆಗೆ ಕಳುಹಿಸಿದ್ದರು. ಈ ಬಾರಿ, ಕೇವಲ 22 ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ. ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳಲ್ಲಿ ಹಿಂದೂ ಮತದಾರರನ್ನು ಬಹುಸಂಖ್ಯಾತ ಬಣವನ್ನಾಗಿ ಮಾಡಲು ಕೆಳ ಅಸ್ಸಾಂನಲ್ಲಿ ಗಡಿಗಳನ್ನು ಮರುರೂಪಿಸಲಾಯಿತು. ಇಂತಹ ಹಲವಾರು ಹೊಸ ಸ್ಥಾನಗಳಲ್ಲಿ – ಉದಾಹರಣೆಗೆ, ಬಾರ್ಪೇಟಾ, ಅಭಯಾಪುರಿ, ಗೋಲ್ಪಾರಾ ವೆಸ್ಟ್, ಹೈಲಕಾಂಡಿ – ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಹೆಚ್ಚಿನ ಲಾಭ ಮಾಡಿದೆ. 

ನರೇಟಿವ್‌ ಇಲ್ಲದ ವಿರೋಧ ಪಕ್ಷ:

ಅಂತಿಮವಾಗಿ, ರಾಜ್ಯದ ಬಹುತೇಕ ಭಾಗಗಳಲ್ಲಿ ಕಾಂಗ್ರೆಸ್‌ನ ನಿರ್ನಾಮವು ಬಿಜೆಪಿಯ ಗೆಲುವಿಗೆ ಸಹಕಾರಿಯಾಗಿದೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಬೋಡೋ ಪೀಪಲ್ಸ್ ಫ್ರಂಟ್‌ನೊಂದಿಗೆ ಬಲವಾದ ಮೈತ್ರಿ ಮಾಡಿಕೊಂಡಿದ್ದರೆ, ಈ ಬಾರಿ ಮೈತ್ರಿಯನ್ನು ರೂಪಿಸಲು ಪಕ್ಷವು ಹೆಣಗಾಡಿತು. ರೈಜೋರ್ ದಳ ಮತ್ತು ಅಸ್ಸಾಂ ಜಾತೀಯ ಪರಿಷತ್‌ನೊಂದಿಗೆ ಅದರ ಕೊನೆಯ ಕ್ಷಣದ ಒಪ್ಪಂದವು ಯಾವುದೇ ಲಾಭವನ್ನು ನೀಡಲಿಲ್ಲ. ಬಿಜೆಪಿಯ ಹಿಂದುತ್ವ, ಅಸ್ಸಾಮಿ ರಾಷ್ಟ್ರೀಯತೆ ಮತ್ತು ಕಲ್ಯಾಣ ಯೋಜನೆಗಳ ಮಿಶ್ರಣವನ್ನು ಎದುರಿಸಲು ಪಕ್ಷದ ಬಳಿ ಸ್ಪಷ್ಟವಾದ ನರೇಟಿವ್‌ ಕೂಡ ಇರಲಿಲ್ಲ. ಭೂಪೇನ್ ಬೋರಾ ಮತ್ತು ಪ್ರದ್ಯೋತ್ ಬೊರ್ಡೊಲೊಯ್ ಎಂಬ ಇಬ್ಬರು ಪ್ರಮುಖ ನಾಯಕರ ಹಠಾತ್ ನಿರ್ಗಮನ ಮತ್ತು ಪಕ್ಷದೊಳಗಿನ ಒಳಜಗಳವು ಕಾಂಗ್ರೆಸ್‌ನ ಪತನಕ್ಕೆ ಕೊಡುಗೆ ನೀಡಿತು. “ನಾವು ನಮ್ಮ ಮನೆಯನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಬಗ್ಗೆ ಗಮನ ಹರಿಸಲಿಲ್ಲ” ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಕೃಪೆ: scroll.in